ಚೊಚ್ಚಲ ಟೆಸ್ಟ್, ಏಕದಿನದಲ್ಲಿ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್ ಮನ್ ಅಬಿದ್ ಅಲಿ

Update: 2019-12-16 05:26 GMT

ರಾವಲ್ಪಿಂಡಿ(ಪಾಕಿಸ್ತಾನ), ಡಿ.15: ಟೆಸ್ಟ್ ಹಾಗೂ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾಕಿಸ್ತಾನದ ಆರಂಭಿಕ ಆಟಗಾರ ಅಬಿದ್ ಅಲಿ ಪಾತ್ರರಾಗಿದ್ದಾರೆ.

ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನ ಐದನೇ ಹಾಗೂ ಅಂತಿಮ ದಿನವಾದ ರವಿವಾರ ಅಲಿ ಈ ಅಪೂರ್ವ ಸಾಧನೆ ಮಾಡಿದರು. 32ರ ಹರೆಯದ ಅಲಿ 95 ರನ್ ಗಳಿಸಿದ್ದಾಗ ವೇಗದ ಬೌಲರ್ ವಿಶ್ವ ಫೆರ್ನಾಂಡೊ ಎಸೆತವನ್ನು ಬೌಂಡರಿಗೆ ಅಟ್ಟಿದರು. ಬಳಿಕ ಎರಡು ರನ್ ಗಳಿಸಿ ಶತಕ ಪೂರೈಸಿದರು. ಮೈದಾನದಲ್ಲಿ ಕುಣಿದಾಡುತ್ತಾ ಚೊಚ್ಚಲ ಶತಕದ ಸಂಭ್ರಮ ಆಚರಿಸಿದರು. ಈ ವರ್ಷದ ಮಾರ್ಚ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ದುಬೈನಲ್ಲಿ ನಡೆದ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ತಾನಾಡಿದ ಮೊದಲ ಪಂದ್ಯದಲ್ಲೇ ಅಲಿ ಶತಕ ಸಿಡಿಸಿದ್ದರು. 1971ರ ಜನವರಿಯಲ್ಲಿ ಏಕದಿನ ಕ್ರಿಕೆಟ್ ಪಂದ್ಯ ಆರಂಭವಾದ ಬಳಿಕ ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ 15ನೇ ಬ್ಯಾಟ್ಸ್‌ಮನ್ ಅಲಿ. ಆದರೆ, ಈ ತನಕ ಯಾರೂ ಕೂಡ ಟೆಸ್ಟ್ ಹಾಗೂ ಏಕದಿನ ಮಾದರಿಯ ಕ್ರಿಕೆಟ್‌ನ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿಲ್ಲ.

 ಅಲಿ ಸಾಧನೆ

► ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್ ಮನ್.

► 10 ವರ್ಷಗಳ ಬಳಿಕ ಸ್ವದೇಶದಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟ್ಸ್ ಮನ್.

► 2000ರ ಬಳಿಕ ರಾವಲ್ಪಿಂಡಿಯಲ್ಲಿ ಶತಕ ಸಿಡಿಸಿದ ಪಾಕ್‌ನ ಮೊದಲ ಬ್ಯಾಟ್ಸ್‌ಮನ್. ಯೂನಿಸ್ ಖಾನ್ ಕೊನೆಯ ಬಾರಿ ಶತಕ ಸಿಡಿಸಿದ ಆಟಗಾರನಾಗಿದ್ದು, ಖಾನ್ ತನ್ನ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ್ದರು.

► ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಪಾಕಿಸ್ತಾನದ 11ನೇ ಬ್ಯಾಟ್ಸ್ ಮನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News