ವಾಗ್ದಂಡನೆ ನೀಡಲು ನಾನೇನೂ ತಪ್ಪು ಮಾಡಿಲ್ಲ ಎಂದ ಟ್ರಂಪ್

Update: 2019-12-14 14:17 GMT

ವಾಷಿಂಗ್ಟನ್: ತನಗೆ ವಾಗ್ದಂಡನೆ ನೀಡಲು ಕೈಗೊಳ್ಳಲಾಗುತ್ತಿರುವ ಕ್ರಮ ನ್ಯಾಯೋಚಿತವಲ್ಲ ಹಾಗೂ ತಾನೇನೂ ತಪ್ಪು ಮಾಡಿಲ್ಲ ಎಂದು ಹೇಳಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತನ್ನ ಆಡಳಿತದಲ್ಲಿ ದೇಶ ಉತ್ತಮವಾಗಿ ಕಾರ್ಯಾಚರಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಟ್ರಂಪ್ ವಿರುದ್ಧದ ವಾಗ್ದಂಡನೆ ನಿಲುವಳಿ ಮಂಡನೆ ಇದೀಗ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಮುಂದೆ ಹೋಗಲಿದ್ದು, ಅಲ್ಲಿ ವಿಪಕ್ಷವಾಗಿರುವ ಡೆಮಾಕ್ರೆಟಿಕ್ ಪಕ್ಷ ಬಹುಮತ ಹೊಂದಿದೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅದಕ್ಕೆ ಅನುಮೋದನೆ ನೀಡಿದ ನಂತರ ವಿಚಾರಣೆ 100 ಮಂದಿ ಸದಸ್ಯರ ಅಮೆರಿಕನ್ ಸೆನೆಟ್‍ನಲ್ಲಿ ನಡೆಯಲಿದ್ದು ಇಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷಕ್ಕೆ ಬಹುಮತವಿದೆ.

"ಡೆಮಾಕ್ರೆಟಿಕ್ ಪಕ್ಷ ದ್ವೇಷದ ಪಕ್ಷವಾಗಿದೆ. ಅದು ನಮ್ಮ ದೇಶಕ್ಕೆ ಒಳ್ಳೆಯದಲ್ಲ'' ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮುನ್ನ ತಮ್ಮ ವಿರುದ್ಧದ ವಾಗ್ದಂಡನೆಗೆ ಕೈಗೊಳ್ಳಲಾಗುತ್ತಿರುವ ಕ್ರಮ ರಾಜಕೀಯ ಪ್ರೇರಿತ ಎಂದೂ ಟ್ರಂಪ್ ಹೇಳಿದ್ದರು.

2 ಗಂಟೆಯಲ್ಲಿ 123 ಬಾರಿ ಟ್ವೀಟ್ ಮಾಡಿದ ಟ್ರಂಪ್!

ತನ್ನ ವಿರುದ್ಧ ವಾಗ್ದಂಡನೆ ಆರೋಪಗಳನ್ನು ಹೊರಿಸಿರುವ ಹೌಸ್ ನ್ಯಾಯಾಂಗ ಸಮಿತಿಯ ನಿರ್ಧಾರದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ಗಂಟೆಗಳ ಅವಧಿಯಲ್ಲಿ 123 ಟ್ವೀಟ್‌ಗಳನ್ನು ಮಾಡುವ ಮೂಲಕ ಒಂದು ರೀತಿಯ ಟ್ವಿಟರ್ ದಾಖಲೆಯನ್ನೇ ನಿರ್ಮಿಸಿದ್ದಾರೆ.

‘‘ನೀವು ಏನೂ ತಪ್ಪು ಮಾಡದೆ ಇದ್ದಾಗ ನಿಮ್ಮನ್ನು ಹೇಗೆ ವಾಗ್ದಂಡನೆಗೆ ಗುರಿಪಡಿಸಬಹುದು? ನಮ್ಮ ದೇಶದ ಇತಿಹಾಸದಲ್ಲಿಯೇ ಉತ್ತಮ ಆರ್ಥಿಕತೆಯನ್ನು ಸೃಷ್ಟಿಸಿದ್ದೇನೆ, ನಮ್ಮ ಸೇನೆಯನ್ನು ಪುನರ್ರಚಿಸಿದ್ದೇನೆ, ತೆರಿಗೆ ಕಡಿತ ಮಾಡಿದ್ದೇನೆ, ಉದ್ಯೋಗಗಳನ್ನು ನಿರ್ಮಾಣ ಮಾಡಿದ್ದೇನೆ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ತನ್ನ ಮ್ಯಾರಥಾನ್ ಟ್ವೀಟಿಂಗ್ ಅವಧಿಯಲ್ಲಿ ಮಾಧ್ಯಮಗಳ ವಿರುದ್ಧವೂ ಹರಿಹಾಯ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News