ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿ

Update: 2019-12-21 18:31 GMT

ಅಕ್ರಮ ವಲಸೆಯ ಸಮಸ್ಯೆಯನ್ನು ಹೀಗೆ ಇಡಿಯಾಗಿ ನೋಡಿ ಪರಿಹಾರ ಕಂಡುಕೊಳ್ಳಬೇಕಲ್ಲದೆ ಹಿಂದೂ ಮುಸ್ಲಿಮ್ ಎಂದು ವಿಂಗಡಿಸುವುದಾಗಲೀ ಪರಿಹಾರವನ್ನೇ ಸೂಚಿಸದೆ ಕಾಯ್ದೆಯನ್ನು ಮಾತ್ರ ವಿರೋಧಿಸಿ ಸಮಸ್ಯೆಯ ಪರಿಹಾರದ ಬಗ್ಗೆ ಮೌನವಾಗುವುದಾಗಲೀ ಸರಿಯಾದ ಮಾರ್ಗವಲ್ಲ.

ಲಸಿಗರ ಸಮಸ್ಯೆ ಜಗತ್ತಿನ ಅನೇಕ ದೇಶಗಳನ್ನು ಕಾಡುತ್ತಿದೆ. ಅಮೆರಿಕಕ್ಕಂತೂ ಜಗತ್ತಿನ ಬಹು ದೇಶಗಳಿಂದ ವಲಸೆ ಹೋಗುತ್ತಿದ್ದಾರೆ. ಬೇರೆ ಬೇರೆ ದೇಶಗಳಿಂದ ಬರುವ ಜನರ ವಲಸೆಯನ್ನು ಅವರು ನಿಯಂತ್ರಿಸಬಹುದೇನೊ ಆದರೆ ತನ್ನ ನೆರೆ ದೇಶ ಮೆಕ್ಸಿಕೊದಿಂದ ಬರುವ ಜನರ ವಲಸೆಯನ್ನು ನಿಲ್ಲಿಸುವುದು ಸಾಧ್ಯವಾಗಿಲ್ಲ. ಏಕೆಂದರೆ ಅವರು ಉಳಿದವರಂತೆ ವಿಮಾನ ನಿಲ್ದಾಣಕ್ಕೋ ಅಥವಾ ಹಡಗಿನ ಮೂಲಕ ಬಂದರುಗಳಿಗೋ ಬಂದಿಳಿಯುವುದಿಲ್ಲ, ಬದಲಾಗಿ ಯಾವ ಸುಳಿವೂ ಸಿಗದ ಹಾಗೆ ಕಳ್ಳತನದಿಂದ ಗಡಿಯಲ್ಲಿ ನುಸುಳಿ ಬಿಡುತ್ತಾರೆ. ಹೀಗೆ ನುಸುಳುವವರೆಲ್ಲ ಶ್ರಮಿಕ ವರ್ಗದ ಜನ, ಉದ್ಯೋಗವನ್ನು ಮತ್ತು ಬದುಕಿನ ಸಮೃದ್ಧಿಯನ್ನು ಅರಸಿ ಈ ಶ್ರೀಮಂತ ದೇಶದೊಳಕ್ಕೆ ನುಸುಳುವವರು. ಬೇರು ಮಟ್ಟದಲ್ಲಿ ದುಡಿಯುತ್ತ ಅಮೆರಿಕದ ಆರ್ಥಿಕತೆಯನ್ನು ಮುನ್ನಡೆಸುತ್ತಿರುವವರಲ್ಲಿ ಮೆಕ್ಸಿಕೊದ ಈ ಜನ ಬಹು ಮುಖ್ಯ ಪಾತ್ರವನ್ನು ವಹಿಸಿದ್ದಾರೆ. ಇವರ ಹೊರತು ಅಮೆರಿಕ ನಡೆಯಲಾರದು ಎನ್ನುವಷ್ಟರಮಟ್ಟಿಗೆ ಅಮೆರಿಕದ ಬಹುತೇಕ ದೈಹಿಕ ಶ್ರಮದ ಪಾಲನ್ನು ಈ ಜನ ಹೊತ್ತಿದ್ದಾರೆ. ಪ್ರತಿ ವರ್ಷವೂ ಲಕ್ಷಾಂತರ ಜನ ಕಾನೂನು ಬಾಹಿರವಾಗಿ ಮಿಕ್ಸಿಕೊದಿಂದ ಅಮೆರಿಕಕ್ಕೆ ವಲಸೆ ಬರುತ್ತಲೇ ಇದ್ದಾರೆ. ಈ ವಲಸೆಯ ವಿಷಯವನ್ನೇ ಮುಖ್ಯ ಸಮಸ್ಯೆಯನ್ನಾಗಿಟ್ಟುಕೊಂಡು ಟ್ರಂಪ್ ಗೆದ್ದದ್ದು. ಈ ವಲಸೆಯನ್ನು ತಡೆಯುವ ಸಲುವಾಗಿ ಎರಡು ದೇಶಗಳ ಗಡಿಯ ಉದ್ದಕ್ಕೂ ಬೃಹತ್ ಗೋಡೆ ಕಟ್ಟುವ ಯೋಜನೆಯನ್ನೂ ಟ್ರಂಪ್ ರೂಪಿಸಿದ್ದಾರೆ. ಮುಂಬರುವ ಚುನಾವಣೆಯಲ್ಲೂ ಈ ವಲಸೆಯ ಸಮಸ್ಯೆಯೇ ಮುಖ್ಯ ವಿಷಯವಾಗಲಿದೆ ಅನಿಸುತ್ತದೆ.

ಇನ್ನು ಬ್ರಿಟನ್‌ನ ಬ್ರೆಕ್ಸಿಟ್ ನಿರ್ಧಾರದ ಹಿಂದಿರುವ ಕಾರಣವೂ ವಲಸೆಯದ್ದೇ ಆಗಿದೆ. ಆದರೆ ಇದು ಕಾನೂನು ಬಾಹಿರ ವಲಸೆಯಲ್ಲ. ಯುರೋಪ್ ಒಕ್ಕೂಟದ ಒಪ್ಪಂದದ ಪ್ರಕಾರ ಯಾವ ದೇಶದ ಪ್ರಜೆಯೂ ಒಕ್ಕೂಟದ ಇನ್ನಾವುದೇ ದೇಶಕ್ಕೆ ಹೋಗಿ ಉದ್ಯೋಗ ವ್ಯವಹಾರ ಮಾಡಬಹುದು ಮತ್ತು ದೀರ್ಘ ಕಾಲ ನೆಲಸಬಹುದು. ಯಾವ ದೇಶವೂ ಇದಕ್ಕೆ ಮಿತಿ ಹೇರುವಂತಿಲ್ಲ ಮತ್ತು ಯಾವುದೇ ರೀತಿಯಲ್ಲಿ ಅಡ್ಡಿಪಡಿಸುವಂತಿಲ್ಲ. ಹೀಗಾಗಿ ಆರ್ಥಿಕವಾಗಿ ಸಬಲವಾಗಿರುವ ಮತ್ತು ಹೆಚ್ಚು ಉದ್ಯೋಗಾವಕಾಶವಿರುವ ದೇಶಗಳಾದ ಬ್ರಿಟನ್, ಜರ್ಮನಿ, ಫ್ರಾನ್ಸ್ ದೇಶಗಳಿಗೆ ಆರ್ಥಿಕವಾಗಿ ಅಷ್ಟು ಸಬಲವಲ್ಲದ ದೇಶಗಳಿಂದ ಉದ್ಯೋಗ ಅರಸಿ ಬರುವ ವಲಸಿಗರ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿದೆ. ಈ ವಲಸಿಗರು ಕಡಿಮೆ ಸಂಬಳಕ್ಕೆ ದುಡಿಯಲು ಸಿದ್ಧವಿರುತ್ತಾದ್ದರಿಂದ ಅವರು ಸ್ಥಳೀಯರ ಉದ್ಯೋಗಾವಕಾಶವನ್ನು ಕಡಿಮೆ ಮಾಡುತ್ತಿದ್ದಾರೆ. ಕೆಲವು ವರ್ಷಗಳಿಂದ ಬ್ರಿಟನ್‌ನಲ್ಲಿ ಈ ಸಮಸ್ಯೆ ಉಲ್ಬಣಿಸಿದೆ. ಆದ್ದರಿಂದ ಅವರು ಯುರೋಪ್ ಒಕ್ಕೂಟದಿಂದ ಹೊರಬರುವ (Britain Exit or Brexit) ನಿರ್ಧಾರ ತೆಗೆದು ಕೊಂಡಿದ್ದು. ಇಲ್ಲೂ ಬ್ರಿಟನ್‌ನ ಬಹು ದೊಡ್ದ ಎರಡು ರಾಜಕೀಯ ಪಕ್ಷಗಳು ವಿಭಿನ್ನ ನಿಲುವು ತಳೆದಿವೆ ಮತ್ತು ಎರಡು ಪಕ್ಷದೊಳಗೂ ಈ ವಿಷಯದ ಬಗ್ಗೆ ಆಂತರಿಕ ಭಿನ್ನತೆ ಬಹುವಾಗಿ ಕಾಣಿಸಿಕೊಂಡಿದೆ. ಅದರಲ್ಲೂ ಯುರೋಪ್ ಒಕ್ಕೂಟದಲ್ಲಿ ಮುಂದುವರಿಯಬೇಕು ಎನ್ನುವ ಲೇಬರ್ ಪಕ್ಷದಲ್ಲಿ ಈ ವಿಷಯವಾಗಿ ಆಂತರಿಕ ಕಚ್ಚಾಟ ಮಿತಿ ಮೀರಿ ಮೊನ್ನೆಯ ಚುನಾವಣೆಯಲ್ಲಿ ಈ ಪಕ್ಷ ಸೋತು ಸುಣ್ಣವಾಗಿದೆ. ಈಗ ಬ್ರೆಕ್ಸಿಟ್ ಖಚಿತವಾಗಿದೆ.

