‘‘ಅಮಾಯಕರ ಮೇಲೆ ಪೊಲೀಸರ ಅಟ್ಟಹಾಸ’’

Update: 2019-12-25 07:59 GMT

►ಒಟ್ಟು ಏಳು ಮಂದಿಗೆ ಗಾಯ

►ಇಬ್ಬರ ಸ್ಥಿತಿ ಗಂಭೀರ

►ಸೂಕ್ತ ಪರಿಹಾರಕ್ಕೆ ಆಗ್ರಹ

ಮಂಗಳೂರು, ಡಿ.24: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ)ಯನ್ನು ನಗರದಲ್ಲಿ ವಿರೋಧಿಸುತ್ತಿದ್ದ ಪ್ರತಿಭಟನಾಕಾರರು ಮತ್ತು ತಮಗೂ ಯಾವುದೇ ಸಂಬಂಧವಿಲ್ಲ. ಅಮಾಯಕರ ಮೇಲೆ ಪೊಲೀಸರು ಅಟ್ಟಹಾಸ ನಡೆಸಿರುವುದು ಅವರ ಸರ್ವಾಧಿಕಾರಿ ಧೋರಣೆ ತೋರಿಸುತ್ತದೆ ಎಂದು ಗೋಲಿಬಾರ್‌ನಲ್ಲಿ ಗುಂಡೇಟಿನಿಂದ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ನಡೆಸಿದ ಗೋಲಿಬಾರ್‌ನಿಂದ ಇಬ್ಬರು ಮೃತಪಟ್ಟಿದ್ದಾರೆ. ಅಲ್ಲದೆ, ಘಟನೆಯಲ್ಲಿ ಏಳು ಮಂದಿಗೆ ಪೊಲೀಸರಿಂದ ಹಾರಿಸಿದ ಗುಂಡುಗಳು ತಗುಲಿದ್ದವು. ಈ ಪೈಕಿ ಬಂದರ್‌ನ ಮುಹಮ್ಮದ್ ಇರ್ಫಾನ್ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಇಬ್ಬರ ಸ್ಥಿತಿ ಇನ್ನೂ ಗಂಭೀರವಾಗಿದೆ. ನಾಲ್ವರು ಗಾಯಾಳುಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳನ್ನು ‘ವಾರ್ತಾಭಾರತಿ’ ಭೇಟಿಯಾದಾಗ ತಮ್ಮ ಅಳಲು ತೋಡಿಕೊಂಡರು.

‘ಸ್ವಾಧೀನ ಕಳೆದುಕೊಂಡ ಕೈ’

                          ಅಬುಸ್ವಾಲಿಹ್

 ‘ಮಂಗಳೂರಿನ ಬಂದರ್‌ನಲ್ಲಿ ಪ್ಲಾಸ್ಟಿಕ್ ಕಂಪೆನಿಯೊಂದರಲ್ಲಿ ಹಮಾಲಿ ಕೆಲಸ ಮಾಡಿಕೊಂಡಿದ್ದೇನೆ. ವಾರದ ಹಿಂದೆ ಬಲಗಾಲಿಗೆ ಗಾಯವಾಗಿತ್ತು. ಐದು-ಆರು ದಿನಗಳಲ್ಲೇ ಗಾಯ ಗುಣವಾಯಿತು. ಗುರುವಾರ ನಾನು ಕೆಲಸ ಮಾಡುವ ಪ್ಲಾಸ್ಟಿಕ್ ಕಂಪೆನಿ ಮಳಿಗೆಗೆ ಭೇಟಿ ನೀಡಿ ಮರುದಿನದಿಂದ ಕೆಲಸಕ್ಕೆ ಬರುವುದಾಗಿ ಹೇಳಿ ಹೋಗಲು ಬಂದಾಗ ಈ ಘಟನೆ ಸಂಭವಿಸಿದೆ’ ಎಂದು ಪೊಲೀಸರ ಗೋಲಿಬಾರ್‌ನಲ್ಲಿ ಗಾಯಗೊಂಡು ನಗರದ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಂದರ್‌ನ ಕಂದಕ್ ನಿವಾಸಿ ಅಬುಸ್ವಾಲಿಹ್ (40) ಘಟನೆಯನ್ನು ವಿವರಿಸಿದರು.

