‘‘ನಿಂಙ ಸೈಲೆಂಟ್ ಆವಂಡ, ನಿಂಙ ವೈಲೆಂಟ್ ಆವಂಡ’’

Update: 2019-12-23 12:06 GMT

ಮಂಗಳೂರು, ಡಿ.23: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ಪೌರತ್ವ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ವಿರುದ್ಧದ ಹೋರಾಟಕ್ಕೆ ಸಂಬಂಧಿಸಿ ‘‘ನಿಂಙ ಸೈಲೆಂಟ್ ಆವಂಡ, ನಿಂಙ ವೈಲೆಂಟ್ ಆವಂಡ, ನಂಙ ಹೋರಾಟ ಆಕೊನು....’’ ಎಂಬ ಬ್ಯಾರಿ ರಾಪ್ ಹಾಡೊಂದು ದೇಶ ರಕ್ಷಣೆಗಾಗಿ ಶಾಂತಿ, ಸಂಯಮದಿಂದ ಹೋರಾಡೋಣ ಎಂಬ ಸಂದೇಶದೊಂದಿಗೆ ಗಮನಸೆಳೆಯುತ್ತಿದೆ.

ನಮ್ಮಿಂದ ತಪ್ಪುಗಳು ಸಂಭವಿಸಲೆಂದು ಕಾಯುತ್ತಿದ್ದಾರೆ, ಪ್ರತಿಭಟನೆಯ ಸಂದರ್ಭ ಎಚ್ಚರ ವಹಿಸಿ ಎಂದೆನ್ನುತ್ತಲೇ ಆರಂಭವಾಗುವ ಈ ಹಾಡು ಪ್ರತಿಭಟನೆಯ ಸಂದರ್ಭ ಲಾಠಿ ಪ್ರಹಾರವೇ ಆಗಲಿ, ಇಂಕ್ವಿಲಾಬ್ ಎಂದು ದಿಟ್ಟವಾಗಿ ಸಮಾಧಾನದಿಂದಲೇ ಅದನ್ನು ಎದುರಿಸಬೇಕು. ಪ್ರತಿಭಟನೆಯನ್ನು ಮುಂದುವರಿಸೋಣ. ಆದರೆ, ಒಗ್ಗಟ್ಟಿನ ಪ್ರತಿಭಟನೆಯ ಮೂಲಕ ಶಕ್ತಿ ಪ್ರದರ್ಶನವಾಗಬೇಕೇ ಹೊರತು ಗಲಾಟೆ ಅಲ್ಲ. ಪ್ರತಿಭಟನೆ ನ್ಯಾಯಯುತವಾಗಿರಲಿ, ಸಂಯಮ ಪಾಲಿಸಿ ಎಂಬ ಸಂದೇಶ ಹಾಡಿನಲ್ಲಿದೆ.

ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಎಲ್ಲ ಸಂದೇಶಗಳನ್ನು ನಂಬಬೇಡಿ. ಅವುಗಳನ್ನು ಇನ್ನೊಬ್ಬರಿಗೆ ಕಳುಹಿಸುವ ಮೊದಲು ಅದರ ಸತ್ಯಾಸತ್ಯತೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಎಂದು ಮನವಿ ಮಾಡುವ ಈ ಹಾಡು, ಹೋರಾಟದ ಹಾದಿ ತಪ್ಪಿದರೆ ಇತ್ತೀಚೆಗೆ ಗೋಲಿಬಾರ್‌ನಿಂದ ಹತ್ಯೆಯಾದ ಇಬ್ಬರು ಯುವಕರ ಬಲಿದಾನ ವ್ಯರ್ಥವಾದೀತು ಎಂದು ಎಚ್ಚರಿಸುತ್ತದೆ.

ಎನ್‌ಆರ್‌ಸಿ, ಸಿಎಎ ವಿರುದ್ಧದ ಹೋರಾಟ ಯಾವುದೇ ಧರ್ಮೀಯರ ವಿರುದ್ಧವಾಗಿರದೆ, ಸರಕಾರದ ವಿರುದ್ಧವಾಗಿರಬೇಕು. ಪ್ರತಿಭಟನೆ, ಹೋರಾಟದ ಸಂದರ್ಭ ಯಾವುದೇ ಧರ್ಮಿಯರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಮಸೀದಿ, ಮದ್ರಸಗಳ ಹೊಡೆದುರುಳಿಸಲಾಗುತ್ತಿದ್ದರೆ, ಒಟ್ಟಾಗಿ ದೇವಸ್ಥಾನಗಳನ್ನು ಕಾಯೋಣ. ನಮ್ಮ ನಡೆ ಉಳಿದವರಿಗೆ ಮಾದರಿಯಾಗಿರಬೇಕು ಎಂದು ಸೌಹಾರ್ದದ ಸಂದೇಶವನ್ನು ಸಾರುತ್ತದೆ.

ದುಷ್ಟಶಕ್ತಿಗಳು ನಾವು ಆಕ್ರಣಮಕಾರಿಯಾಗುವುದನ್ನು ಕಾಯುತ್ತಿವೆ, ಆದರೆ ನಾವು ಸಂಯಮ ಕಾಪಾಡಬೇಕು, ದ್ವೇಷವನ್ನು ಮರೆತು ಕೋಮು ಸೌಹಾರ್ದ ಮೆರಯಬೇಕು ಎಂಬ ಎಚ್ಚರಿಕೆಯೊಂದಿಗೆ ಈ ವಿಶಿಷ್ಟ ಹಾಡು ಕೊನೆಗೊಳ್ಳುತ್ತದೆ.

ಇದು ‘ಎಂಝಿ’ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತಿರುವ ಉಳ್ಳಾಲದ ಮುಹಮ್ಮದ್ ಮುಸ್ತಫಾ ಹಾಡಿರುವ ಹಾಡು. ಎಂಝಿ ಯೂಟ್ಯೂಬ್ ಚಾನೆಲ್ ಹೊಂದಿರುವ ಮುಹಮ್ಮದ್ ಮುಸ್ತಫಾ ಹಲವು ಬ್ಯಾರಿ ಹಿಪ್ ಹಾಪ್ ಹಾಡುಗಳನ್ನು ಹಾಡಿದ್ದಾರೆ.

ಮಂಗಳೂರಿನಲ್ಲಿ ಇತ್ತೀಚೆಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಗೋಲಿಬಾರ್‌ನಲ್ಲಿ ಎರಡು ಜೀವಗಳು ಬಲಿಯಾದ ಹಿನ್ನೆಲೆಯಲ್ಲಿ ಈ ರಾಪ್ ಹಾಡನ್ನು ಡಿ.19ರಂದು ಅವರು ತಮ್ಮ YemZii ಯೂಟ್ಯೂಬ್ ಚಾನೆಲ್ https://www.youtube.com/watch?v=RD4phyWEQGQ&feature=youtu.be ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಮುಹಮ್ಮದ್ ಮುಸ್ತಫಾ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News