ನಮ್ಮಲ್ಲೂ ಅಕ್ರಮ ವಲಸಿಗರ ಸಮಸ್ಯೆ ಮತ್ತು ಆ ವಿಷಯವಾಗಿ ತಂದ ಪೌರತ್ವ ತಿದ್ದುಪಡಿ ಕಾಯ್ದೆ (ಹೊಸ ಪೌರತ್ವ ಕಾಯ್ದೆ ಎನ್ನೋಣ) ದೊಡ್ದ ಸಮಸ್ಯೆಯಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಸರಕಾರ ತಂದ ಹೊಸ ಪೌರತ್ವ ಕಾಯ್ದೆ ವಲಸೆಯ ಸಮಸ್ಯೆಯನ್ನು ಬಗೆಹರಿಸುವ ಬದಲು ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆಯುತ್ತಿದೆ. ಈ ಹೀನಾಯ ಕಾನೂನನ್ನು ದೇಶದ ಬಹುತ್ವದಲ್ಲಿ ಮತ್ತು ಸರ್ವ ಧರ್ಮ ಸಮಭಾವದಲ್ಲಿ ನಂಬಿಕೆಯುಳ್ಳವರೆಲ್ಲರೂ ವಿರೋಧಿಸುವುದು ಕರ್ತವ್ಯವಾಗಿದೆ. ಹೇಗೆ ಹಿಂದಿನ ಸರಕಾರಗಳು ಮತ ಬ್ಯಾಂಕ್‌ನ ಮೇಲೆ ಕಣ್ಣಿಟ್ಟು ವಲಸೆಯ ಸಮಸ್ಯೆಯ ಪರಿಹಾರಕ್ಕೆ ಯಾವುದೇ ದಿಟ್ಟ ನಿರ್ಧಾರ ತೆಗೆದು ಕೊಳ್ಳಲು ಹಿಂಜರಿದವೋ ಅದಕ್ಕೂ ಖಂಡನಾರ್ಹ ರೀತಿಯಲ್ಲಿ ಇಂದು ನಮ್ಮನ್ನಾಳುತ್ತಿರುವ ರಾಜಕೀಯ ಪಕ್ಷ ತಾನು ಪ್ರಾಂಭಿಸಿದ ಧರ್ಮದ ಆಧಾರದ ಧ್ರುವೀಕರಣವನ್ನು ಮುಂದುವರಿಸಲು ಈ ಸಮಸ್ಯೆಯನ್ನು ಬಂಡವಾಳ ಮಾಡಿಕೊಳ್ಳುತ್ತಿದೆ. ವಲಸೆಯ ಸಂಬಂಧವಾಗಿ ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳು ಎತ್ತಿರುವ ತಕರಾರು ಸಮಸ್ಯೆಯ ಮೂಲವಾಗಿದೆ ಎನ್ನುವುದನ್ನೂ ಮತ್ತು ಅದಕ್ಕೆ ಏನು ಪರಿಹಾರ ಎನ್ನುವುದನ್ನೂ ಹೊಸ ಪೌರತ್ವ ಕಾಯ್ದೆಯನ್ನು ವಿರೋಧಿಸುತ್ತಿರುವ ನಾವೆಲ್ಲರೂ ಗಂಭೀರವಾಗಿ ಯೋಚಿಸಿ ನಮ್ಮ ನಿಲುವನ್ನು ಸ್ಪಷ್ಟ ಪಡಿಸಿಕೊಳ್ಳಬೇಕಿದೆ. ಇದಕ್ಕೆ ಪೂರ್ವ ತಯಾರಿಯಾಗಿ ಈ ವಲಸೆಯ ಸಮಸ್ಯೆಯ ಆಳ ವಿಸ್ತಾರಗಳನ್ನು ಅರಿಯುವುದು ಅವಶ್ಯಕ.

ನಮಗೆ ಗಂಭೀರವಾದ ವಲಸೆಯ ಸಮಸ್ಯೆ ಇರುವುದು ಬಂಗ್ಲಾದೇಶದಿಂದ ಮತ್ತು ನಂತರದಲ್ಲಿ ಬರ್ಮಾ ದೇಶದಿಂದ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಕೆಲವೇ ಸಾವಿರದಷ್ಟು ಮಾತ್ರ ವಲಸಿಗರಿರುವುದರಿಂದ ಮತ್ತು ಸತತವಾಗಿ ವಲಸೆ ಈ ದೇಶಗಳಿಂದ ನಡೆಯುತ್ತಿಲ್ಲವಾದ್ದರಿಂದ ಅದನ್ನು ಪಕ್ಕಕ್ಕಿಟ್ಟು ಬಂಗ್ಲಾದೇಶದ ವಲಸಿಗರ ದತ್ತಾಂಶಗಳನ್ನು ಮತ್ತು ಇತಿಹಾಸವನ್ನೂ ತಿಳಿಯುವ ಪ್ರಯತ್ನ ಮಾಡೋಣ.