‘ಗಲಭೆ ಹಿನ್ನೆಲೆಯಲ್ಲಿ ಮಾಲಕರೊಂದಿಗೆ ಮಳಿಗೆ ಬಂದ್ ಮಾಡಿಕೊಂಡು ಹೊರ ಬರುತ್ತಿದ್ದೆವು. ಈ ವೇಳೆ ಪೊಲೀಸರು ಏಕಾಏಕಿ ನಡೆಸಿದ ಗೋಲಿಬಾರ್‌ನಿಂದಾಗಿ ಬಲಗೈಗೆ ಗಂಭೀರ ಗಾಯವಾಗಿದೆ. ‘ಬುಲೆಟ್‌ವೊಂದು ಬಲಗೈಗೆ ತಾಗಿ ಹೋಗಿದ್ದು, ಅಂಗೈ ಆಕಾರದ ಮಾಂಸ ಕಿತ್ತು ಹೋಗಿದೆ. ಡಿ.23ರಂದು ತೊಡೆಯ ಭಾಗದ ಮಾಂಸ ತೆಗೆದು ಬಲಗೈನ ಭಾಗಕ್ಕೆ ತುಂಬಿ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದಾರೆ. ಸಂಪೂರ್ಣ ಗುಣಮುಖರಾಗಲು ಇನ್ನು ಮೂರು ತಿಂಗಳು ಬೇಕು ಎಂಬುದಾಗಿ ವೈದ್ಯರು ಹೇಳುತ್ತಿದ್ದರೂ ಮುಂದಿನ ದಿನಗಳಲ್ಲಿ ಕೈನಲ್ಲಿ ಭಾರ ಹೊರುವ ಸಾಧ್ಯತೆ ಕ್ಷೀಣಿಸಲಿದೆ. ಹಮಾಲಿ ಕೆಲಸಕ್ಕೆ ಕೈಗಳೇ ಆಧಾರವಾಗಿತ್ತು’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾ ಕಣ್ಣೀರು ಸುರಿಸಿದರು.

‘ಪೊಲೀಸರು ಸಂಘಪರಿವಾರದವರ ವೇಷ ಧರಿಸಿ ಲಾಠಿ ಪ್ರಹಾರ ನಡೆಸಿ, ಗುಂಡು ಹಾರಿಸಿ ಅಮಾಯಕರ ಜೀವ ತೆಗೆದಿದ್ದಾರೆ. ತೀವ್ರ ಗಾಯಗಳಿಂದ ಜರ್ಝರಿತಗೊಂಡಿರುವ ಅಬುಸಾಲೇಹ್ ಗುಣಮುಖರಾಗಲು ಇನ್ನು ಮೂರು ತಿಂಗಳು ಬೇಕು. ಮನೆಯಲ್ಲಿ ಆರ್ಥಿಕವಾಗಿ ಸಹಾಯವಾಗುತ್ತಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬ ಸಂಕಷ್ಟದಲ್ಲಿದೆ. ಸರಕಾರವು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕೂಡಲೇ ಪರಿಹಾರ ಕಲ್ಪಿಸಬೇಕು ಎನ್ನುತ್ತಾರೆ ಗಾಯಾಳು ಅಬುಸ್ವಾಲಿಹ್ ಅವರ ಸಹೋದರ ಸೈಫ್ ಝುಬೈರ್.

‘ಮುಹಮ್ಮದ್ ಇಮ್ರಾನ್ ಸ್ಥಿತಿ ಗಂಭೀರ’

‘ನನ್ನ ಸಹೋದರ ಉಳ್ಳಾಲದಲ್ಲಿ ಇಲೆಕ್ಟ್ರಿಶಿಯನ್-ಪ್ಲಂಬರ್‌ಆಗಿ ಕೆಲಸ ಮಾಡಿಕೊಂಡಿದ್ದ. ತನ್ನ ಕೆಲಸಕ್ಕೆ ಸಂಬಂಧಿಸಿದ ಪರಿಕರ ಖರೀದಿಸಲು ನಗರಕ್ಕೆ ಬಂದಿದ್ದ. ನಮಾಝ್‌ಗೆಂದು ಮಸೀದಿಗೆ ತೆರಳುವಾಗ ಪೊಲೀಸರು ಗೋಲಿಬಾರ್ ನಡೆಸಿದರು. ಇಮ್ರಾನ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ’ ಎಂದು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಮುಹಮ್ಮದ್ ಇಮ್ರಾನ್ ಉಳ್ಳಾಲ ಅವರ ಸಹೋದರ ಫಾರೂಕ್ ತಿಳಿಸಿದ್ದಾರೆ.

