ಕಾಡ್ಗಿಚ್ಚು: ಸಿಡ್ನಿಯಲ್ಲಿ ‘ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ’
ಸಿಡ್ನಿ (ಆಸ್ಟ್ರೇಲಿಯ), ಡಿ. 16: ಕಾಡ್ಗಿಚ್ಚು ಸೃಷ್ಟಿಸಿದ ಹೊಗೆಯಿಂದಾಗಿ ವಾರಗಳ ಕಾಲ ಸಿಡ್ನಿ ಉಸಿರುಗಟ್ಟಿದ ಬಳಿಕ, ಆಸ್ಟ್ರೇಲಿಯದ ಅತಿ ದೊಡ್ಡ ನಗರವು ‘ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ’ಯನ್ನು ಎದುರಿಸುತ್ತಿದೆ ಎಂದು ವೈದ್ಯರು ಸೋಮವಾರ ಎಚ್ಚರಿಸಿದ್ದಾರೆ.
ನಗರದ ಆಸ್ಪತ್ರೆಗಳ ತುರ್ತು ಚಿಕಿತ್ಸಾ ಘಟಕಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾದ ಬಳಿಕ ವೈದ್ಯರು ಈ ಎಚ್ಚರಿಕೆ ನೀಡಿದ್ದಾರೆ.
ಹವಮಾನ ಬದಲಾವಣೆಯಿಂದಾಗಿ ಹುಟ್ಟಿಕೊಂಡ ನೂರಾರು ಕಾಡ್ಗಿಚ್ಚುಗಳು ತಿಂಗಳುಗಳಿಂದ ಆಸ್ಟ್ರೇಲಿಯವನ್ನು ಸುಡುತ್ತಿವೆ. ಸಿಡ್ನಿಯ ಉತ್ತರ ಭಾಗವನ್ನು ಸುತ್ತುವರಿದಿರುವ ಬೆಂಕಿಯು ರವಿವಾರ ರಾತ್ರಿ 20 ಮನೆಗಳನ್ನು ಸುಟ್ಟು ಹಾಕಿದೆ ಹಾಗೂ ಪರ್ತ್ ನಗರದ ಸಮೀಪದ ಕಾಣಿಸಿಕೊಂಡ ಬೆಂಕಿಯು ಹಲವು ಪಟ್ಟಣಗಳಿಗೆ ಬೆದರಿಕೆಯೊಡ್ಡಿದೆ.
ತೀವ್ರ ವಾಯು ಮಾಲಿನ್ಯವನ್ನು ನಿಭಾಯಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಯಲ್ ಆಸ್ಟ್ರೇಲೇಶಿಯನ್ ಕಾಲೇಜ್ ಆಫ್ ಫಿಸಿಶಿಯನ್ಸ್ ಸೇರಿದಂತೆ 20ಕ್ಕೂ ಅಧಿಕ ವೈದ್ಯಕೀಯ ಗುಂಪುಗಳು ಆಸ್ಟ್ರೇಲಿಯ ಸರಕಾರವನ್ನು ಒತ್ತಾಯಿಸಿ ಸೋಮವಾರ ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿವೆ.
‘‘ನಾರ್ತ್ ಸೌತ್‌ವೇಲ್ಸ್ ನಲ್ಲಿ ನೆಲೆಸಿರುವ ವಾಯು ಮಾಲಿನ್ಯವು ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯಾಗಿದೆ’’ ಎಂದು ಕ್ಲೈಮೇಟ್ ಆ್ಯಂಡ್ ಹೆಲ್ತ್ ಅಲಯನ್ಸ್ ಹೇಳಿದೆ.