 ಇಂದಿನ ಬಂಗ್ಲಾದೇಶ 1971 ಕ್ಕಿಂತ ಮೊದಲು ಪಾಕಿಸ್ತಾನದ ಭಾಗವಾಗಿದ್ದು ಪೂರ್ವ ಪಾಕಿಸ್ತಾನವೆಂದು ಕರೆಯಲ್ಪಡುತ್ತಿದ್ದುದು ಗೊತ್ತೇ ಇದೆ. 1947ರಲ್ಲಿ ನಡೆದ ದೇಶ ವಿಭಜನೆಗಿಂತ ಮೊದಲು ಪೂರ್ವ ಬಂಗಾಳವೆನಿಸಿತ್ತು. ಅಲ್ಲಿನ ಬಹು ಸಂಖ್ಯೆಯ ಮುಸ್ಲಿಮರ ಭಾಷೆ ಬಂಗಾಳಿ ಮತ್ತು ಉಡುಗೆ ತೊಡುಗೆ ಸಂಸ್ಕೃತಿಯಲ್ಲಿಯೂ ಪಾಕಿಸ್ತಾನದ ಮುಸ್ಲಿಮರಿಗಿಂತ ಇಂದಿನ ಪಶ್ಚಿಮ ಬಂಗಾಳದ ಹಿಂದೂಗಳಿಗೆ ಇವರು ಹತ್ತಿರವಾಗಿದ್ದಾರೆ. ಪಾಕಿಸ್ತಾನ ಇವರ ಮೇಲೆ ದಬ್ಬಾಳಿಕೆ ನಡೆಸಿ ತನ್ನ ಭಾಷೆ (ಉರ್ದು) ಮತ್ತು ಇತರ ಮುಸ್ಲಿಮ್ ಸಂಸ್ಕೃತಿಯನ್ನು ಇವರ ಮೇಲೆ ಹೇರತೊಡಗಿತು. ಬಹುತೇಕ ಕಾಲ ಇವರನ್ನಾಳುತ್ತಿದ್ದುದು ಮಿಲಿಟರಿ ಸರಕಾರ ಅಂದಮೇಲೆ ಕೇಳಬೇಕೆ, ಹಿಂದೂ ಮುಸ್ಲಿಮ್ ಭೇದವಿಲ್ಲದೆ ವಿರೋಧಿಸಿದವರೆಲ್ಲರ ಮೇಲೆ ದಬ್ಬಾಳಿಕೆ ನಡೆಸಿತು, ಹೆಂಗಸರ ಮೇಲೆ ಅತ್ಯಾಚಾರವೆಸಗಲಾಯಿತು. ಜನ ಮತ್ತಷ್ಟು ಸಿಡಿದೆದ್ದರು, ಮುಜೀಬುರ್ರಹಮಾನರ ನೇತೃತ್ವದಲ್ಲಿ ದೊಡ್ಡ ಆಂದೋಲನವೇ ನಡೆಯಿತು. ಈ ಸಮಯದಲ್ಲಿ ಪಾಕಿಸ್ತಾನದ ಮಿಲಿಟರಿ ಮಾಡುತ್ತಿದ್ದ ಹಿಂಸಾಚಾರದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಸಾಗರೋಪಾದಿಯಲ್ಲಿ ಜನ ನಮ್ಮ ದೇಶದ ಗಡಿ ಭಾಗದ ಈಶಾನ್ಯ ರಾಜ್ಯಗಳು ಮತ್ತು ಪ.ಬಂಗಾಳಕ್ಕೆ ಗುಳೆ ಎದ್ದು ಬಂದರು. ಸುಮಾರು ಹನ್ನೆರಡು ದಶಲಕ್ಷ ಜನ ಈ ರೀತಿಯಲ್ಲಿ ಬಂದಿರಬಹುದೆಂದು ಅಂದಾಜು ಮಾಡಲಾಗಿದೆ. ಅವರಿಗೆಲ್ಲ ಗಡಿ ಪ್ರದೇಶಗಳಲ್ಲಿ ನಿರಾಶ್ರಿತ ಶಿಬಿರ ಏರ್ಪಡಿಸುವುದು ಅನಿವಾರ್ಯವಾಯಿತು. ಹೀಗೆ ಗುಳೆ ಎದ್ದು ಬರುವ ಪ್ರಕ್ರಿಯೆ ಮುಗಿಯದಂತೆ ಕಂಡಾಗ ಅಂದಿನ ಇಂದಿರಾಗಾಂಧಿ ಸರಕಾರ ಮಧ್ಯೆ ಪ್ರವೇಶಿಸಿ ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿ ಪಾಕಿಸ್ತಾನವನ್ನು ಸೋಲಿಸಿ ಬಂಗ್ಲಾದೇಶದ ಉದಯಕ್ಕೆ ಕಾರಣವಾಯಿತು. ತದನಂತರ ಬಹುತೇಕ ಮಂದಿ ನಿರಾಶ್ರಿತರು ಬಂಗ್ಲಾದೇಶಕ್ಕೆ ಹಿಂದಿರುಗಿದರೂ ಒಂದು ದಶಲಕ್ಷದಷ್ಟು ಜನ ನಿರಾಶ್ರಿತರ ಶಿಬಿರದಿಂದ ತಪ್ಪಿಸಿಕೊಂಡು ಅಥವಾ ಗಡಿದಾಟಿ ಬರುವಾಗ ನಿರಾಶ್ರಿತರ ಶಿಬಿರ ಸೇರದೆ ಈ ರಾಜ್ಯಗಳಲ್ಲಿ ನೆಲಸಿರಬಹುದೆಂದು ಅಂದಾಜಿಸಲಾಗಿದೆ. ಇದಕ್ಕೂ ಮೊದಲು ದೇಶ ವಿಭಜನೆಯ ಕಾಲದಲ್ಲಿ ಸುಮಾರು ಹತ್ತು ದಶಲಕ್ಷ ಜನ ಭಾರತಕ್ಕೆ ಬಂದಿದ್ದರು ಹಾಗೂ ತದನಂತರದಲ್ಲಿ ಅಲ್ಲಿನ ಹಿಂದೂಗಳ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆಯಿಂದ ಹಿಂದೂಗಳೂ ಮತ್ತು ಕಡು ಬಡತನವನ್ನು ತಾಳಲಾರದೆ ಕೆಲಸ ಹುಡುಕಿ ಹಿಂದೂ, ಮುಸ್ಲಿಮ್ ಭೇದವಿಲ್ಲದೆ ಎರಡೂ ಧರ್ಮದ ಜನ ಗಡಿದಾಟಿ ನುಸುಳಿ ಬರುವುದು ನಡದೇ ಇತ್ತು. ಹೀಗೆ 1964ರ ವರೆಗೆ ಬಂದವರೆಲ್ಲರೂ ಭಾರತದ ಪೌರತ್ವ ಪಡೆದಿದ್ದಾರೆ ಎನ್ನಲಾಗಿದೆ. ಬಾಂಗ್ಲಾದೇಶ ಉದಯದ ನಂತರ ಅಲ್ಲಿ ಬಡತನ ಮತ್ತಷ್ಟು ಹೆಚ್ಚಿತು ಹಾಗಾಗಿ ವರ್ಷವಿಡೀ ವಲಸೆ ಬರುವವರ ಸಂಖ್ಯೆ ಹೆಚ್ಚಿತೇ ಹೊರತು ಕಡಿಮೆಯಾಗಲಿಲ್ಲ. 2003ರ ನಂತರ ವಲಸೆ ಪ್ರಮಾಣ ತಗ್ಗಿದೆ ಎನ್ನಲಾಗುತ್ತದೆ. ಈ ಮೂರು ದಶಕಗಳಲ್ಲಿ ವರ್ಷಕ್ಕೆ ಎಂಬತ್ತು ಸಾವಿರದಿಂದ ಒಂದು ಲಕ್ಷದಷ್ಟು ಜನರಂತೆ ಸುಮಾರು ಮೂವತ್ತು ಲಕ್ಷ ಜನ ಬಂದಿರಬಹುದೆಂದು ಅಂದಾಜಿಸಲಾಗಿದೆ. ಇವೆಲ್ಲ ಗಡಿಯಲ್ಲಿ ಕದ್ದು ನುಸುಳಿ ಬರುವ ವಲಸೆಯಾದ್ದರಿಂದ ನಿಖರವಾದ ಅಂಕಿ ಸಂಖ್ಯೆಗಳಿಲ್ಲ.

