ಗೋಲಿಬಾರ್ ಮಾಡಿದ ಪೊಲೀಸರಿಗೆ ‘ಶೌರ್ಯ ಪ್ರಶಸ್ತಿ’ಯನ್ನು ಘೋಷಿಸಲಿ

Update: 2019-12-26 06:23 GMT

ಮಂಗಳೂರು ಹಿಂಸಾಚಾರವನ್ನು ಸಿಐಡಿ ತನಿಖೆಗೆ ಒಪ್ಪಿಸಲಿದ್ದೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಇದರ ಜೊತೆ ಜೊತೆಗೇ ಸಿಐಡಿ ತಂಡ ತನಿಖೆ ನಡೆಸಿ ಯಾವ ವರದಿಯನ್ನು ನೀಡಲಿದ್ದಾರೆ ಎನ್ನುವುದನ್ನೂ ಅವರು ಸೂಚ್ಯವಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ‘‘ದುಷ್ಕರ್ಮಿಗಳು ಪೊಲೀಸ್ ಠಾಣೆಯನ್ನು ಸುಟ್ಟು ಹಾಕಲು ಯತ್ನಿಸಿದ್ದರು, ಅವರು ಮಾರಕ ಆಯುಧಗಳನ್ನು ಹೊಂದಿದ್ದರು’’ ಎಂಬಿತ್ಯಾದಿ ಪೊಲೀಸರ ಮಾತುಗಳನ್ನೇ ಮಾಧ್ಯಮಗಳಿಗೆ ಗಿಣಿಪಾಠ ಒಪ್ಪಿಸಿದ್ದಾರೆ. ಎಲ್ಲಕ್ಕಿಂತ ವಿಷಾದನೀಯ ಸಂಗತಿಯೆಂದರೆ, ಮೃತರಿಗೆ ಘೋಷಿಸಿದ ಪರಿಹಾರವನ್ನು ಒಂದೇ ದಿನದಲ್ಲಿ ಹಿಂದೆಗೆದುಕೊಂಡಿದ್ದಾರೆ. ಕ್ರಿಮಿನಲ್ ಹಿನ್ನೆಲೆಯಿರುವ ಆರೋಪಿಗಳು ಕೋಮುಗಲಭೆಗಳಲ್ಲಿ ಭಾಗವಹಿಸಿ ಗಾಯಗೊಂಡಾಗ ಅವರಿಗೆ ಖಜಾನೆಯಿಂದ ಬಹುಮಾನವೆಂಬಂತೆ ಪರಿಹಾರಗಳನ್ನು ನೀಡುತ್ತಾ ಬಂದಿರುವ ಸರಕಾರ, ಪೊಲೀಸರ ಬೇಜವಾಬ್ದಾರಿಯಿಂದ ಮೃತಪಟ್ಟ ಇಬ್ಬರು ಶ್ರಮಜೀವಿಗಳ ಸಾವಿಗೆ ನಾನು ಹೊಣೆಗಾರ ಅಲ್ಲ ಎಂದು ಕೈ ಚೆಲ್ಲಿರುವುದು ಕ್ರೌರ್ಯದ ಪರಮಾವಧಿ. ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವುದರಲ್ಲಿ ‘ಧರ್ಮಕಾರಣ’ ಮಾಡಿದ ಮೊದಲ ಸರಕಾರ ಇದು. ಈ ಮೂಲಕ ಮಂಗಳೂರಿನಲ್ಲಿ ಪೊಲೀಸರು ಮೆರೆದ ಕ್ರೌರ್ಯದಲ್ಲಿ ತನ್ನ ಪಾಲೂ ಇದೆ ಎನ್ನುವುದನ್ನು ನೇರವಾಗಿಯೇ ಘೋಷಿಸಿದಂತಾಗಿದೆ. ಮಂಗಳೂರಿನಲ್ಲಿ ಪೊಲೀಸರು ನಡೆಸಿದ ಹಿಂಸಾಚಾರವನ್ನು ಸರಕಾರದ ಭಾಗವಾಗಿರುವ ರಾಜಕಾರಣಿಗಳು ಸಮರ್ಥಿಸುತ್ತಿರುವುದು ನೋಡಿದರೆ, ಇಡೀ ಹಿಂಸಾಚಾರವೇ ಸರಕಾರಿ ಪ್ರಾಯೋಜಿತವೇ ಎಂಬ ಅನುಮಾನ ಹುಟ್ಟುತ್ತದೆ. ರವಿವಾರ ಪರಿಹಾರವನ್ನು ಘೋಷಿಸಿದ ಮುಖ್ಯಮಂತ್ರಿ, ಬುಧವಾರ ಅದನ್ನು ಹಿಂದೆಗೆಯಬೇಕಾದರೆ ಅವರ ಮೇಲೆ ಒತ್ತಡ ಬಂದಿರಲೇಬೇಕು. ಆ ಒತ್ತಡ ಹಾಕಿದ ಶಕ್ತಿಗಳೇ ಮಂಗಳೂರು ಗೋಲಿಬಾರ್‌ನ ಪ್ರಾಯೋಜಕರು ಎನ್ನುವುದರಲ್ಲಿ ಎರಡು ಮಾತಿಲ್ಲ.

