ಡಿಜಿಟಲ್ ಕ್ಯಾಷ್‌ನ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು ಹೇಗೆ?

Update: 2019-12-23 18:40 GMT

ನೀವು ಗೂಗಲ್ ಪೇ, ಫೋನ್‌ಪೆ, ಪೇಟಿಎಮ್ ಇತ್ಯಾದಿ ಡಿಜಿಟಲ್ ಪೇಮೆಂಟ್ ಆ್ಯಪ್‌ಗಳ ನಿಯಮಿತ ಬಳಕೆ ದಾರರಾಗಿದ್ದಲ್ಲಿ ನಿಮ್ಮ ಡಿಜಿಟಲ್ ಹಣದ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು ಹೇಗೆ ಎನ್ನುವುದು ಇಲ್ಲಿದೆ.

 ಡಿಜಿಟಲ್ ಹಣಕಾಸು ವಹಿವಾಟು ಗಳು ಹೆಚ್ಚುತ್ತಿರುವಂತೆಯೇ ವಂಚನೆ ಪ್ರಕರಣಗಳು ಮತ್ತು ಸೈಬರ್ ಅಪರಾಧ ಗಳೂ ಹೆಚ್ಚುತ್ತಿವೆ. ಈಗಾಗಲೇ ಸಾಮಾನ್ಯ ವಾಗಿರುವ ಸೈಬರ್‌ಸ್ಟಾಕಿಂಗ್, ಗುರುತು ಕಳ್ಳತನ, ಫಿಷಿಂಗ್, ಇಮೇಲ್ ವಂಚನೆ, ಸೈಬರ್ ಹಫ್ತಾ ಮತ್ತು ಮಾಲ್‌ವೇರ್ ದಾಳಿಗಳಂತಹ ವಂಚನೆಗಳು ಮಾತ್ರವಲ್ಲ, ವಂಚಕರು ತಂತ್ರಜ್ಞಾನದ ಬಗ್ಗೆ ತಿಳಿದಿರುವ ಗ್ರಾಹಕರಿಗೂ ಕರೆಗಳನ್ನು ಮಾಡಿ ಅವರನ್ನು ಮೂರ್ಖರನ್ನಾಗಿಸುತ್ತಿರುವ ಘಟನೆಗಳೂ ಹೆಚ್ಚುತ್ತಿವೆ.

ಹೆಚ್ಚಿನ ಬ್ಯಾಂಕ್‌ಗಳು ಮತ್ತು ವಿಮಾ ಕಂಪೆನಿಗಳು ಇಂತಹ ವಂಚನೆಗಳಿಂದ ತಮ್ಮ ಗ್ರಾಹಕರನ್ನು ರಕ್ಷಿಸಲು ಆಗಾಗ್ಗೆ ತಮ್ಮ ವೆಬ್‌ಸೈಟ್‌ಗಳಲ್ಲಿ ಅಥವಾ ಇ-ಮೇಲ್, ಎಸ್‌ಎಂಎಸ್ ಮತ್ತು ಟ್ವೀಟ್‌ಗಳ ಮೂಲಕ ಎಚ್ಚರಿಕೆಗಳನ್ನು ನೀಡುತ್ತಿವೆ. ಡಿಜಿಟಲ್ ವ್ಯಾಲೆಟ್ ಸೇವಾಸಂಸ್ಥೆಗಳೂ ತಮ್ಮ ಗ್ರಾಹಕರಿಗೆ ಎಚ್ಚರಿಕೆ ಸಂದೇಶಗಳು ಮತ್ತು ಮೇಲ್‌ಗಳನ್ನು ಕಳುಹಿಸುತ್ತಿರುತ್ತವೆ.

