ನೀವು ‘ಶುಗರ್ ಫ್ರೀ’ ಬಳಸುತ್ತೀರಾ? ಈ ವಿಷಯಗಳೂ ನಿಮಗೆ ಗೊತ್ತಿರಲಿ

Update: 2019-12-12 18:35 GMT
ಸಾಂದರ್ಭಿಕ ಚಿತ್ರ

ಮಧುಮೇಹಿಗಳು ಸಿಹಿ ತಿನ್ನಬಾರದು. ಆದರೆ ಬಾಯಿ ಚಪಲವೆಲ್ಲಿ ಕೇಳುತ್ತದೆ? ಇಂತಹವರಿಗಾಗಿಯೇ ಬೇಕರಿಗಳಲ್ಲಿ ‘ಶುಗರ್ ಫ್ರೀ’ ಅಂದರೆ ಸಕ್ಕರೆ ಮುಕ್ತ ಸಿಹಿಖಾದ್ಯಗಳು ಲಭ್ಯವಿವೆ. ಆದರೆ ಈ ಖಾದ್ಯಗಳು ಶರೀರಕ್ಕೆ ಏನು ಮಾಡುತ್ತವೆ ಎನ್ನುವುದು ನಿಮಗೆ ಗೊತ್ತೇ?

 ಹಲವಾರು ಆಹಾರ ವಸ್ತುಗಳು,ಕಾಂಡಿಮೆಂಟ್ಸ್ ಮತ್ತು ಸಿಹಿಖಾದ್ಯಗಳು ಶುಗರ್‌ಫ್ರೀ ಎನ್ನುವ ಹಣೆಪಟ್ಟಿಯನ್ನು ಹಚ್ಚಿಕೊಂಡಿರುವುದನ್ನು ನಾವು ನೋಡುತ್ತಿರುತ್ತೇವೆ. ಬೊಜ್ಜಿನ ಕುರಿತು ಜನರಲ್ಲಿ ಜಾಗ್ರತಿ ಹೆಚ್ಚಿರುವುದರಿಂದ ಶುಗರ್ ಫ್ರೀ ಆಹಾರಗಳ ಸೇವನೆಯನ್ನು ಹೆಚ್ಚೆಚ್ಚು ಜನರು ಇಷ್ಟಪಡುತ್ತಿದ್ದಾರೆ. ಆದರೆ ಈ ಶುಗರ್ ಫ್ರೀ ಆಹಾರಗಳು ಮಧುಮೇಹಿಗಳಿಗೆ ಅಥವಾ ಇತರ ಸಾಮಾನ್ಯ ಜನರಿಗೆ ನಿಜಕ್ಕೂ ಒಳ್ಳೆಯವೇ? ಸಕ್ಕರೆ ಸೇವಿಸುವ ಬದಲಾಗಿ ಶುಗರ್ ಫ್ರೀ ಸೇವನೆ ಆರೋಗ್ಯಕರ ಆಯ್ಕೆಯೇ?

ಕಾರ್ಬೊಹೈಡ್ರೇಟ್‌ಗಳನ್ನೂ ಒಳಗೊಂಡಿರುವ ಆಟಾ ಇತ್ಯಾದಿ ಹುಡಿಗಳು ಸೇರಿದಂತೆ ಹಲವಾರು ಆಹಾರಗಳಲ್ಲಿ ಸಕ್ಕರೆ ಇರುತ್ತದೆ. ಈ ಎಲ್ಲ ಆಹಾರಗಳಿಂದ ದೂರವಿರುವುದು ನಿಜಕ್ಕೂ ಕಠಿಣ,ಆದರೆ ಸೂಕ್ತ ಪ್ರಮಾಣದಲ್ಲಿ ಇವು ನಮ್ಮ ಆಹಾರಕ್ರಮದಲ್ಲಿ ಸೇರಬಹುದು. ಬೆಲ್ಲ,ಜೇನು ಮತ್ತು ರಿಫೈನ್ಡ್ ಶುಗರ್‌ನಂತಹ ಹಲವಾರು ಸಕ್ಕರೆಯ ಪರ್ಯಾಯಗಳಿವೆ ನಿಜ. ಆದರೆ,ವಿಶೇಷವಾಗಿ ಮಧುಮೇಹಿಗಳು ಇವುಗಳನ್ನು ಎಚ್ಚರಿಕೆಯಿಂದಲೇ ಸೇವಿಸಬೇಕಾ ಗುತ್ತದೆ. ಇದು ಶುಗರ್ ಫ್ರೀ ಮೇಲೆ ಅವಲಂಬನೆಗೆ ಕಾರಣವಾಗುತ್ತದೆ. ಆದರೆ ಕೃತಕ ಸಿಹಿಕಾರಕ ಸ್ಯಾಕ್ರೀನ್ ಮೂತ್ರಕೋಶ ಕ್ಯಾನ್ಸರ್‌ನೊಂದಿಗೆ ಗುರುತಿಸಿಕೊಂಡಿದೆ ಎನ್ನುವುದನ್ನು 1970ರ ದಶಕದಲ್ಲಿ ಇಲಿಗಳ ಮೇಲೆ ನಡೆಸಲಾದ ಕೆಲವು ಸಂಶೋಧನೆಗಳು ಬೆಳಕಿಗೆ ತಂದಿದ್ದವು.

ಏನಿದು ಶುಗರ್ ಫ್ರೀ?