ಮಂಗಳೂರಿನಲ್ಲಿ ನಡೆದ ಹಿಂಸಾಚಾರವನ್ನು ಸಿಐಡಿ ತನಿಖೆ ನಡೆಸುವುದರಿಂದ ಸಂತ್ರಸ್ತರಿಗೆ ನ್ಯಾಯ ಸಿಗುವುದು ಸಾಧ್ಯವೇ? ಮಂಗಳೂರಿನಲ್ಲಿ ನಡೆದಿರುವುದು ಕೋಮುಗಲಭೆಯಲ್ಲ. ಇಲ್ಲಿ ಕಾನೂನನ್ನು ರಕ್ಷಿಸಬೇಕಾದ ಪೊಲೀಸರೇ ಕಟಕಟೆಯಲ್ಲಿ ನಿಂತಿದ್ದಾರೆ. ಮಂಗಳೂರಿನಲ್ಲಿ ನಡೆದ ವಿದ್ಯಮಾನಗಳ ಕುರಿತಂತೆ ಎರಡು ವಾದಗಳಿವೆ. ಒಂದು, ಪೊಲೀಸರದು. ಇನ್ನೊಂದು ಸಾರ್ವಜನಿಕರದು. ಪೊಲೀಸರ ವಾದವೇನು ಎಂದರೆ, ‘ಕೇರಳವೂ ಸೇರಿದಂತೆ ವಿವಿಧೆಡೆಗಳಿಂದ ಬಂದ ದುಷ್ಕರ್ಮಿಗಳು ಮಾರಕಾಯುಧಗಳ ಜೊತೆಗೆ ಪೊಲೀಸರ ಮೇಲೆ ಎರಗಿದರು. ಪ್ರಾಣ ರಕ್ಷಣೆಗಾಗಿ ಪೊಲೀಸರು ಗೋಲಿಬಾರ್ ನಡೆಸಬೇಕಾಯಿತು’. ಸಾರ್ವಜನಿಕ ಆರೋಪಗಳೇನೆಂದರೆ ‘ಶಾಂತವಾಗಿ ಪ್ರತಿಭಟನೆ ನಡೆಸುತ್ತಿದ್ದ 300ರಷ್ಟಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಯದ್ವಾತದ್ವಾ ಲಾಠಿ ಬೀಸಿ ದೌರ್ಜನ್ಯವೆಸಗಿದ್ದಾರೆ. ಅಷ್ಟೇ ಅಲ್ಲ, ಅಗತ್ಯವಿಲ್ಲದಿದ್ದರೂ, ಕೊಲ್ಲುವ ಉದ್ದೇಶದಿಂದಲೇ ಪೊಲೀಸರು ಗೋಲಿಬಾರ್ ನಡೆಸಿದ್ದಾರೆೆ’’ ಮಂಗಳೂರಿನಲ್ಲಿ ನಡೆದ ಹಿಂಸಾಚಾರದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದ್ದರೂ, ಗಾಯಗೊಂಡ ಪೊಲೀಸರ ಕುರಿತಂತೆ ಅಧಿಕೃತ ಮಾಹಿತಿಯಿಲ್ಲ. ಆದರೆ ಪೊಲೀಸರ ಗೋಲಿಬಾರ್‌ನಿಂದ ಇಬ್ಬರು ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದಾರೆ. ಇಲ್ಲಿ ಹಿಂಸೆ ನಡೆದಿರುವುದು ಪೊಲೀಸರ ಏಕಮುಖ ದಾಳಿಯಿಂದಲೇ ಹೊರತು, ಜನರ ಕಲ್ಲುತೂರಾಟದಿಂದ ಅಲ್ಲ. ಅಂದರೆ ಪೊಲೀಸರ ವೈಫಲ್ಯ ಮತ್ತು ಅವರು ನಡೆಸಿದ ಕಗ್ಗೊಲೆಗಳೂ ಇಲ್ಲಿ ತನಿಖೆ ನಡೆಯಬೇಕಾಗಿದೆ. ಸಿಐಡಿಯಲ್ಲಿರುವ ಸಿಬ್ಬಂದಿ ಪೊಲೀಸ್ ಇಲಾಖೆಗೆ ಸಂಬಂಧಿಸಿದವರೇ ಆಗಿದ್ದಾರೆ. ಹೀಗಿರುವಾಗ, ತನಿಖೆಯಿಂದ ಸತ್ಯ ಹೊರ ಬರುವುದು ಹೇಗೆ ಸಾಧ್ಯ?

