ಅಮೆರಿಕ ಸಂಸದರ ಭೇಟಿಯನ್ನು ದಿಢೀರ್ ರದ್ದುಗೊಳಿಸಿದ ಜೈಶಂಕರ್

Update: 2019-12-20 16:19 GMT

ವಾಶಿಂಗ್ಟನ್, ಡಿ. 20: ಭಾರತ ಸರಕಾರ ಕಾಶ್ಮೀರಕ್ಕೆ ಸಂಬಂಧಿಸಿ ತೆಗೆದುಕೊಂಡಿರುವ ನಿರ್ಧಾರಗಳನ್ನು ನಿರ್ಣಯವೊಂದರ ಮೂಲಕ ಟೀಕಿಸಿದ್ದ ಅಮೆರಿಕ ಸಂಸದೆ ಪ್ರಮೀಳಾ ಜಯಪಾಲ್ ಸೇರಿದಂತೆ ಅಮೆರಿಕನ್ ಸಂಸದರೊಂದಿಗಿನ ಸಭೆಯನ್ನು ತಾನು ರದ್ದುಪಡಿಸಿದ್ದೇನೆ ಎಂಬ ವರದಿಯೊಂದಕ್ಕೆ ಭಾರತದ ವಿದೇಶ ಸಚಿವ ಎಸ್. ಜೈಶಂಕರ್ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ಅಮೆರಿಕದ ನಾಯಕರೊಂದಿಗೆ 2+2 ಮಾತುಕತೆಯಲ್ಲಿ ಭಾಗವಹಿಸುವುದಕ್ಕಾಗಿ ಜೈಶಂಕರ್ ಗೃಹ ಸಚಿವ ರಾಜ್‌ನಾಥ್ ಸಿಂಗ್ ಜೊತೆ ಅಮೆರಿಕದಲ್ಲಿದ್ದಾರೆ.

‘‘ಇದು (ವರದಿ) ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ನ್ಯಾಯೋಚಿತ ಗ್ರಹಿಕೆ ಅಥವಾ ಭಾರತ ಸರಕಾರ ಏನು ಮಾಡುತ್ತಿದೆ ಎಂಬುದರ ಸರಿಯಾದ ಚಿತ್ರಣ ಎಂದು ನನಗನಿಸುವುದಿಲ್ಲ. ಪ್ರಮೀಳಾ ಜಯಪಾಲ್‌ರನ್ನು ಬೇಟಿಯಾಗಲು ನನಗೆ ಇಷ್ಟವಿಲ್ಲ’’ ಎಂದು ಜೈಶಂಕರ್ ವಾಶಿಂಗ್ಟನ್‌ನಲ್ಲಿ ಗುರುವಾರ ಹೇಳಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘‘ವಸ್ತುನಿಷ್ಠವಾಗಿರುವ ಹಾಗೂ ಚರ್ಚೆಗೆ ಮುಕ್ತ ಮನಸ್ಸು ಹೊಂದಿರುವ ಜನರನ್ನು ಭೇಟಿಯಾಗಲು ನನಗೆ ಆಸಕ್ತಿಯಿದೆ. ಈಗಾಗಲೇ ನಿರ್ಧಾರಕ್ಕೆ ಬಂದಿರುವ ಜನರನ್ನು ಭೇಟಿಯಾಗಲು ನನಗೆ ಇಷ್ಟವಿಲ್ಲ’’ ಎಂದರು.

ಪ್ರಮೀಳಾ ಜಯಪಾಲ್ ಹಲವು ವಾರಗಳ ಪ್ರಯತ್ನಗಳ ಬಳಿಕ, ಈ ತಿಂಗಳ ಆದಿ ಭಾಗದಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದ ತನ್ನ ನಿರ್ಣಯವನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮಂಡಿಸಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370ನೇ ವಿಧಿಯನ್ನು ಆಗಸ್ಟ್ 5ರಂದು ರದ್ದುಗೊಳಿಸಿದ ಬಳಿಕ ರಾಜ್ಯದಲ್ಲಿ ವಿಧಿಸಲಾಗಿರುವ ಎಲ್ಲ ಸಂಪರ್ಕ ನಿರ್ಬಂಧಗಳನ್ನು ಎಷ್ಟು ಶೀಘ್ರವೋ ಅಷ್ಟು ಶೀಘ್ರ ತೆರವುಗೊಳಿಸುವಂತೆ ಪ್ರಮೀಳಾ ಜಯಪಾಲ್‌ರ ನಿರ್ಣಯ ಭಾರತವನ್ನು ಒತ್ತಾಯಿಸುತ್ತದೆ.

ಕಾಶ್ಮೀರದಲ್ಲಿ ಸಮಸ್ಯೆಗಳನ್ನು ಹುಟ್ಟು ಹಾಕುವ ಪಾಕಿಸ್ತಾನದ ಪ್ರಯತ್ನಗಳನ್ನು ತಡೆಯಲು ಇಂಥ ನಿರ್ಬಂಧಗಳ ಅಗತ್ಯವಿದೆ ಎಂದು ಭಾರತ ಪ್ರತಿಪಾದಿಸುತ್ತಿದೆ.

ಅಮೆರಿಕ ಸಂಸತ್ತಿನ ಹಿರಿಯ ಸಂಸದರೊಂದಿಗೆ ಈ ವಾರ ನಡೆಯಬೇಕಿದ್ದ ಸಭೆಯನ್ನು ಭಾರತದ ವಿದೇಶ ಸಚಿವರು ‘ಹಠಾತ್ ರದ್ದುಪಡಿಸಿದ್ದಾರೆ’ ಎಂದು ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿದೆ. ಭೇಟಿಯ ವೇಳೆ ಪ್ರಮೀಳಾ ಜಯಪಾಲ್‌ರನ್ನು ಹೊರಗಿಡಲು ಈ ಸಂಸದರು ನಿರಾಕರಿಸಿದ ಹಿನ್ನೆಲೆಯಲ್ಲಿ ವಿದೇಶ ಸಚಿವರು ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಅದು ಹೇಳಿದೆ.

ಭಿನ್ನಮತ ಸಹಿಸಲು ಭಾರತ ಸಿದ್ಧವಿಲ್ಲ: ಪ್ರಮೀಳಾ

‘‘ಈ ಸಭೆಯು ರದ್ದುಗೊಂಡಿರುವುದು ಅತ್ಯಂತ ಆತಂಕಕಾರಿಯಾಗಿದೆ. ಯಾವುದೇ ಭಿನ್ನಮತವನ್ನು ಸಹಿಸಲು ಭಾರತ ಸರಕಾರ ಸಿದ್ಧವಿಲ್ಲ ಎನ್ನುವ ತಿಳುವಳಿಕೆಗೆ ಇದು ಇನ್ನಷ್ಟು ಪುಷ್ಟಿ ನೀಡಿದೆ’’ ಎಂದು ಪ್ರಮೀಳಾ ಜಯಪಾಲ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News