‘ಹೊಟ್ಟೆಯ ಬಲ ಭಾಗವನ್ನು ಹೊಕ್ಕ ಬುಲೆಟ್‌ವೊಂದು ಎಡಭಾಗದಲ್ಲಿ ಹೊರಬಂದು ಬಲಗೈಯನ್ನು ಸೀಳಿಕೊಂಡು ಗಂಭೀರ ಗಾಯ ಮಾಡಿದೆ. ಹೊಟ್ಟೆಯಿಂದ ಹೊರಬಂದ ಬುಲೆಟ್‌ನಿಂದಾಗಿ ದೇಹದ ಲಿವರ್ (ಯಕೃತ್ತು) ಸೇರಿದಂತೆ ವಿವಿಧ ಅಂಗಗಳು ಬಹುತೇಕ ಜರ್ಝರಿತಗೊಂಡಿವೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಮೂರು ದಿನಗಳ ಕಾಲ ಐಸಿಯುನಲ್ಲೇ ಶಸ್ತ್ರಚಿಕಿತ್ಸೆ ನಡೆಸುವ ಅಗತ್ಯವಿದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಅವರು ಹೇಳಿದರು. ‘ಅಮಾಯಕರ ಮೇಲೆ ಪೊಲೀಸರು ವಿನಾಕಾರಣ ಗೋಲಿಬಾರ್ ನಡೆಸಿದ್ದಾರೆ. ಸಣ್ಣ ಗಲಭೆಗೆ ಸುಲಭವಾಗಿ ಕಡಿವಾಣ ಹಾಕಬಹುದಿತ್ತು. ಗೋಲಿಬಾರ್ ನಡೆಸುವ ಅಗತ್ಯವಿರಲಿಲ್ಲ. ಸಣ್ಣ ಗಲಭೆಗೇ ಗೋಲಿಬಾರ್ ಮಾಡಿದ ಪೊಲೀಸರು, ಮುಂದೆ ಇನ್ನು ದೊಡ್ಡ ಗಲಭೆ ನಡೆದರೆ ಬಾಂಬ್ ಎಸೆಯಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ನಮಾಝ್‌ಗೆ ತೆರಳುತ್ತಿದ್ದಾಗ ತಡೆದು ನಿಲ್ಲಿಸಿ ಗುಂಡು ಹೊಡೆದರು’

