ಅಭಿವೃದ್ಧಿಗೆ ಬೇಕಾದದ್ದು ಪೌರತ್ವ ಗಣತಿಯಲ್ಲ, ಜಾತಿ ಗಣತಿ

Update: 2019-12-14 06:03 GMT

ಈ ದೇಶದಲ್ಲಿ ಮೀಸಲಾತಿ ಅನುಷ್ಠಾನಕ್ಕಿರುವ ಅತಿ ದೊಡ್ಡ ತೊಡಕು ಜಾತಿಯ ಅಂಕಿಅಂಶಗಳ ಕುರಿತಂತೆ ಮತ್ತು ಅವರ ಸ್ಥಿತಿಗತಿಗಳ ಕುರಿತಂತೆ ಸ್ವಾತಂತ್ರಾನಂತರದಲ್ಲಿ ಅಧಿಕೃತ್ಟ ದಾಖಲೆಗಳಿಲ್ಲದೇ ಇರುವುದು. ಬ್ರಿಟಿಷರ ಕಾಲದಲ್ಲಿ ನಡೆಸಿದ ಜಾತಿ ಸಮೀಕ್ಷೆಗಳ ಆಧಾರದಲ್ಲಿ ಮೀಸಲಾತಿಯನ್ನು ಜಾರಿಗೊಳಿಸುವ ಔಚಿತ್ಯವನ್ನೇ ಈ ದೇಶದ ಸುಪ್ರೀಂಕೋರ್ಟ್ ಪ್ರಶ್ನಿಸಿತ್ತು. ಈ ದೇಶದಲ್ಲಿ ಮೀಸಲಾತಿ ತನ್ನ ಉದ್ದೇಶವನ್ನು ಸಾಧಿಸಿಕೊಳ್ಳದೇ ಇರುವುದಕ್ಕೂ ಇದು ಮುಖ್ಯ ಕಾರಣವಾಗಿದೆ. ಹಿಂದೂ ಧರ್ಮ ಉಳಿದ ಧರ್ಮಗಳಂತಲ್ಲ. ಹಿಂದೂ ಧರ್ಮವೆನ್ನುವುದು ನೂರಾರು ಜಾತಿಗಳ ಒಂದು ಸಂಘಟನೆ. ಸಾಮಾಜಿಕ, ಕೌಟುಂಬಿಕ ಅಂಶಗಳಿಗೆ ಸಂಬಂಧ ಪಟ್ಟಂತೆ ಜಾತಿ ಜಾತಿಗಳ ನಡುವೆ ಸ್ಪಷ್ಟ ಅಂತರಗಳಿವೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ತಮ್ಮ ಮಾತಿನಲ್ಲಿ, ಹಿಂದೂ ಎನ್ನುವುದು ಧರ್ಮವಲ್ಲ, ಅದೊಂದು ಜೀವನ ಶೈಲಿ ಎಂದು ಸ್ಪಷ್ಟಪಡಿಸಿದ್ದಾರೆ. ಅಂದರೆ ಈ ದೇಶದಲ್ಲಿ ಜಾತಿಯೇ ವಾಸ್ತವ.

ಜಾತಿಯ ಕಾರಣಕ್ಕಾಗಿಯೇ ಈ ದೇಶದಲ್ಲಿ ಶೋಷಣೆ, ಬಡತನವನ್ನು ಅನುಭವಿಸುತ್ತಿರುವ ಜನರನ್ನು ಗುರುತಿಸಿ ಅವರನ್ನು ಮೇಲೆತ್ತುವುದಕ್ಕಾಗಿ ಜಾತಿ ಮೀಸಲಾತಿಯನ್ನು ಜಾರಿಗೊಳಿಸಲಾಯಿತು. ಆದರೆ ಇದೇ ಸಂದರ್ಭದಲ್ಲಿ ಸ್ವಾತಂತ್ರಾನಂತರ ವೈಜ್ಞಾನಿಕವಾಗಿ ಜಾತಿ ಜನಗಣತಿಯೊಂದನ್ನು ನಡೆಸಿ, ಅವರ ಸಂಖ್ಯಾಬಲ ಮತ್ತು ಸ್ಥಿತಿಗತಿಗಳನ್ನು ಅಧ್ಯಯನ ನಡೆಸುವ ಗಂಭೀರ ಪ್ರಯತ್ನ ನಡೆಯಲೇ ಇಲ್ಲ. ಈ ಬಗ್ಗೆ ಸರಕಾರ ಯೋಜನೆಗಳನ್ನು ರೂಪಿಸಿತಾದರೂ ಕಾರಣಾಂತರಗಳಿಂದ ಅದು ಮುಂದೂಡುತ್ತಲೇ ಹೋಯಿತು. ಸ್ವಾತಂತ್ರೋತ್ತರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ 2014ರಲ್ಲಿ ಸಾಮಾಜಿಕ, ಆರ್ಥಿಕ ಸಮೀಕ್ಷೆಯನ್ನು ನಡೆಸಲು ಅಂದಿನ ಸಿದ್ದರಾಮಯ್ಯ ಸರಕಾರ ನಿರ್ಧರಿಸಿತು. ಒಂದು ವೇಳೆ ಈ ಗಣತಿ ಯಶಸ್ವಿಯಾಗಿದ್ದರೆ ಅದು ದೇಶಾದ್ಯಂತ ವಿಸ್ತರಣೆಗೊಳ್ಳುವ ಅವಕಾಶವೊಂದಿತ್ತು. ಇದೀಗ ಬಿಜೆಪಿ ಸರಕಾರ ಈ ಗಣತಿ ನೀಡಿರುವ ವರದಿಯನ್ನು ಯಾವ ಕಾರಣಗಳನ್ನೂ ನೀಡದೆ ತಿರಸ್ಕರಿಸಲು ಮುಂದಾಗಿದೆ. 158 ರೂ.ಕೋಟಿ ವೆಚ್ಚದ ಈ ವರದಿಯನ್ನು ಸರಕಾರ ತಿರಸ್ಕರಿಸಲು ಸ್ಪಷ್ಟವಾದ ಕಾರಣಗಳು ಇನ್ನೂ ಹೊರಬಿದ್ದಿಲ್ಲ. ಆದರೆ ಬಿಜೆಪಿ ನೇತೃತ್ವದ ಸರಕಾರ ಯಾಕೆ ಈ ವರದಿಯನ್ನು ತಿರಸ್ಕರಿಸಿರಬಹುದು ಎನ್ನುವುದನ್ನು ಊಹಿಸುವುದು ಕಷ್ಟವಿಲ್ಲ್ಲ.

ಈ ಜಾತಿ ಗಣತಿಯನ್ನು ಅದೆಷ್ಟು ವೈಜ್ಞಾನಿಕವಾಗಿ ಮಾಡಲಾಗಿತ್ತು ಎಂದರೆ, ಇತರ ಧರ್ಮಗಳಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ವಿವಿಧ ಜಾತಿಗಳನ್ನು ಗುರುತಿಸಿ ಅವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ದುಃಸ್ಥಿತಿಗಳನ್ನು ಕೂಡ ದಾಖಲಿಸಲಾಗಿತ್ತು. ಆದರೆ ಈ ಅಂಕಿಅಂಶಗಳು ಈ ನೆಲದ ಹಲವು ವಾಸ್ತವಗಳನ್ನು ಬಹಿರಂಗಗೊಳಿಸುವ ಭಯದಿಂದ ರಾಜಕಾರಣಿಗಳು ವರದಿಯನ್ನು ಕೊಂದು ಹಾಕುವ ಆತುರದಲ್ಲಿದ್ದಾರೆ. ಈ ವರದಿಯಲ್ಲಿ ಗೊಂದಲಗಳಿವೆ ಎನ್ನುವುದು ರಾಜಕಾರಣಿಗಳ ಚಿಂತೆಯಾಗಿಲ್ಲ. ಬದಲಿಗೆ, ಈ ವರದಿಯು ಸಮಾಜದಲ್ಲಿ ಅಥವಾ ರಾಜಕೀಯವಲಯದಲ್ಲಿ ಗೊಂದಲಗಳನ್ನು ಸೃಷ್ಟಿಸಬಹುದು ಎನ್ನುವುದು ಅವರ ಭಯ. ಒಂದು ರೀತಿಯಲ್ಲಿ ಈ ನೆಲದ ಗಾಯಗಳನ್ನು ತೆರೆದುನೋಡಲು ಹೆದರುತ್ತಿದ್ದಾರೆ. ಗಾಯಗಳು ಉಲ್ಬಣಗೊಂಡಿದ್ದು ಅದು ಇನ್ನಷ್ಟು ಅವಾಂತರಗಳನ್ನು ಸೃಷ್ಟಿಸಿರುವುದು ಹೊರಗೆ ಗೊತ್ತಾದರೆ ಎನ್ನುವ ಆತಂಕ ಅವರದು. ಆದರೆ ಗಾಯಗಳನ್ನು ಮುಚ್ಚಿಟ್ಟಷ್ಟೂ ಅದು ಕೊಳೆಯುತ್ತಾ ದೇಹದ ಸ್ಥಿತಿ ಇನ್ನಷ್ಟು ಗಂಭೀರವಾಗುತ್ತದೆ ಎನ್ನುವ ಅಂಶ ಅವರಿಗೆ ಗೊತ್ತಿಲ್ಲದ್ದೇನೂ ಅಲ್ಲ. ಮುಖ್ಯವಾಗಿ ಇದು ಕೆಳಜಾತಿಗಳ ಸಾಮಾಜಿಕ ಸ್ಥಿತಿಗತಿಗೆ ಸಂಬಂಧಪಟ್ಟ ಅಂಕಿಅಂಶಗಳು. ಆದರೆ ಈ ನಾಡು, ದೇಶ ಮೇಲ್‌ಜಾತಿಗಳ ಕೈಯಲ್ಲಿವೆ. ಕೆಳಜಾತಿಗಳು ಹಿಂದಿನಂತೆಯೇ ಊಳಿಗ ಮಾಡುತ್ತಾ ಕಳೆಯಬೇಕು ಎಂದು ಬಯಸುವ ಜನರಿಗೆ ಕೆಳಜಾತಿಗಳ ಸ್ಥಿತಿಗತಿಗಳು ಬಯಲಾಗುವುದು ಬೇಕಾಗಿಲ್ಲ. ಮೀಸಲಾತಿಯನ್ನೇ ಇಲ್ಲವಾಗಿಸಬೇಕು ಎಂದು ಸಂಚು ಹೂಡಿದವರಿಗೆ ಮೀಸಲಾತಿಗೆ ಪೂರಕವಾಗಿ ಕೆಲಸ ಮಾಡುವ ಜಾತಿ ಗಣತಿ ಪಥ್ಯವಾಗುವುದು ಕಷ್ಟ. ಆದುದರಿಂದಲೇ ಜಾತಿ ಗಣತಿ ವರದಿಯನ್ನು ಸರಕಾರ ಚರ್ಚೆಗೆ ಎತ್ತಿಕೊಳ್ಳಲಿಲ್ಲ.

ಅತ್ಯಂತ ವಿಪರ್ಯಾಸದ ಸಂಗತಿಯೆಂದರೆ, ಜಾತಿ ಗಣತಿಯಿಂದಾಗಿ ಸುಮಾರು 158 ಕೋಟಿ ರೂ. ವ್ಯರ್ಥವಾಗಿದೆ ಎಂದು ಬಿಜೆಪಿಯ ಕೆಲವು ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಈ ದೇಶದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಯ ಮೇಲೆ ಯಾವ ರೀತಿಯ ಪರಿಣಾಮವನ್ನೂ ಬೀರದ ಎನ್‌ಆರ್‌ಸಿ ಅಥವಾ ಪೌರತ್ವ ನೋಂದಣಿಗಾಗಿ ಕೇಂದ್ರ ಸರಕಾರ 1,100 ಕೋಟಿ ರೂ.ಗಳನ್ನು ಅಸ್ಸಾಮ್‌ನಲ್ಲಿ ವೆಚ್ಚ ಮಾಡಿತು. ಮುಸ್ಲಿಮರ ವಿರುದ್ಧ ದ್ವೇಷ ರಾಜಕಾರಣ ಒಂದನ್ನು ಹೊರತು ಪಡಿಸಿದ ಇನ್ನಾವ ಕಾರಣವೂ ಇದಕ್ಕಿರಲಿಲ್ಲ. ಆದರೆ ಈ ಎನ್‌ಆರ್‌ಸಿ ವಿಫಲವಾಯಿತು. ಅಂದರೆ, ಅಸ್ಸಾಮಿನಲ್ಲಿ ಮುಸ್ಲಿಮರಿಗಿಂತಲೂ ಅತ್ಯಧಿಕ ಸಂಖ್ಯೆಯ ವಲಸಿಗರು ಮುಸ್ಲಿಮೇತರರಿದ್ದಾರೆ ಎನ್ನುವುದು ಗೊತ್ತಾದಾಕ್ಷಣ ಮತ್ತು ಅಸ್ಸಾಮಿನ ಬಿಜೆಪಿಯೇ ಕೇಂದ್ರದ ವಿರುದ್ಧ ಬಂಡೆದ್ದಾಗ ಎನ್‌ಆರ್‌ಸಿಯನ್ನು ಸಮರ್ಥಿಸಿಕೊಳ್ಳಲು ಸಿಎಬಿ ಅಥವಾ ಪೌರತ್ವ ತಿದ್ದುಪಡಿ ಕಾನೂನನ್ನು ಜಾರಿಗೆ ತಂದಿತು. ಇದರ ಪರಿಣಾಮವಾಗಿ ಈಶಾನ್ಯ ಭಾರತದಲ್ಲಿ ಹಿಂದೂ ಮುಸ್ಲಿಮರೆಲ್ಲರೂ ಒಂದಾಗಿ ಬೀದಿಗಿಳಿದಿದ್ದಾರೆ. ಗಡಿಯನ್ನು ಕಾಯಬೇಕಾದ ಸೇನೆ ದೇಶದ ಪ್ರಜೆಗಳ ವಿರುದ್ಧವೇ ಗುಂಡು ಹಾರಿಸುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಹಿಂಸಾಚಾರದಲ್ಲಿ ನಾಲ್ವರು ಮೃತರಾಗಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ.

