ಲಂಡನ್: ಪೌರತ್ವ ಕಾಯ್ದೆ ವಿರುದ್ಧ ಭಾರತೀಯ ವಿದ್ಯಾರ್ಥಿಗಳಿಂದ ಪ್ರತಿಭಟನೆ

Update: 2019-12-19 17:51 GMT
ಫೈಲ್ ಚಿತ್ರ

ಲಂಡನ್, ಡಿ. 19: ನೂತನ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ವಿರೋಧಿಸಿ ಲಂಡನ್ ಮತ್ತು ಬ್ರಿಟನ್‌ನ ಹಲವೆಡೆಗಳಲ್ಲಿ ವಿವಿಧ ವಿಶ್ವವಿದ್ಯಾಲಯಗಳ ನೂರಾರು ಭಾರತೀಯ ವಿದ್ಯಾರ್ಥಿಗಳು ಬುಧವಾರ ಸಂಜೆ ಇಲ್ಲಿನ ಭಾರತೀಯ ಹೈಕಮಿಶನ್ ಹೊರಗಡೆ ಪ್ರತಿಭಟನೆ ಮಾಡಿದ್ದಾರೆ.

ಎರಡು ಗಂಟೆಗಳ ಕಾಲ ನಡೆದ ಪ್ರತಿಭಟನೆಯ ವೇಳೆ ಪ್ರತಿಭಟನಕಾರರು ಭಾರತೀಯ ಧ್ವಜಗಳು ಮತ್ತು ಘೋಷಪತ್ರಗಳನ್ನು ಪ್ರದರ್ಶಿಸಿದರು. ಒಂದು ದಿನ ಮುಂಚೆ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಮತ್ತು ಲಂಡನ್‌ನಲ್ಲಿರುವ ಭಾರತೀಯ ಓವರ್‌ಸೀಸ್ ಕಾಂಗ್ರೆಸ್ (ಯುಕೆ) ನಡೆಸಿದ ಪ್ರತಿಭಟನೆಗಳ ಮಾದರಿಯಲ್ಲೇ ಬುಧವಾರ ಪ್ರತಿಭಟನೆಯೂ ನಡೆಯಿತು. ಪ್ರತಿಭಟನಕಾರರು ಭಾರತ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಪ್ರತಿಭಟನಕಾರರು ಭಾರತೀಯ ಸಂವಿಧಾನದ ಪೀಠಿಕೆಯನ್ನು ಓದಿ ಹೇಳಿದರು. ಭಾರತದ ವಿವಿಧ ಭಾಗಗಳಿಂದ ಬಂದಿರುವ ವಿದ್ಯಾರ್ಥಿಗಳ ಜೊತೆ ಸೌತ್ ಏಶ್ಯ ಸಾಲಿಡಾರಿಟಿ ಗ್ರೂಪ್ ಮತ್ತು ಇತರ ಸಂಘಟನೆಗಳ ಸದಸ್ಯರೂ ಪ್ರತಿಭಟನೆಯಲ್ಲಿ ಕೈಗೂಡಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೈಬಿಡುವಂತೆ ಸ್ಕೂಲ್ ಆಫ್ ಓರಿಯಂಟಲ್ ಆ್ಯಂಡ್ ಆಫ್ರಿಕನ್ ಸ್ಟಡೀಸ್ (ಎಸ್‌ಒಎಎಸ್)ನ ಇಂಡಿಯಾ ಸೊಸೈಟಿ ಮತ್ತು ಸೌತ್ ಏಶ್ಯ ಸಾಲಿಡಾರಿಟಿ ಗ್ರೂಪ್‌ಗಳ ಹೇಳಿಕೆಯೊಂದು ಒತ್ತಾಯಿಸಿದೆ. ಹೇಳಿಕೆಯು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಯನ್ನೂ ರದ್ದುಗೊಳಿಸಬೇಕು ಹಾಗೂ ಭಾರತದ ವಿಶ್ವವಿದ್ಯಾನಿಲಯಗಳಲ್ಲಿ ಪೊಲೀಸರು ನಡೆಸಿರುವ ಬಲಪ್ರಯೋಗದ ಬಗ್ಗೆ ತನಿಖೆ ನಡೆಸಬೇಕು ಎಂಬುದಾಗಿಯೂ ಹೇಳಿಕೆ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News