ಮ್ಯಾಡ್ರಿಡ್ ಪರಿಸರ ಸಮ್ಮೇಳನದ ವೈಫಲ್ಯಕ್ಕೆ ಗುಟೆರಸ್ ವಿಷಾದ

Update: 2019-12-16 17:42 GMT

ಮ್ಯಾಡ್ರಿಡ್ (ಸ್ಪೇನ್), ಡಿ. 16: ಜಾಗತಿಕ ತಾಪಮಾನದ ವಿರುದ್ಧ ವ್ಯವಹರಿಸಲು ಸ್ಪೇನ್ ರಾಜಧಾನಿ ಮ್ಯಾಡ್ರಿಡ್‌ ನಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಸಮ್ಮೇಳನ ‘ಸಿಒಪಿ25’ ಯಾವುದೇ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾಗಿರುವುದಕ್ಕೆ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ವಿಷಾದ ವ್ಯಕ್ತಪಡಿಸಿದ್ದಾರೆ. ‘‘ನಿರ್ಣಾಯಕ ಕ್ರಮ ತೆಗೆದುಕೊಳ್ಳಲು ನಮಗಿದ್ದ ಅವಕಾಶವೊಂದು ವ್ಯರ್ಥವಾಯಿತು’’ ಎಂದು ಅವರು ಹೇಳಿದ್ದಾರೆ.

ಸುಮಾರು 15 ದಿನಗಳ ಕಾಲ ನಡೆದ ವಿಶ್ವಸಂಸ್ಥೆಯ ಪರಿಸರ ಸಮ್ಮೇಳನವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದೆ, ಜಾಗತಿಕ ತಾಪಮಾನವನ್ನು ಕಡಿಮೆಗೊಳಿಸುವಲ್ಲಿ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುವಂತೆ ದೇಶಗಳಿಗೆ ಕರೆ ನೀಡುವುದರೊಂದಿಗೆ ರವಿವಾರ ಸಂಪನ್ನಗೊಂಡಿದೆ.

 ‘‘ಸಿಒಪಿ25ರ ಫಲಿತಾಂದಿಂದ ನನಗೆ ನಿರಾಶೆಯಾಗಿದೆ’’ ಎಂದು ಗುಟೆರಸ್ ಹೇಳಿದರು. ‘‘ಪರಿಸರ ಬಿಕ್ಕಟ್ಟನ್ನು ನಿಭಾಯಿಸುವುದಕ್ಕಾಗಿ ಹೆಚ್ಚಿನ ಬದ್ಧತೆ, ಹೊಂದಾಣಿಕೆ ಮತ್ತು ಹಣಕಾಸು ಪೂರೈಕೆಯನ್ನು ಖಾತರಿಪಡಿಸಲು ಲಭ್ಯವಿದ್ಧ ಉತ್ತಮ ಅವಕಾಶವೊಂದನ್ನು ಅಂತರ್‌ರಾಷ್ಟ್ರೀಯ ಸಮುದಾಯವು ಕೈಚೆಲ್ಲಿತು’’ ಎಂದು ಅವರು ಹೇಳಿದರು.

ಪ್ರಸಕ್ತ ಮಾಲಿನ್ಯ ಪ್ರಮಾಣ ಹಾಗೂ 2015ರ ಪ್ಯಾರಿಸ್ ಪರಿಸರ ಒಪ್ಪಂದದಲ್ಲಿ ನಿಗದಿಪಡಿಸಲಾಗಿರುವ ಹೊಗೆ ಹೊರಸೂಸುವಿಕೆ ಪ್ರಮಾಣದ ನಡುವಿನ ಬೃಹತ್ ಅಂತರವನ್ನು ಮುಚ್ಚಲು ನೂತನ ಬದ್ಧತೆಗಳನ್ನು ಅಳವಡಿಸಿಕೊಳ್ಳುವುದು ತುರ್ತು ಅಗತ್ಯವಾಗಿದೆ ಎಂದು ಶೃಂಗ ಸಮ್ಮೇಳನದ ಅಂತಿಮ ಘೋಷಣೆ ತಿಳಿಸಿದೆ.

ಪರಿಸರ ಹೋರಾಟಗಾರರಿಗೆ ಆಘಾತ

ಪರಿಸರ ಪರ ಚಳವಳಿಗಳು, ನಿರಾಕರಿಸಲಾಗದ ವೈಜ್ಞಾನಿಕ ಆಧಾರಗಳು ಹಾಗೂ ವಿನಾಶಕಾರಿ ಚಂಡಮಾರುತಗಳು ಮತ್ತು ಕಾಡ್ಗಿಚ್ಚುಗಳು ಜಾಗತಿಕ ತಾಪಮಾನವನ್ನು ತಗ್ಗಿಸಬೇಕಾದ ಅನಿವಾರ್ಯತೆಯನ್ನು ಸರಕಾರಗಳಿಗೆ ಉಂಟುಮಾಡುತ್ತದೆ ಎಂಬುದಾಗಿ ಪರಿಸರ ಹೋರಾಟಗಾರರು ಭಾವಿಸಿದ್ದರು.

ಹಾಗಾಗಿ, ಮ್ಯಾಡ್ರಿಡ್‌ನಲ್ಲಿ ನಡೆದ ಪರಿಸರ ಸಮ್ಮೇಳನದಲ್ಲಿ, ತಾಪಮಾನ ತಗ್ಗಿಸುವ ತಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸುವಂತೆ ಸರಕಾರಿ ನಾಯಕರನ್ನು ಈ ಅಂಶಗಳು ಪ್ರೇರೇಪಿಸುತ್ತವೆ ಎಂದು ಜನರು ನಿರೀಕ್ಷಿಸಿದ್ದರು.

ಆದರೆ, ಪರಿಸರ ಹೋರಾಟಗಾರರ ಈ ಎಲ್ಲ ನಿರೀಕ್ಷೆಗಳು ಹುಸಿಯಾಗಿವೆ. ಇದರಿಂದಾಗಿ ಹಲವು ಹಿರಿಯ ಪರಿಸರ ಹೋರಾಟಗಾರರು ಆಘಾತಗೊಂಡಿದ್ದಾರೆ.

‘‘ಜಗತ್ತಿನ ಅತಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪಾದಿಸುವ ದೇಶಗಳು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಹಾಗೂ ಇಂಗಾಲಾನಿಲ ಕಡಿತಕ್ಕಾಗಿನ ತಮ್ಮ ಬದ್ಧತೆಯನ್ನು ಹೆಚ್ಚಿಸುವಂತೆ ನೀಡಲಾಗುತ್ತಿರುವ ಕರೆಗಳನ್ನು ಅವುಗಳು ವಿರೋಧಿಸುತ್ತಿವೆ’’ ಎಂದು ಯೂನಿಯನ್ ಆಫ್ ಕನ್ಸರ್ನ್ಡ್ ಸಯಂಟಿಸ್ಟ್ಸ್‌ನಲ್ಲಿ ತಂತ್ರಗಾರಿಕೆ ಮತ್ತು ನೀತಿ ನಿರ್ದೇಶಕರಾಗಿರುವ ಆ್ಯಲ್ಡನ್ ಮಯರ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News