ನಿಷೇಧಾಜ್ಞೆ ನಡುವೆಯೂ ಕಲಬುರ್ಗಿಯಲ್ಲಿ ಬೃಹತ್ ಪ್ರತಿಭಟನೆ

Update: 2019-12-19 17:16 GMT

ಕಲಬುರ್ಗಿ, ಡಿ.19: ನಿಷೇಧಾಜ್ಞೆಯ ನಡುವೆಯೂ ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಕಾಯ್ದೆಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಲಾಯಿತು. ಎಡಪಕ್ಷಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಮುಖಂಡರು, ಕಾರ್ಯಕರ್ತರು ಸೇರಿದಂತೆ ಸಾಮಾನ್ಯ ಜನತೆ ತಂಡೋಪತಂಡವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ ಸರಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ, ಯಾವುದೇ ಕಾರಣಕ್ಕೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ಮಾಡಲು ಬಿಡುವುದಿಲ್ಲವೆಂದು ಘೋಷಣೆ ಕೂಗಿದರು.

ಗುರುವಾರ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಿಪಿಎಂ ಮುಖಂಡ ಶರಣ ಬಸಪ್ಪ, ದಿವಾಕರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರನ್ನು ಬಂಧಿಸಲಾಯಿತು. ಆ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಪೊಲೀಸರು ಮುಂದಾದರು. ಆದರೆ, ಗುಂಪು, ಗುಂಪಾಗಿ ಸಾಮಾನ್ಯ ಜನತೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪೊಲೀಸರು ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟರು.

ಶಾಂತಿಯುತ ಪ್ರತಿಭಟನೆ: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಗರದ ಸಾವಿರಾರು ಜನತೆ ಸ್ವಯಂಪ್ರೇರಿತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಎಲ್ಲೂ ಕೂಡ ಶಾಂತಿಗೆ ಭಂಗತರುವಂತಹ ಕೆಲಸಕ್ಕೆ ಮುಂದಾಗಲಿಲ್ಲ. ಕಾಯ್ದೆಯ ವಿರೋಧಿಸಿ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ, ಹೋರಾಟವನ್ನು ಅಂತಿಮಗೊಳಿಸಿದರು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ತರಕಾರಿ ಮಾರುಕಟ್ಟೆ, ಪೆಟ್ರೋಲ್ ಬಂಕ್ ಸೇರಿದಂತೆ ಸೂಪರ್ ಮಾರ್ಕೆಟ್ ಸಂಪೂರ್ಣವಾಗಿ ಬಂದ್ ಮಾಡುವ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸಲಾಯಿತು. ಪ್ರತಿಭಟನೆಯ ನೇತೃತ್ವವನ್ನು ಮಾರುತಿ ಮಾನ್ಪಡೆ, ನ್ಯಾಯವಾದಿ ವಾಹಾಝ್ ಬಾಬಾ, ನಾಸೀರ್ ಹುಸೇನ್ ಉಸ್ತಾದ್, ಎಸ್‌ಡಿಪಿಐನ ಮುಹಮ್ಮದ್ ಮೋಹಸಿನ್, ಶೇಖ್ ಎಝಾಝ್ ಅಲಿ, ಅಬ್ದುಲ್ ಅಲಿ, ಸಾಹಿತಿ ಕೆ.ನೀಲಾ ಮತ್ತಿತರ ಮುಖಂಡರು ವಹಿಸಿದ್ದರು. 

ಪೊಲೀಸರಿಗೆ ಹೂ ನೀಡಿದ ವಿದ್ಯಾರ್ಥಿನಿ

ಪೌರತ್ವ ಕಾಯ್ದೆ ವಿರೋಧಿಸಿ ಕಲಬುರ್ಗಿ ನಗರದಲ್ಲಿ ಬೃಹತ್ ಪ್ರತಿಭಟನೆಯಲ್ಲಿ ನಡೆಸಲಾಯಿತು. ಈ ವೇಳೆ ವಿದ್ಯಾರ್ಥಿನಿ ಹಾಗೂ ಪ್ರತಿಭಟನಾಕಾರರು ಪೊಲೀಸರಿಗೆ ಹೂ ನೀಡುವ ಮೂಲಕ ಪ್ರತಿಭಟನೆಯ ಮೂಲ ಉದ್ದೇಶವನ್ನು ಸಾರಿದರು. ಈ ದೃಶ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಯಿತು.