ಚಯಾಪಚಯ ಹೆಚ್ಚಿಸಲು ಸುಲಭ ಮಾರ್ಗಗಳಿವು

Update: 2019-12-18 18:56 GMT

ಮೆಟಾಬಾಲಿಸಂ ಅಥವಾ ಚಯಾಪಚಯವು ನಾವು ಸೇವಿಸಿದ ಆಹಾರವನ್ನು ಶರೀರವು ಶಕ್ತಿಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯಾಗಿದೆ ಮತ್ತು ಅದು ಶರೀರದೊಳಗಿನ ಹಲವಾರು ಕಾರ್ಯನಿರ್ವಹಣೆಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಅದು ಶರೀರದ ತೂಕವನ್ನು ಇಳಿಸುವಲ್ಲಿಯೂ ಪ್ರಮುಖ ಪಾತ್ರವನ್ನು ಹೊಂದಿದೆ.

ಚಯಾಪಚಯ ಉತ್ತಮವಾಗಿದ್ದರೆ ತೂಕ ಇಳಿಕೆ ಪ್ರಕ್ರಿಯೆಯು ಸುಗಮವಾಗಿ ನಡೆಯುತ್ತದೆ. ಅದು ನಮ್ಮ ಶಕ್ತಿಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ ಮತ್ತು ಉಲ್ಲಸಿತರನ್ನಾಗಿಸುತ್ತದೆ. ಚಯಾಪಚಯದಲ್ಲಿ ಹಲವಾರು ಅಂಶಗಳು ಪಾತ್ರ ವಹಿಸುತ್ತವೆ. ಹೆಚ್ಚಿನ ಜನರಿಗೆ ತೂಕ ಇಳಿಕೆ ಮತ್ತು ಶರೀರದ ಇತರ ಪ್ರಕ್ರಿಯೆಗಳಲ್ಲಿ ಚಯಾಪಚಯದ ಪಾತ್ರದ ಬಗ್ಗೆ ಗೊತ್ತಿಲ್ಲ. ಚಯಾಪಚಯವು ನಮ್ಮ ಶರೀರವು ಪೋಷಕಾಂಶಗಳನ್ನು ಬಳಸಿಕೊಳ್ಳುವ ದರವಾಗಿದೆ. ಹಾರ್ಮೋನ್ ಮಟ್ಟಗಳು, ಕಿಣ್ವಗಳ ಸ್ರವಿಸುವಿಕೆ,ದೀರ್ಘ ಕಾಲಿಕ ರೋಗಗಳು,ಔಷಧಿಗಳು,ಒತ್ತಡ,ಚಟುವಟಿಕೆಯ ಮಟ್ಟ ಮತ್ತು ನಿದ್ರೆಯ ಸ್ವರೂಪ ಇವೆಲ್ಲವೂ ಚಯಾಪಚಯದ ಮೇಲೆ ಪ್ರಭಾವವನ್ನು ಹೊಂದಿವೆ. ಚಯಾಪಚಯ ದರವು ಕ್ಯಾಲೊರಿಗಳ ಅಗತ್ಯದ ಮೇಲೆ ನೇರವಾಗಿ ಪರಿಣಾಮವನ್ನು ಬೀರುತ್ತದೆ ಮತ್ತು ತೂಕ ಗಳಿಕೆ ಅಥವಾ ತೂಕ ಇಳಿಕೆಗೆ ಕಾರಣವಾಗುತ್ತದೆ. ವ್ಯಕ್ತಿಯ ವಯಸ್ಸು ಹೆಚ್ಚಾದಂತೆ ಪ್ರತಿ ದಶಕಕ್ಕೆ ಶೇ.5ರ ದರದಲ್ಲಿ ಚಯಾಪಚಯ ಪ್ರಕ್ರಿಯೆ ನಿಧಾನಗೊಳ್ಳುತ್ತದೆ.

ಕೆಟಾಬಾಲಿಸಂ ಮತ್ತು ಅನಾಬಾಲಿಸಂ ಇವು ಚಯಾಪಚಯದ ಭಾಗವಾಗಿರುವ ಎರಡು ಪ್ರಕ್ರಿಯೆಗಳಾಗಿವೆ. ಕೆಟಾಬಾಲಿಸಂ ಪ್ರಕ್ರಿಯೆಯಲ್ಲಿ ಆಹಾರವು ತನ್ನ ಸರಳ ರೂಪದಲ್ಲಿ ವಿಭಜನೆಗೊಳ್ಳುತ್ತದೆ ಮತ್ತು ಇದು ಬಳಿಕ ಶಕ್ತಿಯ ಉತ್ಪಾದನೆಗೆ ಬಳಕೆಯಾಗುತ್ತದೆ, ಜೊತೆಗೆ ಶರೀರದ ಬೆಳವಣಿಗೆಗೆ ಬುನಾದಿಯನ್ನು ಒದಗಿಸುತ್ತದೆ.

