ಬಾಂಗ್ಲದೇಶ ಇಂಟರ್‌ನ್ಯಾಶನಲ್ ಚಾಲೆಂಜ್ ಬ್ಯಾಡ್ಮಿಂಟನ್ ಪ್ರಶಸ್ತಿ ಜಯಿಸಿದ ಲಕ್ಷ್ಯ ಸೇನ್

Update: 2019-12-16 04:34 GMT

ಢಾಕಾ, ಡಿ.15: ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ ಲಕ್ಷ ಸೇನ್ ಬಾಂಗ್ಲಾದೇಶ ಇಂಟರ್‌ನ್ಯಾಶನಲ್ ಚಾಲೆಂಜ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಜಯಿಸಿದರು. ಮಲೇಶ್ಯದ ಲಿಯೊಂಗ್ ಜುನ್ ಹಾವೊರನ್ನು ನೇರ ಗೇಮ್‌ಗಳ ಅಂತರದಿಂದ ಮಣಿಸಿದ ಸೇನ್ ಈ ವರ್ಷ ಐದನೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

18ರ ಹರೆಯದ ಸೇನ್ ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಮಲೇಶ್ಯದ ಲಿಯೊಂಗ್‌ರನ್ನು 22-20, 21-18 ಗೇಮ್‌ಗಳ ಅಂತರದಿಂದ ಸೋಲಿಸಿದರು. ಕಳೆದ 7 ಟೂರ್ನಿಗಳಲ್ಲಿ ಐದನೇ ಪ್ರಶಸ್ತಿ ಎತ್ತಿ ಹಿಡಿದರು.

‘‘ಬಾಂಗ್ಲಾದೇಶದಲ್ಲಿ ನನ್ನ 5ನೇ ಅಂತರ್‌ರಾಷ್ಟ್ರೀಯ ಪ್ರಶಸ್ತಿಯನ್ನು ಗೆಲ್ಲುವುದರೊಂದಿಗೆ ಈ ವರ್ಷ ಅಂತ್ಯಗೊಳಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಮುಂದಿನ ವರ್ಷವೂ ಇದೇ ಪ್ರದರ್ಶನವನ್ನು ಮುಂದುವರಿಸುವ ವಿಶ್ವಾಸ ನನಗಿದೆ’’ ಎಂದು ಸೇನ್ ತಿಳಿಸಿದ್ದಾರೆ.

ಭಾರತದ ಇತರ ಶಟ್ಲರ್‌ಗಳ ಪೈಕಿ ಮಹಿಳಾ ಡಬಲ್ಸ್ ಜೋಡಿ ಮನೀಶಾ ಕೆ. ಹಾಗೂ ಋತುಪರ್ಣಾ ಪಾಂಡಾ ಅಗ್ರ ಶ್ರೇಯಾಂಕದ ಮಲೇಶ್ಯಾದ ಜೋಡಿ ಟಾನ್‌ಪೀಯರ್ಲಿ ಕೂಂಗ್ ಲೆ ಹಾಗೂ ಮುರಳೀಧರನ್ ವಿರುದ್ಧ 20-22, 19-21 ಅಂತರದಿಂದ ಶರಣಾಗಿ ರನ್ನರ್ಸ್‌ಅಪ್‌ಗೆ ತೃಪ್ತಿಪಟ್ಟರು.

ಲಕ್ಷ ತನ್ನ ಸಹ ಆಟಗಾರ ರಾಜೇಶ್ ವರ್ಮಾರನ್ನು ಮೊದಲ ಸುತ್ತಿನ ಪಂದ್ಯದಲ್ಲಿ 21-5, 21-10 ಅಂತರದಿಂದ ಮಣಿಸಿ ತನ್ನ ಅಭಿಯಾನ ಆರಂಭಿಸಿದ್ದರು. ಆ ಬಳಿಕ ಫೈನಲ್ ಹಾದಿಯಲ್ಲಿ ಮೂವರು ಮಲೇಶ್ಯ ಆಟಗಾರರನ್ನು ಮಣಿಸಿದ್ದರು.

ಭಾರತದ ಯುವ ಶಟ್ಲರ್ ಸೇನ್ ಸೆಪ್ಟಂಬರ್‌ನಲ್ಲಿ ಬೆಲ್ಜಿಯಂ ಇಂಟರ್‌ನ್ಯಾಶನಲ್ ಪ್ರಶಸ್ತಿ ಎತ್ತುವುದರೊಂದಿಗೆ ವರ್ಷದ ಮೊದಲ ಪ್ರಶಸ್ತಿ ಗೆದ್ದುಕೊಂಡಿದ್ದರು. ಅಕ್ಟೋಬರ್‌ನಲ್ಲಿ ಡಚ್ ಓಪನ್ ಸೂಪರ್-100 ಹಾಗೂ ಸಾರ್ಲೊಲಕ್ಸ್ ಸೂಪರ್-100 ಪ್ರಶಸ್ತಿ ಜಯಿಸಿದರು. ನವೆಂಬರ್‌ನಲ್ಲಿ ಸ್ಕಾಟಿಶ್ ಓಪನ್ ಕಿರೀಟ ಧರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News