ಗಮನಾರ್ಹ ಆರ್ಥಿಕ ಬಿಕ್ಕಟ್ಟಿನಲ್ಲಿ ಭಾರತ: ಅಂತರಾಷ್ಟ್ರೀಯ ಹಣಕಾಸು ನಿಧಿ

Update: 2019-12-24 17:15 GMT

ವಾಷಿಂಗ್ಟನ್, ಡಿ.24: ಜಾಗತಿಕ ಅಭಿವೃದ್ಧಿಯ ನಿಟ್ಟಿನಲ್ಲಿ ಭಾರತ ಸರಕಾರ ಆರ್ಥಿಕ ಹಿಂಜರಿತ ತಡೆಗೆ ಶೀಘ್ರವೇ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಸಲಹೆ ನೀಡಿದೆ .

ಬಳಕೆ ಮತ್ತು ಹೂಡಿಕೆ ಕುಸಿದಿರುವ ಜೊತೆಗೆ ತೆರಿಗೆ ಆದಾಯ ಕಡಿಮೆಯಾಗಿರುವುದು ವಿಶ್ವದ ಅತೀ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಅರ್ಥವ್ಯವಸ್ಥೆಗಳಲ್ಲಿ ಒಂದಾಗಿರುವ ಭಾರತದ ಪ್ರಗತಿಯ ವೇಗಕ್ಕೆ ತಡೆಯೊಡ್ಡಿದೆ ಎಂದು ಐಎಂಎಫ್‌ನ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

ಮಿಲಿಯಾಂತರ ಜನರನ್ನು ಬಡತದಿಂದ ಮೇಲೆತ್ತಿದ ಬಳಿಕ ಭಾರತವು ಈಗ ಗಮನಾರ್ಹ ಆರ್ಥಿಕ ಕುಸಿತದ ಬಿಕ್ಕಟ್ಟಿಗೆ ಸಿಲುಕಿದೆ ಎಂದು ಐಎಂಎಫ್‌ನ ಏಶಿಯಾ ಮತ್ತು ಪೆಸಿಫಿಕ್ ವಿಭಾಗದ ಅಧಿಕಾರಿ ರಣಿಲ್ ಸಲ್ಗಾಡೊ ವರದಿಗಾರರಿಗೆ ತಿಳಿಸಿದ್ದಾರೆ. ಆರ್ಥಿಕ ಹಿಂಜರಿತದ ಬಗ್ಗೆ ಗಮನ ಹರಿಸಿ ಭಾರತವನ್ನು ತುರ್ತಾಗಿ ಉನ್ನತ ಅಭಿವೃದ್ಧಿಯ ಪಥದಲ್ಲಿ ಸಾಗಿಸಬೇಕಿದ್ದರೆ ತುರ್ತಾಗಿ ಕಾರ್ಯನೀತಿಯನ್ನು ರೂಪಿಸಬೇಕಿದೆ. ಆದರೆ ಸಾಲದ ಪ್ರಮಾಣ ಹಾಗೂ ಬಡ್ಡಿ ಪಾವತಿಯ ಪ್ರಮಾಣ ಹೆಚ್ಚಿರುವುದರಿಂದ, ಖರ್ಚು ಹೆಚ್ಚು ಮಾಡಿ ಅಭಿವೃದ್ಧಿಗೆ ನೆರವಾಗಲು ಸರಕಾರದ ಬಳಿ ನಿಯಮಿತ ಅವಕಾಶವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅರ್ಥವ್ಯವಸ್ಥೆಗೆ ಸಾಲ ಒದಗಿಸುವ ಸಾಮರ್ಥ್ಯವನ್ನು ವರ್ಧಿಸುವ ನಿಟ್ಟಿನಲ್ಲಿ ಆರ್ಥಿಕ ಕ್ಷೇತ್ರವನ್ನು ಬಲಪಡಿಸುವ ಮೂಲಕ ಸುಧಾರಣಾ ಕ್ರಮವನ್ನು ಸರಕಾರ ಪುನರುಜ್ಜೀವನಗೊಳಿಸುವ ಅಗತ್ಯವಿದೆ ಎಂದು ಸಲ್ಗಾಡೊ ಹೇಳಿದ್ದಾರೆ. ಆರ್ಥಿಕ ಹಿಂಜರಿತ ಮುಂದುವರಿದರೆ ಭಾರತದ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿದರವನ್ನು ಇನ್ನಷ್ಟು ಕಡಿತಗೊಳಿಸುವ ಸಾಧ್ಯತೆಯಿದೆ ಎಂದು ಸಲ್ಗಾಡೊ ಹೇಳಿದ್ದಾರೆ.

ಈ ವರ್ಷ ಆರ್‌ಬಿಐ ತನ್ನ ಬಡ್ಡಿದರವನ್ನು 5 ಬಾರಿ ಕಡಿತಗೊಳಿಸಿ, 9 ವರ್ಷಗಳಲ್ಲೇ ಕನಿಷ್ಟ ಮಟ್ಟಕ್ಕೆ ಇಳಿಸಿದೆ. ಅಲ್ಲದೆ, ಗ್ರಾಹಕರ ಬೇಡಿಕೆ ಹಾಗೂ ಉತ್ಪಾದನಾ ಚಟುವಟಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ವಾರ್ಷಿಕ ಅಭಿವೃದ್ಧಿ ಮುನ್ಸೂಚನೆಯನ್ನು 6.1%ದಿಂದ 5%ಕ್ಕೆ ಇಳಿಸಿದೆ. ಭಾರತ ಹಣಕಾಸಿನ ಕೊರತೆ ಗುರಿಯನ್ನು ಉಳಿಸಿಕೊಳ್ಳುವ ಜೊತೆಗೆ ಆದಾಯ ಕ್ರೋಢೀಕರಣ ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದು ಕಳೆದ ವಾರ ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News