ಬಡವರ ಹೊಟ್ಟೆಯ ಮೇಲೆ ಕಾಲಿಡುವ ಸರಕಾರ

Update: 2019-12-12 17:57 GMT

ಆ ವರ್ಷದ ಬಜೆಟ್ ಅಧಿವೇಶನವು 25ನೇ ಫೆಬ್ರವರಿ 1938ರಂದು ಮಧ್ಯಾಹ್ನ 2:00 ಗಂಟೆಗೆ ಸಂಸದ ಮಾವಳಣಕರ ಅವರ ಅಧ್ಯಕ್ಷತೆಯ ಅಡಿಯಲ್ಲಿ ಆರಂಭಗೊಂಡಿತು. ಇಂದಿನ ಅಧಿವೇಶನಕ್ಕೆ ಸಾಕಷ್ಟು ಜನರು ಉಪಸ್ಥಿತರಿದ್ದರು. ಸದ್ಯದ ಅಧಿವೇಶನಕ್ಕಾಗಿ ಪೆನೆಲ್ ಆಫ್ ಚೇರ್‌ಮನ್ ಸ್ಥಾನಕ್ಕಾಗಿ(1) ಖಾನ್ ಬಹಾದ್ದೂರ್ ಅಬ್ದುಲ್ಲಾ ಲತೀಫ್(2) ಸ್ವತಂತ್ರ ಕಾರ್ಮಿಕ ಪಕ್ಷದ ರಾಜಾರಾಮ್ ಆರ್. ಭೋಳೆ(3), ಇ. ಬ್ರಾಬಲ್ ಮತ್ತು(4) ಸರ್. ಎಸ್.ಟಿ. ಕಾಂಬಳಿಯವರನ್ನು ನೇಮಿಸಿರುವುದಾಗಿ ಸ್ಪೀಕರ್ ಅವರು ಘೋಷಣೆ ಮಾಡಿದರು. ಮೊದಲಿಗೆ ಪ್ರಶ್ನೋತ್ತರ ಮುಗಿದ ಬಳಿಕ ಅಸೆಂಬ್ಲಿಯ ಎದುರಿಗೆ ಸಚಿವರಾದ ಲಠ್ಠೆಯವರು 1937-38ನೇ ವರ್ಷದ ಬಜೆಟ್ ಮಂಡಿಸುವಾಗ ತನ್ನ ಭಾಷಣವನ್ನು ಮಾಡಿದರು. ಈ ಭಾಷಣವು ಸುಮಾರು ಎರಡು ಗಂಟೆಗಳವರೆಗೆ ಮುಂದುವರಿಯಿತು.

ಸಚಿವ ಲಠ್ಠೆಯವರ ಭಾಷಣದ ನಂತರ ಶುಕ್ರವಾರ ಸಭೆಯ ಕಾರ್ಯಕಲಾಪವು ಮುಗಿಯಿತು. ಶನಿವಾರ ಬಜೆಟ್ ಮೇಲಿನ ಚರ್ಚೆಯ ದಿನವಾಗಿತ್ತು. ಆದರೆ ಆ ದಿನ ಹೆಚ್ಚಿನ ಸದಸ್ಯರು ಭಾಷಣ ಮಾಡಲು ಮುಂದಾಗಲಿಲ್ಲ. ಹೀಗಾಗಿ ಅಸೆಂಬ್ಲಿಯ ಸಭೆಯನ್ನು ಮಂಗಳವಾರವರೆಗೆ ಮುಂದೂಡಲಾಗಿತ್ತು. ಮಂಗಳವಾರ ಮೊದಲಿಗೆ ಪ್ರಶ್ನೋತ್ತರ ಮುಗಿದ ಬಳಿಕ ಬಜೆಟ್ ಬಗೆಗೆ ಚರ್ಚೆ ಶುರುವಾಯಿತು. ಇಂದಿನ ಸಭೆಯಲ್ಲಿ ಜಮುನಾದಾಸ ಮೆಹತಾಯರವರು ಮೊದಲು ಭಾಷಣ ಮಾಡಿದರು. ಬುಧವಾರ ಸಭೆ ಶುರುವಾದ ಬಳಿಕ 2:30 ಗಂಟೆಗೆ ಸ್ವತಂತ್ರ ಕಾರ್ಮಿಕ ಪಕ್ಷದ ನಾಯಕರಾದ ಡಾ. ಬಾಬಾಸಾಹೇಬ ಅಂಬೇಡ್ಕರರು ನಿರ್ಭಿಡೆ ಶೈಲಿಯ ಪರಿಣಾಮಕಾರಿಯಾದ ಭಾಷಣವನ್ನು ಮಾಡಿದರು.

ಡಾ. ಅಂಬೇಡ್ಕರ್ ತಮ್ಮ ಭಾಷಣದಲ್ಲಿ ನುಡಿದದ್ದು ಹೀಗೆ-

ಮುಂಬೈ ಸರಕಾರ ಹೊಸ ಬಜೆಟ್ ಮೇಲೆ ನಿನ್ನೆ ಮೊನ್ನೆ ನಡೆದ ಭಾಷಣದಲ್ಲಿ ಈ ಬಜೆಟ್‌ನ್ನು ಅಭಿನಂದಿಸಲಾಯಿತು. ಆದರೆ ಈ ಅಭಿನಂದನೆಯಲ್ಲಿ ನಾನೂ ಭಾಗಿಯಾಗಲು ಸಾಧ್ಯವಾಗದಿರುವುದನ್ನು ಖೇದದಿಂದ ಹೇಳಬೇಕಾಗಿದೆ. ಬಜೆಟ್‌ನ ಕಡೆಗೆ ನೋಟಹರಿಸಿದಾಗ ಆರಂಭಕ್ಕೇನೆ ಬಜೆಟ್ ನಿರಾಶಾಜನಕವಾಗಿದೆ ಎಂದೆನಿಸುತ್ತದೆ. ಈ ಅಂದಾಜು ಪತ್ರಿಕೆಯನ್ನು ಹೇಗೆ ಯೋಚಿಸಲಾಗಿದೆ ಎಂದರೆ, ಶ್ರೀಮಂತರ ಕಿಸೆಗೆ ಕಿಂಚಿತ್ತು ಧಕ್ಕೆಯಾಗದಂತೆ ಬಡವರು ಸಂಕಟದ ತೊಳಲಾಟದಲ್ಲೇ ದಿನ ನೂಕುವಂತೆ ಮಾಡಲಾಗಿದೆ. ಹಾಗೆಯೇ ಈ ಬಜೆಟ್‌ನಿಂದ ಭಾವೀ ಸುಖಕರ ಪರಿಸ್ಥಿತಿಯ ಮಸುಕು ಅರಿವೂ ಆಗುವುದಿಲ್ಲ ಅಥವಾ ಪ್ರಾಂತದಲ್ಲಿ ಉಜ್ವಲ ಭವಿಷ್ಯಕಾಲದ ಪ್ರಭಾತಕಾಲ ಶುರುವಾಗಿದ್ದರ ಸುಳಿವೂ ಸಿಗುವುದಿಲ್ಲ. ಟೊಳ್ಳು ಆಶ್ವಾಸನೆಗಳ ಮೂಲಕ ಈ ಬಜೆಟ್‌ನ್ನು ಅಲಂಕರಿಸಲಾಗಿದೆ. ಕೆಲಮಟ್ಟಿಗೆ ಅಭಿನಂದನೀಯವಾಗಿದೆ. ಆದರೆ ನಾನು ಈ ಯೋಜನೆಯ ಶ್ರೇಯಸ್ಸನ್ನು ಫಡ್ನಿಸರಿಗಿಂತ ಗೃಹಮಂತ್ರಿಗೆ ನೀಡಲು ಬಯಸುತ್ತೇನೆ. ಇದೇ ಪೊಲೀಸ್ ಫೋರ್ಸ್ ಬಗೆಗೆ ಅಧಿಕಾರರೂಢ ಕಾಂಗ್ರೆಸ್ ಮತ್ತು ಹಿಂದಿನ ಕಾಂಗ್ರೆಸ್‌ನ ಸಂಬಂಧ ಹೇಗೆ ವಿಸಂಗತಿಯಿಂದ ಕೂಡಿತ್ತು ಎಂಬ ಅರಿವು ಎಲ್ಲರಿಗೂ ಇದೆ. ಹಿಂದೆ ಕಾಂಗ್ರೆಸ್‌ನ ಅಸಹಕಾರ ಚಳವಳಿಯ ಕಾಲದಲ್ಲಿ ಪೊಲೀಸರ ಬಗೆಗೆ ಕಾಂಗ್ರೆಸ್‌ಗೆ ಇಷ್ಟು ಆತ್ಮೀಯತೆ ಅನಿಸುತ್ತಿರಲಿಲ್ಲ, ಅಸಂಖ್ಯವಾದ ಖಾದಿ ಟೊಪ್ಪಿಗೆಗಳನ್ನು ಧರಿಸಿದ ಕಾಂಗ್ರೆಸಿಗರ ಬಾಯಿಂದ ‘ಹಳದಿ ಪಗಡಿ ಕೆಳಗಿಳಿಯಲಿ’ ಎಂದು ಹೊರ ಬೀಳುವ ಬೈಗಳನ್ನು ಕೇಳಿದವರಿಗೆ ಇಂದು ಅದೇ ಅಧಿಕಾರಾರೂಢ ಕಾಂಗ್ರೆಸಿಗೆ ಅಧಿಕ 36,000 ರೂಪಾಯಿಯ ವ್ಯವಸ್ಥೆಯನ್ನು ಇದೇ ಪೊಲೀಸ್ ಫೋರ್ಸಿಗಾಗಿ ಮಾಡುವ ಸಮಯ ಬಂತೆಂದರೆ, ಇದು ಎಷ್ಟು ಅಭಿನಂದನೀಯವೋ ಅಷ್ಟೇ ಬೆರಗಿನ ವಿಷಯವಾಗಿದೆ. ಸದ್ಯದ ಮುಂಬೈ ಸರಕಾರವು ಅಸೆಂಬ್ಲಿಯ ಅಧಿಕಾರದ ಅತಿಕ್ರಮಣ ಮಾಡುತ್ತಿದೆ ಎಂದೆನಿಸುತ್ತಿದೆ. ಇಂದಿನವರೆಗೆ ಯಾವುದೇ ಸರಕಾರವು ತನ್ನದೇ ಅಧಿಕಾರದಲ್ಲಿ ಅಂದಾಜು ಪತ್ರಿಕೆಯಲ್ಲಿಯ ಖರ್ಚಿನ ಬಾಬತ್ತಿನಲ್ಲಿ ದೊಡ್ಡ ರಖಮನ್ನು ಜಮೆಗೆ ಹಿಡಿದಿರಲಿಲ್ಲ. ಹಾಗೆಯೇ ಈ ವಿಷಯದಲ್ಲಿ ಸರಕಾರವು ಮೊದಲು ಈ ಖರ್ಚಿನ ಯೋಜನೆಗೆ ಸಂಬಂಧಿಸಿದಂತೆ ಅಸೆಂಬ್ಲಿಗೆ ಮೊದಲೇ ತಿಳುವಳಿಕೆ ನೀಡಬೇಕಾಗಿತ್ತು, ಎರಡನೆಯದೆಂದರೆ, ಅಕೌಂಟೆಂಟ್ ಜನರಲ್‌ಗೆ ಈ ರಖಮು ಯಾವ ಬಗೆಯಲ್ಲಿ ಉಪಯೋಗಕ್ಕೆ ಬರುತ್ತದೆ ಎಂಬ ಮಾಹಿತಿಯನ್ನು ನೀಡಬೇಕಾಗುತ್ತದೆ, ಆದರೆ ಸತ್ತೆಯ ಬಲದಿಂದ ಈ ವಿಷಯವನ್ನೆಲ್ಲ ನಿರ್ಲಕ್ಷಿಸಿ ಮುಂಬೈ ಸರಕಾರವು ಇಂದು ತಮ್ಮ ಕಲ್ಪನೆಯ ಬಲದಿಂದ ಅಷ್ಟೇ ಅಲ್ಲ ಗಾಳಿಯಲ್ಲಿ ಗೋಪುರವನ್ನು ಕಟ್ಟುವ ಯೋಜನೆಗಾಗಿ ಒಮ್ಮೆಲೇ 36 ಲಕ್ಷ ರೂಪಾಯಿ ಹಣವನ್ನು ಸಂಗ್ರಹಿಸಲಿದೆ. ಈ ವಿಷಯದಲ್ಲಿ ಅಸೆಂಬ್ಲಿಯ ಅಭಿಪ್ರಾಯವನ್ನು ಕೇಳಲಿಲ್ಲ. ತಾವು ಮಾಡಲಿರುವ ವಿಧಾಯಕ ಕಾರ್ಯದ ಮುಸುಕು ಕಲ್ಪನೆಯನ್ನೂ ನೀಡಲಿಲ್ಲ. ಹಾಗೆಯೇ ಈ ಸಭೆಯಲ್ಲಿ ಮಂಜೂರು ಮಾಡಿದ ಕಾನೂನಿನ ನಿಯಮದಡಿಯಲ್ಲಿ ಈ ಸಭೆಗೆ ನಿಯಮವನ್ನು ಮಾಡುವ ಯಾವುದೇ ಹಕ್ಕುಯಿಲ್ಲ ಎಂದಂತಾಯಿತಲ್ಲವೇ. ಗೃಹಮಂತ್ರಿಗಳು ಪ್ರಾಮಾಣಿಕ ಅಭಿಪ್ರಾಯವನ್ನು ವ್ಯಕ್ತಮಾಡದಂತೆ ಕಾಣುತ್ತದೆ. ಇಂದು ಅವರು ಗೈರುಹಾಜರಾಗಿರುವುದರಿಂದ ಅದಕ್ಕೆ ಸೃಷ್ಟೀಕರಣ ಸಿಗುವುದು ಸಾಧ್ಯವಿಲ್ಲದಿದ್ದರೂ ಗೃಹಮಂತ್ರಿಗಳ ಅಧಿಕಾರದ ದುರುಪಯೋಗ ಬಗೆಗೆ ನಾನಿಲ್ಲಿ ಸ್ಪಷ್ಟವಾಗಿ ಸೂಚಿಸಲೇಬೇಕಾಗಿದೆ.

ಹೊಸ ಲೋಕೋಪಯೋಗಿ ಕಾರ್ಯಕ್ಕಾಗಿ ಸರಕಾರವು 1ಕೋಟಿ, 13ಲಕ್ಷ ರೂಪಾಯಿಯ ವ್ಯವಸ್ಥೆ ಮಾಡಿರುವುದಾಗಿ ಹೇಳಿಕೊಂಡಿದೆ. ಆದರೆ ಈ ಎಲ್ಲ ಅಂಕಗಳ ಪರಿಶೀಲನೆ ಮಾಡಿದರೆ ಕಂಡುಬರುವುದು ಏನು? ಈ ಅಪಾರ ಹಣದಿಂದ ಪ್ರತಿವರ್ಷ ಖರ್ಚಾಗುವ 48ಲಕ್ಷ 11ಸಾವಿರ ರೂಪಾಯಿ, ಮದ್ಯನಿಷೇಧದ ಖರ್ಚಿಗಾಗಿ 31ಲಕ್ಷ ರೂಪಾಯಿಯನ್ನು ಕಾಯ್ದಿರಿಸಲಾಗಿದೆ. ಅದನ್ನು ಕಳೆದರೆ ಲೋಕೋಪಯೋಗಿ ಕಾರ್ಯಕ್ಕಾಗಿ 37ಲಕ್ಷ ಮಾತ್ರ ಜಮೆಗೆ ಹಿಡಿದಂತೆ ಕಾಣುತ್ತದೆ. ಅದೇ ರೀತಿ ಶಿಕ್ಷಣ, ನೀರು ಪೂರೈಕೆ, ವೈದ್ಯಕೀಯ ಸಹಾಯ ವಗೈರೆಗಾಗಿ ಖರ್ಚು ಮಾಡಿದ ಹಣ ಮರಳಿ ಪಡೆಯುವುದು ಅಸಾಧ್ಯ ಅಥವಾ ಆ ಇಲಾಖೆಯಲ್ಲಿ ಖರ್ಚು ಮಾಡಿದ ರಖಮಿನಿಂದ ಆದಾಯ ಪಡೆಯುವುದು ಅಸಾಧ್ಯ. ಹಾಗೆಯೇ ಪ್ರಾಂತದಲ್ಲಿಯ ನಿರುದ್ಯೋಗ ನಿವಾರಣೆ, ಅನಾರೋಗ್ಯದ ವಿಮೆ, ವೃದ್ಧಾಪ್ಯಕ್ಕಾಗಿ ವಿಮೆ, ಅಪಘಾತದ ವಿಮೆ, ಮಹಿಳೆಯರ ಹೆರಿಗೆ ಸಹಾಯ- ಮುಂತಾದ ಹಲವು ಅಗತ್ಯವಿರುವ ಲೋಕೋಪಯೋಗಿ ಕಾರ್ಯ ಮಾಡುವ ಅಗತ್ಯವಿದೆ. ಆದರೆ ಈ ವಿಷಯದಲ್ಲಿ ಮುಂಬೈ ಸರಕಾರವು ಸಂಪೂರ್ಣ ವೌನ ವಹಿಸಿದಂತೆ ಕಾಣುತ್ತದೆ. ಇಂದು ಮೇಲಿನ ಲೋಕೋಪಯೋಗಿ ಕಾರ್ಯಕ್ಕಾಗಿ ಜಮೆಗೆ ಹಿಡಿದ ಹಣವನ್ನು ಮುಂದಿನ ವರ್ಷವೂ ಹಿಡಿಯುವುದು ಕಷ್ಟಸಾಧ್ಯ ಎಂದೆನಿಸುತ್ತದೆ.

ಇದೇ ಅಧಿಕಾರರೂಢ ಸರಕಾರವು ಕಾರ್ಮಿಕರ ಹಿತರಕ್ಷಣೆಯ ಧೋರಣೆಯನ್ನು ಕಳೆದ ಆಗಸ್ಟ್ ತಿಂಗಳಲ್ಲಿ ರೂಪಿಸಿತ್ತೋ ಆ ಯೋಜನೆಯಂತೆ ಈ ಪ್ರಾಂತಕ್ಕೆ ಅದೆಷ್ಟು ಖರ್ಚಾಗಬಹುದು ಎಂಬ ಅಂದಾಜನ್ನು ಗೃಹಮಂತ್ರಿಯವರು ನೀಡಿದ್ದರೆ ಅನುಕೂಲವಾಗುತ್ತಿತ್ತು.

ನಮ್ಮ ಪ್ರಾಂತದ ಲೋಕೋಪಯೋಗಿ ಯೋಜನೆಗಾಗಿ ಸಚಿವರಾದ ಫಡ್ನಿಸರು ಯೋಜನೆಯನ್ನು ಕೆಲಕಾಲ ಬದಿಗೆ ಸರಿಸಿದರೆ ನನ್ನ ಅಲ್ಪ ತಿಳುವಳಿಕೆಯಂತೆ ಈ ಯೋಜನೆಗೆ ಕನಿಷ್ಠ 24 ಕೋಟಿ ರೂ. ಖರ್ಚಾಗುತ್ತದೆ. ಇಷ್ಟು ಖರ್ಚು ಮಾಡುವ ಶಕ್ತಿ ಯಾವ ಸರಕಾರಕ್ಕಿದೆಯೋ ಅದೇ ಸರಕಾರ ಆ ಪ್ರಾಂತದ ಆಡಳಿತ ನಡೆಸಲು ಅರ್ಹವಾಗಿದೆ ಎನ್ನುವುದು ನನ್ನ ಅಭಿಪ್ರಾಯ. ಆದರೆ ಇಷ್ಟು ಹಣವನ್ನು ಸಂಗ್ರಹಿಸುವ ಪ್ರಯತ್ನವನ್ನು ನಮ್ಮ ಪ್ರಾಂತೀಯ ಸರಕಾರ ಮಾಡುತ್ತದೆಯೋ? ಇತರ ಪಾಶ್ಚಿಮಾತ್ಯ ದೇಶಗಳು ಪ್ರತಿಯೊಬ್ಬ ಮನುಷ್ಯನಿಗೆ ಖರ್ಚು ಮಾಡುವ ಪ್ರಮಾಣ ಹೀಗಿದೆ- ಕೆನಡಾ 9 ಪೌಂಡು ಮತ್ತು 8 ಶಿಲ್ಲಿಂಗ್, ಸೌಥ್ ಆಸ್ಟ್ರೇಲಿಯಾ 19 ಪೌಂಡು, ನ್ಯೂಝಿಲ್ಯಾಂಡ್ 22 ಪೌಂಡು, ಐರಿಶ್ ಕ್ರೆಸ್ಟೇಟ್ 10ಪೌಂಡು ಮತ್ತು ಮುಂಬೈನಲ್ಲಿ 7 ಪೆನ್ಸ್. ಈ ಪ್ರಮಾಣವನ್ನು ಗಮನಿಸಿದಾಗ ನಮ್ಮ ದರಿದ್ರ ಆರ್ಥಿಕ ಪರಿಸ್ಥಿತಿಯ ಚಿತ್ರ ಅದೆಷ್ಟು ವಿಕಾರವಾಗಿದೆ ಎಂಬ ಸ್ಪಷ್ಟ ಕಲ್ಪನೆ ಬರುತ್ತದೆ. ನಮ್ಮ ಪ್ರಾಂತದ ಆದಾಯದ ತಪಶೀಲು ನೋಡಿದಾಗ ಸಂಪೂರ್ಣ ನಿರಾಸೆಯಾಗುತ್ತದೆ.