ಪೊಲೀಸರ ಹೇಳಿಕೆಗಳು ಅಪ್ಪಟ ಸುಳ್ಳು ಎನ್ನುವುದನ್ನು ಅವರೇ ಮಾಡಿರುವ ಎಫ್‌ಐಆರ್‌ಗಳಲ್ಲಿರುವ ವಿರೋಧಾಭಾಸಗಳು ಹೇಳುತ್ತವೆ. ಕೇರಳದಿಂದ ಬಂದ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ಪೊಲೀಸರು ಹೇಳುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹಲವರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಅದರಲ್ಲಿ ಒಬ್ಬನೇ ಒಬ್ಬ ಕೇರಳೀಯನ ಹೆಸರು ಯಾಕಿಲ್ಲ? ಪೊಲೀಸರ ಗುಂಡೇಟಿಗೆ ಸಿಕ್ಕು ಮೃತರಾದವರು ಮತ್ತು ಗಾಯಗೊಂಡವರೆಲ್ಲ ಮಂಗಳೂರಿಗರೇ ಆಗಿದ್ದಾರೆ. ಅವರಲ್ಲಿ ಕೇರಳ ಮೂಲದವರು ಎಷ್ಟು ಮಂದಿಯಿದ್ದಾರೆ? ಗೋಲಿಬಾರ್‌ನಲ್ಲಿ ಮೃತರಾದವರನ್ನು ಆರೋಪಿಗಳು ಎಂದು ಪೊಲೀಸರು ಯಾವ ಆತ್ಮಸಾಕ್ಷಿಯೂ ಇಲ್ಲದೆ ಘೋಷಿಸಿದ್ದಾರೆ. ಮೃತರು ದುಷ್ಕರ್ಮಿಗಳೇ ಆಗಿದ್ದರೆ ಅವರು ಈ ಹಿಂದೆ ಯಾವುದಾದರೂ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗವಹಿಸಿದ ಹಿನ್ನೆಲೆಯಿದೆಯೇ ಎನ್ನುವುದನ್ನು ಪೊಲೀಸರು ವಿವರಿಸಬೇಕು. ಅವರ ವೃತ್ತಿ, ಅವರ ಹಿನ್ನೆಲೆ ಯಾವುದೂ ಗುಟ್ಟಾಗಿಲ್ಲ. ಕ್ರಿಮಿನಲ್ ಕೃತ್ಯವೆಸಗಿದ ಪೊಲೀಸರನ್ನು ರಕ್ಷಿಸುವ ಒಂದೇ ಉದ್ದೇಶದಿಂದ ಮೃತರನ್ನು ಕ್ರಿಮಿನಲ್ ಮಾಡಲು ಹೊರಟ ಪೊಲೀಸ್ ಇಲಾಖೆಯಿಂದ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ನಿರೀಕ್ಷಿಸುವುದು ಸಾಧ್ಯವೇ? ಹಿಂಸಾಚಾರದ ಸಂದರ್ಭದಲ್ಲಿ ಮಾರಕಾಯುಧಗಳನ್ನು ಬಳಸಿದ್ದಾರೆ ಎಂದಿರುವ ಪೊಲೀಸರು ಈವರೆಗೆ ಯಾವುದೇ ಮಾರಕಾಯುಧಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಿಲ್ಲ.

