ಹೈದರಾಬಾದ್ ನಿಝಾಮರಿಗೆ 35 ಮಿ.ಪೌಂಡ್ ಹಣ ಪಾವತಿಸಲು ಪಾಕ್‌ಗೆ ಬ್ರಿಟನ್ ಹೈಕೋರ್ಟ್ ಆದೇಶ

Update: 2019-12-20 15:50 GMT

ಲಂಡನ್,ಡಿ.20: ವಿಭಜನೆಯ ಸಂದರ್ಭದಲ್ಲಿ 1948ರಲ್ಲಿ ಲಂಡನ್ನಿನ ನಾಟ್‌ವೆಸ್ಟ್ ಬ್ಯಾಂಕಿನಲ್ಲಿ ಠೇವಣಿಯಿರಿಸಲಾಗಿದ್ದ ಹೈದರಾಬಾದ್‌ನ ಏಳನೇ ನಿಝಾಮರಾಗಿದ್ದ ಉಸ್ಮಾನ್ ಅಲಿ ಖಾನ್ ಅವರಿಗೆ ಸೇರಿದ್ದ ಹಣಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ದಶಕಗಳಷ್ಟು ಹಳೆಯ ಕಾನೂನು ವಿವಾದಕ್ಕೆ ತೆರೆಬಿದ್ದಿದೆ. ಭಾರತದ ಪರ ತೀರ್ಪು ನೀಡಿರುವ ಲಂಡನ್ ಉಚ್ಚ ನ್ಯಾಯಾಲಯವು ಕಾನೂನು ವೆಚ್ಚವಾಗಿ ಮಿಲಿಯಗಟ್ಟಲೆ ಪೌಂಡ್‌ಗಳನ್ನು ಪಾವತಿಸುವಂತೆಯೂ ಗುರುವಾರ ಪಾಕಿಸ್ತಾನಕ್ಕೆ ಆದೇಶಿಸಿದೆ.

1948ರಲ್ಲಿ ವಿಭಜನೆ ಸಂದರ್ಭ ಹೈದರಾಬಾದ್ ನಿಝಾಮರು ತನ್ನ ಸಂಸ್ಥಾನವು ಪಾಕಿಸ್ತಾನಕ್ಕೆ ಸೇರ್ಪಡೆಗೊಳ್ಳಬೇಕೇ ಅಥವಾ ಭಾರತದಲ್ಲಿಯೇ ಉಳಿಯಬೇಕೇ ಎಂಬ ಸಂದಿಗ್ಧದಲ್ಲಿದ್ದರು. ಭಾರತೀಯ ಸೇನೆಯು ಹೈದರಾಬಾದ್‌ನತ್ತ ಸಾಗುತ್ತಿದ್ದರೆ ಅತ್ತ ಲಂಡನ್‌ನಲ್ಲಿದ್ದ ನಿಝಾಮರ ಪ್ರತಿನಿಧಿ ಹಾಗೂ ಅವರ ಸರಕಾರದಲ್ಲಿ ವಿದೇಶ ಮಂತ್ರಿಯಾಗಿದ್ದ ಮೊಯಿನ್ ನವಾಝ್ ಅವರು ನಿಝಾಮರಿಗೆ ಸೇರಿದ 10,07,940 ಪೌಂಡ್ ಹಣವನ್ನು ನಾಟ್‌ವೆಸ್ಟ್ ಬ್ಯಾಂಕಿನಲ್ಲಿಯ ಪಾಕಿಸ್ತಾನದ ರಾಯಭಾರಿ ಹಬೀಬ್ ಇಬ್ರಾಹಿಂ ರಹ್ಮತುಲ್ಲಾ ಅವರ ಖಾತೆಯಲ್ಲಿ ಠೇವಣಿಯಿರಿಸಿದ್ದರು. ಏಳು ದಶಕಗಳಲ್ಲಿ ಈ ಮೊತ್ತವಿಂದು 350 ಲ.ಪೌಂಡ್ (ಸುಮಾರು 319 ಕೋ.ರೂ.)ಗೆ ಬೆಳೆದಿದೆ.

ಈ ಮೊತ್ತದ ಮೇಲೆ ಒಡೆತನವನ್ನು ಸಾಧಿಸಲು ಪಾಕ್ ಸರಕಾರದ ವಿರುದ್ಧದ ಕಾನೂನು ಸಮರದಲ್ಲಿ ನಿಝಾಮರ ಮೊಮ್ಮಗ ಹಾಗೂ ಎಂಟನೇ ನಿಝಾಮ ಮುಕರ್ರಮ್ ಜಾಹ್ (86) ಮತ್ತು ಅವರ ಸೋದರ ಮುಫಕಮ್ ಜಾಹ್(80) ಅವರು ಭಾರತ ಸರಕಾರದೊಂದಿಗೆ ಕೈಜೋಡಿಸಿದ್ದರು.

ವರ್ಷಗಳ ಕಾಲ ನಡೆದ ಕಾನೂನು ಜಟಾಪಟಿಯ ಬಳಿಕ ಲಂಡನ್ನನ ರಾಯಲ್ ಕೋರ್ಟ್ ಆಫ್ ಜಸ್ಟೀಸ್‌ನ ನ್ಯಾ.ಮಾರ್ಕಸ್ ಸ್ಮಿತ್ ಅವರು,ಏಳನೇ ನಿಝಾಮರು ಬ್ಯಾಂಕಿನಲ್ಲಿರುವ ಮೊತ್ತದ ಒಡೆಯರಾಗಿದ್ದಾರೆ ಮತ್ತು ಅವರ ವಾರಸು ಹಕ್ಕನ್ನು ಪ್ರತಿಪಾದಿಸಿರುವ ಜಾಹ್ ಸೋದರರು ಮತ್ತು ಭಾರತ ಸರಕಾರಕ್ಕೆ ಈ ಮೊತ್ತ ಕ್ರಮಾನುಸಾರ ಹಂಚಿಕೆಯಾಗಬೇಕು ಎಂದು ಅಕ್ಟೋಬರ್‌ನಲ್ಲಿ ತೀರ್ಪು ಪ್ರಕಟಿಸಿದ್ದರು. ಈ ತೀರ್ಪಿನ ನಂತರದ ವಿಚಾರಣೆ ಗುರುವಾರ ಅಂತ್ಯಗೊಂಡಿದ್ದು,ಪಾಕಿಸ್ತಾನವು ಇತರ ಕಕ್ಷಿದಾರರ ಕಾನೂನು ವೆಚ್ಚದ ಶೇ.65ರಷ್ಟನ್ನು ಪಾವತಿಸಬೇಕು ಎಂದು ನ್ಯಾಯಾಲಯವು ಆದೇಶಿಸಿದೆ. ಕಕ್ಷಿದಾರರ ಕಾನೂನು ವೆಚ್ಚದ ಪೈಕಿ 367,387.90 ಪೌಂಡ್‌ಗಳು ನ್ಯಾಟ್‌ವೆಸ್ಟ್ ಬ್ಯಾಂಕಿಗೆ ಸಂಬಂಧಿಸಿದ್ದು,ಅದು ಈಗಾಗಲೇ ಠೇವಣಿ ಮೊತ್ತದಿಂದ ಇದನ್ನು ಕಡಿತಗೊಳಿಸಿದೆ. ಕಡಿತಗೊಂಡಿರುವ ಮೊತ್ತವನ್ನು ಪಾಕಿಸ್ತಾನವು ಈಗ ತುಂಬಿ ಕೊಡಬೇಕಿದೆ.

ನ್ಯಾಯಾಲಯದ ಆದೇಶದಂತೆ ಪಾಕಿಸ್ತಾನವು ಪಾವತಿ ಮಾಡಬೇಕಿರುವ ಕಾನೂನು ವೆಚ್ಚದಲ್ಲಿ ಭಾರತ ಸರಕಾರಕ್ಕೆ ಸುಮಾರು 28,02,192.22 ಪೌಂಡ್,ಪ್ರಿನ್ಸ್ ಮುಫಕಮ್ ಜಾಹ್ ಅವರಿಗೆ 18,35,445.83 ಪೌಂಡ್ ಮತ್ತು ಎಂಟನೇ ನಿಝಾಮ ಪ್ರಿನ್ಸ್ ಮುಕರ್ರಮ್ ಜಾಹ್ ಅವರಿಗೆ 7,95,064.63 ಪೌಂಡ್ ದೊರೆಯಲಿವೆ.

ತಾನು ಹೈದರಾಬಾದ್ ಸಂಸ್ಥಾನಕ್ಕೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿದ್ದು,ಅದರ ವೌಲ್ಯವಾಗಿ ಏಳನೇ ನಿಝಾಮರು ತನಗೆ ಈ ಹಣವನ್ನು ಪಾವತಿಸಿದ್ದರು ಎಂಬ ಪಾಕಿಸ್ತಾನದ ವಾದವನ್ನು ನ್ಯಾಯಾಲಯವು ಪುರಸ್ಕರಿಸಿಲ್ಲ.

ಹೈದರಾಬಾದ್‌ಗೆ ತಾನು ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದೆ ಎಂದು ಪಾಕಿಸ್ತಾನವು ಬಹಿರಂಗವಾಗಿ ಒಪ್ಪಿಕೊಂಡಿರುವುದು ಇತಿಹಾಸಕಾರರಿಗೆ ಆಸಕ್ತಿಯ ವಿಷಯವಾಗಿದೆ ಎಂದು ಪ್ರಕರಣದಲ್ಲಿ ಭಾರತದ ಪರ ವಾದಿಸಿದ್ದ ಹಿರಿಯ ನ್ಯಾಯವಾದಿ ಹರೀಶ ಸಾಳ್ವೆ ಅವರು ಕಳೆದ ಅಕ್ಟೋಬರ್‌ನಲ್ಲಿ ಹೇಳಿದ್ದರು.

ನ್ಯಾ.ಸ್ಮಿತ್ ಅವರ ತೀರ್ಪನ್ನು ಪ್ರಶ್ನಿಸದಿರಲು ಪಾಕಿಸ್ತಾನವು ನಿರ್ಧರಿಸಿದೆ ಮತ್ತು ಇದು ನಮಗೆ ಸಂತಸವನ್ನು ನೀಡಿದೆ ಎಂದು ಎಂಟನೇ ನಿಝಾಮರ ಪರ ವಾದಿಸಿದ್ದ ನ್ಯಾಯವಾದಿ ಪಾಲ್ ಹೆವಿಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News