ಜಾರ್ಖಂಡ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಾಮೀನು ಪಡೆದಾತ ಬಿಜೆಪಿ ಅಭ್ಯರ್ಥಿ!

Update: 2019-12-15 16:57 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಡಿ.15: ಗುರುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದ ಬಾಘಮಾರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ದುಲು ಮಹತೊ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಎದುರಿಸುತ್ತಿದ್ದು,ಸದ್ಯ ತಾತ್ಕಾಲಿನ ಜಾಮೀನಿನಲ್ಲಿ ಜೈಲಿನಿಂದ ಹೊರಗಿದ್ದಾರೆ. 2015ರಲ್ಲಿ ಬಿಜೆಪಿ ಕಾರ್ಯಕರ್ತೆಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಅವರ ಮೇಲಿದೆ.

ಪಕ್ಷದ ಕೆಲಸಕ್ಕಾಗಿ ತನ್ನನ್ನು ಗೆಸ್ಟ್‌ಹೌಸ್‌ಗೆ ಕರೆಸಿಕೊಂಡಿದ್ದ ಮಹತೊ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಮಹತೊ ಇಚ್ಛೆಯನ್ನು ಪೂರೈಸದಿದ್ದರೆ ತನ್ನ ಸರ್ವನಾಶ ಮಾಡುವುದಾಗಿ ಅವರ ಸಹಾಯಕ ತನಗೆ ತಿಳಿಸಿದ್ದ ಎಂದೂ ಆಕೆ ಆಪಾದಿಸಿದ್ದಾರೆ.

 ಜಾರ್ಖಂಡ್ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಈ ವರ್ಷದ ಅಕ್ಟೋಬರ್‌ನಲ್ಲಿ ಕತ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ನ್ಯಾಯಾಲಯವಿನ್ನೂ ಆರೋಪಗಳನ್ನು ರೂಪಿಸಿಲ್ಲ.

ತನಗೆ ನ್ಯಾಯ ದೊರೆಯದಿದ್ದರೆ ಜಾರ್ಖಂಡ್ ಮುಖ್ಯಮಂತ್ರಿ ರಘುಬೀರ ದಾಸ್ ಅವರ ಎದುರೇ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಳ್ಳುವುದಾಗಿ ಮಹಿಳೆಯು ಹೇಳುತ್ತಿದ್ದ ವೀಡಿಯೊವೊಂದು ಕಳೆದ ವರ್ಷ ವೈರಲ್ ಆಗಿತ್ತು.

ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯೊಂದಿಗೆ ಪ್ರಧಾನಿ ಕಾಣಿಸಿಕೊಳ್ಳುವುದು ಯಾವ ಸಂದೇಶವನ್ನು ರವಾನಿಸುತ್ತದೆ ಎಂಬ ಪತ್ರಕರ್ತರ ಪ್ರಶ್ನೆಗೆ ಜಾರ್ಖಂಡ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೀಪಕ್ ಪ್ರಕಾಶ ಅವರು,ಪ್ರಕರಣವು ರಾಜಕೀಯ ಪ್ರೇರಿತವಾಗಿರುವಂತೆ ಕಂಡು ಬರುತ್ತಿದೆ. ಆದರೆ ಯಾರಾದರೂ ಅಪರಾಧ ವೆಸಗಿದ್ದರೆ ಅದನ್ನ ನ್ಯಾಯಾಲಯವು ನಿರ್ಧರಿಸುತ್ತದೆ. ನ್ಯಾಯಾಲಯದ ತೀರ್ಪು ನೋಡಿಕೊಂಡು ರಾಜ್ಯ ಬಿಜೆಪಿಯು ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಅಲ್ಲಿಯವರೆಗೆ ಮಹತೊ ಕೇವಲ ಆರೋಪಿಯಾಗಿರುತ್ತಾರೆ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News