ಅನಂತಮೂರ್ತಿ ಎಡ-ಬಲಗಳ ಅತಿರೇಕಕ್ಕೆ ಅಂಕುಶವಿಟ್ಟ ಚಿಂತಕ

Update: 2019-12-21 10:09 GMT

ಭಾವನಾತ್ಮಕವಾಗಿ ನನ್ನ ಒಲವು ಇರುವುದು ಎಡಪಂಥೀಯರಿಗೆ ಎಂದು ಘೋಷಿಸಿಕೊಂಡಿದ್ದರೂ ಅನಂತಮೂರ್ತಿ ಅವರು ಎಡಪಂಥೀಯರಲ್ಲ. ಆಯ್ದ ಪ್ರಾಚೀನದ ಬಗ್ಗೆ ಒಲವಿದ್ದರೂ ಬಲಪಂಥೀಯರಲ್ಲ. ಅನಕ್ಷರಸ್ಥರಿಂದ ನಮ್ಮ ಸಂಸ್ಕೃತಿ ಉಳಿದಿದೆ ಎನ್ನುವಾಗಲೇ ಭಾರತದ ಸಮಸ್ತರೂ ಒಂದೆಡೆ ಕುಳಿತು ಕಲಿಯಬಹುದಾದ ಕಾಮನ್ ಸ್ಕೂಲ್‌ಗಳಿಗಾಗಿ ಆಗ್ರಹಿಸುತ್ತಾರೆ. ಜಾತಿ ಸೃಜನಶೀಲವಾಗಬಲ್ಲದು ಎನ್ನುವ ಹೊತ್ತಿನಲ್ಲೇ ಜಾತಿವ್ಯವಸ್ಥೆಯನ್ನು ಮರುಪ್ರತಿಷ್ಠಾಪಿಸುತ್ತಿರುವ ಖಾಸಗಿ ಶಿಕ್ಷಣವ್ಯವಸ್ಥೆಯನ್ನು ಖಂಡಿಸುತ್ತಾರೆ. ಇದನ್ನೆಲ್ಲ ಮೇಲ್ನೋಟದಲ್ಲಿ ಗ್ರಹಿಸಿದಾಗ ಅನಂತಮೂರ್ತಿ ದ್ವಂದ್ವಮೂರ್ತಿ ಯಾಗಿ ಕಾಣುವುದೂ ಇದೆ. ಆದರೆ..

ಲೆನಾಡಿನಲ್ಲಿ ಜನಿಸಿದ ಯು.ಆರ್. ಅನಂತಮೂರ್ತಿ ಸಮಾಜವಾದಿ ಚಳವಳಿಯ ಪರಿಸರದಲ್ಲಿ ವೈಚಾರಿಕ ವ್ಯಕ್ತಿತ್ವ ರೂಪಿಸಿಕೊಂಡವರು. ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಅವರು ವಿಶ್ವವಿದ್ಯಾನಿಲಯದ ಕುಲಪತಿಯಂತಹ ಹಲವು ಮಹತ್ವದ ಹುದ್ದೆಗಳನ್ನು ನಿರ್ವಹಿಸಿದವರು. ತಮ್ಮ ಚಿಂತನೆಗಳಲ್ಲಿ ನಿರಂತರ ಸಮಕಾಲೀನಗೊಳ್ಳುತ್ತ ಹೋದ ಕನ್ನಡದ ಮಹತ್ವದ ಲೇಖಕರಲ್ಲಿ ಅನಂತಮೂರ್ತಿ ಒಬ್ಬರು. ಗೋಕಾಕ್ ಚಳವಳಿ ಮತ್ತು ಜಾಗತೀಕರಣೋತ್ತರ ತೊಂಬತ್ತರ ದಶಕದ ನಂತರ ತೀವ್ರಗತಿಯಲ್ಲಿ ಉಲ್ಬಣಗೊಂಡ ಕೋಮುವಾದಕ್ಕೆ ಮುಖಾಮುಖಿಯಾಗಿ ಅವರು ಮಂಡಿಸಿದ ಸಂಸ್ಕೃತಿ ಚಿಂತನೆಗಳು ಕನ್ನಡದ ಬೌದ್ಧಿಕ ಕಸುವನ್ನು ಬಲಗೊಳಿಸಿವೆೆ.

ವ್ಯಕ್ತಿಯಲ್ಲಿ ಹುಟ್ಟುವ ಸಾಹಿತ್ಯ ಸಮುದಾಯದ ಪ್ರಜ್ಞೆಯಾಗಿ ರೂಪಾಂತರವಾಗುತ್ತದೆ. ಅನಂತಮೂರ್ತಿ ಅವರು ಸಂಸ್ಕೃತಿಯನ್ನು ಗ್ರಹಿಸುವ ಕ್ರಮದಲ್ಲಿ ಸಾಹಿತ್ಯದ ಈ ನೆಲೆಯಿದೆ. ಭಾರತೀಯ ಸಂದರ್ಭದಲ್ಲಿ ಸಂಸ್ಕೃತಿ ನಾವು ಬಳಸುವ ಅರ್ಥದಲ್ಲಿ ನಮಗೂ ಹೊಸ ಪದವೇ. ಸಮುದಾಯಕ್ಕೂ ವ್ಯಕ್ತಿಗೂ ಒಟ್ಟಾಗಿ ಅನ್ವಯವಾಗುವ ಈ ಪದದ ಬದಲು ನಮ್ಮಲ್ಲಿದ್ದುದು ವ್ಯಕ್ತಿಗೆ ಮಾತ್ರ ಅನ್ವಯವಾಗುವ ಸಂಸ್ಕಾರ ಎಂಬ ಪದ. ಇಂಗ್ಲೆಂಡಿನ ಕವಿ ಮ್ಯಾಥ್ಯೂ ಆರ್ನಾಲ್ಡ್‌ನ ಸಂಸ್ಕೃತಿ ಕುರಿತ ಚಿಂತನೆ ಅನಂತಮೂರ್ತಿ ಅವರಿಗೆ ಹತ್ತಿರವಾದದ್ದು ಈ ಕಾರಣಕ್ಕಾಗಿಯೇ. ಆರ್ನಾಲ್ಡ್ ಪ್ರಕಾರ ಕಲ್ಚರ್ ಎಂದರೆ ವ್ಯಕ್ತಿಯ ಒಳಜೀವನದಲ್ಲಿ ನಡೆಯುವ ಕ್ರಿಯೆ. ಯಾವ ವ್ಯಕ್ತಿಯೂ ದ್ವೀಪವಲ್ಲ; ತನ್ನಷ್ಟಕ್ಕೆ ತನ್ನಲ್ಲೆ ಅವನು ಕಲ್ಚರ್ ಪಡೆಯಲಾರ. ಉಳಿದವರನ್ನೂ ತನ್ನ ಜೊತೆ ಒಯ್ಯದೇನೆ ಅವನು ಪರಿಪೂರ್ಣತೆಯತ್ತ ನಡೆಯಲಾರ.

