ಇಂದು ಐಪಿಎಲ್‌ಗೆ ಆಟಗಾರರ ಹರಾಜು

Update: 2019-12-18 18:18 GMT

 ಕೋಲ್ಕತಾ, ಡಿ.18: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಮೆಂಟ್‌ನ 2020 ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಡಿ.19ರಂದು ಕೋಲ್ಕತಾದಲ್ಲಿ ನಡೆಯಲಿದೆ.

ಒಟ್ಟು 332 ಕ್ರಿಕೆಟ್ ಆಟಗಾರರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಭಾರತದ ಆಟಗಾರರು 186 ಮತ್ತು ವಿದೇಶಿಯರು 146 ಆಟಗಾರರಿದ್ದಾರೆ.

ಎಂಟು ಫ್ರಾಂಚೈಸಿ ತಂಡಗಳಲ್ಲಿ 73 ಆಟಗಾರರಿಗೆ ಹರಾಜು ಮೂಲಕ ಸೇರ್ಪಡೆಗೆ ಅವಕಾಶ ಇದೆ. ಈ ಪೈಕಿ 29 ವಿದೇಶಿ ಆಟಗಾರರ ಸ್ಥಾನ ಭರ್ತಿಗೆ ಬಾಕಿ ಇದೆ.

ವಿವಿಧ ತಂಡಗಳ ಸ್ವರೂಪ

ಕಿಂಗ್ಸ್ ಇಲೆವೆನ್ ಪಂಜಾಬ್ ಖರ್ಚು ಮಾಡಲು ಗರಿಷ್ಠ ಹಣವನ್ನು ಹೊಂದಿದೆ . (42.70 ಕೋಟಿ ರೂ.) ಭಾರತದ ಪ್ರಮುಖ ಟೆಸ್ಟ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿದ್ದರು. ಅವರು ದಿಲ್ಲಿ ಕ್ಯಾಪಿಟಲ್ಸ್ ತಂಡ ಸೇರ್ಪಡೆಗೊಂಡ ಬಳಿಕ ಪಂಜಾಬ್ ತಂಡದ ನಾಯಕನ ಹುದ್ದೆ ಖಾಲಿ ಇದೆ.

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕಳೆದ ಆವೃತ್ತಿಯಲ್ಲಿ ಆಡಿದ್ದ ಬಹುತೇಕ ಆಟಗಾರರನ್ನು ಉಳಿಸಿಕೊಂಡಿದೆ. ತಂಡದ ಆಟಗಾರರು ಗಾಯಗೊಂಡರೆ ಅವರ ಬದಲಿಗೆ ಆಟಗಾರರನ್ನು ಕಣಕ್ಕಿಳಿಸಲು ಸಹಾಯಕವಾಗುವಂತೆ ಆಟಗಾರರನ್ನು ಖರೀದಿಸಲು ಎದುರು ನೋಡುತ್ತಿದೆ. ಎರಡೂ ತಂಡಗಳು ತಮ್ಮ ಜೇಬಿನಲ್ಲಿ ಸಾಕಷ್ಟು ಹಣವನ್ನು ಉಳಿಸಿಕೊಂಡಿಲ್ಲ ಮತ್ತು ಹಣವನ್ನು ಅಗತ್ಯದ ಉದ್ದೇಶಗಳಿಗಾಗಿ ಸೂಕ್ಷ್ಮವಾಗಿ ಖರ್ಚು ಮಾಡಲು ನೋಡುತ್ತಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿದೇಶಿ ಆಟಗಾರರ ಮೇಲೆ ಕಣ್ಣಿಟ್ಟಿದೆ.ಆದರೂ ಅದರಲ್ಲೂ ಹೆಚ್ಚು ಹಣ ಉಳಿದಿಲ್ಲ. 27.90 ಕೋಟಿ ರೂ.ಇದೆ.

ಕೋಲ್ಕತಾ ನೈಟ್ ರೈಡರ್ಸ್ ತಂಡ ಕ್ರಿಸ್ ಲಿನ್, ರಾಬಿನ್ ಉತ್ತಪ್ಪ ಮತ್ತು ಪಿಯೂಷ್ ಚಾವ್ಲಾ ಅವರಂತಹ ಹೆಸರಾಂತ ಆಟಗಾರರನ್ನು ಬಿಡುಗಡೆ ಮಾಡಿದೆ ಮತ್ತು ತಂಡದ ಕೈಯಲ್ಲಿ ಸಾಕಷ್ಟು ಹಣ ಇದ್ದು ರೂ. 35.65 ಕೋಟಿ ಹೊಂದಿದೆ. ದಿಲ್ಲಿ ಕ್ಯಾಪಿಟಲ್ಸ್ ಬಲಿಷ್ಠ ವಿದೇಶಿ ಆಟಗಾರರ ಖರೀದಿಗೆ ಕಾಯುತ್ತಿದೆ.

ರಾಜಸ್ಥಾನ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡ ಸ್ವದೇಶಿ ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಬೇಕಾಗುತ್ತದೆ. ರಾಯಲ್ಸ್ 28.90 ಕೋಟಿ ರೂ. ಮತ್ತು ಸನ್‌ರೈಸರ್ಸ್ ಬಳಿ 17 ಕೋಟಿ ರೂ.ಇದೆ. ಆಟಗಾರರ ಹರಾಜು ಅಪರಾಹ್ನ 3:30 ಕ್ಕೆ ಪ್ರಾರಂಭವಾಗಲಿದೆ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರವನ್ನು ವೀಕ್ಷಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News