ದೂರದಿಂದ ಕಲ್ಲು ತೂರುತ್ತಿದ್ದ ಯುವಕರನ್ನು ತೋರಿಸಿ ತಮ್ಮ ಗೋಲಿಬಾರ್‌ಗಳನ್ನು ಸಮರ್ಥಿಸಲು ಯತ್ನಿಸುತ್ತಿರುವ ಪೊಲೀಸ್ ಆಯುಕ್ತರಿಗೆ, ಗೋಲಿಬಾರ್ ನಡೆಸುವುದಕ್ಕೆ ಅಗತ್ಯವಿರುವ ಪ್ರಕ್ರಿಯೆಗಳ ಪ್ರಾಥರ್ಮಿಕ ಮಾಹಿತಿಯೂ ಇದ್ದಂತಿಲ್ಲ. ಮಾಧ್ಯಮಗಳಿಗೆ ಪೊಲೀಸ್ ಇಲಾಖೆ ಬಹಿರಂಗ ಪಡಿಸಿದ ಯಾವುದೇ ವೀಡಿಯೊಗಳೂ ಪೊಲೀಸರು ಗೋಲಿಬಾರ್ ನಡೆಸಲೇಬೇಕಾದ ಅನಿವಾರ್ಯತೆಯನ್ನು ಹೇಳುತ್ತಿಲ್ಲ. ಆದರೆ ಇಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಹಲವು ವೀಡಿಯೊಗಳು ‘ಪೊಲೀಸರು ಹತ್ಯೆಗೈಯುವುದಕ್ಕಾಗಿಯೇ ಗೋಲಿಬಾರ್ ನಡೆಸಿದ್ದರು, ಒಬ್ಬನಾದರೂ ಸಾಯಲೇಬೇಕು ಎನ್ನುವ ಒತ್ತಡ ಅವರಿಗಿತ್ತು’ ಎನ್ನುವುದು ಬಹಿರಂಗವಾಗುತ್ತದೆ. ಸುಮಾರು 500 ಮೀಟರ್ ದೂರದಲ್ಲಿರುವ ಜನರಿಗೆ ಯದ್ವಾತದ್ವಾ ಗುಂಡು ಹಾರಿಸುತ್ತಿದ್ದ ಪೊಲೀಸರು ‘‘ಒಂದು ಹೆಣವಾದರೂ ಬೀಳಲಿ ಸಾರ್’’ ಎನ್ನುವ ವೀಡಿಯೊ ಮಂಗಳೂರಿನಲ್ಲಿ ನಡೆದಿರುವುದು ಏನು ಎನ್ನುವುದನ್ನು ಹೇಳುತ್ತದೆ.

ರಾಜ್ಯ ಸರಕಾರದ ಕೈಗೆ ಮಂಗಳೂರಿನ ಅಮಾಯಕರ ರಕ್ತ ಅಂಟಿಕೊಂಡಿದೆ. ಆ ಕೈಯಲ್ಲಿ ಕೊಟ್ಟ ನಗದು ಪರಿಹಾರ ಸಂತ್ರಸ್ತರಿಗೆ ನ್ಯಾಯವನ್ನು ನೀಡಲಾರದು. ಇದೇ ಸಂದರ್ಭದಲ್ಲಿ ಸಿಐಡಿ ತನಿಖೆಯನ್ನು ಕೂಡ ಸರಕಾರ ಹಿಂದೆಗೆದುಕೊಳ್ಳಲಿ. ಯಾಕೆಂದರೆ ಸಿಐಡಿ ತನ್ನ ವರದಿಯಲ್ಲಿ ಏನು ಹೇಳಬಹುದು ಎನ್ನುವುದನ್ನು ಪೊಲೀಸ್ ಆಯುಕ್ತರು ಮತ್ತು ಸಿ.ಟಿ. ರವಿಯಂತಹ ನಾಯಕರು ಈಗಾಗಲೇ ಮಾಧ್ಯಮಗಳ ಮುಂದೆ ಘೋಷಿಸಿದ್ದಾರೆ. ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ನಡೆದ ತನಿಖೆ ಮಾತ್ರ ಮಂಗಳೂರಿನಲ್ಲಿ ನಡೆದುದೇನು ಎನ್ನುವುದನ್ನು ಬಹಿರಂಗ ಪಡಿಸಬಹುದು. ಮೃತರನ್ನು ಆರೋಪಿಗಳು ಎಂದು ಶಂಕಿಸಿ ಪರಿಹಾರ ಹಿಂದೆಗೆದುಕೊಂಡ ಸರಕಾರ, ಈ ನಾಡಿನ ಇಬ್ಬರು ಅಮಾಯಕರನ್ನು ಬರ್ಬರವಾಗಿ ಕೊಂದು ಹಾಕಿದ ಪೊಲೀಸರಿಗೆ ಶೌರ್ಯ ಪ್ರಶಸ್ತಿಯನ್ನು ಕೊಟ್ಟರೆ ಇನ್ನಷ್ಟು ಅರ್ಥಪೂಣವಾದೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News