ಅಧಿಕಾರ ದುರ್ಬಳಕೆ: ಡೊನಾಲ್ಡ್ ಟ್ರಂಪ್‌ಗೆ ಸದನ ವಾಗ್ದಂಡನೆ

Update: 2019-12-19 15:28 GMT

 ವಾಷಿಂಗ್ಟನ್,ಡಿ.19: ಅಧಿಕಾರ ದುರ್ಬಳಕೆಗಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಮೆರಿಕ ಸಂಸತ್ತಿನ ಕೆಳಮನೆಯಾಗಿರುವ ಹೌಸ್ ಆಫ್ ರೆಪ್ರೆಸೇಂಟಿವ್ಸ್ ಬುಧವಾರ ವಾಗ್ದಂಡನೆಗೆ ಗುರಿಪಡಿಸಿದೆ.

ಇನ್ನೀಗ ಟ್ರಂಪ್ ಅವರು ಸಂಸತ್ತಿನ ಮೇಲ್ಮನೆಯಾಗಿರುವ ಸೆನೆಟ್‌ನಲ್ಲಿ ಅಗ್ನಿಪರೀಕ್ಷೆಯನ್ನು ಎದುರಿಸಬೇಕಿದ್ದು,ಅಲ್ಲಿಯೂ ವಾಗ್ದಂಡನೆಗೆ ಗುರಿಯಾದರೆ ಅಧಿಕಾರದಿಂದ ವಜಾಗೊಳ್ಳುತ್ತಾರೆ. ಸದನವು ಕಾಂಗ್ರೆಸ್‌ನ ಕಾರ್ಯ ನಿರ್ವಹಣೆಗೆ ಅಡ್ಡಿಯನ್ನುಂಟು ಮಾಡಿದ್ದಕ್ಕಾಗಿ 230-197 ಮತಗಳಿಂದ ಟ್ರಂಪ್ ವಿರುದ್ಧ ವಾಗ್ದಂಡನೆ ನಿರ್ಣಯವನ್ನು ಅಂಗೀಕರಿಸಿದೆ. ಸೆನೆಟ್‌ನಲ್ಲೂ ಸೋಲಾದರೆ ಟ್ರಂಪ್ ಅಮೆರಿಕದ ಇತಿಹಾಸದಲ್ಲಿ ಮಹಾಭಿಯೋಗಕ್ಕೆ ಗುರಿಯಾದ ಮೂರನೇ ಅಧ್ಯಕ್ಷರಾಗಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಲಿದ್ದಾರೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪ್ರಾಬಲ್ಯ ಹೊಂದಿದ್ದರೆ ಸೆನೆಟ್‌ನಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಬಹುಮತವನ್ನು ಹೊಂದಿದೆ. ಹೀಗಾಗಿ ಟ್ರಂಪ್ ಅಲ್ಲಿ ವಾಗ್ದಂಡನೆಯಿಂದ ಪಾರಾಗುವ ಹೆಚ್ಚಿನ ಸಾಧ್ಯತೆಯಿದೆ.

ಟ್ರಂಪ್ ವಿರುದ್ಧ ವಿಧ್ಯುಕ್ತ ಆರೋಪ ಹೊರಿಸುವುದನ್ನು ಬಿಟ್ಟರೆ ತಮಗೆ ಬೇರೆ ಆಯ್ಕೆ ಇರಲಿಲ್ಲ ಎಂದು ಡೆಮಾಕ್ರಟ್ ಸದಸ್ಯರು ಹೇಳಿದರು. ಅಮೆರಿಕದ ಪರಿಕಲ್ಪನೆಯೇ ಅಪಾಯದಲ್ಲಿದೆ ಎಂದು ವಾಗ್ದಂಡನೆ ವಿಚಾರಣೆಯ ನೇತೃತ್ವ ವಹಿಸಿದ್ದ ಸಂಸದ ಆ್ಯಡಮ್ ಷಿಫ್ ತಿಳಿಸಿದರು.

ವಾಗ್ದಂಡನೆಯ ಬಳಿಕ ಡೆಮಾಕ್ರಟಿಕ್ ಪಕ್ಷದ ವಿರುದ್ಧ ಹರಿಹಾಯ್ದ ಟ್ರಂಪ್,ನಾವು ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದೇವೆ ಮತ್ತು ಮಿಚಿಗನ್‌ಗಾಗಿ ಹೋರಾಡುತ್ತಿದ್ದೇವೆ. ಆದರೆ ಕಾಂಗ್ರೆಸ್‌ನಲ್ಲಿಯ ಮೂಲಭೂತವಾದಿ ಎಡಪಂಥೀಯರು ಅಸೂಯೆ ಮತ್ತು ದ್ವೇಷವನ್ನೇ ಮೈಗೂಡಿಸಿಕೊಂಡಿದ್ದಾರೆ. ಈ ಜನರು ಮೂರ್ಖರು ಎಂದು ಟೀಕಿಸಿದರು.

 ಡೆಮಾಕ್ರಟಿಕ್ ಪಕ್ಷವು ಮಿಲಿಯಗಟ್ಟಲೆ ದೇಶಭಕ್ತ ಅಮೆರಿಕನ್ನರ ಜನಾದೇಶವನ್ನು ನಿರರ್ಥಕಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News