×
Ad

ವಾಗ್ದಂಡನೆಗೆ ಗುರಿಯಾಗುತ್ತಿದ್ದೇನೆ ಎಂದನಿಸುತ್ತಿಲ್ಲ: ಟ್ರಂಪ್

Update: 2019-12-19 22:36 IST

ವಾಶಿಂಗ್ಟನ್, ಡಿ. 19: ಅಮೆರಿಕದ ಸಂಸತ್ತು ಕಾಂಗ್ರೆಸ್‌ನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಂಡನೆ ನಡೆಯುತ್ತಿದ್ದಾಗ ಅವರು ಮಿಶಿಗನ್ ರಾಜ್ಯದ ಬ್ಯಾಟಲ್ ಕ್ರೀಕ್‌ನಲ್ಲಿ ‘ಮೆರಿ ಕ್ರಿಸ್ಮಸ್’ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದರು. ‘‘ಇದು ತುಂಬಾ ತಮಾಷೆಯಾಗಿದೆ. ಅವರು ನನ್ನ ವಿರುದ್ಧ ವಾಗ್ದಂಡನೆ ವಿಧಿಸಲು ಬಯಸುತ್ತಿದ್ದಾರೆ. ಆದರೆ ಅವರು ಅದಕ್ಕಿಂತ ಕೆಟ್ಟದ್ದನ್ನು ಮಾಡುತ್ತಿದ್ದಾರೆ. ಅಂದ ಹಾಗೆ, ನಮಗೆ ವಾಗ್ದಂಡನೆ ವಿಧಿಸಲಾಗುತ್ತಿದೆ ಎಂದು ನನಗೆ ಅನಿಸುತ್ತಲೇ ಇಲ್ಲ. ಈಗ ಹಿಂದೆಂದಿಗಿಂತಲೂ ಚೆನ್ನಾಗಿ ದೇಶ ನಡೆಯುತ್ತಿದೆ. ನಾವು ಏನೂ ತಪ್ಪು ಮಾಡಿಲ್ಲ’’ ಎಂದು ವಾಗ್ದಂಡನೆ ಮತದಾನ ನಡೆದ ಸಮಯದಲ್ಲೇ ನಡೆದ ರ್ಯಾಲಿಯಲ್ಲಿ ತನ್ನ ಸಾವಿರಾರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್ ಹೇಳಿದರು.

ಭಾಷಣದ ನಡುವೆ, ಅವರ ಸಿಬ್ಬಂದಿಯೊಬ್ಬರು ಬಂದು ವಾಗ್ದಂಡನೆ ಮತದಾನದ ಬಗ್ಗೆ ತಿಳಿಸಿದರು.

 ಬಳಿಕ, ಡೆಮಾಕ್ರಟಿಕ್ ಪಕ್ಷದ ಮೇಲಿನ ವಾಗ್ದಾಳಿಯನ್ನು ತೀವ್ರಗೊಳಿಸಿದ ಟ್ರಂಪ್, ಪಕ್ಷವು ‘ದ್ವೇಷದಿಂದ ತುಂಬಿಹೋಗಿದೆ’ ಹಾಗೂ ಹುಚ್ಚರಂತಾಗಿದೆ ಎಂದರು. ‘‘ವಾಗ್ದಂಡನೆಯು ರಾಜಕೀಯ ಆತ್ಮಹತ್ಯೆ’’ ಎಂಬುದಾಗಿಯೂ ಅವರು ಬಣ್ಣಿಸಿದರು.

 ‘ಉಪಸ್ಥಿತನಿದ್ದೇನೆ’ ಎಂಬುದಾಗಿ ಮತದಾನ ಮಾಡಿದ ತುಳಸಿ ಗ್ಯಾಬರ್ಡ್

 ವಾಶಿಂಗ್ಟನ್, ಡಿ. 18: ಬುಧವಾರ ನಡೆದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ವಾಗ್ದಂಡನೆಗೆ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ತುಳಸಿ ಗ್ಯಾಬರ್ಡ್ ಬೆಂಬಲ ವ್ಯಕ್ತಪಡಿಸಿಲ್ಲ. ಈ ಮೂಲಕ ಅವರು ಪಕ್ಷದ ನಿಲುವನ್ನು ಉಲ್ಲಂಘಿಸಿದ್ದಾರೆ.

ಟ್ರಂಪ್ ವಿರುದ್ಧದ ಎರಡೂ ವಾಗ್ದಂಡನೆ ದೋಷಾರೋಪಗಳಿಗೆ ನಡೆದ ಮತದಾನದಲ್ಲಿ ತುಳಸಿ, ‘ಉಪಸ್ಥಿತಿನಿದ್ದೇನೆ’ ಎಂದು ದಾಖಲಿಸಿದರು. ಈ ರೀತಿಯಾಗಿ ಮತದಾನ ಮಾಡಿದ ಏಕೈಕ ಸಂಸತ್ಸದಸ್ಯೆ ಅವರಾದರು.

 ‘‘ನಾನು ಮಧ್ಯದಲ್ಲಿ ನಿಂತಿದ್ದೇನೆ ಹಾಗೂ ಉಪಸ್ಥಿತನಿದ್ದೇನೆ ಎಂಬುದಾಗಿ ಮತದಾನ ಮಾಡಲು ನಿರ್ಧರಿಸಿದ್ದೇನೆ. ವಾಗ್ದಂಡನೆಯ ವಿರುದ್ಧವಾಗಿ ಮತದಾನ ಮಾಡಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಯಾಕೆಂದರೆ ಅಧ್ಯಕ್ಷ ಟ್ರಂಪ್ ತಪ್ಪು ಮಾಡಿದ್ದಾರೆ ಎಂದು ನಾನು ಭಾವಿಸಿದ್ದೇನೆ’’ ಎಂದು ತುಳಸಿ ಹೇಳಿದ್ದಾರೆ ಎಂದು ಸಿಎನ್‌ಬಿಸಿ ನ್ಯೂಸ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News