ದೇಶಕ್ಕೆ ಸಹಸ್ರಾರು ಕೋಟಿ ರೂ. ನಷ್ಟವಾಗಿದೆ. ಆದರೆ ಈ ನಷ್ಟದಿಂದ ದೇಶ ಪಡೆದದ್ದು ಏನು? ದೇಶವನ್ನು ದ್ವೇಷವಾಗಿ ಬದಲಾಯಿಸುವ ಒಂದು ಅಜೆಂಡಕ್ಕಾಗಿ ಕೇಂದ್ರ ಸರಕಾರ ಭಾರತದ ಖಜಾನೆಯ ಹಣವನ್ನು ಸುರಿದು ಬಿಟ್ಟಿತು. ಆದರೆ ಅದರ ಕುರಿತಂತೆ ವೌನವಾಗಿರುವ ರಾಜ್ಯದ ಬಿಜೆಪಿ ನಾಯಕರು ಜಾತಿ ಗಣತಿಗಾಗಿ ನಡೆದ 158 ಕೋಟಿ ರೂ.ಗಾಗಿ ಕಣ್ಣೀರು ಸುರಿಸುತ್ತಿದ್ದಾರೆ. ಇಂದು ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತ ಸಮುದಾಯ ಜಾತಿ ಗಣತಿಗಾಗಿ ದೇಶಾದ್ಯಂತ ಒತ್ತಾಯಿಸಬೇಕಾಗಿದೆ. ಆದರೆ ಸರಕಾರ ಇಂದಿನ ಅಗತ್ಯ ‘ಪೌರತ್ವ ನೋಂದಣಿ’ ಎಂಬಂತೆ ಬಿಂಬಿಸಿ ಜಾತಿಗಣತಿಯ ಅಗತ್ಯತೆಯನ್ನು ಕಸದಬುಟ್ಟಿಗೆ ಹಾಕಿದೆ. ಪೌರತ್ವ ನೋಂದಣಿಗೆ ಬಳಸುವ ಹಣವನ್ನು ಸರಕಾರ ಜಾತಿ ಗಣತಿಗೆ ಬಳಸಿ, ಯಾವ ಯಾವ ಜಾತಿಗಳು ಯಾವ ಯಾವ ಸ್ಥಿತಿಗತಿಗಳಲ್ಲಿವೆ ಎನ್ನುವುದನ್ನು ಹೊರತಂದು, ಆ ಜಾತಿಗಳ ಅಭಿವೃದ್ಧಿಗೆ ಪ್ರಯತ್ನಿಸಿದರೆ ಹಿಂದೂ ಧರ್ಮಕ್ಕೂ ಒಳ್ಳೆಯದಾಗುತ್ತದೆ, ದೇಶಕ್ಕೂ ಒಳ್ಳೆಯದಾಗುತ್ತದೆ. ಪೌರತ್ವ ತಿದ್ದು ಪಡಿ ಮಸೂದೆ ಮತ್ತು ಪೌರತ್ವ ನೋಂದಣಿಯ ವಿರುದ್ಧದ ಪ್ರತಿಭಟನೆಯ ಜೊತೆಜೊತೆಗೇ ದೇಶಾದ್ಯಂತ ಜಾತಿ ಜನಗಣತಿಯ ಅಗತ್ಯತೆಯನ್ನು ವ್ಯವಸ್ಥೆಗೆ ಮನವರಿಕೆ ಮಾಡಿಕೊಡುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News