ಅತ್ಯಾಚಾರವನ್ನು ಖಂಡಿಸುವುದು ದೇಶಕ್ಕೆ ಮಾಡುವ ಅವಮಾನವೆ?

Update: 2019-12-16 05:44 GMT

ರೋಗವನ್ನು ವಾಸಿ ಮಾಡುವ ಬದಲು, ರೋಗವಿದೆ ಎನ್ನುವುದನ್ನು ತಿಳಿಸಿದ ವೈದ್ಯರನ್ನೇ ನಿವಾರಿಸಿದರೆ? ವೈದ್ಯರಿದ್ದರೆ ತಾನೇ ರೋಗಗಳಿರುವುದು ಗೊತ್ತಾಗಿ ಬಿಡುವುದು? ಆದುದರಿಂದ ಮೊದಲು ವೈದ್ಯರನ್ನು ನಿವಾರಿಸಬೇಕು. ಯಾವುದೇ ರೋಗಗಳ ಬಗ್ಗೆ ಮಾತನಾಡುವ ವೈದ್ಯರೇ ಇಲ್ಲದೇ ಇರುವುದರಿಂದ ದೇಶ ರೋಗ ಮುಕ್ತವಾಗಿ ಬಿಡುತ್ತದೆ ಎನ್ನುವ ಮೂರ್ಖ ರಾಜಕಾರಣಿಗಳು ಸೇರಿಕೊಂಡು ಈ ದೇಶವನ್ನು ಆಳಲು ಹೊರಟಿದ್ದಾರೆ. ಇತ್ತೀಚೆಗೆ ರಾಹುಲ್ ಬಜಾಜ್ ಅವರು ‘ಸರಕಾರವನ್ನು ವಿಮರ್ಶಿಸಲು, ಟೀಕಿಸಲು ಹೆದರುವಂತಹ ವಾತಾವರಣವಿದೆ’ ಎಂಬ ಹೇಳಿಕೆ ನೀಡಿದ್ದರು. ಈ ಮಾತನ್ನು ಅವರು ಗೃಹ ಸಚಿವ ಅಮಿತ್ ಶಾ ಅವರ ಮುಂದೆಯೇ ಹೇಳುವ ಧೈರ್ಯವನ್ನು ತೋರಿದರು. ಇದನ್ನು ‘ಧೈರ್ಯ’ ಎನ್ನುವುದಕ್ಕಿಂತ ಅಂತಹದೊಂದು ಅನಿವಾರ್ಯ ಸ್ಥಿತಿಗೆ ಅವರು ಬಂದು ನಿಂತಿದ್ದರು. ಸ್ವತಃ ಅವರ ಪುತ್ರನೇ ‘ಇದು ಭಂಡ ಧೈರ್ಯ’ ಎಂದು ತಂದೆಯನ್ನು ಎಚ್ಚರಿಸಿದ್ದರು. ಏನಾಗಬೇಕೋ ಅದೇ ಆಯಿತು. ಮೋದಿಯ ಭಕ್ತರು ರಾಹುಲ್ ಬಜಾಜ್ ವಿರುದ್ಧ ಮುಗಿ ಬಿದ್ದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಂತೂ ಒಂದು ಹೆಜ್ಜೆ ಮುಂದೆ ಹೋಗಿ ‘‘ಇಂತಹ ಹೇಳಿಕೆ ದೇಶದ ಹಿತಾಸಕ್ತಿಗೆ ಮಾರಕ’’ ಎಂದು ಟೀಕಿಸಿದರು.