ಶುಗರ್ ಫ್ರೀ ಸಕ್ಕರೆಗೆ ಪರ್ಯಾಯವಾಗಿದ್ದು ಯಾವುದೇ ಆಹಾರಕ್ಕೆ ಸಿಹಿಯ ಲೇಪವನ್ನು ನೀಡುತ್ತದೆ,ಆದರೆ ರಿಫೈನ್ಡ್ ಸಕ್ಕರೆಗಿಂತ ಕಡಿಮೆ ಕ್ಯಾಲರಿಗಳನ್ನು ಒಳಗೊಂಡಿದೆ. ಕೇವಲ ಐದು ಗ್ರಾಂ ಸಕ್ಕರೆ 20-25 ಕ್ಯಾಲೊರಿಗಳನ್ನು ಹೊಂದಿರುತ್ತದೆ.

ಶುಗರ್ ಫ್ರೀ ಮಧುಮೇಹಿಗಳಿಗೆ ಸುರಕ್ಷಿತವೇ?

 ರಾಸಾಯನಿಕಗಳನ್ನು ಒಳಗೊಂಡಿರುವ ಶುಗರ್ ಫ್ರೀಗಿಂತ ನೈಸರ್ಗಿಕ ಘಟಕಗಳನ್ನು ಒಳಗೊಂಡಿರುವ ಶುಗರ್‌ಫ್ರೀ ಒಳ್ಳೆಯದು ಎನ್ನುವುದು ತಜ್ಞರ ಅಭಿಪ್ರಾಯ. ಇತ್ತೀಚಿನ ದಿನಗಳಲ್ಲಿ ಇಂತಹ ನೈಸರ್ಗಿಕ ಶುಗರ್ ಫ್ರೀ ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಲಭ್ಯವಾಗುತ್ತಿದೆ. ರಾಸಾಯನಿಕಗಳನ್ನು ಒಳಗೊಂಡಿರುವ ಶುಗರ್ ಫ್ರೀ ಮೂಳೆಗಳಿಗೆ ಹಾನಿಯನ್ನುಂಟು ಮಾಡುತ್ತದೆ,ಹೀಗಾಗಿ ಅದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು ಮುಖ್ಯವಾಗಿದೆ. ಶುಗರ್ ಫ್ರೀ ಹಣೆಪಟ್ಟಿ ಹಚ್ಚಿಕೊಂಡಿರುವ ಉತ್ಪನ್ನಗಳನ್ನು ಖರೀದಿಸುವ ಮೊದಲು ಅದರಲ್ಲಿರುವ ಘಟಕಗಳನ್ನು ಪರಿಶೀಲಿಸುವುದು ಒಳ್ಳೆಯದು. ಸ್ಟೀವಿಯಾ ಸಸ್ಯಮೂಲದ್ದಾಗಿರುವುದರಿಂದ ಅದನ್ನು ಒಳ್ಳೆಯ ಶುಗರ್ ಫ್ರೀ ಎಂದು ಪರಿಗಣಿಸಲಾಗಿದೆ. ಮಾರುಕಟ್ಟೆಯಲ್ಲಿ ದೊರೆಯುವ ಸ್ಟೀವಿಯಾ ಮಾತ್ರೆಗಿಂತ ಮನೆಯಲ್ಲಿಯೇ ಸ್ಟೀವಿಯಾ ಸಸ್ಯವನ್ನು ಬೆಳೆಸಿ ಎಲೆಗಳನ್ನು ತಿನ್ನುವುದು ಹೆಚ್ಚು ಆರೋಗ್ಯಕರ ವಿಧಾನವಾಗಿದೆ.

ಅಧಿಕ ರಕ್ತದೊತ್ತಡದ ಇತಿಹಾಸ ಹೊಂದಿದ್ದು ಸಿಹಿತಿಂಡಿಗಳನ್ನು ಅತಿಯಾಗಿ ಇಷ್ಟಪಡುವವರಿಗೆ ರಿಫೈನ್ಡ್ ಸಕ್ಕರೆಗಿಂತ ಶುಗರ್ ಫ್ರೀ ಬಳಸುವಂತೆ ವೈದ್ಯರು ಸೂಚಿಸುತ್ತಾರೆ. ಆದರೆ ಇವುಗಳನ್ನು ವೈದರು ತಿಳಿಸಿರುವ ಕನಿಷ್ಠ ಪ್ರಮಾಣದಲ್ಲಿಯೇ ಸೇವಿಸಬೇಕು.

ಶುಗರ್ ಫ್ರೀ ಅನ್ನು ಒಳಗೊಂಡಿರುವ ಯಾವುದನ್ನೂ ತಿನ್ನಲು ಮಕ್ಕಳಿಗೆ ಅವಕಾಶ ನೀಡಬಾರದು. ಕೆಲವು ಕೃತಕ ಸಿಹಿಕಾರಕಗಳು ಶುಗರ್ ಫ್ರೀ ಮತ್ತು ಮಧುಮೇಹಿ ಸ್ನೇಹಿ ಎಂದು ಹೇಳಿಕೊಳ್ಳುತ್ತವೆಯಾದರೂ ಇವು ಅಡ್ಡ ಪರಿಣಾಮ ಗಳನ್ನು ಬೀರುತ್ತವೆ ಎಂದು ಅಧ್ಯಯನಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News