ನಾನು ಕಣ್ಣಾರೆ ಕಂಡದ್ದನ್ನು, ಅನುಭವಿಸಿದ್ದನ್ನು ಹೇಳದೆ ಇರುವುದು ಸಾಧ್ಯವಿರಲಿಲ್ಲ. ಲೇಖಕನಾಗಿ ನಾನು ನನ್ನ ಆತ್ಮಕ್ಕೆ ದ್ರೋಹ ಬಗೆಯಲಾರೆ ಎನ್ನುವ ಅನಂತಮೂರ್ತಿ ಅವರ ನಿಲುವು ಸಂಸ್ಕೃತಿಯ ಪ್ರಾಥಮಿಕ ಗುಣವನ್ನು ಹೇಳುತ್ತದೆ. ಸಂಸ್ಕೃತಿ ನಿರ್ಮಾಣದಲ್ಲಿ ವ್ಯಕ್ತಿಯೊಬ್ಬ ತಾನು ಹುಟ್ಟಿದ ಜಾತಿ, ವರ್ಗ, ದೇಶ ಮತ್ತು ತಾನು ನಂಬಿದ ಸಿದ್ಧಾಂತಗಳಿಗೆ ಕುರುಡಾಗದೆ ಆತ್ಮಸಾಕ್ಷಿಗೆ ಅನುಗುಣವಾಗಿ ತಾನು ಕಂಡ ಸತ್ಯಕ್ಕೆ ಬದ್ಧನಾಗಿರಬೇಕು ಎಂದು ಅನಂತಮೂರ್ತಿ ಬಯಸುತ್ತಾರೆ. ಅವರು ಬೀಜಿಂಗ್‌ಗೆ ಭೇಟಿಕೊಟ್ಟಾಗ ಕಂಡ ಎಡಪಂಥೀಯ ಪ್ರಭುತ್ವದ ಕ್ರೌರ್ಯವನ್ನು ಕುರಿತು ಬರೆಯುವ ಮುಂದಿನ ಮಾತುಗಳಲ್ಲಿ ಇದನ್ನು ಗಮನಿಸಬಹುದು: ಸೋವಿಯತ್ ರಶ್ಯಕ್ಕೆ ಹೋಗಿ ಬಂದ ಮುಖ್ಯ ಐರೋಪ್ಯ ಲೇಖಕರು, ಅಂದ್ರೆ ಜೀಡ್‌ನಂಥವರು ತಮ್ಮ ಸಮಾಜವಾದಿ ನಿಲುವು ಬದಲಾಯಿಸಿಕೊಳ್ಳದಂತೆ ಸೋವಿಯತ್ ರಶ್ಯವನ್ನು ಅತ್ಯಂತ ಕಹಿಯಾಗಿ ಟೀಕಿಸಿದ್ದಾರೆ. ಆದರೆ ನಾವು ಭಾರತೀಯರು ತುಂಬ ಅವಮಾನದಲ್ಲಿ ಒಪ್ಪಿಕೊಳ್ಳಬೇಕಾದ ಒಂದು ಸಂಗತಿಯಿದೆ. ನಮ್ಮ ಯಾವ ದೊಡ್ಡ ಪ್ರಗತಿಶೀಲ ಬರಹಗಾರನೂ ಸೋವಿಯತ್ ರಶ್ಯದಲ್ಲಿ ತಾವು ಕಂಡ ಸತ್ಯವನ್ನು ಬಾಯಿಬಿಚ್ಚಿ ಹೇಳಲಿಲ್ಲ. ಹಿರಿಯರಾದ ರಾಹುಲ ಸಾಂಕೃತಾಯನರಿಂದ ಹಿಡಿದು, ನಮಗೆ ಪ್ರಿಯವಾದ ಭೀಷ್ಮ ಸಹಾನಿವರೆಗೆ ಯಾರೂ ತಾವು ಕಂಡ ಸತ್ಯ ಹೇಳಲಿಲ್ಲ. ಅಮೆರಿಕನ್ ವ್ಯವಸ್ಥೆಯನ್ನು ಟೀಕಿಸುವ ಇವರ ಬೌದ್ಧ್ದಿಕತೆ, ನೈತಿಕತೆ ಸೋವಿಯತ್ ರಶ್ಯದ ಎಲ್ಲ ಕ್ರೌರ್ಯವನ್ನೂ ಕಣ್ಣುಮುಚ್ಚಿ ಒಪ್ಪಿಕೊಂಡಿದ್ದುದು ಈಗ ಇತಿಹಾಸ. ನಾವು ಲೇಖಕರಾಗಿ ಅವಮಾನದಿಂದ ಒಪ್ಪಿಕೊಳ್ಳಬೇಕಾದ ಇತಿಹಾಸ.

