ಮೊದಲ ಏಕದಿನ: ಹೆಟ್ಮೆಯರ್ - ಹೋಪ್ ಶತಕ; ವಿಂಡೀಸ್‌ಗೆ ಜಯ

Update: 2019-12-15 16:38 GMT

ಚೆನ್ನೈ, ಡಿ.15: ಆತಿಥೇಯ ಭಾರತದ ವಿರುದ್ಧ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ತಂಡ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ

ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 288 ರನ್ ಗಳಿಸಬೇಕಿದ್ದ ವೆಸ್ಟ್‌ಇಂಡೀಸ್ ತಂಡ ಶಿಮ್ರ್‌ನ್ ಹೆಟ್ಮೆಯರ್ ಮತ್ತು ಶೈ ಡಿಯಾಗೊ ಹೋಪ್ ಶತಕ ನೆರವಿನಲ್ಲಿ ಇನ್ನೂ 13 ಎಸೆತಗಳು ಬಾಕಿ ಇರುವಾಗಲೇ 2 ವಿಕೆಟ್ ನಷ್ಟದಲ್ಲಿ 291 ರನ್ ಗಳಿಸಿ ಸುಲಭವಾಗಿ ಗೆಲುವು ದಾಖಲಿಸಿದೆ.

ಹೆಟ್ಮೆಯರ್ 85 ಎಸೆತಗಳಲ್ಲಿ 8ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ ಶತಕ ದಾಖಲಿಸಿದರು.

32.2ನೇ ಓವರ್‌ನಲ್ಲಿ ಕುಲ್‌ದೀಪ್ ಎಸೆತದಲ್ಲಿ ಚೆಂಡನ್ನು ಲಾಂಗ್ ಆನ್ ಕಡೆ ತಳ್ಳಿ 1 ರನ್ ತೆಗೆಯುವ ಮೂಲಕ ಶತಕ ಪೂರೈಸಿದರು. 26ರ ಹರೆಯದ ಹೋಪ್ 149 ಎಸೆತಗಳಲ್ಲಿ 7ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 8ನೇ ಏಕದನ ಶತಕ ಪೂರೈಸಿದರು. 22ರ ಹರೆಯದ ಹೆಟ್ಮೆಯರ್ 41ನೇ ಏಕದಿನ ಪಂದ್ಯದಲ್ಲಿ 5ನೇ ಶತಕ ಪೂರ್ಣಗೊಳಿಸಿದ್ದಾರೆ.

ಗೆಲುವಿಗೆ 289 ರನ್ ಗಳಿಸಬೇಕಿದ್ದ ವೆಸ್ಟ್‌ಇಂಡೀಸ್ ತಂಡ 4.1 ಓವರ್‌ಗಳಲ್ಲಿ 11 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತ್ತು. ಆರಂಭಿಕ ಬ್ಯಾಟ್ಸ್‌ಮನ್ ಸುನೀಲ್ ಅಂಬ್ರಿಸ್(9) ಅವರನ್ನು ದೀಪಕ್ ಚಹರ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಬಳಿಕ ಶೈ ಹೋಪ್ ಮತ್ತು ಹೆಟ್ಮೆಯರ್ ಜೊತೆಯಾಗಿ ಎರಡನೇ ವಿಕೆಟ್‌ಗೆ 218 ರನ್‌ಗಳ ದೊಡ್ಡ ಕೊಡುಗೆ ನೀಡಿದರು. ಹೆಟ್ಮೆಯರ್ 139 ರನ್(106ಎ, 11ಬೌ,7ಸಿ) ಗಳಿಸಿ ಮುಹಮ್ಮದ್ ಶಮಿ ಎಸೆತದಲ್ಲಿ ಶ್ರೇಯಸ್ ಅಯ್ಯರ್‌ಗೆ ಕ್ಯಾಚ್ ನೀಡಿದರು. 70ನೇ ಪಂದ್ಯದಲ್ಲಿ ಶತಕ ಗಳಿಸಿರುವ ಹೋಪ್ ಮತ್ತು ಪೂರನ್ ಮೂರನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 62 ಸೇರಿಸಿ ತಂಡಕ್ಕೆ ಗೆಲುವು ದಾಖಲಿಸಲು ನೆರವಾದರು.

ಹೋಪ್ ಔಟಾಗದೆ 102 ರನ್(11ಎ, 7ಬೌ,1ಸಿ) ಮತ್ತು ನಿಕೋಲಸ್ ಪೂರನ್ ಔಟಾಗದೆ 29 ರನ್(23ಎ, 4ಬೌ) ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News