ಇಷ್ಟಲಿಂಗದ ಮಹತ್ವ

Update: 2019-12-12 18:30 GMT

ಭಾರತೀಯ ಸಮಾಜೋ ಧಾರ್ಮಿಕ, ಆರ್ಥಿಕ ಮತ್ತು ರಾಜಕೀಯ ಇತಿಹಾಸದಲ್ಲಿ ಇಷ್ಟಲಿಂಗದ ಪಾತ್ರ ಅನನ್ಯವಾಗಿದೆ. ಸಮಾಜದ ವಿವಿಧ ಸ್ತರಗಳಿಂದ ಬಂದ ಕಾಯಕಜೀವಿಗಳು ವಿವಿಧ ಸ್ಥಾವರಲಿಂಗಗಳಿಗೆ ಅಂಟಿಕೊಂಡಿದ್ದರು. ಶೂದ್ರರು ಮತ್ತು ಪಂಚಮರಾದ ಅವರಿಗೆ ಆ ದೇವಾಲಯಗಳಲ್ಲಿ ಪ್ರವೇಶವಿರಲಿಲ್ಲ. ಅವರೆಲ್ಲ ಅಲ್ಲಿ ಬಿಟ್ಟಿಕೂಲಿಗಳಾಗಿ ದುಡಿಯಬೇಕಾಗಿತ್ತು. ರೈತಾಪಿ ಜನರು ಆಹಾರಧಾನ್ಯಗಳನ್ನು ಕೊಡಬೇಕಿತ್ತು. ಗಾಣಿಗರು ಎಣ್ಣೆ ಕೊಡಬೇಕಿತ್ತು. ಹೀಗೆ ಸುಲಿಗೆ ನಿರಂತರವಾಗಿ ನಡೆದಿತ್ತು. ಕಾಯಕಜೀವಿಗಳು ಸವರ್ಣೀಯರ ಸುಖಕ್ಕಾಗಿ ಜೀವ ತೇಯಬೇಕಿತ್ತು. ಇಂಥ ಪ್ರಸಂಗದಲ್ಲಿ ಕಾಯಕಜೀವಿಗಳನ್ನು ಮಂದಿರಗಳಿಂದ ಹೊರ ತರುವುದು ಅವಶ್ಯವಾಗಿತ್ತು. ಅದಕ್ಕಾಗಿ ಬಸವಣ್ಣನವರಿಗೆ ಅರಿವಿನ ಕುರುಹು ಆದ ಹೊಸ ದೇವಸಂಕೇತದ ಸೃಷ್ಟಿಯ ಅವಶ್ಯಕತೆಯಾಯಿತು. ಇಂಥ ಐತಿಹಾಸಿಕ ತಿರುವಿನ ಸಂದರ್ಭದಲ್ಲಿ ಇಷ್ಟಲಿಂಗದ ಸೃಷ್ಟಿಯಾಯಿತು. ಮೂರ್ತಿ ಮಂದಿರಗಳ ಹಂಗಿಲ್ಲದ ಏಕದೇವೋಪಾಸನೆಗಾಗಿ ಈ ಇಷ್ಟಲಿಂಗ ಹೇಳಿ ಮಾಡಿಸಿದಂತಿದೆ.

