ತಕ್ಷಣವೇ ರಾಷ್ಟ್ರವ್ಯಾಪಿ ಎನ್‌ಆರ್‌ಸಿ ಜಾರಿ ಇಲ್ಲ: ಕೇಂದ್ರ ಸರಕಾರ ಸ್ಪಷ್ಟನೆ
ಹೊಸದಿಲ್ಲಿ, ಡಿ.20: ಪೌರತ್ವ ನಿಯಮಗಳು 2003ರ ಪ್ರಕಾರ ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿ ಪ್ರಕ್ರಿಯೆಯನ್ನು ರಾಷ್ಟ್ರವ್ಯಾಪಿ ನಡೆಸಲು ಇನ್ನೂ ಸೂಚನೆ ನೀಡಲಾಗಿಲ್ಲ. ಯಾವ ಭಾರತೀಯನಿಗೆ ತೊಂದರೆಯಾಗದಂತೆ ನಿಯಮ ಹಾಗೂ ಸಲಹೆ-ಸೂಚನೆಗಳನ್ನು ನೀಡಲಾಗುವುದು ಎಂದು ಕೇಂದ್ರ ಸರಕಾರ ಗುರುವಾರ ಸ್ಪಷ್ಟಪಡಿಸಿದೆ.
‘‘ಎನ್‌ಆರ್‌ಸಿ ತಯಾರಿಯ ಕುರಿತು ನಮ್ಮ ಉದ್ದೇಶವನ್ನು ನಾವು ಘೋಷಿಸುತ್ತೇವೆ. ಎನ್‌ಆರ್‌ಸಿ ಪ್ರಕ್ರಿಯೆ ಆರಂಭಿಸಲು ಯಾವುದೇ ದಿನವನ್ನು ನಿಗದಿಪಡಿಸಲಾಗಿಲ್ಲ. ಅಖಿಲ ಭಾರತ ಎನ್‌ಆರ್‌ಸಿ ನಿಯಮಗಳ ಕರಡು ಸಿದ್ಧಪಡಿಸಲಾಗಿಲ್ಲ. ಎನ್‌ಆರ್‌ಸಿ ತಕ್ಷಣವೇ ನಡೆಯುವುದಿಲ್ಲ. ಎನ್‌ಆರ್‌ಸಿಯನ್ನು ರಾಷ್ಟ್ರವ್ಯಾಪಿ ನಡೆಸಲಾಗುತ್ತಿದೆ. ಎಲ್ಲ ಮುಸ್ಲಿಂ ಸಮುದಾಯವರನ್ನು ಗಡಿಪಾರು ಮಾಡಲಾಗುತ್ತದೆ ಎಂದು ಕೆಲವು ಜನರು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಎನ್‌ಆರ್‌ಸಿಯನ್ನು ಇನ್ನಷ್ಟೇ ಅಧಿಕೃತವಾಗಿ ಘೋಷಿಸಲಾಗುವುದು ಎಂದು ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದೆ. ಯಾವುದೇ ಭಾರತೀಯ ನಾಗರಿಕನಿಗೆ ತೊಂದರೆಯಾಗದಂತೆ ನೀತಿ ನಿಯಮಗಳನ್ನು ರೂಪಿಸಲಾಗುವುದು’’ ಎಂದು ಗೃಹ ಖಾತೆಯ ರಾಜ್ಯ ಸಚಿವ ಜಿ.ಕೃಷ್ಣ ರೆಡ್ಡಿ ಹೇಳಿದ್ದಾರೆ.