ಚಳಿ ಇಲ್ಲದೆ ಪರಿತಪಿಸುತ್ತಿದ್ದಾರೆ ಇಲ್ಲಿನ ಜನರು

Update: 2019-12-19 16:39 GMT
ಸಾಂದರ್ಭಿಕ ಚಿತ್ರ

ಮಾಸ್ಕೋ (ರಶ್ಯ), ಡಿ. 19: ಚಳಿಗಾಲ ಎಲ್ಲಿಗೆ ಹೋಯಿತು ಎಂದು ರಶ್ಯ ರಾಜಧಾನಿ ಮಾಸ್ಕೋದ ನಿವಾಸಿಗಳು ಅಚ್ಚರಿಪಡುತ್ತಿದ್ದಾರೆ. ಮಾಸ್ಕೋದಲ್ಲಿ 133 ವರ್ಷಗಳಲ್ಲೇ ಅಧಿಕ ಡಿಸೆಂಬರ್ ಉಷ್ಣತೆ ದಾಖಲಾಗಿದ್ದು, ಈ ಅವಧಿಯಲ್ಲಿ ಸಾಮಾನ್ಯವಾಗಿರುವ ಹಿಮಪಾತ ಈ ಬಾರಿ ಸಂಭವಿಸಿಲ್ಲ.

‘‘ಇದು ನಮ್ಮ ಚಳಿಗಾಲವಲ್ಲ. ಇದು ಎಲ್ಲಿಂದಲೋ ಬಂದಿದೆ’’ ಎಂದು ಹಿರಿಯರೊಬ್ಬರು ಹೇಳುತ್ತಾರೆ.

ಸಾಮಾನ್ಯವಾಗಿ ವರ್ಷದ ಈ ಅವಧಿಯಲ್ಲಿ ಹಿಮವು ರಸ್ತೆಗಳನ್ನು ಆವರಿಸಿರುತ್ತದೆ ಹಾಗೂ ಕಟ್ಟಡಗಳಿಂದ ಮಂಜಿನ ಹನಿಗಳು ನೇತಾಡುತ್ತಿರುತ್ತವೆ. ಆದರೆ, ಬುಧವಾರ ರಾತ್ರಿಯ ಉಷ್ಣತೆ 6 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು ಎಂದು ಎಫ್‌ಒಬಿಒಎಸ್ ಹವಾಮಾನ ಕೇಂದ್ರದ ಎಲೀನಾ ವೊಸೊಲ್ಯುಕ್ ಹೇಳಿದರು.

ಈ ಹಿಂದಿನ ಗರಿಷ್ಠ ಉಷ್ಣತೆ 5.3 ಡಿಗ್ರಿ ಸೆಲ್ಸಿಯಸ್ ಆಗಿತ್ತು ಹಾಗೂ ಅದು 1886 ಡಿಸೆಂಬರ್ 18ರಂದು ದಾಖಲಾಗಿತ್ತು. ಸಾಮಾನ್ಯವಾಗಿ ಡಿಸೆಂಬರ್ 18ರ ಉಷ್ಣತೆ ಮೈನಸ್ 6.2 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ.

ಈ ಬಾರಿಯ ಅಚ್ಚರಿಯ ಉಷ್ಣತೆಯು ಅಟ್ಲಾಂಟಿಕ್ ಸಾಗರದಿಂದ ಬೀಸಿದೆ. ಈ ಬಾರಿಯ ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಹವಾಮಾನ ಸಂಸ್ಥೆಗಳು ಮಳೆಯನ್ನು ನಿರೀಕ್ಷಿಸಿವೆ, ಹಿಮಪಾತವನ್ನಲ್ಲ. ಹೊಸವರ್ಷವು ರಶ್ಯದ ಮಹತ್ವದ ಹಬ್ಬವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News