ಕಂಕಣ ಗ್ರಹಣ ಸೂರ್ಯನಿಗೆ ಮಾತ್ರವೇ ಹಿಡಿಯಲಿ

Update: 2019-12-25 18:31 GMT

ಗ್ರಹಣ ಸಂಭವಿಸುವ ವೇಳೆ ವಾತಾವರಣದಲ್ಲಿ ಉಂಟಾಗುವ ವ್ಯತ್ಯಯಗಳನ್ನು ಹೊರತುಪಡಿಸಿ ಮತ್ತಾವುದೇ ರೀತಿಯಲ್ಲಿ ಮನುಷ್ಯರ ಮೇಲೆ ಪ್ರಭಾವ ಉಂಟಾಗುವುದಿಲ್ಲ ಎಂದು ಹೇಳಲು ಈ ವಾಹಿನಿಗಳಿಗೆ ಏನು ಧಾಡಿ ? ನಿಜ, ಟಿಆರ್‌ಪಿ ಮತ್ತು ಮಾರುಕಟ್ಟೆಯ ಲಾಭ ವಾಹಿನಿಗಳಿಗೆ ಮುಖ್ಯ. ಆದರೆ ಇದಕ್ಕೆ ಜನಸಾಮಾನ್ಯರಲ್ಲಿರುವ ನಂಬಿಕೆ, ಆತಂಕಗಳೇ ಬಂಡವಾಳವಾಗಬೇಕೇ? ರಾಶಿ ನಕ್ಷತ್ರಗಳ ಚಲನೆಗೂ, ಸೂರ್ಯ ಚಂದ್ರರ ಹೊಳಪಿಗೂ, ಭೂಮಿಯ ಮೇಲೆ ಬದುಕುವ ಜೀವಿಗಳ ನಿತ್ಯಜೀವನದ ಕಷ್ಟ ಕಾರ್ಪಣ್ಯಗಳಿಗೂ ಸಂಬಂಧ ಕಲ್ಪಿಸುವ ಮೂಲಕ ಮೌಢ್ಯೋಪಾಸನೆಯನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳುವುದು ಮಾಧ್ಯಮಗಳ ಕೆಲಸವೇ?

ಸೂರ್ಯ ಚಂದ್ರರಿಗೆ ಅತಿ ಹೆಚ್ಚು ಬೇಡಿಕೆ ಬರುವುದು ಗ್ರಹಣ ಹಿಡಿದಾಗಲೇ. ಒಂದೆಡೆ ವಿಜ್ಞಾನದಲ್ಲಿ ಆಸಕ್ತಿ ಇರುವವರು ಗ್ರಹಣ ವೀಕ್ಷಣೆಗೆ ವೈಜ್ಞಾನಿಕ ನೆಲೆಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ, ಯುವ ಜನತೆಗೆ ಹಲವು ಹೊಸ ವಿಚಾರಗಳನ್ನು ತಿಳಿಸಲು ಉತ್ಸುಕರಾಗುತ್ತಾರೆ. ಮತ್ತೊಂದೆಡೆ ಶಾಲಾ ಕಾಲೇಜುಗಳಲ್ಲಿ ವರ್ಷವಿಡೀ ಮೌಢ್ಯ ನಿವಾರಿಸುವ ಪ್ರಯತ್ನಗಳನ್ನು ಮಾಡದಿದ್ದರೂ ಗ್ರಹಣದ ಸಂದರ್ಭದಲ್ಲಿ ಸ್ವಲ್ಪವಿಜ್ಞಾನದ ಬಗ್ಗೆ ಮಾತನಾಡಲಾಗುತ್ತದೆ. ಒಂದು ದಿನಕ್ಕೆ ಸೀಮಿತವಾಗುವ ಗ್ರಹಣ ವೀಕ್ಷಣೆ ಶಾಲಾ ಕಾಲೇಜು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವುದಿಲ್ಲವಾದರೂ, ಕೊಂಚ ಮಟ್ಟಿಗೆ ಗ್ರಹಣದ ಸುತ್ತ ಹರಡುವ ಮೌಢ್ಯಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸಂಘ ಸಂಸ್ಥೆಗಳೂ ಗ್ರಹಣ ವೀಕ್ಷಣೆಗೆ ಮಸೂರಗಳನ್ನು ವಿತರಿಸುವುದರಿಂದ ಹಿಡಿದು ದೂರದರ್ಶಕಗಳ ಮೂಲಕ ವೀಕ್ಷಿಸಲು ಅವಕಾಶ ನೀಡುವ ಮೂಲಕ ಜನಜಾಗೃತಿ ಮೂಡಿಸುತ್ತಿವೆ. ಗ್ರಹಣದ ಸಂದರ್ಭದಲ್ಲಿ ಮನೆಯಲ್ಲೆ ಕುಳಿತು, ಮಂತ್ರ ಪಠಿಸುತ್ತಾ, ಏನನ್ನೂ ತಿನ್ನದೆ, ಏನನ್ನೂ ಕುಡಿಯದೆ, ಗ್ರಹಣ ಮೋಕ್ಷದ ನಂತರ ತಾವೂ ಸ್ನಾನ ಮಾಡಿ ಮೋಕ್ಷ ಪಡೆಯುವ ಕರ್ಮಠರ ಸಾಂಪ್ರದಾಯಿಕ ಅವೈಜ್ಞಾನಿಕ ಶಿಸ್ತಿನಿಂದ ಯುವ ಪೀಳಿಗೆ ಕೊಂಚ ಮಟ್ಟಿಗಾದರೂ ಹೊರಬರುತ್ತಿರುವುದು ಸ್ವಾಗತಾರ್ಹ. ವಿಜ್ಞಾನ ಮತ್ತು ವೈಚಾರಿಕತೆ ಪಠ್ಯ ಬೋಧನೆಯಿಂದ ಅರ್ಥವಾಗುವುದಿಲ್ಲ ಆಚರಣೆಯಿಂದ ಅರ್ಥವಾಗುತ್ತದೆ ಎಂಬ ವಾಸ್ತವ ಸ್ವಲ್ಪ ಮಟ್ಟಿಗಾದರೂ ಅರಿವಾಗುತ್ತಿದೆ. ಈ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಪ್ರಯತ್ನ ಪ್ರತಿ ಹಂತದಲ್ಲೂ ಆಗಬೇಕಿದೆ. ಶಿಕ್ಷಣ ಸಂಸ್ಥೆಗಳು, ಶಿಕ್ಷಕರು, ಬೋಧಕರು ಮತ್ತು ವಿಜ್ಞಾನ ಆಸಕ್ತರು ಈ ಕುರಿತು ಗಮನ ಹರಿಸಬೇಕಿದೆ.

ಬಹುತೇಕ ಎಲ್ಲ ಊರುಗಳಲ್ಲೂ ಗ್ರಹಣ ವೀಕ್ಷಣೆಯ ಕಾರ್ಯಕ್ರಮ ನಡೆಯುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಜನರ ಕೈಗೆಟುಕುವ ಬೆಲೆಯಲ್ಲಿ ಮಸೂರಗಳನ್ನು ವಿತರಿಸಲು ಹಲವಾರು ಸಂಸ್ಥೆಗಳು ಯತ್ನಿಸುತ್ತಿರುವುದರಿಂದ, ಗ್ರಹಣದ ದಿನ ನಾಲ್ಕು ಗೋಡೆಗಳ ನಡುವೆ ಕುಳಿತು ಮಂತ್ರ ಪಠಿಸುವ ಪ್ರವೃತ್ತಿ ಯುವ ಪೀಳಿಗೆಯಲ್ಲಾದರೂ ಕಡಿಮೆಯಾಗಬಹುದು. ಆದರೆ ಈ ಪ್ರಯತ್ನಗಳಿಗೆ ಪೂರಕವಾದ ವಾತಾವರಣ ಸೃಷ್ಟಿಸುವಲ್ಲಿ ಮಾಧ್ಯಮ ಕ್ಷೇತ್ರ ವಿಫಲವಾಗುತ್ತಿದೆ. ನಿಜ ಹೇಳಬೇಕೆಂದರೆ ಮಾಧ್ಯಮಗಳು ಈ ವೈಜ್ಞಾನಿಕ ಮುನ್ನಡೆಗೆ ಕಂಟಕವಾಗಿ ಪರಿಣಮಿಸುತ್ತಿವೆ. ನಮ್ಮ ಕನ್ನಡ ಸುದ್ದಿ ವಾಹಿನಿಗಳಿಗೆ ಸೃಷ್ಟಿ ವಿನಾಶದ ಬಗ್ಗೆ ಇರುವ ಕಾತರ, ಉತ್ಸಾಹ ಮತ್ತು ಆತಂಕ ಯಾವುದೇ ಸಮಚಿತ್ತ ಮನಸ್ಸನ್ನು ಸುಲಭವಾಗಿ ಕದಡಿಬಿಡುತ್ತದೆ. ಪ್ರತಿ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಗತಕಾಲದ ನಾಸ್ಟರ್ಡಮ್ ಟಿವಿ ಪರದೆಗಳ ಮೇಲೆ ವಿಜೃಂಭಿಸಿಬಿಡುತ್ತಾನೆ. ಇನ್ನೇನು ಪ್ರಳಯ ಸಂಭವಿಸಿಯೇ ಬಿಡುತ್ತದೆ, ಜಗತ್ತು ವಿನಾಶದತ್ತ ಸಾಗುತ್ತದೆ, ಮನುಕುಲ ತನ್ನ ಕೊನೆಯ ದಿನಗಳನ್ನು ಎಣಿಸಬೇಕಿದೆ ಎಂದು ರೋಚಕವಾಗಿ ಹೇಳುತ್ತಾ ಕಾಲಜ್ಞಾನಿ ನಾಸ್ಟರ್ಡಮ್‌ನ ಸ್ತುತಿ ಮಾಡುವ ಸುದ್ದಿ ವಾಹಕರು ಎಷ್ಟು ಉತ್ಸಾಹದಿಂದ ಸೃಷ್ಟಿ ವಿನಾಶದ ಬಗ್ಗೆ ವ್ಯಾಖ್ಯಾನ ಮಾಡುತ್ತಾರೆ ಎಂದರೆ, ಅವರ ಮುಖಭಾವ ಮತ್ತು ಹಾವಭಾವಗಳನ್ನು ನೋಡಿದರೆ ಸಂಭ್ರಮದ ವಾತಾವರಣ ಇದ್ದಂತೆ ಕಾಣುತ್ತದೆ. ವಿನಾಶದ ಸುದ್ದಿಯನ್ನು ರೋಮಾಂಚಕಾರಿಯಾಗಿ, ರಂಜನೀಯವಾಗಿ ಬಿತ್ತರಿಸುವ ಕಲೆ ಕನ್ನಡ ಮಾಧ್ಯಮಗಳ ಸುದ್ದಿವಾಹಕರಿಗೆ ಒಲಿದಿರುವುದು ಮಾಧ್ಯಮ ಲೋಕದ ಪುಣ್ಯವೋ, ನಾಗರಿಕರ ಶಾಪವೋ ಗೊತ್ತಿಲ್ಲ. ಆದರೂ ಈ ಮನರಂಜನೆಯನ್ನು ಜನರು ಇಷ್ಟಪಡುತ್ತಾರೆ. ನಿತ್ಯ ಜೀವನದ ಜಂಜಾಟದಿಂದ ಹೊರಬರಲು ಈ ಕಾರ್ಯಕ್ರಮಗಳು ನೆರವಾಗಬಹುದು.