ಕಳೆದ 1922-1935 ಕಾಲಾವಧಿಯಲ್ಲಿ ಮುಂಬೈ ಪ್ರಾಂತಕ್ಕಿಂತ ಉಳಿದ ಪ್ರಾಂತಗಳ ಏರಿದ ಆದಾಯದ ವಿವರ ಹೀಗಿದೆ- ಮದ್ರಾಸ್ ಶೇ. 29.5, ಪಂಜಾಬ್ ಶೇ. 25, ಸಂಯುಕ್ತ ಪ್ರಾಂತ ಶೇ. 19.5, ಅಸ್ಸಾಂ ಶೇ. 14.5, ಬಂಗಾಲ ಶೇ. 11.5, ಮುಂಬೈ ಶೇ. 3, ಕಳೆದ 13-14 ವರ್ಷಗಳಲ್ಲಿ ಹೆಚ್ಚಿನ ಕರಾಕರಣೆಯಿಂದ ಜಮೆಯಾದ ಆದಾಯವನ್ನು ಪರಿಗಣಿಸದಿದ್ದರೆ ಮುಂಬೈಯ ಆದಾಯವು ಶೇ. 5.5ರಷ್ಟು ಕುಂಠಿತವಾಗಿರುವುದನ್ನು ಕಾಣಬಹುದು. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಸರಕಾರವು ಮದ್ಯ ನಿಷೇಧದ ಚಳವಳಿಯನ್ನು ಕೈಗೆತ್ತಿಕೊಂಡು ಆದಾಯದ ಬಾಬತ್ತಿನ ದೃಷ್ಟಿಯಿಂದ ಮುಳುಗುವವನಿಗೆ ಯಾವ ಆಸರೆಯೂ ಇಲ್ಲದ ವೃತ್ತಿಯನ್ನು ಸ್ವೀಕರಿಸಿದೆ. ಈ ಯೋಜನೆಯನ್ನು ಜಾರಿಗೆ ತರುವಾಗ ಬೇರೆ ಯಾವ ಆದಾಯದ ಹಣವನ್ನು ಜಮೆಗೆ ಹಿಡಿಯದೆ, ಬದಲಿಗೆ ಲ್ಯಾಂಡ್ ರೆವಿನ್ಯೂ ಕಡಿಮೆ ಮಾಡುವ ಧೋರಣೆಯನ್ನು ರೂಪಿಸಿದೆ. ಕಂದಾಯವನ್ನು ಸೂಟು ಬಿಡಬಾರದು ಎಂದೇನೂ ನಾನು ಹೇಳುತ್ತಿಲ್ಲ. ನನ್ನ ಒಲವು ಯಾವ ಕಡೆಗೆ ಇದೆಯೆಂದರೆ, ಮದ್ಯನಿಷೇಧ ಮತ್ತು ಕಂದಾಯದ ಸೂಟನ್ನು ಕೈಗೆತ್ತಿಕೊಂಡಾಗ ಈ ಯೋಜನೆಯಿಂದ ಸರಕಾರದ ಬೊಕ್ಕಸ ಖಾಲಿಯಾಗುತ್ತದೆ. ಅದನ್ನು ತುಂಬುವ ಯಾವ ವಿಧಾಯಕ ಯೋಜನೆಯನ್ನು ಫಡ್ನಿಸರು ರೂಪಿಸಿದ್ದಾರೆ?

