ಚೀನಾ ಜೊತೆಗಿನ ವ್ಯಾಪಾರ ಒಪ್ಪಂದ ಸಂಪೂರ್ಣ: ಅಮೆರಿಕ
ವಾಶಿಂಗ್ಟನ್, ಡಿ. 16: ಅಮೆರಿಕ ಮತ್ತು ಚೀನಾ ನಡುವೆ ಒಂದನೇ ಹಂತದ ವ್ಯಾಪಾರ ಒಪ್ಪಂದ ಅಂತಿಮಗೊಂಡಿದ್ದು, ಇದರ ಪ್ರಕಾರ, ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕವು ಚೀನಾಕ್ಕೆ ಮಾಡುವ ರಫ್ತಿನ ಪ್ರಮಾಣ ದುಪ್ಪಟ್ಟಾಗಲಿದೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ರಾಬರ್ಟ್ ಲೈಟ್‌ಹೈಝರ್ ರವಿವಾರ ಹೇಳಿದ್ದಾರೆ.
ಒಪ್ಪಂದ ಅಂತಿಮಗೊಂಡಿದೆ, ಅನುವಾದ ಮತ್ತು ಬರಹ ಪರಿಷ್ಕರಣೆಯ ಕಾರ್ಯ ಮಾತ್ರ ಬಾಕಿಯಿದೆ ಎಂದು ಸಿಬಿಎಸ್ ಟೆಲಿವಿಶನ್ ಚಾನೆಲ್‌ನ ‘ಫೇಸ್ ದ ನೇಶನ್’ ಕಾರ್ಯಕ್ರಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅವರು ತಿಳಿಸಿದರು.
ಚೀನಾ ಮತ್ತು ಅಮೆರಿಕಗಳ ನಡುವೆ ಎರಡೂವರೆ ವರ್ಷಗಳ ಮಾತುಕತೆಗಳು ನಡೆದ ಬಳಿಕ, ಎರಡು ದೇಶಗಳ ನಡುವೆ ವ್ಯಾಪಾರ ಒಪ್ಪಂದ ನಡೆದಿದೆ ಎಂದು ಶುಕ್ರವಾರ ಘೋಷಿಸಲಾಗಿದೆ. ಈ ಒಪ್ಪಂದದ ಪ್ರಕಾರ, ಚೀನಾದ ಸರಕುಗಳ ಮೇಲಿನ ಅಮೆರಿಕದ ಕೆಲವು ತೆರಿಗೆಗಳು ಕಡಿಮೆಯಾಗಲಿವೆ ಹಾಗೂ ಅದಕ್ಕೆ ಪ್ರತಿಯಾಗಿ ಚೀನಾವು ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕದಿಂದ ಸುಮಾರು 200 ಬಿಲಿಯ ಡಾಲರ್ ಡಾಲರ್‌ನಷ್ಟು ಹೆಚ್ಚುವರಿ ಕೃಷಿ, ಕೈಗಾರಿಕೆ ಮತ್ತು ಇಂಧನ ಉತ್ಪನ್ನಗಳನ್ನು ಖರೀದಿಸಬೇಕಾಗಿದೆ.
ಅಮೆರಿಕದ ಬೌದ್ಧಿಕ ಆಸ್ತಿಯನ್ನು ರಕ್ಷಿಸಲು, ತನ್ನ ಆರ್ಥಿಕ ಸೇವೆಗಳ ಮಾರುಕಟ್ಟೆಯನ್ನು ಅಮೆರಿಕದ ಕಂಪೆನಿಗಳಿಗೆ ತೆರೆಯಲು ಹಾಗೂ ತನ್ನ ಕರೆನ್ಸಿಯಲ್ಲಿ ಹಸ್ತಕ್ಷೇಪ ನಡೆಸುವುದನ್ನು ನಿಲ್ಲಿಸಲು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಚೀನಾ ಒಪ್ಪಂದದಲ್ಲಿ ಭರವಸೆ ನೀಡಿದೆ.
ಅಮೆರಿಕ ಮತ್ತು ಚೀನಾದ ಹಿರಿಯ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕುವ ದಿನಾಂಕವನ್ನು ಇನ್ನಷ್ಟೇ ನಿಗದಿಪಡಿಸಬೇಕಾಗಿದೆ ಎಂದು ಲೈಟ್‌ಹೈಝರ್ ನುಡಿದರು.