                      ಇರ್ಫಾನ್   

‘ಪ್ರಾರ್ಥನೆ ಸಲ್ಲಿಸುವುದು ಸಂವಿಧಾನಾತ್ಮಕ ಹಕ್ಕು. ಪೊಲೀಸರು ಪ್ರಾರ್ಥನೆ ಸಲ್ಲಿಸಲಾದರೂ ಅವಕಾಶ ಕಲ್ಪಿಸಿಕೊಡಬಹುದಾಗಿತ್ತು. ರಕ್ಷಣೆ ನೀಡುವ ಪೊಲೀಸರೇ ಇಂತಹ ಪ್ರಾಣತೆಗೆಯುವ ಕೃತ್ಯದಲ್ಲಿ ಭಾಗಿಯಾದರೆ ಯಾರನ್ನು ನಂಬಬೇಕು. ಪೊಲೀಸರು ಮಾನವೀಯತೆಯ ವೌಲ್ಯಗಳನ್ನೇ ಅರಿತಿಲ್ಲ. ನಮಾಝ್‌ಗೆ ತೆರಳುತ್ತಿದ್ದಾಗ ತಡೆದು ನಿಲ್ಲಿಸಿ ಗುಂಡು ಹೊಡೆದರು’ ಎಂದು ಪೊಲೀಸರ ಗುಂಡೇಟಿನಿಂದ ಗಾಯಗೊಂಡ ಬಂದರ್‌ನ ಮುಹಮ್ಮದ್ ಇರ್ಫಾನ್ (31) ಬೇಸರ ವ್ಯಕ್ತಪಡಿಸಿದರು. ‘ದಕ್ಕೆಯಲ್ಲಿ ಮೀನು ಮಾರಾಟ ಕೆಲಸ ಮಾಡಿಕೊಂಡಿದ್ದೇನೆ. ಅಂದು ಸಂಜೆ ‘ಅಸರ್’ ನಮಾಝ್ ಸಮಯವಾಗಿತ್ತು. ಪ್ರಾರ್ಥನೆ ಸಲ್ಲಿಸಲು ಬಂದರ್‌ನ ಮಸೀದಿಗೆ ಬರುತ್ತಿದ್ದೆನು. ಮಸೀದಿ ಸಮೀಪಿಸುತ್ತಿದ್ದಾಗ ಪೊಲೀಸರು ವಾಪಸ್ ತೆರಳಲು ಸೂಚಿಸಿದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದೆ. ಇದೇ ಸಂದರ್ಭ ಮೊಬೈಲ್‌ಗೆ ಕರೆಬಂತು. ಕರೆ ಸ್ವೀಕರಿಸುತ್ತಿದ್ದಂತೆ ಪೊಲೀಸರು ಗುಂಡು ಹೊಡೆದರು. ಗುಂಡಿನ ಏಟಿಗೆ ಮೊಬೈಲ್ ಕೆಳಬಿತ್ತು. ತೀವ್ರ ನೋವಿನಿಂದ ಚೀರಿದೆ. ಬುಲೆಟ್‌ವೊಂದು ಕೈಯನ್ನು ಸೀಳಿಕೊಂಡು ಹೊರ ಹೋಗಿದೆ. ಕೈಯಲ್ಲಿ ಸೋರಿಕೆಯಾಗುತ್ತಿದ್ದ ರಕ್ತ ನಿಂತಿದ್ದು, ಗಾಯ ಗುಣವಾಗುತ್ತಿದೆ. ರವಿವಾರ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಲಾಗಿದೆ ಎಂದು ಮುಹಮ್ಮದ್ ಇರ್ಫಾನ್ ತಿಳಿಸಿದ್ದಾರೆ.

‘ರಸ್ತೆಯಲ್ಲಿ ನಡೆದುಕೊಂಡು ಹೋಗುವ ಸಾಮಾನ್ಯ ಜನರಿಗೆ ಗುಂಡು ಹಾರಿಸುವಂತಹ ಘಟನೆಗಳು ನಡೆಯುತ್ತಿವೆ ಎನ್ನುವುದಾದರೆ ನಮ್ಮ ಕಾನೂನಿಗೆ ಬೆಲೆ ಎಲ್ಲಿದೆ? ಅಮಾಯಕರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಪೊಲೀಸರು ಅಲ್ಲಿ ಪೊಲೀಸರಾಗಿ ಬಂದಿರಲಿಲ್ಲ; ಬದಲಾಗಿ ರೌಡಿಗಳಾಗಿ ಬಂದಿದ್ದರು’ ಎನ್ನುತ್ತಾರೆ ಮುಹಮ್ಮದ್ ಇರ್ಫಾನ್.

‘ಮಂಗಳೂರಿಗೆ ಹೊಸಬ; ವಿಷಯವೇ ಗೊತ್ತಿರಲಿಲ್ಲ’

