ಪೌರತ್ವ ಕಾಯ್ದೆ ವಿರೋಧಿಸಿ ಪ.ಬಂಗಾಳದಲ್ಲಿ ವ್ಯಾಪಕ ಪ್ರತಿಭಟನೆ; ಇಂಟರ್‌ನೆಟ್ ಸ್ಥಗಿತ

Update: 2019-12-19 07:02 GMT

ಕೋಲ್ಕತ, ಡಿ.15: ಪೌರತ್ವ ಕಾಯ್ದೆಯನ್ನು ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ಸತತ ಮೂರನೇ ದಿನವಾದ ರವಿವಾರವೂ ವ್ಯಾಪಕ ಪ್ರತಿಭಟನೆ ಮುಂದುವರಿದಿದ್ದು, ಹಲವೆಡೆ ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿದೆ. ರಾಜ್ಯದ ಹಲವೆಡೆ ಇಂಟರ್‌ನೆಟ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ.

ಪ್ರತಿಭಟನಕಾರರು ಪೌರತ್ವ ಕಾಯ್ದೆಯ ಪ್ರತಿಯನ್ನು ಬೆಂಕಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ನಾಡಿಯಾ, ಬೀರ್‌ಭೂಮಿ, ಉತ್ತರ 24 ಪರಗಣ ಹಾಗೂ ಹೌರಾ ಹಿಲ್ಲೆಗಳಲ್ಲಿ ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿದೆ. ಹಲವೆಡೆ ಅಂಗಡಿಗಳನ್ನು ಧ್ವಂಸಗೊಳಿಸಲಾಗಿದ್ದು ರಸ್ತೆಗಳಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ಸಂಚಾರಕ್ಕೆ ತಡೆಯೊಡ್ಡಿದ ಘಟನೆಯೂ ನಡೆದಿದೆ. ನಾಡಿಯಾದಲ್ಲಿ ಪ್ರತಿಭಟನಾಕಾರರು ಕಲ್ಯಾಣಿ ಎಕ್ಸ್‌ಪ್ರೆಸ್ ಹೈವೇಯಲ್ಲಿ ರಸ್ತೆತಡೆ ನಡೆಸಿದರು. ಶನಿವಾರ ಮುರ್ಷಿದಾಬಾದ್‌ನ ಲಾಲ್‌ಗೋಲಾ ರೈಲು ನಿಲ್ದಾಣದಲ್ಲಿ ನಿಂತಿದ್ದ 5 ಖಾಲಿ ರೈಲುಗಳಿಗೆ ಹಾಗೂ ಕೃಷ್ಣಗಂಜ್ ನಿಲ್ದಾಣದಲ್ಲಿ ನಿಂತಿದ್ದ ರೈಲಿಗೆ ಬೆಂಕಿಹಚ್ಚಲಾಗಿದೆ.

ಹೌರಾದಲ್ಲಿ ಸುಮಾರು 15 ಬಸ್ಸುಗಳಿಗೂ ಬೆಂಕಿಹಚ್ಚಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೌರಾ ಜಿಲ್ಲೆಯ ದೋಮ್ಜೂರ್ ಪ್ರದೇಶ, ಬರ್ಧ್ವಾನ್ ಮತ್ತು ಬೀರ್‌ಭೂಮಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ಮತ್ತು ರ್ಯಾಲಿ ನಡೆಸಿ ನರೇಂದ್ರ ಮೋದಿ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ನಿಯಂತ್ರಿಸಲು ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ರವಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪುನರಾವರ್ತಿತ ವಿನಂತಿ ಹಾಗೂ ಸೂಚನೆಯ ಹೊರತಾಗಿಯೂ, ಬಾಹ್ಯಬೆಂಬಲ ಪಡೆದ ಕೆಲವು ಕೋಮುಶಕ್ತಿಗಳು ಹಿಂಸೆಗೆ ಪ್ರಚೋದನೆ ನೀಡಿ ರಾಜ್ಯದಲ್ಲಿ ಅವ್ಯವಸ್ಥೆ ಮೂಡಿಸಲು ಸಂಚು ಹೂಡಿವೆ. ಇಂತಹ ಪರಿಸ್ಥಿತಿಯಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ. ಉತ್ತರ ದಿನಾಜ್‌ಪುರ, ಮಾಲ್ಡಾ, ಮುರ್ಷಿದಾಬಾದ್, ಹೌರಾ ಹಾಗೂ ಉತ್ತರಪರಗಣ ಜಿಲ್ಲೆಯ ಬಸೀರ್‌ಹಾಟ್ ಮತ್ತು ಬಾರಾಸಾತ್ ಉಪವಿಭಾಗಗಳಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ರಾಜ್ಯ ಸರಕಾರದ ಪ್ರಕಟಣೆ ತಿಳಿಸಿದೆ.

