‘ಮಾನಸಿಕ ಅಸ್ವಸ್ಥ’ ನ್ಯಾಯಾಧೀಶರನ್ನು ವಜಾಗೊಳಿಸಲು ಮುಂದಾದ ಪಾಕ್

Update: 2019-12-20 16:14 GMT

ಇಸ್ಲಾಮಾಬಾದ್, ಡಿ. 20: ಮಾಜಿ ಅಧ್ಯಕ್ಷ ಜನರಲ್ (ನಿವೃತ್ತ) ಪರ್ವೇಝ್ ಮುಷರ್ರಫ್‌ರ ಶವವನ್ನು ದರದರನೆ ಎಳೆದುಕೊಂಡು ಬಂದು ಸಂಸತ್ತಿನಲ್ಲಿ ಮೂರು ದಿನ ನೇತಾಡಿಸಿ ಎಂಬ ವಿಶೇಷ ನ್ಯಾಯಾಲಯವೊಂದರ ಆದೇಶಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪಾಕಿಸ್ತಾನ ಸರಕಾರವು, ನ್ಯಾಯಾಲಯದ ‘ಮಾನಸಿಕ ಅಸ್ವಸ್ಥ’ ನ್ಯಾಯಾಧೀಶರನ್ನು ಹುದ್ದೆಯಿಂದ ತೆರವುಗೊಳಿಸುವಂತೆ ಕೋರಿ ಸುಪ್ರೀಂ ನ್ಯಾಯಾಂಗ ಮಂಡಳಿಗೆ ಮನವಿ ಸಲ್ಲಿಸುವುದಾಗಿ ಗುರುವಾರ ಹೇಳಿದೆ.

‘‘ಆರೋಪಿಯನ್ನು ಸಾಯುವವರೆಗೆ ಕುತ್ತಿಗೆಯ ಮೂಲಕ ನೇತು ಹಾಕಬೇಕು’’ ಎಂದು ವಿಶೇಷ ನ್ಯಾಯಾಲಯವು ಗುರುವಾರ ನೀಡಿದ ತೀರ್ಪಿನಲ್ಲಿ ಹೇಳಿತ್ತು. ಮೂವರು ಸದಸ್ಯರ ನ್ಯಾಯಪೀಠದ ನೇತೃತ್ವ ವಹಿಸಿರುವ ಪೇಶಾವರ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ವಕಾರ್ ಅಹ್ಮದ್ ಸೇಠ್ ನ್ಯಾಯಪೀಠದ ಪರವಾಗಿ ತೀರ್ಪನ್ನು ಬರೆದಿದ್ದರು.

‘‘ದೇಶಭ್ರಷ್ಟ/ಆರೋಪಿಯನ್ನು ಬಂಧಿಸಲು ಹಾಗೂ ಕಾನೂನು ಪ್ರಕಾರ ಶಿಕ್ಷೆ ಜಾರಿಯಾಗುವಂತೆ ನೋಡಿಕೊಳ್ಳಲು ನಿಮ್ಮಿಂದಾಗುವ ಎಲ್ಲ ಪ್ರಯತ್ನಗಳನ್ನು ಮಾಡಬೇಕೆಂದು ಕಾನೂನು ಅನುಷ್ಠಾನ ಸಂಸ್ಥೆಗಳಿಗೆ ನಾವು ನಿರ್ದೇಶನ ನೀಡುತ್ತೇವೆ. ಒಂದು ವೇಳೆ ಸತ್ತ ಸ್ಥಿತಿಯಲ್ಲಿ ಆರೋಪಿ ಪತ್ತೆಯಾದರೆ ಶವವನ್ನು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಡಿ-ಚೌಕ್‌ಗೆ ದರದರನೆ ಎಳೆದುಕೊಂಡು ಬರಬೇಕು ಹಾಗೂ ಅಲ್ಲಿ ಮೂರು ದಿನಗಳ ಕಾಲ ನೇತಾಡಿಸಬೇಕು’’ ಎಂದು ತೀರ್ಪಿನಲ್ಲಿ ಬರೆಯಲಾಗಿದೆ.

ಅಧ್ಯಕ್ಷರ ಕಚೇರಿ, ಪ್ರಧಾನಿ ಕಚೇರಿ, ಸಂಸತ್ತು ಮತ್ತು ಸುಪ್ರೀಂ ಕೋರ್ಟ್ ಮುಂತಾದ ಹಲವಾರು ಮಹತ್ವದ ಸರಕಾರಿ ಕಟ್ಟಡಗಳಿಗೆ ಡಿ-ಚೌಕ್ ಅಥವಾ ಡೆಮಾಕ್ರಸಿ ಚೌಕ್ ಸಮೀಪದಲ್ಲಿದೆ.

ತೀರ್ಪು ಪ್ರಕಟಗೊಂಡ ಬಳಿಕ, ಪ್ರಧಾನಿ ಇಮ್ರಾನ್ ಖಾನ್ ತನ್ನ ವಕೀಲರ ತಂಡದೊಂದಿಗೆ ಸಮಾಲೋಚಿಸಿದರು. ಈ ಸಮಾಲೋಚನೆಯಲ್ಲಿ ಮೂಡಿಬಂದ ನಿರ್ಧಾರವನ್ನು ಇಮ್ರಾನ್‌ರ ಸಹಾಯಕರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ನ್ಯಾಯಮೂರ್ತಿ ಸೇಠ್ ‘ಮಾನಸಿಕವಾಗಿ ಅಸ್ವಸ್ಥರು’ ಎನ್ನುವುದನ್ನು ಈ ತೀರ್ಪು ತೋರಿಸಿದೆ ಎಂದು ಕಾನೂನು ಸಚಿವ ಫಾರೂಖ್ ನಸೀಮ್ ಹೇಳಿದರು.

ಇಂಥ ಶಿಕ್ಷೆ ಪಾಕಿಸ್ತಾನದ ಯಾವುದೇ ಕಾನೂನಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News