ಪೌರತ್ವ ಕಾಯ್ದೆಗೆ ನಿತೀಶ್ ಬೆಂಬಲ ವಿರೋಧಿಸಿ ರಾಜೀನಾಮೆಗೆ ಮುಂದಾದ ಪ್ರಶಾಂತ್ ಕಿಶೋರ್

Update: 2019-12-19 07:08 GMT

ಪಾಟ್ನಾ: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಅವರ ಪಕ್ಷದ ನಂಬರ್ 2 ನಾಯಕರೂ, ಚುನಾವಣಾ ತಂತ್ರಜ್ಞರೂ ಆಗಿರುವ ಪ್ರಶಾಂತ್ ಕಿಶೋರ್ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿದ ಪರಿಣಾಮ  ಶನಿವಾರ  ಪಕ್ಷಕ್ಕೆ ರಾಜೀನಾಮೆ ನೀಡಲು ಪ್ರಶಾಂತ್ ಕಿಶೋರ್ ಮುಂದಾಗಿದ್ದಾರೆ. ಆದರೆ  ನಿತೀಶ್ ಕುಮಾರ್ ಅದಕ್ಕೆ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ.

ಶನಿವಾರ ಇಬ್ಬರ ನಡುವೆಯೂ  90 ನಿಮಿಷಗಳ ಮಾತುಕತೆ ನಡೆದಿದ್ದು, ನಂತರ ಪ್ರಶಾಂತ್ ಕಿಶೋರ್ ತಮ್ಮ ರಾಜೀನಾಮೆ ನೀಡುವ ಸಾಧ್ಯತೆ ತಳ್ಳಿ ಹಾಕಿದ್ದಾರಲ್ಲದೆ ಪೌರತ್ವ ಕಾಯ್ದೆ ಕುರಿತು ನಿತೀಶ್ ಕುಮಾರ್  ತಮ್ಮ ವಿವರಣೆ ನೀಡುತ್ತಾರೆ ಎಂದಷ್ಟೇ ಹೇಳಿದ್ದಾರೆ.

ಈ ಕಾಯ್ದೆ ಕುರಿತು ನಿತೀಶ್ ತಮ್ಮ ಹಿಂದಿನ ನಿಲುವು ಬದಲಿಸಿದ್ದೇಕೆ ಎಂದು ಪ್ರಶಾಂತ್ ಕಿಶೋರ್ ಅವರನ್ನು ಕೇಳಿದಾಗ ಅದು ಹೊಸ ಪೌರತ್ವ ನೀಡುವ ಕುರಿತಾಗಿದ್ದರಿಂದ ಮುಖ್ಯಮಂತ್ರಿ ಅದನ್ನು ಬೆಂಬಲಿಸಿದ್ದಾಗಿ ಹೇಳಿದ್ದಾರೆ.

ಈ ಕಾಯಿದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಜತೆಯಾಗಿ ಅಪಾಯಕಾರಿಯಾಗಬಹುದಾದುದರಿಂದ ಅದನ್ನು ತಾನು ವಿರೋಧಿಸಿದ್ದಾಗಿ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಪೌರತ್ವ ಕಾಯ್ದೆಗೆ ತನ್ನ ವಿರೋಧವನ್ನು ಸದಾ ವ್ಯಕ್ತಪಡಿಸುತ್ತಿದ್ದ ನಿತೀಶ್, ಮಸೂದೆಯನ್ನು ಸಂಸತ್ತಿನಲ್ಲಿ ಮಂಡನೆಯಾಗುವ ಮುನ್ನಾದಿನ ಅದನ್ನು ಬೆಂಬಲಿಸುವ ನಿರ್ಧಾರ ಕೈಗೊಂಡಿದ್ದರು.

ಮುಖ್ಯಮಂತ್ರಿ ಹವಾಮಾನ ಜಾಗೃತಿ ಕುರಿತಾದ ತಮ್ಮ ಪಾದಯಾತ್ರೆ ಮುಗಿದ ನಂತರ ಈ ವಿವಾದಾತ್ಮಕ ವಿಚಾರ ಕುರಿತಂತೆ ತಮ್ಮ ನಿಲುವು ಸ್ಪಷ್ಟ ಪಡಿಸಲಿದ್ದಾರೆಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News