ಈ ಮಧ್ಯೆ 1978ರಲ್ಲಿ ಅಸ್ಸಾಮಿನ ಅಸೆಂಬ್ಲಿ ಚುನಾವಣೆ ಸಮಯದಲ್ಲಿ ವಲಸಿಗರ ಸಮಸ್ಯೆ ಭುಗಿಲೆದ್ದಿತು. ಹಿಂಸಾಚಾರಕ್ಕಿಳಿದು ಸಾವಿರಾರು ಜನರ ಹತ್ಯೆಯಾಯಿತು. ಮುಂದೆ ಇದೊಂದು ಆಂದೋಲನದ ರೂಪ ತಳೆದು ಅಸ್ಸಾಮಿನ ವಿದ್ಯಾರ್ಥಿ ಪರಿಷತ್ ಇದನ್ನು ಮುನ್ನಡೆಸಿ ಎಂಬತ್ತರ ದಶಕದಲ್ಲಿ ಅಲ್ಲಿ ಅಸ್ಸಾಂ ಗಣ ಸಂಗ್ರಾಮ ಪರಿಷತ್ತು ಅಧಿಕಾರಕ್ಕೂ ಬಂದಿತು. 1984ರಲ್ಲಿ ಅಸ್ಸಾಂ ಗಣ ಸಂಗ್ರಾಮ ಪರಿಷತ್ತಿನೊಂದಿಗೆ ಅಂದಿನ ರಾಜೀವ್ ಗಾಂಧಿ ಸರಕಾರ ಮಾಡಿಕೊಂಡ ಒಪ್ಪಂದವೇ ‘ಅಸ್ಸಾಂ ಒಪ್ಪಂದ’ ಮತ್ತು ಇದರ ಪ್ರಕಾರ 24 ಡಿಸೆಂಬರ್ 1971ರ ನಂತರ ಬಂದ ಎಲ್ಲ ವಲಸಿಗರನ್ನೂ ಗುರುತಿಸಿ ಅಸ್ಸಾಮಿನಿಂದ ಹೊರ ಹಾಕುವ ಸಲುವಾಗಿ NRC (National Registry of citizen) ತಯಾರಿಸಬೇಕೆಂದು ಕರಾರು ಮಾಡಿಕೊಳ್ಳಲಾಯಿತು. ಆದರೆ ಮುಂದೆ ಕೇಂದ್ರದಲ್ಲಿ ಆಡಳಿತ ಹಿಡಿದ ಯಾವ ಸರಕಾರವೂ ಮುತುವರ್ಜಿ ವಹಿಸಲಿಲ್ಲವಾಗಿ ಇದು ನನೆಗುದಿಗೆ ಬಿದ್ದು ಅಸ್ಸಾಮಿನ ಚುನಾವಣೆ ವಿಷಯವಾಗಿ ಮಾತ್ರ ಉಳಿಯಿತು. ಇದರಿಂದ ಬೇಸತ್ತ ಅಸ್ಸಾಮಿನ ಹೋರಾಟಗಾರರು ಸುಪ್ರೀಂ ಕೋರ್ಟಿನ ಮೆಟ್ಟಲೇರಿ ಅಂತೂ ಕೊನೆಗೆ NRC ಕಾರ್ಯ ಕಳೆದ ವರ್ಷ ಮುಗಿಯಿತು. ಹತ್ತೊಂಬತ್ತು ಲಕ್ಷ ಜನರನ್ನು ಭಾರತದ ಪ್ರಜೆಗಳಲ್ಲವೆಂದು ಮತ್ತು ಅವರು ಅಕ್ರಮ ವಲಸಿಗರೆಂದು ಘ್ಕೆಇಯಿಂದ ಹೊರಗಿಟ್ಟಿದ್ದು ನಮಗೆ ಗೊತ್ತೇ ಇದೆ.

