ಆಸ್ಟ್ರೇಲಿಯ ಉರಿಯುತ್ತಿರುವಾಗ ಹವಾಯಿಯಲ್ಲಿ ವಿಹರಿಸುತ್ತಿದ್ದ ಪ್ರಧಾನಿ!

Update: 2019-12-23 17:30 GMT

ಸಿಡ್ನಿ, ಡಿ. 23: ಪ್ರಾಚೀನ ಕಾಲದಲ್ಲಿ ರೋಮ್ ನಗರ ಹೊತ್ತಿ ಉರಿಯುತ್ತಿದ್ದಾಗ ಅದರ ದೊರೆ ನೀರೊ ಪಿಟೀಲು ನುಡಿಸುತ್ತಿದ್ದನಂತೆ! ಅದೇ ರೀತಿ, ಆಸ್ಟ್ರೇಲಿಯವನ್ನು ಕಾಡ್ಗಿಚ್ಚುಗಳು ಆವರಿಸಿರುವಾಗ ಅದರ ಪ್ರಧಾನಿ ಸ್ಕಾಟ್ ಮೊರಿಸನ್ ಅಮೆರಿಕದ ಹವಾಯಿ ದ್ವೀಪದಲ್ಲಿ ಹಾಯಾಗಿ ಕುಟುಂಬದೊಂದಿಗೆ ವಿಹರಿಸುತ್ತಿದ್ದರು!

ಈ ಬಗ್ಗೆ ಟೀಕೆಗಳು ಹೆಚ್ಚಾದಂತೆ, ತನ್ನ ಪ್ರವಾಸವನ್ನು ಬೇಗನೇ ಮುಕ್ತಾಯಗೊಳಿಸಿ ಸ್ಕಾಟ್ ಮೊರಿಸನ್ ಸ್ವದೇಶಕ್ಕೆ ವಾಪಸಾಗಿದ್ದಾರೆ ಹಾಗೂ ಕ್ಷಮೆಯನ್ನೂ ಕೋರಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಮೂರು ರಾಜ್ಯಗಳಲ್ಲಿ ಕಾಡ್ಗಿಚ್ಚುಗಳು ಅನಿಯಂತ್ರಿತವಾಗಿ ಉರಿಯುತ್ತಿದ್ದು, ಶನಿವಾರ ಓರ್ವ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ.

ಸೆಪ್ಟಂಬರ್‌ನಿಂದ ಅವ್ಯಾಹತವಾಗಿ ಉರಿಯುತ್ತಿರುವ ಕಾಡ್ಗಿಚ್ಚಿನಲ್ಲಿ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. 700ಕ್ಕೂ ಅಧಿಕ ಮನೆಗಳು ಸುಟ್ಟು ಹೋಗಿವೆ ಹಾಗೂ ಲಕ್ಷಾಂತರ ಹೆಕ್ಟೇರ್ ಜಮೀನು ಬರಡಾಗಿದೆ.

‘‘ಜನರು ಇಲ್ಲಿ ಅತ್ಯಂತ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾಗ, ನಾನು ಕುಟುಂಬದೊಂದಿಗೆ ಮಜಾ ಅನುಭವಿಸುವ ಬಗ್ಗೆ ತಿಳಿದರೆ ಜನರು ನೊಂದುಕೊಳ್ಳಬಹುದು ಎನ್ನುವುದು ನನಗೆ ಅರಿವಾಗಿದೆ’’ ಎಂದು ಆಸ್ಟ್ರೇಲಿಯ ಪ್ರಧಾನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News