ಈ ದೇಶದ ಉದ್ಯಮಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಿದ ಹಿರಿಯ ಉದ್ಯಮಿಯೊಬ್ಬರು, ಸರಕಾರವನ್ನು ಟೀಕಿಸಲು ಭಯವಾಗುತ್ತದೆ ಎಂದರೆ, ಅದರ ಕಾರಣಗಳನ್ನು ಹುಡುಕಬೇಕು. ಬಡವರು, ಜನಸಾಮಾನ್ಯರು ವ್ಯವಸ್ಥೆಗೆ ಹೆದರುವ ಕಾಲವೊಂದಿತ್ತು. ಇಂದು ಮಧ್ಯಮ ಗಾತ್ರದ ಉದ್ಯಮಿಗಳೇ ಸರಕಾರದ ನೀತಿಗಳನ್ನು ಟೀಕಿಸಲು ಭಯ ಪಡುತ್ತಿದ್ದಾರೆ. ಅಂದರೆ ಈ ದೇಶದಲ್ಲಿ ಉದ್ಯಮಗಳು ಸರಕಾರದ ನೀತಿಗಳಿಂದಾಗಿ ಆತಂಕದಲ್ಲಿದೆ ಎನ್ನುವುದು ಅದರ ಅರ್ಥ. ಆ ಆತಂಕಗಳನ್ನು ಆಲಿಸಿ ಅದನ್ನು ನಿವಾರಿಸುವುದು ವಿತ್ತ ಸಚಿವೆಯ ಕರ್ತವ್ಯ. ಯಾಕೆಂದರೆ ಉದ್ಯಮಿಗಳು ಆತಂಕಕ್ಕೀಡಾಗುವುದು ದೇಶದ ಹಿತಾಸಕ್ತಿಗೆ ಮಾರಕವೇ ಹೊರತು, ನಮಗೆ ಆತಂಕವಿದೆ ಎಂದು ಹೇಳಿದವರಿಂದ ಅಲ್ಲ. ನಿರ್ಮಲಾ ಸೀತಾರಾಮನ್ ಅವರು ಉದ್ದೇಶ ಸ್ಪಷ್ಟ. ರಾಹುಲ್ ಬಜಾಜ್ ಅವರೂ ಸೇರಿದಂತೆ ಈ ದೇಶದ ಉದ್ಯಮಿಗಳನ್ನು ‘ಬಾಯಿ ಮುಚ್ಚಿ’ ಎಂದು ನಿರ್ಮಲಾ ಸೀತಾರಾಮನ್ ಬೆದರಿಸಿದ್ದರು. ನಮ್ಮನ್ನು ಟೀಕಿಸಿದರೆ ದೇಶವನ್ನು ಟೀಕಿಸಿದಂತೆ ಎಂದು ಆ ಮೂಲಕ ಅವರು ಎಚ್ಚರಿಸಿದ್ದಾರೆ.

ದೇಶಾದ್ಯಂತ ನಿರುದ್ಯೋಗಳು ಹೆಚ್ಚುತ್ತಿವೆ, ಆರ್ಥಿಕತೆ ಮುಗ್ಗರಿಸಿ ಬಿದ್ದಿದೆಯಾದರೂ ಸರಕಾರ ಇದನ್ನು ಒಪ್ಪುತ್ತಿಲ್ಲ. ‘ರೈಲುಗಳು ತುಂಬಿ ತುಳುಕುತ್ತಿವೆ, ಜನರು ಮದುವೆಯಾಗುತ್ತಿದ್ದಾರೆ....ಆದುದರಿಂದ ಎಲ್ಲವೂ ಸರಿಯಾಗಿದೆ’ ಎಂದು ಒಬ್ಬ ಸಚಿವ ಹೇಳಿದರೆ ‘ಸಿನೆಮಾಗಳು ಲಾಭಗಳಿಸುತ್ತಿವೆ. ಆದುದರಿಂದ ಆರ್ಥಿಕ ಪತನವೆನ್ನುವುದು ಸುಳ್ಳು’ ಎಂದು ಇನ್ನೊಬ್ಬ ಸಮರ್ಥಿಸಿಕೊಳ್ಳುತ್ತಿದ್ದಾನೆ. ಇವರ ವಿರುದ್ಧ ಮಾತನಾಡಿದರೆ ‘ದೇಶದ್ರೋಹಿಗಳು’ ಎಂಬ ಹಣೆಪಟ್ಟಿ ಕಟ್ಟಿ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ. ಇದೀಗ ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರಗಳ ಕುರಿತಂತೆ ಮಾತನಾಡುವುದು ಕೂಡ ‘ದೇಶದ್ರೋಹ’ವಾಗಿ ಬಿಟ್ಟಿದೆ. ‘ದೇಶ ಅತ್ಯಾಚಾರಗಳ ರಾಜಧಾನಿಯಾಗುತ್ತಿದೆ’ ಎಂದು ರಾಹುಲ್ ಗಾಂಧಿ ಇತ್ತೀಚೆಗೆ ಆತಂಕ ವ್ಯಕ್ತಪಡಿಸಿದ್ದರು.

ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಇದೀಗ ‘ರೇಪ್ ಇನ್ ಇಂಡಿಯಾ’ ಆಗಿ ಪರಿವರ್ತನೆಗೊಂಡಿದೆ ಎಂದು ವ್ಯಂಗ್ಯವಾಡಿದ್ದರು. ಈ ವ್ಯಂಗ್ಯದ ಹಿಂದಿರುವ ಕಳಕಳಿಯನ್ನು ಪಕ್ಕಕ್ಕಿಟ್ಟು, ಆ ವ್ಯಂಗ್ಯವೇ ದೇಶ ವಿರೋಧಿ ಎಂದು ಬಿಂಬಿಸುವುದಕ್ಕೆ ಕೇಂದ್ರ ಸರಕಾರ ಹೊರಟಿದೆ. ಈ ದೇಶದಲ್ಲಿ ನಡೆಯುತ್ತಿರುವ ಬರ್ಬರ ಅತ್ಯಾಚಾರ ಮತ್ತು ಮಹಿಳೆಯರ ಕಗ್ಗೊಲೆಗಳ ಕುರಿತಂತೆ ಚರ್ಚೆ ನಡೆಸಬೇಕಾದ ಮಹಿಳಾ ನಾಯಕಿಯರು, ಅತ್ಯಾಚಾರದ ವಿರುದ್ಧ ಧ್ವನಿಯೆತ್ತಿದ ರಾಹುಲ್ ಗಾಂಧಿಯವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಹೆಣಗಾಡುತ್ತಿರುವುದು ದುರಂತವೇ ಸರಿ. ‘ಭಾರತ ಮಹಿಳೆಯರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ’ ಎನ್ನುವುದನ್ನು ಅಂತರ್‌ರಾಷ್ಟ್ರೀಯ ವರದಿಗಳೇ ಹೇಳುತ್ತಿರುವಾಗ, ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ ಅತ್ಯಾಚಾರ ಸಂತ್ರಸ್ತೆಯನ್ನು ಸಾರ್ವಜನಿಕವಾಗಿ ದುಷ್ಕರ್ಮಿಗಳು ಸುಟ್ಟು ಹಾಕುತ್ತಿರುವಾಗ, ‘ಈ ದೇಶ ಅತ್ಯಾಚಾರಗಳ ರಾಜಧಾನಿ’ಯಾಗುತ್ತಿದೆ ಎಂದರೆ ಅದರಲ್ಲಿ ತಪ್ಪೇನಿದೆ?

ಈ ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಿಗಾಗಿ ಮತ್ತು ನ್ಯಾಯ ಕೇಳುವ ಅತ್ಯಾಚಾರ ಸಂತ್ರಸ್ತರ ಜೀವ ಅಪಾಯದಲ್ಲಿರುವ ಕಾರಣಕ್ಕಾಗಿ ಸರಕಾರ ಕ್ಷಮೆಯಾಚಿಸಬೇಕು. ಉನ್ನಾವೊ ಅತ್ಯಾಚಾರ ಸಂತ್ರಸ್ತೆಯನ್ನು ಸಾರ್ವಜನಿಕವಾಗಿ ದುಷ್ಕರ್ಮಿಗಳು ಸುಟ್ಟು ಹಾಕಿದಾಗ, ಆ ಘಟನೆಗಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಕ್ಷಮೆಯಾಚಿಸಬೇಕಾಗಿತ್ತು. ಆದರೆ ದುರದೃಷ್ಟಕ್ಕೆ, ಈ ದೇಶ ಅತ್ಯಾಚಾರಿಗಳ ನಾಡಾಗುತ್ತಿದೆ ಎಂದವರು ಕ್ಷಮೆಯಾಚನೆ ಮಾಡಬೇಕಾಗಿ ಬಂದಿದೆ. ಇಲ್ಲಿ ಅತ್ಯಾಚಾರ ಯಾಕೆ ಹೆಚ್ಚುತ್ತಿದೆ ಎನ್ನುವುದಕ್ಕೆ ಕಾರಣಗಳನ್ನು ಹುಡುಕುವ ಅಗತ್ಯವಿದೆಯೆ? ವಿಚಿತ್ರವೆಂದರೆ, ಕ್ಷಮೆಯಾಚನೆ ಪ್ರಕರಣ ಇಲ್ಲಿಗೇ ನಿಂತಿಲ್ಲ. ‘‘ನಾನು ಯಾವ ಕಾರಣಕ್ಕೂ ಕ್ಷಮೆ ಯಾಚಿಸುವುದಿಲ್ಲ. ಕ್ಷಮೆ ಯಾಚಿಸಲು ನಾನು ಸಾವರ್ಕರ್ ಅಲ್ಲ’’ ಎಂದು ರಾಹುಲ್ ಗಾಂಧಿ ತನ್ನನ್ನು ತಾನು ಸಮರ್ಥಿಸಿಕೊಂಡರು. ಇದೀಗ ಕೇಂದ್ರ ಸರಕಾರದ ಮಹನೀಯರು, ಅತ್ಯಾಚಾರ ಪ್ರಕರಣವನ್ನು ಸಂಪೂರ್ಣ ಕೈ ಬಿಟ್ಟು, ಸಾವರ್ಕರ್ ರಕ್ಷಣೆಗೆ ನಿಂತಿದ್ದಾರೆ. ‘‘ಸಾವರ್ಕರ್ ಅವರನ್ನು ರಾಹುಲ್‌ಗಾಂಧಿ ನಿಂದನೆಗೈದಿದ್ದಾರೆ. ಅದಕ್ಕಾಗಿ ಕ್ಷಮೆಯಾಚಿಸಬೇಕು’’ ಎಂದು ಪಟ್ಟು ಹಿಡಿದಿದ್ದಾರೆ.

ಸಾವರ್ಕರ್ ಹೆಸರು ಪ್ರಸ್ತಾಪಕ್ಕೂ ಕಾರಣವಿದೆ. ಸಂಘಪರಿವಾರದ ನೇತಾರರಾಗಿರುವ ಸಾವರ್ಕರ್, ಬ್ರಿಟಿಷರ ಜೊತೆಗೆ ಎರಡೆರಡು ಬಾರಿ ಅತ್ಯಂತ ದಯನೀಯವಾಗಿ ಲಿಖಿತ ಕ್ಷಮೆ ಯಾಚನೆಗೈದು, ಸ್ವಾತಂತ್ರ ಹೋರಾಟದಿಂದ ದೂರ ಉಳಿದವರು. ಇದೇನೂ ಕಲ್ಪಿತ ಕತೆಯಲ್ಲ. ಬ್ರಿಟಿಷರ ಜೊತೆಗೆ ಎಷ್ಟು ದಯನೀಯವಾಗಿ ಅವರು ಕ್ಷಮೆಯಾಚಿಸಿದ್ದರು, ಬ್ರಿಟಿಷ್ ಸರಕಾರಕ್ಕೆ ಬಹಿರಂಗ ಬೆಂಬಲಘೋಷಿಸಿದ್ದರು ಎನ್ನುವುದು ದಾಖಲೆಗಳಲ್ಲಿವೆ. ಅತ್ಯಾಚಾರಗಳು ಹೆಚ್ಚುತ್ತಿರುವುದರ ವಿರುದ್ಧ ಮಾತನಾಡಿರುವುದಕ್ಕಾಗಿ ಕ್ಷಮೆಯಾಚಿಸಲು ನಾನೇನೂ ಸಾವರ್ಕರ್ ಅಲ್ಲ ಎಂದರೆ ಯಾವ ರೀತಿಯಲ್ಲೂ ಅದು ಸಾವರ್ಕರ್ ನಿಂದನೆಯಾಗುವುದಿಲ್ಲ. ಒಂದು ವೇಳೆ ಅದು ಸಾವರ್ಕರ್ ನಿಂದನೆಯೇ ಆಗಿದ್ದರೆ, ‘‘ಸಾವರ್ಕರ್ ಬ್ರಿಟಿಷರ ಕ್ಷಮೆ ಯಾಚಿಸಿಲ್ಲ’’ ಎನ್ನುವುದನ್ನು ಬಿಜೆಪಿ ನಾಯಕರು ಸಾಬೀತು ಮಾಡಬೇಕು. ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರಗಳಿಗೆ ಸರಕಾರವೇ ನೇರ ಹೊಣೆಯಾಗಿದೆ. ಬಿಜೆಪಿ ಸರಕಾರ ಅಧಿಕಾರ ಬಂದ ದಿನದಿಂದ ಉತ್ತರ ಪ್ರದೇಶವೂ ಸೇರಿದಂತೆ ದೇಶಾದ್ಯಂತ ಅತ್ಯಾಚಾರ ಪ್ರಕರಣಗಳು ಹೆಚ್ಚಿವೆ.