ಭಾರತದಲ್ಲಿ ನೆಲಸಿರುವ ಅಕ್ರಮ ವಲಸಿಗರ ಸಂಖ್ಯೆಯನ್ನು 20 ಲಕ್ಷದಿಂದ ಹಿಡಿದು 20 ದಶ ಲಕ್ಷದವರೆಗೂ ಅಂದಾಜಿಸಲಾಗುತ್ತಿದೆ. ಇವರಲ್ಲಿ ಹಿಂದೂಗಳೆಷ್ಟು, ಮುಸ್ಲಿಮರೆಷ್ಟು ಎನ್ನುವುದು ಅವರವರ ಊಹೆಗೆ ಬಿಟ್ಟಿದ್ದಾದರೂ ಅನುಕ್ರಮಮವಾಗಿ 60/40ರ ಅನುಪಾತದಲ್ಲಿ ಇರಬಹುದೆಂದು ಅಂದಾಜಿಸಬಹುದು. ಅಸ್ಸಾಮಿನ NRCಯಲ್ಲಿ ಬಿಟ್ಟು ಹೋದವರಲ್ಲಿ ಹಿಂದೂ, ಮುಸ್ಲಿಮ್ ಅನುಪಾತವೂ ಇದಕ್ಕೆ ಹೊಂದುತ್ತದೆ. ಇಷ್ಟು ವರ್ಷದವರೆಗೆ ಅಸ್ಸಾಂ ಮತ್ತು ಪ.ಬಂಗಾಳದಲ್ಲಿ ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದ ಮುಸ್ಲಿಮರೇ ತುಂಬಿದ್ದಾರೆ ಎಂದು ಬೊಂಬಡ ಹೊಡೆಯುತ್ತಿದ್ದ ಸಂಘಿಗಳಿಗೆ ಅಸ್ಸಾಮಿನ NRCಯಿಂದಾಗಿ ವಾಸ್ತವದ ಅರಿವಾಗಿದೆ. ತಮ್ಮದೇ ನಾಡಿನಲ್ಲಿ ವಲಸಿಗರಿಂದಾಗಿ ತಮ್ಮ ಅಸ್ಮಿತೆಯನ್ನೇ ಕಳೆದುಕೊಂಡ ಅಸ್ಸಾಂ ಮತ್ತು ಈಶಾನ್ಯ ರಾಜ್ಯದ ಜನ ಶೇ.60ರಷ್ಟಿರುವ ಹಿಂದೂಗಳನ್ನು ಉಳಿಸಿಕೊಳ್ಳಲು ಒಪ್ಪುತ್ತಿಲ್ಲ. ಏಕೆಂದರೆ ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಭಾಷೆ ಮತ್ತು ಸಂಸ್ಕೃತಿ ಅಲ್ಲಿಯ ಪ್ರತಿಯೊಂದು ರಾಜ್ಯಕ್ಕೂ ವಿಶಿಷ್ಟವಾಗಿದೆ ಮತ್ತು ಬಂಗಾಳಿ ಮಾತನಾಡುವ ಮತ್ತು ಬೇರೆಯದೇ ಸಂಸ್ಕೃತಿಯ (ಅವರು ಹಿಂದೂವಾಗಿರಲೀ ಅಥವಾ ಮುಸ್ಲಿಮ್ ಆಗಿರಲಿ) ವಲಸಿಗರಿಂದಾಗಿ ಅವರು ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ ಮಾತ್ರವಲ್ಲ ಉದ್ಯೋಗ ವ್ಯಾಪಾರದಲ್ಲಿಯೂ ವಲಸಿಗರು ಮೇಲುಗೈ ಸಾಧಿಸಿದ್ದಾರೆ. ಹಾಗಾಗಿ ವಲಸಿಗರಿಗೆ ಅಡಿಯಾಳಾಗಿ ಬದುಕುವ ಅವಮಾನ ವನ್ನು ಅವರು ಅನುಭವಿಸುತ್ತಿದ್ದಾರೆ. ಹಾಗಾಗಿ ವಲಸಿಗರ ವಿಚಾರವಾಗಿ ಹಿಂದೂ ಮುಸ್ಲಿಮ್ ವಿಭಜನೆ ಮಾಡಲು ಅವರು ಸಿದ್ಧರಿಲ್ಲ. ವಲಸಿಗರ ವಿರುದ್ಧ (ಅವರೆಲ್ಲರೂ ಮುಸ್ಲಿಮರೆಂದು ತಿಳಿದು) ವಿಷ ಕಾರುತ್ತ ಕಳೆದೆರಡು ಚುನಾವಣೆಗಳನ್ನು ಅಭೂತಪೂರ್ವವಾಗಿ ಗೆದ್ದ ಸಂಘಿಗಳು ಬೆಸ್ತು ಬಿದ್ದಿದ್ದಾರೆ. ಸಣ್ಣ ಮನಸ್ಸಿನ ಹಿಂದುತ್ವವಾದ ಯಾವಾಗಲೂ ಎಲ್ಲ ಕಾಲದಲ್ಲೂ ಗೆಲ್ಲುತ್ತದೆಂದು ಭಾವಿಸಿದ್ದವರಿಗೆ ವಾಸ್ತವ ಅರಿವಾಗುವ ಕಾಲ ಸನ್ನಿಹಿತವಾಗಿದೆ.