ಅನಾಬಲಿಸಂ ಪ್ರಕ್ರಿಯೆಯಲ್ಲಿ ಜೀವಿಗಳಲ್ಲಿ ಜೀವವಸ್ತು ರಚನೆಗೊಳ್ಳುತ್ತದೆ. ಇದಕ್ಕೆ ಆಹಾರದಿಂದ ಲಭ್ಯವಾಗುವ ಶಕ್ತಿಯ ಅಗತ್ಯವಿರುತ್ತದೆ. ದೈನಂದಿನ ಅನಾಬಾಲಿಸಂಗೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಹಾರವನ್ನು ಸೇವಿಸಿದಾಗ ಹೆಚ್ಚುವರಿ ಪೋಷಕಾಂಶಗಳು ಕೊಬ್ಬಿನ ರೂಪದಲ್ಲಿ ನಮ್ಮ ಶರೀರದಲ್ಲಿ ಸಂಗ್ರಹವಾಗುತ್ತವೆ.

ಚಯಾಪಚಯವನ್ನು ಹೆಚ್ಚಿಸಲು ಸುಲಭ ಮಾರ್ಗಗಳು  

ಇದಕ್ಕಾಗಿ ಆಹಾರದಲ್ಲಿ ಹೆಚ್ಚಿನ ಪ್ರೋಟಿನ್ ಅನ್ನು ಸೇರಿಸಿಕೊಳ್ಳಬಹುದು ಮತ್ತು ಇದು ಹೆಚ್ಚು ಕ್ಯಾಲೊರಿಗಳನ್ನು ದಹಿಸಲು ನೆರವಾಗುತ್ತದೆ. ಹೆಚ್ಚು ನೀರಿನ ಸೇವನೆಯೂ ಶರೀರದ ತೂಕವನ್ನು ಇಳಿಸಿಕೊಳ್ಳಲು ಮತ್ತು ಅದನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ತೂಕ ಇಳಿಕೆಗೆ ಮತ್ತು ಶರೀರದ ಒಟ್ಟಾರೆ ಕ್ಷಮತೆಗೆ ನಿಯಮಿತ ವ್ಯಾಯಾಮವೂ ಅತ್ಯಗತ್ಯವಾಗಿದೆ. ಅದು ಚಯಾಪಚಯವನ್ನು ಹೆಚ್ಚಿಸಲೂ ನೆರವಾಗುತ್ತದೆ.

ನಿಗದಿತ ವ್ಯಾಯಾಮ ಪರಿಪಾಠ ಮತ್ತು ಕೆಲವು ಕಠಿಣ ಕಸರತ್ತುಗಳು ಕೊಬ್ಬನ್ನು ದಹಿಸಲು ಮತ್ತು ಚಯಾಪಚಯವನ್ನು ಹೆಚ್ಚಿಸಲು ನೆರವಾಗುತ್ತವೆ. ದೀರ್ಘ ಕಾಲ ಕುಳಿತಿರುವುದೂ ಹಲವಾರು ಆರೋಗ್ಯ ಸಮಸ್ಯೆಗಳೊಂದಿಗೆ ಗುರುತಿಸಿಕೊಂಡಿದೆ. ಅದು ಶರೀರದಲ್ಲಿ ಕೊಬ್ಬು ಕರಗುವಿಕೆ ಪ್ರಕ್ರಿಯೆಗೂ ವ್ಯತ್ಯಯವನ್ನುಂಟು ಮಾಡುತ್ತದೆ. ಹೀಗಾಗಿ ಸದಾ ಕುಳಿತುಕೊಂಡು ಕೆಲಸ ಮಾಡುವವರು ಆಗಾಗ್ಗೆ ಎದ್ದು ನಿಂತು ಅತ್ತಿತ್ತ ಓಡಾಡಬೇಕಾಗುತ್ತದೆ. ಒಳ್ಳೆಯ ನಿದ್ರೆಯೂ ಉತ್ತಮ ಆರೋಗ್ಯಕ್ಕೆ ಅಗತ್ಯವಾಗಿದೆ. ನಿದ್ರೆಯಿಂದ ವಂಚಿತಗೊಂಡರೆ ಅದು ಶರೀರವು ಸಕ್ಕರೆಯನ್ನು ಸಂಸ್ಕರಿಸುವ ರೀತಿಯನ್ನು ಬದಲಿಸುತ್ತದೆ ಮತ್ತು ಹಸಿವನ್ನು ನಿಯಂತ್ರಿಸುವ ಹಾರ್ಮೋನ್‌ಗಳನ್ನು ವ್ಯತ್ಯಯಗೊಳಿಸುವುದರಿಂದ ಕೆಲವೇ ಕ್ಯಾಲೊರಿಗಳು ಕರಗುವಂತಾಗುತ್ತದೆ,ಇದು ತೂಕ ಹೆಚ್ಚಲು ಕಾರಣವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News