ಮೇಲ್ಕಂಡ ಮನೋಭಾವಕ್ಕೆ ವಿರುದ್ಧವೆನಿಸುವಂತಹ, ಚಳವಳಿಯ ಸಮೂಹಸನ್ನಿಯಲ್ಲಿ ತಾನು ನೆಚ್ಚುವ ಸಿದ್ಧಾಂತದ ಉದಾತ್ತ ವೌಲ್ಯಗಳಿಗೆ ಕುರುಡಾಗುವ ಲೇಖಕರದ್ದು ಸಂಸ್ಕೃತಿಗೆ ಎಸಗುವ ಇನ್ನೊಂದು ಬಗೆಯ ಅಪಚಾರ. ಗೋಕಾಕ್ ಚಳವಳಿ ಸಂದರ್ಭದಲ್ಲಿ ನಮ್ಮ ಕೆಲವು ಮುಖ್ಯ ಲೇಖಕರು ಭಾಷೆಯ ನೆಲೆಯಲ್ಲಿ ಮೂಲಭೂತ ಪ್ರಜಾಪ್ರಭುತ್ವೀಯ ಮೌಲ್ಯಗಳ ಬಗ್ಗೆ ಕುರುಡಾದ ವಿಪರ್ಯಾಸದ ಬಗ್ಗೆ ಅನಂತಮೂರ್ತಿ ಅವರು ಹೇಳುವ ಮಾತುಗಳು ಇಲ್ಲಿ ಪ್ರಸ್ತುತವಾಗಿವೆ. ಶ್ರೀ ಬರಗೂರು ರಾಮಚಂದ್ರಪ್ಪನವರು ಮಾರ್ಕ್ಸ್‌ವಾದಿ ಲೇಖಕರು; ಆದರೆ ಇವರು ರಶ್ಯನ್ ಭಾಷೆಯನ್ನು ಒತ್ತಾಯದಿಂದ ಹೇರುವುದರ ಬಗ್ಗೆ ಲೆನಿನ್ ಹೇಳಿದ್ದನ್ನು ಯಾಕೆ ಉಪೇಕ್ಷಿಸುತ್ತಾರೆ.? ಲೋಹಿಯಾವಾದಿಗಳಾದ ಶ್ರೀ ಖಾದ್ರಿ ಶಾಮಣ್ಣ, ಶ್ರೀ ಪಿ.ಲಂಕೇಶ್, ಶ್ರೀ ರಾಮದಾಸ ಮತ್ತು ಶ್ರೀ ಚಂದ್ರಶೇಖರ ಪಾಟೀಲರು ಭಾರತೀಯ ಭಾಷೆಗಳ ಬಗ್ಗೆ ಮಹಾತ್ಮಾ ಗಾಂಧಿ ಮತ್ತು ಲೋಹಿಯಾ ಬರೆದಿದ್ದರ ಹಿಂದಿರುವ ಉದಾರ ಧೋರಣೆಯನ್ನು ಯಾಕೆ ಗೌರವಿಸುವುದಿಲ್ಲ ಎಂದು ನಾನು ಕೇಳಬಯಸುತ್ತೇನೆ. ಇಲ್ಲಿ ಯಾವ ದೊಡ್ಡ ಪ್ರಗತಿಶೀಲ ಬರಹಗಾರ ಹಾಗೂ ಅವರು ಹೆಸರಿಸುವ ಲೇಖಕರ ಜಾಗದಲ್ಲಿ ಜನರು ಎಂದು ಬದಲಿಸಿದರೆ ಅನಂತಮೂರ್ತಿ ಅವರ ಸಾಂಸ್ಕೃತಿಕ ಮೀಮಾಂಸೆ ಅರ್ಥವಾಗುತ್ತದೆ. ಲೇಖಕರಾಗಲಿ, ಒಂದು ನಾಡಿನ ಜನರಾಗಲಿ ತಾವು ನೆಚ್ಚಿದ ಸಿದ್ಧಾಂತಗಳಿಗೆ ಕುರುಡಾಗದೆ, ಆದರೆ ಆ ಸಿದ್ಧಾಂತಗಳ ಮಾನವೀಯ ಮೌಲ್ಯಗಳನ್ನು ಬಿಟ್ಟುಕೊಡದೆ, ಕಂಡ ಸತ್ಯಗಳಿಗೆ ಸ್ಪಂದಿಸುವುದು ಒಂದು ನಾಡಿನ ಸಂಸ್ಕೃತಿಯನ್ನು ರೂಪಿಸುವ ಮಾರ್ಗವಾಗಿದೆ ಎನ್ನುವುದೇ ಈ ಮೀಮಾಂಸೆ.

ನಾಡಿನ ಬಹುಮುಖಿ ಸಂಸ್ಕೃತಿಯನ್ನು ಅಳಿಸಿ ಏಕಮಾದರಿಯ ಸಂಸ್ಕೃತಿ ಪ್ರತಿಷ್ಠಾಪಿಸುವ ಆಧುನಿಕ ಬಂಡವಾಳಶಾಹಿಗಳ ಪ್ರಯತ್ನಗಳಿಗೆ ಅನಂತಮೂರ್ತಿ ಅವರ ಕನ್ನಡ ಅಸ್ಮಿತೆಯ ಕಡುವಿರೋಧವಿದೆ. ಡಿ.ಆರ್. ನಾಗರಾಜರು ಅಭಿಪ್ರಾಯಪಡುವಂತೆ ಅವರ ಈ ವಿರೋಧ ವ್ಯಕ್ತವಾಗುವುದು ಸಾಂಸ್ಕೃತಿಕ ರಾಷ್ಟ್ರೀಯತೆಯ ರೂಪದಲ್ಲಿ ಅಭಿವ್ಯಕ್ತಿ ಪಡೆಯುವ ಅವರ ಕರ್ನಾಟಕತ್ವದಲ್ಲಿ. ಭಾರತದ ಪ್ರಾಚೀನವನ್ನು ಕೇವಲ ಜಾತಿಯ ಧರ್ಮ ಸಂಸ್ಕೃತಿಗಳೆಂದು, ಅವು ಫ್ಯೂಡಲ್ ವರ್ಗದ ಹಿತಾಸಕ್ತಿಯನ್ನು ಮಾತ್ರ ಪ್ರತಿಬಿಂಬಿಸುತ್ತದೆ ಎನ್ನುವ, ಪ್ರಾಚೀನದ್ದೆಲ್ಲವನ್ನು ನಿರಾಕರಿಸುವ ಸಿನಿಕತನದ ಎಡಪಂಥೀಯ ಚಹರೆಯ ಸಂಸ್ಕೃತಿಯನ್ನಾಗಲೀ, ಪ್ರಾಚೀನದಿಂದ ಹಿಗ್ಗುವ ಸಂಭ್ರಮದಲ್ಲಿ ನಮ್ಮನ್ನು ಪೀಡಿಸುತ್ತಿರುವ ಇಂದಿನ ಹಲವು ಸಮಸ್ಯೆಗಳು ಪ್ರಾಚೀನಕ್ಕೂ ಚಾಚಿವೆ ಎಂಬುದನ್ನು ಮರೆಯುವ, ಅದನ್ನೆಲ್ಲ ಭಾರತೀಯತೆಯೆಂದು ಒಪ್ಪಿಕೊಳ್ಳುವ ಗೊಡ್ಡುತನದಿಂದ ಕೂಡಿದ ಬಲಪಂಥೀಯ ಚಹರೆಯ ಸಂಸ್ಕೃತಿಯನ್ನಾಗಲೀ ಅನಂತಮೂರ್ತಿ ಅವರು ಅಪಾಯಕಾರಿ ಸಂಸ್ಕೃತಿಯೆಂದೇ ಗುರುತಿಸುತ್ತಾರೆ. ಇದಕ್ಕೆ ಪರ್ಯಾಯವಾಗಿ ಪ್ರಸ್ತುತದ ಬಿಕ್ಕಟ್ಟುಗಳ ನಿವಾರಣೆಗೆ ವೈಜ್ಞಾನಿಕ ಸಮಾಜವಾದ ಮಾತ್ರ ಪರಿಹಾರ ಎನ್ನುವುದನ್ನೂ ಅವರು ಒಪ್ಪುವುದಿಲ್ಲ.

ರಾಷ್ಟ್ರೀಯತೆ ಎನ್ನುವುದು ನೆನಪುಗಳ ನಿರ್ಮಿತಿ. ನೆನಪುಗಳ ಪುನರ್ ವಿಂಗಡಣೆಯಲ್ಲಿ ಹೊರಹೊಮ್ಮುವುದು ಸಾಂಸ್ಕೃತಿಕ ರಾಷ್ಟ್ರೀಯತೆ. ಕನ್ನಡ ಸಾಂಸ್ಕೃತಿಕ ರಾಷ್ಟ್ರೀಯತೆ ಕುರಿತ ಚಿಂತನೆಯಲ್ಲಿ ಅನಂತಮೂರ್ತಿ ಅವರು ಬಳಸುವ ಜೀರ್ಣಾಗ್ನಿ ಪರಿಕಲ್ಪನೆ ಅರ್ಥಪೂರ್ಣವಾದುದು. ಎಲ್ಲವನ್ನೂ ಸ್ವೀಕರಿಸಿ ಅನಗತ್ಯವಾದುದನ್ನು ತ್ಯಾಜ್ಯವಾಗಿ ವಿಸರ್ಜಿಸಿ, ಪುಷ್ಟಿದಾಯಕವಾದುದನ್ನು ರಕ್ತವಾಗಿ ಪರಿವರ್ತಿಸುವ ಜೀರ್ಣದ ರೂಪಕ ಸಂಸ್ಕೃತಿಯ ಸಂದರ್ಭದಲ್ಲಿ ವಿವೇಕವುಳ್ಳ ಕನ್ನಡ ಸಮುದಾಯ ಅನುಸರಿಸುತ್ತ ಬಂದಿರುವುದೂ, ಸದಾಕಾಲವೂ ಅನುಸರಣಯೋಗ್ಯವೂ ಆಗಿರುವಂತಹದು. ಅನಂತಮೂರ್ತಿ ಅವರ ಜೀರ್ಣಾಗ್ನಿ ಪರಿಕಲ್ಪನೆಯನ್ನು ಕನ್ನಡ ರಾಷ್ಟ್ರೀಯತೆಯ ಮುಖ್ಯ ದಾಖಲೆಗಳಲ್ಲಿ ಒಂದು ಎಂದು ಪರಿಗಣಿಸುವ ಡಿ.ಆರ್. ನಾಗರಾಜ್ ಅವರ ನಿಲುವು ಸಮರ್ಥನೀಯವಾಗಿದೆ. ಆದರೆ ಈ ಪರಿಕಲ್ಪನೆ ಪರಿಪೂರ್ಣವಾಗುವುದು ಹೊರಗಿನವು ಜೀರ್ಣವಾಗಿ ಪೂರಾ ಇಲ್ಲವಾಗುತ್ತದೆಯೋ, ಇಲ್ಲ ತಮ್ಮ ಸಹ ಅಸ್ತಿತ್ವವನ್ನು ಮುಂದುವರಿಸುತ್ತೆಯೋ ಎನ್ನುವ ನಾಗರಾಜರೇ ಎತ್ತುವ ಪ್ರಶ್ನೆಯನ್ನು ಬಗೆಹರಿಸಿಕೊಂಡಾಗ. ಇತರ ಭಾಷಿಕರು, ಧಾರ್ಮಿಕ ಅಲ್ಪಸಂಖ್ಯಾತರು ಕರ್ನಾಟಕದಲ್ಲಿ ಕನ್ನಡ ಕಲಿತು ಕನ್ನಡ ಸಂಸ್ಕೃತಿಯಲ್ಲಿ ಬೆರೆಯಬೇಕು ಎನ್ನುವಾಗಲೇ ಅವರು ತಮ್ಮ ಮಾತೃಭಾಷೆಗಳನ್ನು ಕಲಿತು ಉಳಿಸಿಕೊಂಡು ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಗೋಕಾಕ್ ಚಳವಳಿಯ ಸಂದರ್ಭದಲ್ಲಿ ಅನಂತಮೂರ್ತಿ ಅವರು ವ್ಯಕ್ತಪಡಿಸಿದ ದಿಟ್ಟ ನಿಲುವೇ ಮೇಲಿನ ಪ್ರಶ್ನೆಯನ್ನು ಬಗೆಹರಿಸುತ್ತಿದೆ.

ಭಾವನಾತ್ಮಕ ನನ್ನ ಒಲವು ಇರುವುದು ಎಡಪಂಥೀಯರಿಗೆ ಎಂದು ಘೋಷಿಸಿಕೊಂಡಿದ್ದರೂ ಅನಂತಮೂರ್ತಿ ಅವರು ಎಡಪಂಥೀಯರಲ್ಲ. ಆಯ್ದ ಪ್ರಾಚೀನದ ಬಗ್ಗೆ ಒಲವಿದ್ದರೂ ಬಲಪಂಥೀಯರಲ್ಲ. ಅನಕ್ಷರಸ್ಥರಿಂದ ನಮ್ಮ ಸಂಸ್ಕೃತಿ ಉಳಿದಿದೆ ಎನ್ನುವಾಗಲೇ ಭಾರತದ ಸಮಸ್ತರೂ ಒಂದೆಡೆ ಕುಳಿತು ಕಲಿಯಬಹುದಾದ ಕಾಮನ್ ಸ್ಕೂಲ್‌ಗಳಿಗಾಗಿ ಆಗ್ರಹಿಸುತ್ತಾರೆ. ಜಾತಿ ಸೃಜನಶೀಲವಾಗಬಲ್ಲದು ಎನ್ನುವ ಹೊತ್ತಿನಲ್ಲೇ ಜಾತಿವ್ಯವಸ್ಥೆಯನ್ನು ಮರುಪ್ರತಿಷ್ಠಾಪಿಸುತ್ತಿರುವ ಖಾಸಗಿ ಶಿಕ್ಷಣ ವ್ಯವಸ್ಥೆಯನ್ನು ಖಂಡಿಸುತ್ತಾರೆ. ಇದನ್ನೆಲ್ಲ ಮೇಲ್ನೋಟದಲ್ಲಿ ಗ್ರಹಿಸಿದಾಗ ಅನಂತಮೂರ್ತಿ ದ್ವಂದ್ವಮೂರ್ತಿ ಯಾಗಿ ಕಾಣುವುದೂ ಇದೆ. ಹೀಗೆ ಪರಸ್ಪರ ವಿರೋಧಾಭಾಸವೆನಿಸುವ ಚಿಂತನೆಗಳು ಕುವೆಂಪು ಅವರಲ್ಲಿಯೂ ಇದ್ದವು. ಹಲವು ಆಯಾಮಗಳನ್ನು ಪಡೆದ ಸಂಸ್ಕೃತಿ ಚಿಂತನೆಯಲ್ಲಿ ಇದು ಸಹಜವಾಗಿರುವಂತಹದು. ಮೇಲ್ನೋಟಕ್ಕೆ ವಿರೋಧಾಭಾಸವೆನಿಸುವ ಚಿಂತಕರ ಸಂಸ್ಕೃತಿ ಚಿಂತನೆಗಳಲ್ಲಿ ಬಹಳಷ್ಟು ವಿಶ್ಲೇಷಣೆಗೊಳಪಡಿಸಿದಾಗ ಸ್ಪಷ್ಟತೆಯನ್ನು ಪಡೆಯುತ್ತವೆ. ಮಲೆನಾಡಿನ ಈ ಇಬ್ಬರು ಚಿಂತಕರ ವಿಚಾರದಲ್ಲಿಯೂ ಅನ್ವಯವಾಗುವ ಮಾತಿದು.

ಅನಂತಮೂರ್ತಿ ಅವರ ಕನ್ನಡ ಅಸ್ಮಿತೆ ಕುರಿತ ಚಿಂತನೆಗಳನ್ನು ಅರಿಯಲು ಅವರ ಇಂಗ್ಲಿಷ್ ಬ್ರಾಹ್ಮಣ ಮತ್ತು ಕನ್ನಡ ಶೂದ್ರ ಲೇಖನ ಉತ್ತಮ ಪ್ರವೇಶಿಕೆಯಾಗಿದೆ. ಇಂಗ್ಲಿಷ್ ಬ್ರಾಹ್ಮಣ ಮತ್ತು ಕನ್ನಡ ಶೂದ್ರ ಲೇಖನವು ಕನ್ನಡದ ಅಥವಾ ಮಾತೃಭಾಷೆಗಳ ಮೂಲಕ ಬೌದ್ಧಿಕ ಚಟುವಟಿಕೆ ಮಾಡುವುದರ ಮಹತ್ವ ಕುರಿತು ಸೈದ್ಧಾಂತಿಕವಾಗಿ ಅಕಡಮಿಕಾಗಿ ವಿವೇಚನೆ ಮಾಡಿದ ವಿರಳ ಲೇಖನಗಳಲ್ಲಿ ಒಂದು ಎಂದು ಕನ್ನಡ ವಿದ್ವತ್ ವಲಯದಲ್ಲಿ ಮನ್ನಣೆಗೆ ಪಾತ್ರವಾಗಿದೆ. ಇಂಗ್ಲಿಷ್ ಬಾಹ್ಮಣ, ಕನ್ನಡ ಶೂದ್ರ ಎಂಬ ಲೇಖನ ಭಾಷೆ ಕುರಿತು, ಅದರಲ್ಲೂ ನಿರ್ದಿಷ್ಟವಾಗಿ ಕನ್ನಡ ಭಾಷೆ ಕುರಿತು ಅನಂತಮೂರ್ತಿ ಅವರ ಚಿಂತನೆಗಳನ್ನು ಹೆಚ್ಚು ಖಚಿತವಾಗಿ ಮಂಡಿಸುವ ಬರಹವಾಗಿದೆ. 1965 ರಲ್ಲಿ ಪ್ರಕಟವಾದ ಈ ಲೇಖನ ಮುಖ್ಯವಾಗಿ ಭಾಷೆಯನ್ನು ಸಾಂಸ್ಕೃತಿಕ ನೆಲೆಯಲ್ಲಿ ವಿಶ್ಲೇಷಿಸುತ್ತದೆ. ಸಂಸ್ಕೃತಿ ಚಿಂತನೆಯ ಈ ಬರಹ ಇಂಗ್ಲಿಷ್ ವಿಚಾರಗಳ ಬೌದ್ಧಿಕತೆಯ, ಅಮೂರ್ತತೆಯ ನೆಲೆಯಲ್ಲಿರುವ ಭಾಷೆಯಾದರೆ ಕನ್ನಡ ಭಾವನೆಗಳ, ಸ್ವಾನುಭವದ ಮೂರ್ತತೆಯ ನೆಲೆಯ ಭಾಷೆಯೆಂದು ತೋರಿತು. ಬ್ರಾಹ್ಮಣ ಮತ್ತು ಶೂದ್ರ ಎಂಬ ಪದಗಳು ಜಾತಿವಾಚಿ ಆಗುವ ಬದಲು ಲೋಕಗ್ರಹಿಕೆಯ ಎರಡು ಮಾದರಿಗಳೆಂದು ಮಂಡಿಸಲಾಯಿತು. ಈಗ ಈ ಎರಡು ನೆಲೆಗಳ ನಡುವೆ ಶತ್ರುತ್ವಕ್ಕಿಂತ ಒಂದು ಇನ್ನೊಂದನ್ನು ಬಿಟ್ಟಿರಲಾರದ ಪೂರಕತೆಯ ನೆಲೆ ಮುಖ್ಯವಾಯಿತು.

ಲೇಖನದ ಶೀರ್ಷಿಕೆ ಇಂಗ್ಲಿಷ್ ಬ್ರಾಹ್ಮಣ, ಕನ್ನಡ ಶೂದ್ರ ಎನ್ನುವುದು ಅನುಭವರಹಿತ ಜ್ಞಾನಕ್ಕೂ, ಬೌದ್ಧಿಕತೆಯಿಲ್ಲದ ಅನುಭವಕ್ಕೂ ಸಂಬಂಧಿಸಿದ ಎದುರಾಳಿ ಪರಿಕಲ್ಪನೆಗಳಾಗಿವೆ. ರಹಮತ್ ತರೀಕರೆ ಅವರು ಗುರುತಿಸುವಂತೆ, ಇದಕ್ಕೆ ಅನುಭವ-ಭಾವನೆ ಹಾಗೂ ಬುದ್ಧಿ-ಜ್ಞಾನಗಳನ್ನು ಸರಳವಾಗಿ ವಿಭಜಿಸುವ ಪರಿಕಲ್ಪನೆಗಳ ತಾತ್ವಿಕ ಪರಿಮಿತಿಯಿದ್ದರೂ ಇದನ್ನೊಂದು ಬಾಲಿಶ ಪರಿಕಲ್ಪನೆ ಎಂದು ವ್ಯಾಖ್ಯಾನಿಸಿದ ರಾಜೇಂದ್ರ ಚೆನ್ನಿ ಅವರ ಮಾತನ್ನು ಒಪ್ಪಲಾಗದು. ನಿಜದ ಸಂಗತಿಯೆಂದರೆ ಡಿ.ಆರ್. ನಾಗರಾಜ ಅವರು ಗುರುತಿಸುವಂತೆ ಅನಂತಮೂರ್ತಿ ಒಂದೆರೆಡು ತಲೆಮಾರುಗಳಲ್ಲಿಯೇ ಅತ್ಯಂತ ಆಕರ್ಷಕ ಲೇಖಕನಾಗಿದ್ದು ಹೊಸ ರೀತಿಯ ಮೌಲ್ಯಗಳ ಹರಿಕಾರನಾಗಿ. ಅವರು ಮುಖ್ಯವಾದದ್ದೇ ಆಕ್ರಾಂತ ಯುವಜನರ ಅತಂತ್ರ ವ್ಯಕ್ತಿತ್ವದ ಶೋಧನೆಗಾಗಿ. ಇಂಗ್ಲಿಷ್ ಬ್ರಾಹ್ಮಣತ್ವದ ವಿರುದ್ಧ ಕನ್ನಡ ಶೂದ್ರತ್ವವನ್ನು ಎತ್ತಿ ಹಿಡಿದಿದ್ದಕ್ಕಾಗಿ ಅನಂತಮೂರ್ತಿ 1960-70ರ ದಶಕಗಳಲ್ಲಿ ಯುವಕರಿಗೆ ಪ್ರಿಯವಾದರು. ಭಾರತೀಯ ಸಂದರ್ಭದಲ್ಲಿ ತರತಮದ ಮೂಲನೆಲೆ ಜಾತಿವ್ಯವಸ್ಥೆ. ಜಾತಿಯನ್ನೂ, ಭಾಷೆಯನ್ನೂ ಜತೆಗಿಟ್ಟು ನೋಡುವ ಈ ರೂಪಕಕ್ಕೆ ಕಡುವಾಸ್ತವದ ಬೆಂಬಲವಿದೆ. ಬ್ರಿಟಿಷರ ಜತೆಗೆ, ಅವರ ಇಂಗ್ಲಿಷ್ ಭಾಷೆಯೊಂದಿಗೂ ಹೊಂದಿಕೊಂಡ ಹಿಂದೂ ಮೇಲ್ಜಾತಿಗಳು ಬ್ರಿಟಿಷ್ ಅಧಿಕಾರ ವ್ಯವಸ್ಥೆಯಲ್ಲಿ ತ್ವರಿತವಾಗಿ ಮೇಲೆ ಬಂದವು. ನವವಸಾಹತುಶಾಹಿ ಕಾಲಘಟ್ಟದ ಜಾಗತೀಕರಣೋತ್ತರ ಸಂದರ್ಭದಲ್ಲಿ ಕೂಡ ಇಂಗ್ಲಿಷ್‌ನ ಲಾಭವನ್ನು ಪಡೆದದ್ದು ಇದೇ ವರ್ಗವೇ. ಮೊದಲ ಘಟ್ಟದಲ್ಲಿ ಬ್ರಿಟಿಷರಿಗೆ ಬೇಕಾದ ಗುಮಾಸ್ತರಾಗಿ ಎರಡನೇ ಘಟ್ಟದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಅಗತ್ಯವಾದ ಸಾಫ್ಟ್‌ವೇರ್ ಇಂಜಿನಿಯರುಗಳಾಗಿ ಕಾರ್ಯನಿರ್ವಹಿಸಿದ್ದು.