ಈಗ ಪೌರತ್ವದ ಈ ಹೊಸ ಕಾಯ್ದೆಯನ್ನು ವಿರೋಧಿಸುತ್ತಿರುವವರೂ ಕೇಳಿಕೊಳ್ಳಬೇಕಾದ ಪ್ರಶ್ನೆ ಈ ಸಮಸ್ಯೆಯನ್ನು ಹೇಗೆ ಬಗೆಹರಿಸುವುದು ಎನ್ನುವುದಾಗಿದೆ. ಅಕ್ರಮ ವಲಸಿಗರೆಲ್ಲರನ್ನೂ ಹೊರಗಟ್ಟುವುದೇ? ಬಡತನದ ಕ್ರೂರತೆಯಿಂದಲೋ ಅಥವಾ ಧಾರ್ಮಿಕ ಕಾರಣಕ್ಕೆ ಹಿಂಸೆಗೊಳಗಾಗಿ ಬದುಕು ಅರಸಿ ಬಂದವರನ್ನು ಹೀಗೆ ಹೊರಗಟ್ಟುವುದು ಅಮಾನವೀಯವಲ್ಲವೇ? ಹೊರಗಟ್ಟುವುದಾದರೂ ಹೇಗೆ? ದಶಕಗಳ ಕಾಲ ಇಲ್ಲಿ ನೆಲೆಸಿರುವ ಅವರನ್ನು ಬಂಗ್ಲಾದೇಶ ಸ್ವೀಕರಿಸುವುದೇ? ಬಹುಶಃ ತಾವು ಅಲ್ಲಿಯೇ ಹುಟ್ಟಿ ಬೆಳೆದಿದ್ದೇವೆಂದು ಸಿದ್ಧ ಮಾಡಲು ಅವರಲ್ಲಿ ಬಹುಜನರಿಂದ ಸಾಧ್ಯವಾಗದಿರುವ ಸಾಧ್ಯತೆಗಳೇ ಹೆಚ್ಚು. ಹಾಗಾಗಿ ಭಾರತದಲ್ಲಿಯೇ ಹುಟ್ಟಿ ಬೆಳೆದ ಮುಸ್ಲಿಮರನ್ನು ಹೊರಗಟ್ಟಿ ತಮ್ಮ ದೇಶಕ್ಕೆ ಕಳುಹಿಸುತ್ತಿದ್ದಾರೆ ಎಂದು ಬಂಗ್ಲಾದೇಶದವರು ವಾದ ಹೂಡಿದರೆ ಇದಕ್ಕೆಲ್ಲ ಕೊನೆ ಎಲ್ಲಿ? ಇನ್ನು ಟಿಬೆಟಿನ ನಿರಾಶ್ರಿತರನ್ನು ಹಲವು ರಾಜ್ಯಗಳಿಗೆ ಹಂಚಿದಂತೆ ಇವರನ್ನೂ ಹಂಚಬೇಕೇ? ಅದು ಎಲ್ಲರಿಗೂ ಸಮ್ಮತವೇ? ಒಮ್ಮೆ ಸಮ್ಮತವಾದರೆ ಹೀಗೆ ಬರುತ್ತಿರುವ ಮತ್ತು ಮುಂದೆಯೂ ಬರುವ ಅಕ್ರಮ ವಲಸಿಗರನ್ನು ನಮ್ಮಲ್ಲಿ ನೆಲೆಗೊಳಿಸುವುದೇ ಒಂದು ನಿರಂತರ ಕಾರ್ಯವಾಗುವ ಅಪಾಯವೂ ಇದೆಯಲ್ಲವೇ?

