ಮುಷರ್ರಫ್ ಶವವನ್ನು ಎಳೆದುಕೊಂಡು ಬನ್ನಿ; 3 ದಿನ ನೇತಾಡಿಸಿ: ಕೋರ್ಟ್ ಆದೇಶ

Update: 2019-12-19 16:57 GMT

ಇಸ್ಲಾಮಾಬಾದ್, ಡಿ. 19: ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಝ್ ಮುಷರ್ರಫ್‌ರ ದೇಶದ್ರೋಹ ಪ್ರಕರಣದಲ್ಲಿ, ಪಾಕಿಸ್ತಾನದ ವಿಶೇಷ ನ್ಯಾಯಾಲಯವೊಂದು ಗುರುವಾರ ವಿಚಿತ್ರವಾದ, ಆದರೆ ಸಾಂಕೇತಿಕವೆನಿಸುವಂಥ ಆದೇಶವೊಂದನ್ನು ನೀಡಿದೆ. ಮುಷರ್ರಫ್ ಮರಣದಂಡನೆಗೆ ಮುನ್ನವೇ ಮೃತಪಟ್ಟರೆ, ಅವರ ಶವವನ್ನು ಸಂಸತ್ತಿಗೆ ಎಳೆದುಕೊಂಡು ಬರಬೇಕು ಹಾಗೂ ಅಲ್ಲಿ ಮೂರು ದಿನಗಳ ಕಾಲ ನೇತಾಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.

2007ರಲ್ಲಿ ಸಂವಿಧಾನವನ್ನು ಅಮಾನತಿನಲ್ಲಿಟ್ಟಿರುವುದಕ್ಕಾಗಿ ಅವರ ವಿರುದ್ಧ ದಾಖಲಾದ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಮಂಗಳವಾರ ಮುಷರ್ರಫ್‌ಗೆ ಮರಣದಂಡನೆ ವಿಧಿಸಿತ್ತು.

ಮುಷರ್ರಫ್ ಶಿಕ್ಷೆಗೆ ಸಂಬಂಧಿಸಿದ ತೀರ್ಪಿನಲ್ಲಿ ದೋಷವಿದೆ ಎಂಬುದಾಗಿ ಪಾಕಿಸ್ತಾನ ಸರಕಾರ ಹೇಳಿದ ಬಳಿಕ, ನ್ಯಾಯಾಲಯ ಗುರುವಾರ ಈ ವಿಚಿತ್ರ ತೀರ್ಪು ನೀಡಿದೆ. ನ್ಯಾಯಾಲಯದ ಮಂಗಳವಾರದ ತೀರ್ಪಿನ ಬಳಿಕ ನ್ಯಾಯಾಂಗ ಮತ್ತು ಸೇನೆಯ ನಡುವೆ ಸಂಘರ್ಷ ಏರ್ಪಟ್ಟಿದ್ದು, ಸರಕಾರ ಸೇನೆಯ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದೆ ಎನ್ನಲಾಗಿದೆ.

ಮುಷರ್ರಫ್‌ಗೆ ನೀಡಲಾಗಿರುವ ಮರಣ ದಂಡನೆಯನ್ನು ಜಾರಿಗೊಳಿಸಲು ಸಾಧ್ಯವಾಗುವಂತೆ, ಪ್ರಸಕ್ತ ದುಬೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರನ್ನು ಬಂಧಿಸುವಂತೆ ನ್ಯಾಯಾಲಯವು ಕಾನೂನು ಅನುಷ್ಠಾನ ಸಂಸ್ಥೆಗಳಿಗೆ ಆದೇಶ ನೀಡಿದೆ.

ಆದರೆ, ಅದಕ್ಕೆ ಮೊದಲೇ ಅವರು ಮೃತಪಟ್ಟರೆ, ‘‘ಅವರ ಶವವನ್ನು ಇಸ್ಲಾಮಾಬಾದ್‌ನ ಡಿ-ಚೌಕಕ್ಕೆ ಎಳೆದುಕೊಂಡು ಬರಬೇಕು ಹಾಗೂ ಅಲ್ಲಿ ಮೂರು ದಿನಗಳ ಕಾಲ ನೇತಾಡಿಸಬೇಕು’’ ಎಂದು ಅದು ಹೇಳಿದೆ. ಡಿ-ಚೌಕವು ಸಂಸತ್ತಿನ ಹೊರಗಿದೆ.

ನ್ಯಾಯಾಲಯ ನೀಡಿರುವ ಸೂಚನೆಗಳು ಸಾಂಕೇತಿಕವಾಗಿದ್ದರೂ, ಅಸಾಂವಿಧಾನಿಕ ಎಂದು ಕಾನೂನು ಪರಿಣತರು ಹೇಳುತ್ತಾರೆ.

ವಿಶೇಷ ನ್ಯಾಯಾಲಯ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಮುಷರ್ರಫ್ ವಕೀಲರು ಗುರುವಾರ ತಿಳಿಸಿದ್ದಾರೆ.

ವೈಯಕ್ತಿಕ ದ್ವೇಷದ ಫಲ ಈ ತೀರ್ಪು: ಮುಷರ್ರಫ್

ದೇಶದ್ರೋಹ ಪ್ರಕರಣದಲ್ಲಿ ತನಗೆ ನೀಡಲಾಗಿರುವ ಮರಣ ದಂಡನೆಗೆ ದುಬೈಯಿಂದ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಮಾಜಿ ಸೇನಾಡಳಿತಗಾರ ಪರ್ವೇಝ್ ಮುಷರ್ರಫ್, ಈ ತೀರ್ಪು ತನ್ನ ವಿರುದ್ಧದ ‘ವೈಯಕ್ತಿಕ ದ್ವೇಷ’ದ ಫಲವಾಗಿದೆ ಎಂದಿದ್ದಾರೆ.

‘‘ನನಗೆ ವಿರುದ್ಧವಾಗಿರುವ ಕೆಲವು ವ್ಯಕ್ತಿಗಳು ಈ ಪ್ರಕರಣವನ್ನು ಕೈಗೆತ್ತಿಕೊಂಡು ಮುಂದುವರಿಸಿಕೊಂಡು ಬಂದಿದ್ದಾರೆ’’ ಎಂದು ಬುಧವಾರ ರಾತ್ರಿ ಸಹಾಯಕರೊಬ್ಬರು ಬಿಡುಗಡೆ ಮಾಡಿದ ವೀಡಿಯೊ ಹೇಳಿಕೆಯಲ್ಲಿ ಮುಷರ್ರಫ್ ಹೇಳಿದ್ದಾರೆ.

ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದಂತೆ ಕಂಡುಬಂದ 76 ವರ್ಷದ ಮುಶರ್ರಫ್ ನಿತ್ರಾಣಗೊಂಡವರಂತೆ ಕಂಡುಬಂದ್ದಿದ್ದಾರೆ ಹಾಗೂ ಮಾತನಾಡಲು ಕಷ್ಟಪಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News