 ಮಾಧ್ಯಮಗಳ ಈ ಆಟಾಟೋಪಕ್ಕೆ ಪೂರಕವಾಗಿ ವಾಹಿನಿಗೊಬ್ಬ ಜ್ಯೋತಿಷಿ, ಗುರೂಜಿ ಸಿದ್ಧರಾಗಿಬಿಟ್ಟಿದ್ದಾರೆ. ಇವರ ಜ್ಞಾನಾರ್ಜನೆ ಮತ್ತು ಜ್ಞಾನಭಂಡಾರ ಪ್ರಶ್ನಾತೀತ ಎನಿಸುವಷ್ಟು ಮಟ್ಟಿಗೆ ಸ್ಟುಡಿಯೋಗಳಲ್ಲಿ ಕುಳಿತು ರಾಶಿಫಲಗಳ ಮೂಲಕ ಜನಸಾಮಾನ್ಯರಲ್ಲಿ ಆತಂಕ ಹೆಚ್ಚಿಸಲು ಮಾಡುವ ಪ್ರಯತ್ನಗಳು ನಿಜಕ್ಕೂ ಗಮನಸೆಳೆಯುವಂತಹುದು. ಒಂದೆಡೆ ವಿನಾಶದ ಆತಂಕ ಮೂಡಿಸುವ ವಾಹಿನಿಗಳೇ ಮತ್ತೊಂದು ಕ್ಷಣದಲ್ಲಿ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅಪಾಯಗಳ ಆತಂಕ ಮೂಡಿಸುವ ಮೂಲಕ ದೇವಾಲಯಗಳ ಆದಾಯ ಹೆಚ್ಚಿಸುವುದನ್ನು ನೋಡಿದರೆ, ಮಾರುಕಟ್ಟೆ ವ್ಯವಸ್ಥೆ ಹೇಗೆ ಜನಸಾಮಾನ್ಯರ ನಂಬಿಕೆ ಮತ್ತು ಆತಂಕಗಳನ್ನು ಬಂಡವಾಳದಂತೆ ಬಳಸಿಕೊಳ್ಳುತ್ತದೆ ಎಂದು ತಿಳಿಯಬಹುದು. ಕಳೆದ ವರ್ಷ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದವರ ಬಗ್ಗೆ ಸುದ್ದಿ ಬಿತ್ತರಿಸುತ್ತಿದ್ದ ವಾಹಿನಿಯೊಂದು ‘‘ಇವರು 625 ಅಂಕಗಳಿಗೆ 625 ಗಳಿಸಿ ನೂರಕ್ಕೆ ನೂರು ಪಡೆದಿದ್ದಾರೆ, ಯಾವ ಯಾವ ವಿಷಯದಲ್ಲಿ ಎಷ್ಟು ಗಳಿಸಿದ್ದಾರೆ ನೋಡೋಣ ಬನ್ನಿ’’ ಎಂದು ಹೇಳಿದ್ದು ಈಗ ನೆನಪಾಗುತ್ತಿದೆ. ಏಕೆಂದರೆ ಒಂದು ಟಿವಿ ವಾಹಿನಿಯಲ್ಲಿ ‘‘ಈ ಬಾರಿ ಸೂರ್ಯಗ್ರಹಣ ಅಮಾವಾಸ್ಯೆಯಂದೇ ಸಂಭವಿಸುವುದರಿಂದ ಹೆಚ್ಚಿನ ಅಪಾಯ ಸಂಭವಿಸುತ್ತದೆ’’ ಎಂದು ಹೇಳಲಾಗಿದೆ. ಇರಲಿ, ಗ್ರಹಣ ಮತ್ತು ರಾಶಿಫಲದ ನಡುವೆ ಇರುವ ಸಂಬಂಧಗಳು ಜನಸಾಮಾನ್ಯರಲ್ಲಿ ಮೂಡಿಸುವ ಆತಂಕಗಳನ್ನು ನಿವಾರಿಸುವುದು ಹೇಗೆ ಎನ್ನುವ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ. ತನ್ನ ರಾಶಿಗೆ ಯಾವ ರೀತಿಯ ಅಶುಭಗಳಿವೆ ಎಂಬ ಆತಂಕದಿಂದ ವ್ಯಕ್ತಿಯೊಬ್ಬ ಎಲ್ಲ ವಾಹಿನಿಗಳ ರಾಶಿಫಲಗಳನ್ನೂ ನೋಡಿಬಿಟ್ಟರೆ ಬಹುಶಃ ಅವರೇ ಗ್ರಹಣಪೀಡಿತರಾಗಿ ಹುಚ್ಚರಾಗಿಬಿಡುತ್ತಾರೆ.