ಇನ್ನು ಅಕ್ರಮ ವಲಸಿಗರನ್ನು ಯಾವ ಮುಲಾಜಿಲ್ಲದೆ ಹೊರಗಟ್ಟ ಬೇಕೆನ್ನುವವರು ಮುಂಬರುವ ಒಂದು ಅಪಾಯವನ್ನು ಪರಿಭಾವಿಸಬೇಕು: ಅದೆಂದರೆ ಒಮ್ಮುಖವಾದ ದೇಶದೊಳಗಿನ ವಲಸೆ ಯನ್ನೂ ಏಕೆ ವಿರೋಧಿಸಬಾರದು ಎನ್ನುವುದನ್ನು. ಇಂದು ಉತ್ತರದ ರಾಜ್ಯಗಳಿಂದ ದಕ್ಷಿಣಕ್ಕೆ ಒಮ್ಮುಖದ ವಲಸೆ ನಡೆಯುತ್ತಿದೆಯಲ್ಲವೆ. ಇಂದು ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳು ಅನುಭವಿಸುತ್ತಿರುವ ಅಸ್ಮಿತೆಯ ಪ್ರಶ್ನೆಯನ್ನು ದಕ್ಷಿಣದವರು ಎದುರಿಸುತ್ತಿದ್ದಾರೆ ಅಲ್ಲದೆ ಉದ್ಯೋಗ ವ್ಯಾಪಾರಗಳಲ್ಲಿ ಉತ್ತರದವರ ಏಕಸ್ವಾಮ್ಯತೆ ಸ್ಥಾಪಿತವಾಗಿದೆ. ಅದನ್ನು ವಿರೋಧಿಸಿದರೆ ಏನು ತಪ್ಪು? ಕತ್ತಿ ಪರದೇಶಿಯಾದರೆ ಮಾತ್ರ ನೋವೇ?/ನಮ್ಮವರೇ ಹದ ಹಾಕಿ ತಿವಿದರದು ಹೂವೇ? ಎಂಬ ಕವಿ ವಾಣಿಯೇ ಇಲ್ಲವೇ.

ಅಕ್ರಮ ವಲಸೆಯ ಸಮಸ್ಯೆಯನ್ನು ಹೀಗೆ ಇಡಿಯಾಗಿ ನೋಡಿ ಪರಿಹಾರ ಕಂಡುಕೊಳ್ಳಬೇಕಲ್ಲದೆ ಹಿಂದೂ ಮುಸ್ಲಿಮ್ ಎಂದು ವಿಂಗಡಿಸುವುದಾಗಲೀ ಪರಿಹಾರವನ್ನೇ ಸೂಚಿಸದೆ ಕಾಯ್ದೆಯನ್ನು ಮಾತ್ರ ವಿರೋಧಿಸಿ ಸಮಸ್ಯೆಯ ಪರಿಹಾರದ ಬಗ್ಗೆ ಮೌನವಾಗುವುದಾಗಲೀ ಸರಿಯಾದ ಮಾರ್ಗವಲ್ಲ.

Writer - ಶ್ರೀಪಾದ ಹೆಗಡೆ

contributor

Editor - ಶ್ರೀಪಾದ ಹೆಗಡೆ

contributor

Similar News

ಜಗದಗಲ
ಜಗ ದಗಲ