                         ಶಫೀಕ್

ಶಿಷ್ಯವೇತನದ ಬಗ್ಗೆ ಇ-ದೃಢೀಕರಣ ಮಾಡಿಸಲೆಂದು ಪಾಂಡೇಶ್ವರದಲ್ಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಚೇರಿಗೆ ತೆರಳಿದ್ದೆ. ಪೊಲೀಸರು ಅಲ್ಲಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ಜನರನ್ನು ಓಡಿಸಿಕೊಂಡು ಬರುತ್ತಿದ್ದರು. ಹಾಗಾಗಿ, ನಾನು ಕೂಡ ಓಡಿದೆ. ಮುಂದೆ ಬಂದರ್‌ನ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಹೊರ ಬರುತ್ತಿದ್ದಾಗ ಪೊಲೀಸರು ಮತ್ತೆ ಜನರನ್ನು ಓಡಿಸತೊಡಗಿದರು. ನಗರಕ್ಕೆ ನಾನು ಹೊಸಬ ಯಾವ ಕಡೆ ಹೋಗಬೇಕು ಎನ್ನುವುದು ತಿಳಿಯಲಿಲ್ಲ. ಅಷ್ಟರಲ್ಲೇ ಪೊಲೀಸರು ಗೋಲಿಬಾರ್ ನಡೆಸಿದ್ದರು ಎಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ನಿವಾಸಿ, ಪ್ರಸ್ತುತ ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನ ಇಂಜಿನಿಯರಿಂಗ್ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ ಮುಹಮ್ಮದ್ ಶಫೀಕ್ (18) ಘಟನೆಯನ್ನು ವಿವರಿಸಿದರು. ‘ಹಿಂಭಾಗದಿಂದ ಎಡಗಾಲಿಗೆ ಬುಲೆಟ್ ಬಿತ್ತು. ಪರಿಣಾಮ ಕಾಲಿನ ಎಲುಬು ಬಹುತೇಕ ಒಡೆದು ಹೋಗಿದೆ. ಬುಲೆಟ್ ತೆಗೆದು ರಾಡ್‌ವೊಂದನ್ನು ಹಾಕಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಗಾಯ ಗುಣವಾಗಲು 2-3 ತಿಂಗಳು ಬೇಕು ಎಂದು ವೈದ್ಯರು ಹೇಳಿದ್ದಾರೆ ಎಂದರು.

‘ಹೊಟ್ಟೆಯಲ್ಲಿನ ಬುಲೆಟ್ ಇನ್ನು ತೆಗೆದಿಲ್ಲ’

                               ನಿಝಾಮುದ್ದೀನ್

‘ಪೊಲೀಸರು ನಡೆಸಿದ ಗೋಲಿಬಾರ್‌ನಿಂದ ಮಗನ ದೇಹವನ್ನು ಬುಲೆಟ್ ಹೊಕ್ಕಿದೆ. ಐಸಿಯುನಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿದ ಬಳಿಕವೂ ಬುಲೆಟ್ ದೇಹದಲ್ಲೇ ಉಳಿದುಕೊಂಡಿದೆ. ಬುಲೆಟ್ ಹೊರತೆಗೆದರೆ ಜೀವಕ್ಕೆ ಅಪಾಯವಿದೆ ಎಂದು ವೈದ್ಯರು ಹೇಳಿದ್ದಾರೆ’ ಎಂದು ಪೊಲೀಸರ ಗುಂಡೇಟಿನ ಗಾಯಾಳು ಬೈಕಂಪಾಡಿ ಅಂಗರಗುಂಡಿಯ ನಿಝಾಮುದ್ದೀನ್ (22) ಅವರ ತಂದೆ ಮುಹಮ್ಮದ್ ಮನ್ಸೂರ್ ತಿಳಿಸಿದ್ದಾರೆ.

‘ನಾನು ರಿಕ್ಷಾ ಚಾಲಕನಾದರೂ ಮಗನಿಗೆ ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಕೊಡಿಸಿದೆ. ಪಿಎಚ್‌ಡಿ ಮಾಡುವ ಆಸೆ ಇದ್ದುದರಿಂದ ಹಣ ಹೊಂದಿಸಲು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಗುರುವಾರ ಸಂಜೆ ಮಂಗಳೂರಿಗೆ ಆಗಮಿಸಿದ್ದರು. ಸ್ಟೇಟ್‌ಬ್ಯಾಂಕ್‌ನಲ್ಲಿ ಬೈಕಂಪಾಡಿಗೆ ಬರುವ ಬಸ್ ಇರಲಿಲ್ಲ ಎಂದು ಫೋನ್ ಮಾಡಿದ್ದ. ಕೆಲಹೊತ್ತಿನಲ್ಲೇ ಗುಂಡು ಹೊಡೆದ ವಿಷಯ ಗೊತ್ತಾಯಿತು ಎಂದು ಅವರು ಹೇಳಿದರು. ‘ಮಗನಿಗೆ ಯುಪಿಎಸ್ಸಿ ಪರೀಕ್ಷೆ ಬರೆಯುವ ಕನಸು ಇತ್ತು. ಹಲವು ಕಾರ್ಯಕ್ರಮಗಳಲ್ಲಿ ಮೋಟಿವೇಶನ್ ಸ್ಪೀಚ್ ಮಾಡುತ್ತಿದ್ದ. ಜನರಲ್ಲಿ ಜಾಗೃತಿ ಮೂಡಿಸಿ ಶಿಕ್ಷಣದ ಬಗ್ಗೆ ಸಲಹೆಗಳನ್ನು ನೀಡುತ್ತಾ ಊರಿನ ಯುವಕರಿಗೆ ಮಾರ್ಗದರ್ಶಿಯಾಗಿದ್ದ’ ಎಂದರು.