ತೊಗರಿಬೇಳೆ, ಉದ್ದಿನ ಕಾಳು, ಹುರುಳಿ ಕಾಳು , ಹೆಸರು ಕಾಳು, ಜೀರಿಗೆ, ಬೆಲ್ಲ, ಸಾಸುವೆ, ಕರಿಎಳ್ಳು ಹೀಗೆ ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲ ದವಸ ಧಾನ್ಯವನ್ನೂ ಗ್ರಹಣದ ಸಂದರ್ಭದಲ್ಲಿ ಪರಿಹಾರೋಪಾಯದ ಸಾಧನಗಳಾಗಿ ಪರಿವರ್ತಿಸಲಾಗುತ್ತದೆ. ಬೆಲ್ಲದ ದೀಪ, ಹಾಗಲಕಾಯಿ ದೀಪ, ತುಪ್ಪದ ದೀಪ ಹೀಗೆ ಈರುಳ್ಳಿಯೊಂದನ್ನು ಹೊರತುಪಡಿಸಿ ಉಳಿದೆಲ್ಲಾ ತರಕಾರಿ ದೀಪಗಳೂ ಗ್ರಹಣದ ದಿನ ಆರಾಧನಾಲಯಗಳಲ್ಲಿ ಪ್ರಜ್ವಲಿಸುವ ಸಾಧ್ಯತೆಗಳಿವೆ. ಹುರುಳಿ ಕಾಳು ದಾನ ಮಾಡುವುದರಿಂದ ದೋಷ ಪರಿಹಾರವಾಗುತ್ತದೆ ಎಂದು ಹೇಳುವ ಒಂದು ವಾಹಿನಿ ಮತ್ತೊಂದು ರಾಶಿಯವರಿಗೆ ಜಗದ್ಗುರು ಒಬ್ಬರ ಪಾದಪೂಜೆ ಕಡ್ಡಾಯವಾಗಿ ಮಾಡುವಂತೆ ಆಗ್ರಹಿಸುತ್ತದೆ. ಜಗದ್ಗುರುಗಳನ್ನು ಎಲ್ಲೆಂದು ಹುಡುಕಿಕೊಂಡು ಹೋಗುವುದು? ಪಾಪ ಎನಿಸುವುದಿಲ್ಲವೇ ? ಗ್ರಹಣ ಸಂಭವಿಸುವ ವೇಳೆ ವಾತಾವರಣದಲ್ಲಿ ಉಂಟಾಗುವ ವ್ಯತ್ಯಯಗಳನ್ನು ಹೊರತುಪಡಿಸಿ ಮತ್ತಾವುದೇ ರೀತಿಯಲ್ಲಿ ಮನುಷ್ಯರ ಮೇಲೆ ಪ್ರಭಾವ ಉಂಟಾಗುವುದಿಲ್ಲ ಎಂದು ಹೇಳಲು ಈ ವಾಹಿನಿಗಳಿಗೆ ಏನು ಧಾಡಿ ? ನಿಜ, ಟಿಆರ್‌ಪಿ ಮತ್ತು ಮಾರುಕಟ್ಟೆಯ ಲಾಭ ವಾಹಿನಿಗಳಿಗೆ ಮುಖ್ಯ. ಆದರೆ ಇದಕ್ಕೆ ಜನಸಾಮಾನ್ಯರಲ್ಲಿರುವ ನಂಬಿಕೆ, ಆತಂಕಗಳೇ ಬಂಡವಾಳವಾಗಬೇಕೇ? ರಾಶಿ ನಕ್ಷತ್ರಗಳ ಚಲನೆಗೂ, ಸೂರ್ಯ ಚಂದ್ರರ ಹೊಳಪಿಗೂ, ಭೂಮಿಯ ಮೇಲೆ ಬದುಕುವ ಜೀವಿಗಳ ನಿತ್ಯಜೀವನದ ಕಷ್ಟ ಕಾರ್ಪಣ್ಯಗಳಿಗೂ ಸಂಬಂಧ ಕಲ್ಪಿಸುವ ಮೂಲಕ ಮೌಢ್ಯೋಪಾಸನೆಯನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳುವುದು ಮಾಧ್ಯಮಗಳ ಕೆಲಸವೇ? ಯಾವುದೇ ಉತ್ತರದಾಯಿತ್ವವಿಲ್ಲದೆ, ಹೊಣೆಗಾರಿಕೆಯಿಲ್ಲದೆ ಜನಸಾಮಾನ್ಯರಲ್ಲಿ ರಾಶಿಫಲಗಳ ಮೂಲಕ ಭೀತಿ ಹುಟ್ಟಿಸಿ ಮೌಢ್ಯದ ಕೂಪಕ್ಕೆ ತಳ್ಳುವ ಗುರೂಜಿಗಳು, ಜ್ಯೋತಿಷಿಗಳು ಸಾಧಿಸುತ್ತಿರುವುದಾದರೂ ಏನನ್ನು? ವಾಹಿನಿಗಳ ಟಿಆರ್‌ಪಿ ಹೆಚ್ಚಾಗುತ್ತದೆ, ಲಾಭಗಳಿಕೆ ಹೆಚ್ಚಾಗುತ್ತದೆ, ಆರಾಧನಾಲಯಗಳ ಆದಾಯ ಹೆಚ್ಚಾಗುತ್ತದೆ. ಹೆಚ್ಚೆಂದರೆ ಇಂದಿನ ಗುರೂಜಿ ನಾಳಿನ ಮಠಾಧೀಶರಾಗುತ್ತಾರೆ. ಅಷ್ಟೇ ಅಲ್ಲವೇ? ಇದಕ್ಕೆ ಮಾಧ್ಯಮಗಳು ಚಿಮ್ಮುಹಲಗೆಯಾಗಬೇಕೇ? ಭೂಮಿಕೆಯಾಗಬೇಕೇ?

ಪ್ರಬುದ್ಧ, ಪ್ರಜ್ಞಾವಂತ, ವಿದ್ಯಾವಂತ, ಸುಶಿಕ್ಷಿತರ ಸಂಪಾದಕತ್ವದಲ್ಲೇ ನಡೆಯುವ ವಾಹಿನಿಗಳಿಗೆ ತಾವು ಮಾಡುತ್ತಿರುವ ತಪ್ಪು ಏನು ಎಂಬ ಪ್ರಜ್ಞೆಯಾದರೂ ಇದೆಯೇ ಎಂದು ಪ್ರಶ್ನಿಸಬೇಕಿದೆ. ಕ್ರೈಂ ಸ್ಟೋರಿಗಳಂತೆ ಕಂಕಣ ಗ್ರಹಣದಿಂದುಂಟಾಗುವ ಅಪಾಯಗಳನ್ನು ಕಪೋಲಕಲ್ಪಿತ ಕತೆಗಳ ಮೂಲಕ, ಹಾಲಿವುಡ್ ಚಿತ್ರಗಳ ದೃಶ್ಯಾವಳಿಗಳನ್ನು ಬಿತ್ತರಿಸುತ್ತಾ ಮನೆಮನೆಗೆ ತಲುಪಿಸುವ ಮೂಲಕ ಮಾಧ್ಯಮಗಳು ಸಾಧಿಸುವುದಾದರೂ ಏನನ್ನು? ಕನ್ನಡದ ಪ್ರಮುಖ ವಾಹಿನಿಗಳು ಬಿತ್ತರಿಸುತ್ತಿರುವ ಗ್ರಹಣದೋಷದ ಕಾರ್ಯಕ್ರಮಗಳಲ್ಲಿ ಜ್ಯೋತಿಷ್ಯ ