ರಣಜಿ ಟ್ರೋಫಿ: ಕರ್ನಾಟಕ ತಂಡಕ್ಕೆ ಅಲ್ಪ ಮುನ್ನಡೆ

Update: 2019-12-19 18:52 GMT

ಹುಬ್ಬಳ್ಳಿ, ಡಿ.19: ಕರ್ನಾಟಕ ತಂಡ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ ಉತ್ತರಪ್ರದೇಶದ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮುನ್ನಡೆ ಪಡೆದಿದೆ. ಉತ್ತರಪ್ರದೇಶದ ಮೊದಲ ಇನಿಂಗ್ಸ್ 281 ರನ್‌ಗೆ ಉತ್ತರವಾಗಿ ಕರ್ನಾಟಕ 321 ರನ್ ಗಳಿಸಿ ಮೊದಲ ಇನಿಂಗ್ಸ್ ನಲ್ಲಿ 40 ರನ್ ಮುನ್ನಡೆ ಪಡೆಯಿತು. 116 ರನ್ ನೀಡಿ ಆರು ವಿಕೆಟ್‌ಗಳನ್ನು ಉರುಳಿಸಿದ ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ಕರ್ನಾಟಕದ ಬ್ಯಾಟಿಂಗ್‌ಗೆ ಸವಾಲಾಗಿ ಪರಿಣಮಿಸಿದರು. ಕರ್ನಾಟಕ ಮೂರನೇ ದಿನದಾಟ ವಾದ ಗುರುವಾರ 4 ವಿಕೆಟ್‌ಗಳ ನಷ್ಟಕ್ಕೆ 168 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿತು. 8 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಶ್ರೇಯಸ್ ಅಯ್ಯರ್ 58 ರನ್(182 ಎಸೆತ, 6 ಬೌಂಡರಿ)ಗಳಿಸಿ ತಂಡವನ್ನು ಆಧರಿಸಿದರು. ಅಭಿಮನ್ಯು ಮಿಥುನ್(ಔಟಾಗದೆ 34, 48 ಎಸೆತ, 3 ಬೌಂಡರಿ,1 ಸಿಕ್ಸರ್)ಹಾಗೂ ಜೆ.ಸುಚಿತ್(28, 120 ಎಸೆತ)ತಂಡದ ಮೊತ್ತವನ್ನು 321 ರನ್‌ಗೆ ತಲುಪಿಸಿದರು. ಕರ್ನಾಟಕಕ್ಕೆ ಮೊದಲ ಇನಿಂಗ್ಸ್ ಮುನ್ನಡೆ ಬಿಟ್ಟುಕೊಟ್ಟಿರುವ ಉತ್ತರಪ್ರದೇಶ ಮೂರನೇ ದಿನದಾಟದಂತ್ಯಕ್ಕೆ 2ನೇ ಇನಿಂಗ್ಸ್‌ನಲ್ಲಿ 11 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 29 ರನ್ ಗಳಿಸಿತು. ಎಂ.ಕೌಶಿಕ್(ಔಟಾಗದೆ 19)ಹಾಗೂ ಶೌಕತ್(6)ಕ್ರೀಸ್ ಕಾಯ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News