ಭಾಷೆಯೊಂದು ಸಾಂಸ್ಕೃತಿಕ ಸಮಷ್ಟಿ ಜೀವನದ ಉತ್ಪನ್ನ ಎಂದು ವ್ಯಾಖ್ಯಾನಿಸುವ ಭಾಷಾವಿಜ್ಞಾನಿಗಳ ಪ್ರಮೇಯವನ್ನು ಅನಂತಮೂರ್ತಿ ಅವರು ಮನುಷ್ಯ ಮಾನವೀಯವಾಗಿ ಉಳಿಯಲು ಅವನಿಗೆ ತನ್ನ ಗತಕಾಲದಿಂದ ರಕ್ಷಿತವಾಗಿ ಬಂದ ಮೌಲ್ಯಗಳ, ಪೂರ್ವಿಕರಲ್ಲಿ ಶ್ರೇಷ್ಠರಾದವರ ತಪಸ್ಸು ಮತ್ತು ಸಾಧನೆಯ ಸ್ಮತಿಯಿರಬೇಕು. ಭಾಷೆ ಇಂತಹ ಸ್ಮತಿಯ ನಿಧಿ ಎನ್ನುವ ಮೂಲಕ ಇನ್ನಷ್ಟು ವಿಸ್ತರಿಸಲು ಪ್ರಯತ್ನಿಸುತ್ತಾರೆ. ಇಂತಹ ಅಮೂಲ್ಯನಿಧಿಯಾದ ದೇಶೀಯ ಭಾಷೆಗಳು ಇಂಗ್ಲಿಷ್ ಸೃಷ್ಟಿಸಿದ ಅನಿವಾರ್ಯತೆಯಿಂದಾಗಿ ಕಣ್ಮರೆಯಾಗುತ್ತಿವೆೆಯಲ್ಲ ಎಂಬ ತಳಮಳ ಅವರದ್ದಾಗಿದೆ. ಆದರೆ ಇದಕ್ಕೆ ದ್ವಿಭಾಷಾ ಅನುಸರಣೆ ಪರಿಹಾರವಲ್ಲ, ದ್ವಿಭಾಷಾ ಅನುಸರಣೆಯಿಂದ ಬುದ್ಧಿಲೋಕ ಮತ್ತು ಭಾವಲೋಕಗಳ ನಡುವೆ ಗೋಡೆಯೊಂದನ್ನು ಕಟ್ಟಿಕೊಂಡು ಒಂದರಿಂದ ಇನ್ನೊಂದನ್ನು ಪುಷ್ಟಿಪಡಿಸಿಕೊಳ್ಳದೆ ಬದುಕುವ ಛಿದ್ರ ವ್ಯಕ್ತಿತ್ವಗಳ ನಿರ್ಮಾಣವಾಗುತ್ತದೆೆಂಬ ಆತಂಕ ಅವರದು. ಭಾಷೆಯ ಮುಖ್ಯ ಕಾರ್ಯ ಸಾಧಿತವಾಗುವುದು ನಮ್ಮನ್ನು ಬೆನ್ನಟ್ಟಿ ಬಂದು ರಕ್ತಗತವಾಗಿರುವ ಭಾಷೆಯಿಂದಲೇ ಹೊರತು ಕಷ್ಟಪಟ್ಟು ನಮ್ಮ ಬುದ್ಧಿಶಕ್ತಿಯನ್ನೆಲ್ಲಾ ವೆಚ್ಚ ಮಾಡಿ ಕಲಿಯುವ ಪರಭಾಷೆಯಿಂದಲ್ಲ ಎನ್ನುವ ಬಿ.ಎಂ.ಶ್ರೀ ಅವರ ಮಾತಿನ ಅನುಮೋದನೆಯಂತೆ ಈ ಮಾತುಗಳಿವೆ. ಸಾರಾಂಶದಲ್ಲಿ ವಾಗತೀತವಾದ ಬರಿಯ ಚಿಹ್ನೆ ಫಾರ್ಮುಲಾಗಳಲ್ಲಿ ಬೆಳೆಯುವ ವಿಜ್ಞಾನ ಜಗತ್ತಿನ ಮೇಲೆ ತನ್ನ ವಜ್ರಮುಷ್ಟಿಯನ್ನು ಬಿಗಿ ಮಾಡುತ್ತಿದ್ದಂತೆ, ನಮ್ಮ ಮಾನವ್ಯಕ್ಕೆ ದ್ಯೋತಕವಾದ ಭಾಷೆಯನ್ನು, ಅಂದರೆ ಈ ಭಾಷೆಯ ಮೂಲಕ ಇಡೀ ಸಂಸ್ಕೃತಿಯನ್ನು, ನಾವು ಇನ್ನಷ್ಟು ಎಚ್ಚರದಿಂದ ಕಣ್ಣಿನಲ್ಲಿ ಎಣ್ಣೆಯಿಟ್ಟು ರಕ್ಷಿಸಬೇಕಾಗುತ್ತದೆ. ಎಂಬ ಎಚ್ಚರಿಕೆ ಅನಂತಮೂರ್ತಿ ಅವರದ್ದಾಗಿದೆ. ಇದಕ್ಕೆ ಅವರು ಸೂಚಿಸುವ ಪರಿಹಾರವೆಂದರೆ ಗ್ರಹಿಕೆಗೆ ಮೂಲಭಾಷೆಯನ್ನಿಟ್ಟುಕೊಂಡು ಅಭಿವ್ಯಕ್ತಿಗೆ ನಮ್ಮ ಭಾಷೆಯನ್ನು ಬಳಸುವುದು.

ಜಾಗತೀಕರಣೋತ್ತರ ಸಂದರ್ಭದಲ್ಲಿ ಭಾಷೆಯ ಆಯ್ಕೆ ಮನಃಶಾಸ್ತ್ರೀಯ ಮತ್ತು ಸಾಹಿತ್ಯಿಕ ಅಗತ್ಯಕ್ಕಿಂತ ಆರ್ಥಿಕ ಕಾರಣವೇ ಪ್ರಧಾನವಾಗಿರುವುದು ವಾಸ್ತವ. ಇದರ ಅರಿವು ಅನಂತಮೂರ್ತಿ ಅವರಿಗೆ ಇದೆ. ಇಂಗ್ಲಿಷ್ ಕವಿ, ವಿಮರ್ಶಕ ಅರ್ನಾಲ್ಡ್ ಹೇಳುವಂತೆ ಆತನ ನಾಡು ದೊಡ್ಡದಾಗಿರುವುದು ಕಲ್ಲಿದ್ದಿಲಿನ ಉತ್ಪಾದನೆಯಿಂದಲ್ಲ ; ಶೇಕ್ಸ್‌ಪಿಯರಿನಿಂದಾಗಿ ಎಂಬ ಮಾತು ಕೇವಲ ಆದರ್ಶದ್ದು, ಇಷ್ಟೇ ಉದಾತ್ತ ಧೋರಣೆಯ ಪೋರ್ಚುಗೀಸಿನ ಒಂದು ವಾಕ್ಯವನ್ನೋ, ಫ್ರೆಂಚಿನ ಒಂದು ವಾಕ್ಯವನ್ನೋ, ಜರ್ಮನ್ ಭಾಷೆಯ ಒಂದು ವಾಕ್ಯವನ್ನೋ ಉದ್ಧರಿಸುವ ಬದಲು ಇಂಗ್ಲೆಂಡಿನ ಶೇಕ್ಸ್‌ಪಿಯರನ ಮಾತನ್ನೇ ಜಗತ್ತು ಉದ್ಧರಿಸಲು 19ನೇ ಶತಮಾನದ ಇಂಗ್ಲೆಂಡಿಗೆ ಕಲ್ಲಿದ್ದಿಲ್ಲಿನ ಬಲವಿದ್ದುದೇ ಕಾರಣ ಎಂದು ಅವರು ಗುರುತಿಸುತ್ತಾರೆ. ಆದ್ದರಿಂದಲೇ ಸಾಂಸ್ಕೃತಿಕವಾಗಿ ಕನ್ನಡ ಭಾಷೆಯ ಬಗ್ಗೆ ನಾವು ತಾಳುವ ಅಭಿಮಾನಕ್ಕೂ ಈ ಅಭಿಮಾನ ನೈಜವಾಗಲು ಕನ್ನಡ ಮಾತಾಡುವ ಕರ್ನಾಟಕದ ಜನ ನೆಮ್ಮದಿಯಲ್ಲಿ ಬದುಕಿ ಬಾಳಲು ಅಗತ್ಯವಾದ ಸಂಪನ್ಮೂಲಗಳನ್ನು ಪಡೆದಿರಬೇಕೆಂಬ ಕಾಳಜಿಗೂ ಅಭಿನ್ನವಾದ ಸಂಬಂಧವಿದೆ ಎಂದವರು ಪ್ರತಿಪಾದಿಸುತ್ತಾರೆ. ಆದರೆ ಜಾಗತೀಕರಣದಿಂದಾಗಿ ಹೆಚ್ಚುತ್ತಿರುವ ನಮ್ಮ ಸಾಮಾಜದ ವಿವಿಧ ಜನವರ್ಗಗಳ ನಡುವಿನ ಅಸಮಾನತೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಭಾಷೆಯನ್ನು ಆರ್ಥಿಕ ಹಿನ್ನೆಲೆಯಲ್ಲಿ ಪರ್ಯಾಲೋಚಿಸುವ ಚಿಂತನೆ ಅನಂತಮೂರ್ತಿ ಅವರಲ್ಲಿ ಗೈರಾದಂತೆ ಕಾಣುತ್ತದೆ.