ಎರಡು ರೈಲುಗಳ ಸಂಚಾರವನ್ನು ರದ್ದುಗೊಳಿಸಿರುವುದಾಗಿ ಪೂರ್ವ ರೈಲ್ವೇ ಘೋಷಿಸಿದೆ. ಈ ಮಧ್ಯೆ, ಶಾಂತಿ ಕಾಪಾಡುವಂತೆ ಜನತೆಗೆ ಕರೆ ನೀಡಿರುವ ಟಿಎಂಸಿ ಮುಖಂಡ ಮತ್ತು ರಾಜ್ಯದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ, ಪೌರತ್ವ ಕಾಯ್ದೆ ಪಶ್ಚಿಮ ಬಂಗಾಳದಲ್ಲಿ ಜಾರಿಯಾಗಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಸಹನೆಯಿಂದ ಇರಿ ಮತ್ತು ಶಾಂತಿ ಕಾಪಾಡಿ. ರಾಜ್ಯದಲ್ಲಿ ಪೌರತ್ವ ಮಸೂದೆ ಅನುಷ್ಠಾನವಾಗುವುದಿಲ್ಲ ಎಂದು ಸರಕಾರದ ಪರವಾಗಿ ನಾನು ಭರವಸೆ ನೀಡುತ್ತೇನೆ ಎಂದು ಚಟರ್ಜಿ ಪ್ರತಿಭಟನಾ ನಿರತರಿಗೆ ಮನವಿ ಮಾಡಿದ್ದಾರೆ.

 ಆಡಳಿತಾರೂಢ ಟಿಎಂಸಿ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ರಾಜ್ಯದ ವಿವಿಧೆಡೆ ಪ್ರತ್ಯೇಕವಾಗಿ ಶಾಂತಿ ಮೆರವಣಿಗೆ ಆಯೋಜಿಸಲಾಗಿತ್ತು. ಜನಸಾಮಾನ್ಯರಿಗೆ ತೊಂದರೆಯಾಗುವ ಮತ್ತು ಹಿಂಸಾಚಾರದ ಕೃತ್ಯವನ್ನು ಯಾವುದೇ ಕಾರಣಕ್ಕೆ ಸಹಿಸುವುದಿಲ್ಲ. ಕಾನೂನನ್ನು ಕೈಗೆತ್ತಿಕೊಂಡು ಸಮಸ್ಯೆ ಸೃಷ್ಟಿಸುತ್ತಿರುವವರು ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ

ಪ್ರಧಾನಿ ಭೇಟಿಯಾದ ಬಂಗಾಳ ಬಿಜೆಪಿ ನಿಯೋಗ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಿದ್ದ ರಾಜ್ಯದ ಟಿಎಂಸಿ ಸರಕಾರವೇ ಪ್ರತಿಭಟನಾಕಾರರಿಗೆ ಉತ್ತೇಜನ ನೀಡುವ ಮೂಲಕ ಹಿಂಸೆಗೆ ಪ್ರಚೋದನೆ ನೀಡುತ್ತಿದೆ ಎಂದು ಪಶ್ಚಿಮಬಂಗಾಳ ಬಿಜೆಪಿ ಆರೋಪಿಸಿದೆ. ಪಶ್ಚಿಮ ಬರ್ಧಮಾನ್ ಜಿಲ್ಲೆಯ ವಿಮಾನನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ ರಾಜ್ಯ ಬಿಜೆಪಿ ನಿಯೋಗ ರಾಜ್ಯದ ಪರಿಸ್ಥಿತಿಯನ್ನು ಅವರಿಗೆ ವಿವರಿಸಿದೆ ಎಂದು ನಿಯೋಗದ ನೇತೃತ್ವ ವಹಿಸಿದ್ದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಸ್ವಪ್ರಿಯ ರಾಯ್ ಚೌಧುರಿ ಹೇಳಿದ್ದಾರೆ. ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಅರಾಜಕ ಪರಿಸ್ಥಿತಿ ನೆಲೆಸಿದ್ದು ರಾಜ್ಯ ಸರಕಾರವೇ ಹಿಂಸಾಚಾರಕ್ಕೆ ಪ್ರೇರಣೆ ನೀಡುತ್ತಿರುವ ವಿಷಯವನ್ನು ಪ್ರಧಾನಿಯ ಗಮನಕ್ಕೆ ತಂದಿದ್ದೇವೆ ಎಂದು ಚೌಧುರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News