ಕಳೆದ ಅಂದಾಜುಪತ್ರಿಕೆಯ ಕಾಲಕ್ಕೆ ಸಚಿವ ಫಡ್ನಿಸರು ತಮ್ಮ ಭಾಷಣದಲ್ಲಿ ನೀಡಿದ ಭರವಸೆಯ ಮಾತುಗಳು ಇಂದಿನ ಬಜೆಟ್‌ನ್ನು ಕೇಳಿದಾಗ ಏನೆನ್ನಿಸುತ್ತದೆ? ಆ ಕಾಲಕ್ಕೆ ನೀಡಿದ ಭರವಸೆಯ ಮಾತುಗಳನ್ನು ಈ ಹೊಸ ಬಜೆಟ್‌ನಲ್ಲಿ ಪ್ರಸ್ತಾಪಿಸಲೇ ಇಲ್ಲ. ಬದಲಿಗೆ ಆ ಬಜೆಟ್‌ನ ಕಾಲಕ್ಕೆ ಬಹುಜನ ಸಮಾಜದ ಹಿತಸಂಬಂಧದ ಪ್ರಶ್ನೆಯ ಬಗ್ಗೆ ಅವರು ತೋರಿದ ಧೈರ್ಯವು ಹೊಸ ಬಜೆಟ್‌ನಲ್ಲಿ ಕಾಣಬರುತ್ತಿಲ್ಲ. ಈ ಬಜೆಟ್‌ನಲ್ಲಿ ಹೊಸ ಕರಾಕರಣೆಯಿಲ್ಲ, ಬಜೆಟ್ ಉತ್ತಮವಾಗಿದೆ ಎಂದೆಲ್ಲ ಹಾಡಿಹೊಗಳುವುದು ಕಂಡು ನನಗೆ ಬೆರಗಾಗುತ್ತಿದೆ. ಹೊಸ ಕರಾಕರಣೆಯಿಲ್ಲದ್ದರಿಂದ, ಶ್ರೀಮಂತರ ಮೇಲಿನ ಖರ್ಚಿನಭಾರವನ್ನು ಕಡಿಮೆ ಮಾಡಿದ್ದರಿಂದ ಬಡವರು ಸಹಿಸಬೇಕಾಗಿರುವ ಸಂಕಟದ ಬಗೆಗೆ ಬಡವರ ಬಂಧು ಎಂದು ಕರೆಯಿಸಿಕೊಳ್ಳುವ ಕಾಂಗ್ರೆಸ್‌ನ ಅಧಿಕಾರಾರೂಢ ಮಂತ್ರಿಮಂಡಳವು ಕಿಂಚಿತ್ತಾದರೂ ಯೋಚಿಸಿದೆಯೇ? ಆದ್ದರಿಂದ ನಾನು ಸ್ಪಷ್ಟವಾಗಿ ಹೇಳ ಬಯಸುವುದೇನೆಂದರೆ, ಈ ಹೊಸ ಬಜೆಟ್ ಬಡವರದ್ದಲ್ಲ. ಶ್ರೀಮಂತರದ್ದು ಎಂಬ ಬಗೆಗೆ ತಿಲಮಾತ್ರವೂ ಶಂಕೆ ಬೇಡ. ಹಾಗೆ ನೋಡಿದರೆ ಯಾವುದೇ ಸರಕಾರದ ಸಹಾಯ ಬಡವರಿಗೆ ಬೇಕೇಬೇಕು. ಬಡವರಿಗಾಗಿ ಹೋರಾಡುವ ಸರಕಾರ ನಮಗೆ ಬೇಕು. ಯಾವ ಶ್ರೀಮಂತರಿಗೆ ವೈಯಕ್ತಿಕವಾಗಿ ಬೇಕಾದ ಅನುಕೂಲವನ್ನು ತನ್ನ ಹೆಂಡತಿ ಮಕ್ಕಳಿಗೆ ಕೊಡುವುದು ಸಾಧ್ಯವೋ ಅಂಥವರಿಗೇ ಒಂದು ಸರಕಾರವು ಇಂಥ ತುರ್ತು ಪರಿಸ್ಥಿತಿಯಲ್ಲಿ ಸಹಾಯ ಮಾಡಲು ಮುಂದಾಗುವುದು ಹಾಸ್ಯಾಸ್ಪದವಲ್ಲ ಎಂದೇನೂ ಹೇಳಲು ಬರುವುದಿಲ್ಲ. ಈ ಬಗೆಯಲ್ಲಿ ಬಡವರ ಹೊಟ್ಟೆಯ ಮೇಲೆ ಕಾಲಿರಿಸುವ ಸರಕಾರವು ಅಧಿಕಾರರೂಢವಾಗಿರುವುದಕ್ಕಿಂತ ಅದು ಆದಷ್ಟು ಬೇಗ ಅಧಿಕಾರವನ್ನು ತ್ಯಾಗ ಮಾಡುವುದೇ ಯೋಗ್ಯ ಎಂದೆನಿಸುತ್ತದೆ.

ಅಂಬೇಡ್ಕರರ ಭಾಷಣ ತುಂಬ ಪರಿಣಾಮಕಾರಿಯಾಯಿತು. ಈ ಬಗೆಯಲ್ಲಿ ಉತ್ಕೃಷ್ಟ, ಪರಿಣಾಮಕಾರಕ, ಪ್ರಮಾಣಬದ್ಧ ಮತ್ತು ಅಧಿಕಾರಯುತವಾದ ಇಂಥ ಭಾಷಣ ಇಲ್ಲಿಯವರೆಗೆ ಮುಂಬೈ ಕಾಯ್ದೆಮಂಡಳದಲ್ಲಿ ಆಗಿರಲಿಲ್ಲ ಎಂದು ಹೇಳಲಾಗುತ್ತಿದೆ.

ಸಚಿವರಾದ ಲಠ್ಠೆಯವರು ನೀಡಿದ ಉತ್ತರ ಮಾತ್ರ ಅಷ್ಟೊಂದು ಸಮಾಧಾನಕಾರಕವಾಗಿರಲಿಲ್ಲ. ಅವರು ಕೇವಲ ಅರ್ಧಗಂಟೆ ಮಾತ್ರ ಭಾಷಣ ಮಾಡಿದರು. ಇದರ ಮೇಲಿಂದ ಅವರಿಗೆ ತಮ್ಮ ವಿರೋಧಕರಿಗೆ ನೇರ ಮತ್ತು ಖಚಿತವಾದ ಉತ್ತರ ನೀಡುವುದು ಎಷ್ಟೊಂದು ಕಷ್ಟಕರವಾಗಿತ್ತು ಎನ್ನುವುದು ತಿಳಿದುಬರುತ್ತದೆ. ಅವರು ತಮ್ಮ ಭಾಷಣದ ಕೊನೆಗೆ ತಾವು ಸರ್ವ ವರ್ಗದ ಜನರ ಹಿತದ ಕಡೆಗೆ ವಿಶೇಷ ಮಹತ್ವ ನೀಡಿ ಪ್ರಾಮಾಣಿಕವಾಗಿ ಕಾರ್ಯ ಮಾಡುತ್ತಿರುವುದಾಗಿ ಹೇಳಿದರು

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News