ಬದಲಾಗುತ್ತಿರುವ ಸಮಾಜ ಅನಂತಮೂರ್ತಿ ಅವರ ಗ್ರಹಿಕೆಯನ್ನು ಮೀರಿದ ಸಂಕೀರ್ಣತೆಗಳನ್ನು ಒಳಗೊಂಡಿರುವುದೂ ಇದಕ್ಕೆ ಕಾರಣ. ಅನಂತಮೂರ್ತಿಯವರು ಬಹಳ ಪ್ರಭಾವಿಸಲ್ಪಟ್ಟ ಸಮಾಜವಾದಿ ಚಿಂತಕರಾದ ರಾಮಮನೋಹರ ಅವರ ಒಂದು ಅಭಿಪ್ರಾಯವನ್ನೇ ಇಲ್ಲಿ ನೆನಪಿಸಿಕೊಳ್ಳುವುದು ಸೂಕ್ತ. ಇಂಗ್ಲಿಷನ್ನು ಪ್ರತಿಷ್ಠೆ, ಅಧಿಕಾರ ಹಾಗೂ ಹಣ ಹಿಂಬಾಲಿಸುತ್ತಿರುವವರೆಗೆ ನಮ್ಮ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ಕೊಡಿಸುವುದು ಅನಿವಾರ್ಯ ಎಂದು ಅವರು ಅಭಿಪ್ರಾಯಪಡುತ್ತಾರೆ. ಈ ಮಾತುಗಳೇ ಬದಲಾಗುತ್ತಿರುವ ಸಮಾಜದ ಸಂಕೀರ್ಣತೆಗೆ ಉದಾಹರಣೆಯಾಗಿದೆ.

ನಮ್ಮ ಸರಕಾರದ ಶಿಕ್ಷಣ ಮಾಧ್ಯಮದ ನೀತಿಗಳು ಗ್ರಹಿಕೆಗೆ ಮೂಲಭಾಷೆಯನ್ನಿಟ್ಟುಕೊಂಡು ಅಭಿವ್ಯಕ್ತಿಗೆ ನಮ್ಮ ಭಾಷೆಯನ್ನು ಬಳಸಬೇಕೆನ್ನುವ ಅನಂತಮೂರ್ತಿ ಅಂತಹವರ ಚಿಂತಕರ ಅಭಿಪ್ರಾಯಗಳಿಂದಲೇ ರೂಪ ಪಡೆದಂತವು. ಒಬ್ಬ ವ್ಯಕ್ತಿ ಅಥವಾ ವಿದ್ಯಾರ್ಥಿ ವಿಷಯವನ್ನು ಗ್ರಹಿಸಲು ಮತ್ತು ಆ ಮೂಲಕ ಅವನ ಮನೋವಿಕಾಸವಾಗಲು ಇದು ಸೂಕ್ತವಾದ ಹಾದಿಯಾಗಿದೆ ಎನ್ನುವುದು ಸರಿ. ಆದರೆ ಸಮಸ್ಯೆಗಳು ಭಾಷಾಮೂಲದಿಂದ ಬಾರದೆ ಭಾಷೆಯನ್ನು ನಿಯಂತ್ರಿಸುವ ಬಾಹ್ಯಶಕ್ತಿಗಳಿಂದ ಉಂಟಾಗುತ್ತಿರುವುದು ಹೆಚ್ಚು ಸಂಕೀರ್ಣತೆಯನ್ನು ಸೃಷ್ಟಿಸಿದೆ. ಜಾಗತೀಕರಣ ಸೃಷ್ಟಿಸಿರುವ ಇಂಗ್ಲಿಷಿನ ಅನಿವಾರ್ಯತೆ ಮತ್ತು ಇದು ಸಮಾಜದಲ್ಲಿ ಹೆಚ್ಚಿಸಿರುವ ಅಸಮಾನತೆಗಳು ಭಾಷೆಯನ್ನು ಕೇವಲ ಜ್ಞಾನಕಲಿಕೆಯ ಮಾಧ್ಯಮವನ್ನಾಗಿ ನೋಡದಂತೆ ನಿರ್ಬಂಧಿಸಿವೆ. ಮೇಲ್ವರ್ಗಗಳು ಈಗಾಗಲೇ ಖಾಸಗಿ ಶಾಲೆಗಳ ಮೂಲಕ ಇಂಗ್ಲಿಷನ್ನು ಕಲಿತು ಜಾಗತೀಕರಣದ ಲಾಭ ಪಡೆಯುತ್ತಿದ್ದು ಕನ್ನಡ-ಮಾತೃಭಾಷಾ ಮಾಧ್ಯಮದ ವಿದ್ಯಾರ್ಥಿಗಳು ಆದರ್ಶ �

Writer - ಡಾ.ಸರ್ಜಾಶಂಕರ್ ಹರಳಿಮಠ

contributor

Editor - ಡಾ.ಸರ್ಜಾಶಂಕರ್ ಹರಳಿಮಠ

contributor

Similar News

ಜಗದಗಲ
ಜಗ ದಗಲ