ಅಫ್ಘಾನ್ ಅಧ್ಯಕ್ಷೀಯ ಚುನಾವಣೆ: ಹಾಲಿ ಅಧ್ಯಕ್ಷರಿಗೆ ಸರಳ ಬಹುಮತ

Update: 2019-12-23 16:58 GMT

ಕಾಬೂಲ್ (ಅಫ್ಘಾನಿಸ್ತಾನ), ಡಿ. 23: ಅಫ್ಘಾನಿಸ್ತಾನದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಫಲಿತಾಂಶದಲ್ಲಿ, ಹಾಲಿ ಅಧ್ಯಕ್ಷ ಅಶ್ರಫ್ ಘನಿ ಜಯ ಗಳಿಸಿದ್ದಾರೆ. ರವಿವಾರ ನಡೆದ ಮತ ಎಣಕೆಯಲ್ಲಿ ಅವರು ತನ್ನ ಎದುರಾಳಿ ವಿರುದ್ಧ ಕಿರು ಅಂತರದ ಜಯ ಗಳಿಸಿದ್ದಾರೆ.

ಸೆಪ್ಟಂಬರ್ 28ರಂದು ಚುನಾವಣೆಯಲ್ಲಿ ವಂಚನೆ ಮತ್ತು ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ವಾರಗಳ ಕಾಲದ ಆರೋಪ, ಪ್ರತ್ಯಾರೋಪಗಳ ಬಳಿಕ, ಕೊನೆಗೂ ರವಿವಾರ ಚುನಾವಣಾ ಫಲಿತಾಂಶವನ್ನು ಘೋಷಿಸಲಾಗಿದೆ.

ಘನಿ 50.64 ಶೇಕಡ ಮತಗಳನ್ನು ಗೆದ್ದಿದ್ದಾರೆ ಎಂದು ಅಫ್ಘಾನಿಸ್ತಾನದ ಸ್ವತಂತ್ರ ಚುನಾವಣಾ ಆಯೋಗ ತಿಳಿಸಿದೆ. ಅವರು ತನ್ನ ಪ್ರಧಾನ ಪ್ರತಿಸ್ಪರ್ಧಿ ಹಾಗೂ ಅಫ್ಘಾನಿಸ್ತಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಬ್ದುಲ್ಲಾ ಅಬ್ದುಲ್ಲಾರನ್ನು ಸೋಲಿಸಿದ್ದಾರೆ. ಅಬ್ದುಲ್ಲಾ ಅಬ್ದುಲ್ಲಾ 39.52 ಶೇಕಡ ಮತಗಳನ್ನು ಗಳಿಸಿದ್ದಾರೆ.

ಅಂತಿಮ ಫಲಿತಾಂಶವನ್ನು ಇನ್ನೂ ಕೆಲವು ವಾರಗಳ ಬಳಿಕ ಘೋಷಿಸಲಾಗುವುದು. ಆದರೆ ಇನ್ನು ಮೂರು ದಿನಗಳಲ್ಲಿ ಅಭ್ಯರ್ಥಿಗಳು ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಬಹುದಾಗಿದೆ.

ಈ ನಡುವೆ, ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸುವುದಾಗಿ ಅಬ್ದುಲ್ಲಾರ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News