ಕಾಯಕಜೀವಿಗಳು ಈ ಇಷ್ಟಲಿಂಗವನ್ನು ತಾವು ಹಿಂದೆ ಆರಾಧಿಸುತ್ತಿದ್ದ ದೇವರ ಹೆಸರಿನಲ್ಲೇ ಕಟ್ಟಿಕೊಂಡರು. ಹಾಗೆ ಕಟ್ಟಿಕೊಳ್ಳುವಾಗ ಬಸವಣ್ಣನವರ ‘ದೇವನೊಬ್ಬ ನಾಮ ಹಲವು’ ಎಂಬ ಎಚ್ಚರ ಅವರಿಗಿತ್ತು. ಇದೊಂದೇ ಲಿಂಗಾಯತರ ಪೂಜಾರ್ಹ ವಸ್ತು. ಈ ಇಷ್ಟಲಿಂಗ ಅನೇಕ ರೀತಿಯಲ್ಲಿ ಮಹತ್ವಪೂರ್ಣವಾಗಿದೆ. ಕಾಯಕಜೀವಿಗಳು ಇಷ್ಟಲಿಂಗ ಪೂಜೆ ಮಾಡಿಕೊಳ್ಳುವುದರ ಮೂಲಕ ತಮ್ಮಿಳಗಿನ ಅಂತಃಶಕ್ತಿಯೆಂಬ ಮಹಾಘನದೊಡನೆ ಒಂದಾಗುವ ಕ್ರಮ ಗೊತ್ತಾಯಿತು. ಇಂಥ ಶಕ್ತಿಯನ್ನು ಪಡೆದ ಅವರು ಸ್ವತಂತ್ರಧೀರರಾದರು. ತಾವು ಏಕಾತ್ಮ. ತಮ್ಮಿಳಗಿರುವಾತ ಪರಮಾತ್ಮ. ತಮ್ಮ ಮುಂದೆ ಇರುವುದು ಸಕಲಜೀವಾತ್ಮರಿಂದ ಕೂಡಿದ ಲೋಕಾತ್ಮ. ಏಕಾತ್ಮವು ತನ್ನ ಮುಂದಿರುವ ಲೋಕಾತ್ಮದ ಜೊತೆ ಒಂದಾದಾಗ ಮಾತ್ರ ತನ್ನೊಳಗಿನ ಪರಮಾತ್ಮನ ಜೊತೆ ಕೂಡಲು ಸಾಧ್ಯ. ಅಂದರೆ ಮಾನವರು ಸಕಲಜೀವಾತ್ಮರೊಂದಿಗೆ ತನುಮನಧನದೊಂದಿಗೆ ಒಂದಾದಾಗ ಮಾತ್ರ ತಮ್ಮೊಳಗಿನ ದೇವರ ಜೊತೆ ಒಂದಾಗಬಲ್ಲರು. ಇದುವೆ ಲಿಂಗಾಂಗಸಾಮರಸ್ಯ.

ವ್ಯಕ್ತಿತ್ವ ವಿಕಸನ: ಮಾನವರನ್ನು ವಿಚಾರವಾದಕ್ಕೆಳೆದು ಅವರ ವ್ಯಕ್ತಿತ್ವ ವಿಕಸನಗೊಳಿಸುವುದೇ ಬಸವಣ್ಣನವರ ಗುರಿಯಾಗಿತ್ತು. ವೈದಿಕ ವ್ಯವಸ್ಥೆ ನಿರ್ಮಿಸಿದ ಜಾತಿ, ವರ್ಣಗಳ ಕಟ್ಟಳೆಗಳನ್ನು ತೆಗೆದುಹಾಕಿ ಅವರಿಗೆ ಕಾಯಕಜೀವಿಗಳಿಗೆ ಜಾತಿ ಮತ್ತು ಅಸ್ಪಶ್ಯತೆಯ ಮೂಲಕ ಹಾಕಿದ್ದ ನಿಗೂಢ ಆರ್ಥಿಕ ದಿಗ್ಬಂಧನವನ್ನು ಕಿತ್ತೆಸೆದು ಮಾನವರ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಟ್ಟವರು ಬಸವಣ್ಣನವರು. ಮನುವಾದಿ ಧರ್ಮದಲ್ಲಿ ಕಟ್ಟಕಡೆಯ ಜಾತಿಗೆ ಸೇರಿದ ಮಾದಾರ ಚೆನ್ನಯ್ಯನವರು ಬಸವಧರ್ಮದಲ್ಲಿ ತಮ್ಮ ಸತ್ಯಶುದ್ಧ ಕಾಯಕ ಮತ್ತು ದಾಸೋಹಂಭಾವದಿಂದಾಗಿ ದೇವರಿಗಿಂತಲೂ ಹೆಚ್ಚಿನ ವ್ಯಕ್ತಿತ್ವ ವಿಕಸನ ಹೊಂದುತ್ತಾರೆ. ‘ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ ನಿಮ್ಮಿಂದಧಿಕ ನೋಡಾ ಕೂಡಲಸಂಗಮದೇವ’ ಎಂದು ಬಸವಣ್ಣನವರು ಮನದುಂಬಿ ಹೇಳಿದ್ದಾರೆ. ಸತ್ಯಶುದ್ಧ ಕಾಯಕ ಮತ್ತು ದಾಸೋಹ ಭಾವದ ಮಾದಾರ ಚೆನ್ನಯ್ಯನವರು ಅನುಭಾವದ ಎತ್ತರಕ್ಕೆ ಏರಿದವರಾಗಿದ್ದರು. ಮನುವಾದಿ ಸಮಾಜದಲ್ಲಿ ಕಟ್ಟಕಡೆಯ ಜಾತಿಗೆ ಸೇರಿದ್ದ ಅವರು ಶರಣಸಂಕುಲದಲ್ಲಿ ವ್ಯಕ್ತಿತ್ವ ವಿಕಸನ ಹೊಂದಿ ದೇವರಿಗಿಂತಲೂ ದೊಡ್ಡವರು ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News