ಅದಕ್ಕಿಂತಲೂ ಮುಖ್ಯವಾಗಿ ಅತ್ಯಾಚಾರಕ್ಕೊಳಗಾದ ಮಹಿಳೆಯರು ನ್ಯಾಯಕೇಳುವುದಕ್ಕೇ ಭಯಪಡುವಂತಹ ವಾತಾವರಣವಿದೆ. ನ್ಯಾಯಾಲಯ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ಉತ್ತರ ಪ್ರದೇಶದ ಉನ್ನಾವೊದಲ್ಲಿ ಶಾಸಕ ಸೆಂಗಾರ್ ಪ್ರಕರಣದಲ್ಲಿ ಬಿಜೆಪಿ ಸರಕಾರ ಹೇಗೆ ನಡೆದುಕೊಂಡಿತು ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ನ್ಯಾಯ ಕೇಳಿದ ಮಹಿಳೆಯ ತಂದೆ ಪೊಲೀಸ್ ದೌರ್ಜನ್ಯದಿಂದ ಮೃತರಾದರು. ಕುಟುಂಬದ ಸದಸ್ಯರನ್ನು ಅಪಘಾತದ ಮೂಲಕ ಕೊಂದು ಹಾಕಲಾಯಿತು. ಸಂತ್ರಸ್ತೆಯನ್ನು ಕೊಲ್ಲುವ ಪ್ರಯತ್ನ ನಡೆಯಿತು. ಸಂತ್ರಸ್ತ ಮಹಿಳೆ ಸಾರ್ವಜನಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕದೇ ಇದ್ದಿದ್ದರೆ ಶಾಸಕ ಸೆಂಗಾರ್‌ನ ಬಂಧನವೇ ನಡೆಯುತ್ತಿರಲಿಲ್ಲ. ವಿಪರ್ಯಾಸವೆಂದರೆ ಈಗಲೂ ಸೆಂಗಾರ್‌ನ ಪರವಾಗಿ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸಚಿವರು ಮಾತನಾಡುತ್ತಾರೆ ಮತ್ತು ಆತನಿಗೆ ಶುಭ ಹಾರೈಸುತ್ತಾರೆ. ಆ ಮೂಲಕ ಅತ್ಯಾಚಾರ ಆರೋಪಿಯನ್ನು ಪರೋಕ್ಷವಾಗಿಯಲ್ಲ, ನೇರವಾಗಿಯೇ ಸಮರ್ಥಿಸುತ್ತಿದ್ದಾರೆ. ಆದರೆ ಇವರಾದರೂ ಅದಕ್ಕಾಗಿ ಕ್ಷಮೆಯಾಚಿಸಿಲ್ಲ. ಆದರೆ ಅತ್ಯಾಚಾರದ ಬಗ್ಗೆ ಆತಂಕ ವ್ಯಕ್ತಪಡಿಸಿದವರು ಕ್ಷಮೆಯಾಚಿಸಬೇಕು ಎಂದು ಸರಕಾರ ಹೇಳುತ್ತಿದೆ. ಈ ದೇಶದಲ್ಲಿ ಅತ್ಯಾಚಾರವನ್ನು ಸರಕಾರವೇ ಪೋಷಿಸಲು ಮುಂದಾಗಿದೆ ಎನ್ನುವುದಕ್ಕೆ ಬೇರೆ ಉದಾಹರಣೆ ಬೇಕೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News