‘ಹೊಟ್ಟೆಗೆ 2 ಬುಲೆಟ್ ಹೊಕ್ಕಿದ್ದವು’

                                             ಆಸಿಫ್

 ನಗರದ ಹೈಲ್ಯಾಂಡ್ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿರುವ ಬಜಾಲ್ ಸಮೀಪದ ಫೈಸಲ್‌ನಗರ ನಿವಾಸಿ ಆಸಿಫ್ (23) ಮಾತನಾಡಿ, ‘ಫೈಸಲ್‌ನಗರದಲ್ಲಿ ಕಾರ್ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಸಹೋದರಿಯ ಮದುವೆ ದಿನಾಂಕ ನಿಗದಿಯಾದ ಕಾರಣ ಮದುವೆ ವಸ್ತ್ರ ಖರೀದಿಸಲು ಮಂಗಳೂರಿಗೆ ಬಂದಿದ್ದೆವು. ಸಂಜೆ ನಮಾಝ್ ಸಮಯವಾದ್ದರಿಂದ ಮಸೀದಿಗೆ ತೆರಳುತ್ತಿದ್ದಾಗ ಪೊಲೀಸರು ಗೋಲಿಬಾರ್ ನಡೆಸಿದರು. ಪರಿಣಾಮ ಎರಡು ಬುಲೆಟ್‌ಗಳು ಹೊಟ್ಟೆಯ ಮುಂಭಾಗದಿಂದ ಹಾಯ್ದು ಬೆನ್ನಿನ ಬಳಿ ಭಾರೀ ಗಾಯ ಮಾಡಿ ಹೊರಹೋಗಿವೆ’ ಎಂದು ತಿಳಿಸಿದರು.

‘ಮನೆಗೆ ಹೋಗುತ್ತಿದ್ದಾಗ ಪೊಲೀಸ್ ಫೈರಿಂಗ್’

                         ಸಲೀಂ

ಪೊಲೀಸರು ಯಾಕೆ ಗುಂಡು ಹೊಡೆದರು ಎಂದು ಗೊತ್ತೇ ಆಗಲಿಲ್ಲ. ನಾವು ಮೂಲತಃ ಬಿಹಾರದ ಬೆಗುಸರಾಯ್‌ನವರು. ಮಂಗಳೂರಿನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದೇವೆ. ಸ್ಟೇಟ್ ಬ್ಯಾಂಕ್‌ನಲ್ಲಿ ಕೆಲಸ ಮುಗಿಸಿಕೊಂಡು ಬಂದರ್‌ನಲ್ಲಿನ ಮನೆಗೆ ತೆರಳುತ್ತಿದ್ದಾಗ ಪೊಲೀಸರು ಫೈರ್ ಮಾಡಿದರು. ಒಂದು ಬುಲೆಟ್ ಬಲಗೈನ ತೋಳಿಗೆ ತಾಗಿಕೊಂಡು ಹೊರಹೋಗಿದೆ. ಇನ್ನೊಂದು ಗುಂಡು ಕೈನ ತೋಳಿನ ಭಾಗದಲ್ಲೇ ಉಳಿದುಕೊಂಡಿತ್ತು. ಐಸಿಯುನಲ್ಲಿ ದಾಖಲಿಸಿ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಮೂರು ದಿನಗಳ ಹಿಂದೆ ಬೆಡ್‌ಗೆ ಶಿಫ್ಟ್ ಮಾಡಿದ್ದಾರೆ ಎಂದು ಬಿಹಾರದ ಬೆಗುಸರಾಯ್‌ನ ಸಲೀಂ (27) ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News