ಇಂತಹ ವಂಚಕ ಚಟುವಟಿಕೆಗಳ ಬಲಿಪಶುವಾಗದಿರಲು ಮತ್ತು ಸುರಕ್ಷಿತ ವಾಗಿರಲು ನಾವು ಅನುಸರಿಸಬೇಕಿರುವ ಕೆಲವು ಮಾರ್ಗಸೂಚಿಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳಿವೆ. ತಂತ್ರಜ್ಞಾನದ ಅರಿವು ಇರುವವರು ಸೇರಿದಂತೆ ಡಿಜಿಟಲ್ ವಹಿವಾಟುಗಳನ್ನು ನಡೆಸುವ ಎಲ್ಲರೂ ತುಂಬ ಎಚ್ಚರಿಕೆ ವಹಿಸುವುದು ಅಗತ್ಯ ಎನ್ನುತ್ತಾರೆ ಐಟಿ ತಜ್ಞರು.

♦ ಯುಪಿಐ ಪಿನ್

ನಿಮ್ಮ ಯುಪಿಐ ಪಿನ್ ಅನ್ನು ಎಂದೂ ಯಾರೊಂದಿಗೂ ಹಂಚಿಕೊಳ್ಳಬೇಡಿ ಮತ್ತು ಅದನ್ನು ಗುಟ್ಟಾಗಿಯೇ ಇಟ್ಟುಕೊಳ್ಳಿ. ಯುಪಿಐ ಪಿನ್ ಎಂದರೆ ನಿಮ್ಮ ಎಟಿಎಂ ಪಿನ್ ಇದ್ದಂತೆ, ಹೀಗಾಗಿ ಅದನ್ನೆಂದಿಗೂ ಯಾರೊಂದಿಗೂ ಹಂಚಿಕೊಳ್ಳಬಾರದು.

♦ಆ್ಯಪ್ ಡೌನ್‌ಲೋಡಿಂಗ್

ನೀವು ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವಾಗ ಅವು ವಿಶ್ವಸನೀಯವಾಗಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಯಾರೋ ಅಪರಿಚಿತರು ಸೂಚಿಸಿದ ಯಾವುದಾದರೂ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬೇಡಿ. ಪ್ಲೇಸ್ಟೋರ್ ಅಥವಾ ಆ್ಯಪಲ್ ಸ್ಟೋರ್‌ನಲ್ಲಿಯೂ ಹಲವಾರು ಹಾನಿಕಾರಕ ಆ್ಯಪ್‌ಗಳಿವೆ ಮತ್ತು ಇವುಗಳನ್ನು ಡೌನ್‌ಲೋಡ್ ಮಾಡಿಕೊಂಡರೆ ಅವು ನಿಮ್ಮ ಖಾಸಗಿ ಮಾಹಿತಿಗಳು ಮತ್ತು ನೀವು ಫೋನ್‌ನಲ್ಲಿ ಟೈಪಿಸುವ ಪಾವತಿ ವಿವರಗಳನ್ನು ಕದಿಯುತ್ತವೆ. ಹೀಗಾಗಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಮುನ್ನ ಅದರ ಬಗ್ಗ ಕೂಲಂಕಶವಾಗಿ ತಿಳಿದುಕೊಳ್ಳಿ.

♦ ವಿಶ್ವಸನೀಯ ಆ್ಯಪ್‌ಗಳು

ನಿಮ್ಮ ಯುಪಿಐ ಪಿನ್ ಅನ್ನು ಯಾವುದೇ ಆ್ಯಪ್‌ನಲ್ಲಿ ನಮೂದಿಸಬೇಡಿ. ಅದು ನಿಮ್ಮ ಎಟಿಎಂ ಕಾರ್ಡ್‌ನ ಪಿನ್ ಇದ್ದಂತೆ. ಹೀಗಾಗಿ ನಿಮ್ಮ ಭೀಮ್ ಆ್ಯಪ್‌ನಲ್ಲಿ ಅಥವಾ ವಿಶ್ವಸನೀಯ ಆ್ಯಪ್‌ಗಳ ಮೂಲಕ ಹಣ ಪಾವತಿಸುವಾಗ ಮಾತ್ರ ನಿಮ್ಮ ಯುಪಿಐ ಪಿನ್ ಅನ್ನು ನಮೂದಿಸಿ. ಅಲ್ಲದೆ ಯಾವುದೇ ವೆಬ್‌ಸೈಟ್‌ನಲ್ಲಿ ಅಥವಾ ಲಿಂಕ್ ಮೂಲಕ ನಿಮಗೆ ರವಾನಿಸಲಾಗುವ ಯಾವುದೇ ಫಾರಮ್‌ನಲ್ಲಿ ನಿಮ್ಮ ಯುಪಿಐ ಪಿನ್ ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸಿ.

