ಸರಕಾರ ಹೇಗೆ ರಿಪೇರಿ ಮಾಡಬೇಕೆಂದು ಗೊತ್ತು: ಮಾಜಿ ಸಚಿವ ಎಚ್.ಡಿ.ರೇವಣ್ಣ

Update: 2019-12-18 13:58 GMT

ಬೆಂಗಳೂರು, ಡಿ. 18: ‘ದೇವೇಗೌಡರ ಕುಟುಂಬದ ವಿಷಯ ಎಂದರೆ ಯಡಿಯೂರಪ್ಪ ಸರಕಾರ ರಾತ್ರಿ 7 ಗಂಟೆಯಾದರೂ ತೆರೆದೆ ಇರುತ್ತದೆ. ನಾನೂ ಐದು ಬಾರಿ ಶಾಸಕನಾಗಿದ್ದವನು, ಇದನ್ನು ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ’ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಇಂದಿಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಬುಧವಾರ ವಿಧಾನಸೌಧದಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಸ್‌ವೈ ಸಂಜೆ 6 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ. 7ಗಂಟೆಗೆ ಕೆಎಂಎಫ್‌ಗೆ ಸಂಬಂಧಿಸಿದ ಆದೇಶವನ್ನು ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಈ ಸರಕಾರದ ತಪ್ಪುಗಳನ್ನು ಎಳೆ-ಎಳೆಯಾಗಿ ಬಿಚ್ಚಿಡುತ್ತೇನೆ. ಸಿಎಂ ಬಿಎಸ್‌ವೈ ಸುವರ್ಣ ಕರ್ನಾಟಕ ಮಾಡುತ್ತೇನೆಂದು ಹೇಳಿದ್ದರೆ ಅದಕ್ಕೆ ದೇವೇಗೌಡ ಮತ್ತವರ ಮಕ್ಕಳು ಅಡ್ಡ ಬರುವುದಿಲ್ಲ ಎಂದು ಟೀಕಿಸಿದರು.

ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಗ್ರೇಡ್-1 ಮತ್ತು ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ಈಗಾಗಲೇ ಪರೀಕ್ಷೆ ನಡೆದಿದೆ. ಇದಕ್ಕೆ ಅಂದಾಜು 2ಕೋಟಿ ರೂ.ಖರ್ಚಾಗಿದೆ. 64 ಸಾವಿರ ಆಕಾಂಕ್ಷಿಗಳು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ ಅಕ್ರಮ ಆಗಿದೆ ಎಂಬ ನೆಪವೊಡ್ಡಿ ನೇಮಕ ಪ್ರಕ್ರಿಯೆ ಕೆಪಿಎಸ್ಸಿಗೆ ನೀಡಲು ಸರಕಾರ ಮುಂದಾಗಿದೆ.

ಕೆಪಿಎಸ್ಸಿ ಇತಿಹಾಸ ಎಲ್ಲರಿಗೂ ಗೊತ್ತು. ಅಲ್ಲಿ ಭ್ರಷ್ಟಾಚಾರ ಇಲ್ಲವೇ? ಆಕಾಂಕ್ಷಿಗಳಿಗೆ ತೊಂದರೆ ನೀಡಿ ಸರಕಾರ ತನ್ನ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವುದು ಸಲ್ಲ. ಈ ಅಕ್ರಮದಲ್ಲಿ ನನ್ನ ಕೈವಾಡವೂ ಇದೆ ಎಂಬ ಆರೋಪ ಮಾಡಲಾಗಿದೆ. ಇದು ಸತ್ಯಕ್ಕೆ ದೂರ. ಯಾವುದೇ ತನಿಖೆ ನಡೆಸಿ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ರೇವಣ್ಣ ಹೇಳಿದರು.

ಹದಿನೈದು ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಹೇಗೆ ನಡೆಯಿತು ಎಂದು ಗೊತ್ತು. ಪ್ರತಿ ಕ್ಷೇತ್ರಕ್ಕೆ 50ರಿಂದ 60 ಕೋಟಿ ರೂ.ಗಳಷ್ಟು ಖರ್ಚು ಮಾಡಿದ್ದಾರೆ ಎಂದು ದೂರಿದ ರೇವಣ್ಣ, ಜೆಡಿಎಸ್ ಶಾಸಕರು ಬಿಜೆಪಿ ಸೇರ್ಪಡೆ ವಿಚಾರ ‘ದೊಡ್ಡವರಿಗೆ’ ಬಿಟ್ಟದ್ದು. ನಾನು ಶಾಸಕನಷ್ಟೇ. ಅವರು ನೀಡುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದರು.

‘ಸರಕಾರಿ ದಾಖಲೆಗಳನ್ನು ಪಡೆದುಕೊಳ್ಳಲು ಡೂಪ್ಲಿಕೇಟ್ ಕೀ(ನಕಲಿ ಬೀಗದ ಕೈ) ಮಾಡಿಕೊಳ್ಳಬೇಕಿದೆ. ಹೀಗಾಗಿ ಯಾರನ್ನಾದರೂ ಹುಡುಕಿ ಮಾಡಿಸಿಕೊಳ್ಳಬೇಕು. ಮೊದಲು ನನ್ನ ಬಳೀ ಬೀಗದ ಕೈ ಇದೆ ಎಂದು ಹೇಳಿದ್ದೆ. ಈಗ ಆ ಬೀಗದ ಕೈ ಇಲ್ಲ’

-ಎಚ್.ಡಿ.ರೇವಣ್ಣ ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News