♦ ಯುಪಿಐ ಪಿನ್‌ನ ಅಗತ್ಯ

ನೀವು ಯಾರಿಂದಾದರೂ ಹಣವನ್ನು ಸ್ವೀಕರಿಸಲು ನಿಮ್ಮ ಯುಪಿಐ ಪಿನ್ ಅನ್ನು ನಮೂದಿಸಬೇಕಿಲ್ಲ ಎನ್ನುವುದು ನಿಮಗೆ ಗೊತ್ತಿರಲಿ. ಹಣವನ್ನು ಸ್ವೀಕರಿಸುವ ಸೂಚನೆಗಳ ಹೆಸರಿನಲ್ಲಿ ತಮ್ಮ ಯುಪಿಐ ಪಿನ್‌ಗಳನ್ನು ನೀಡಿ ಹಲವಾರು ಗ್ರಾಹರು ಬಲಿಪಶುಗಳಾಗಿದ್ದಾರೆ. ನೀವು ಇನ್ನೊಬ್ಬರಿಗೆ ಹಣ ಪಾವತಿಸುವಾಗ ಮಾತ್ರ ನಿಮ್ಮ ಯುಪಿಐ ಪಿನ್‌ನ್ನು ದಾಖಲಿಸಬೇಕಾಗುತ್ತದೆ.

♦ ಅಸಲಿ ಕಸ್ಟಮರ್ ಕೇರ್

ಕಸ್ಟಮರ್ ಕೇರ್ ಅನ್ನು ತಲುಪಲು ನಿಮ್ಮ ಪೇಮೆಂಟ್ ಆ್ಯಪ್‌ಗಳನ್ನು ಬಳಸಿ. ಪ್ರತಿಯೊಂದೂ ಆ್ಯಪ್ ‘ಹೆಲ್ಪ್ (ನೆರವು) ವಿಭಾಗವನ್ನು ಹೊಂದಿದ್ದು,ಇದರ ಮೂಲಕ ನೀವು ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಬಹುದು. ಗೂಗಲ್ ಸರ್ಚ್ ಇಂಜಿನ್ ಮೂಲಕ ಕಸ್ಟಮರ್ ಕೇರ್‌ನ ನಂಬರ್ ಹುಡುಕುವ ಬದಲು ನಿಮ್ಮ ಆ್ಯಪ್‌ನಲ್ಲಿ ಪೂರಕ ವಿವರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಇಂಟರ್‌ನೆಟ್‌ನಲ್ಲಿ ನಕಲಿ ವೆಬ್‌ಸೈಟ್‌ಗಳು ಮತ್ತು ನಕಲಿ ಕಸ್ಟಮರ್ ಕೇರ್ ನಂಬರ್‌ಗಳೂ ಇರುತ್ತವೆ. ಹೀಗಾಗಿ ಇಂಟರ್‌ನೆಟ್‌ನಲ್ಲಿ ಪಟ್ಟಿ ಮಾಡಿರುವ ನಂಬರ್‌ಗಳನ್ನು ಸಂಪರ್ಕಿಸುವ ಗೋಜಿಗೆ ಹೋಗಲೇಬೇಡಿ.

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News

ಜಗದಗಲ
ಜಗ ದಗಲ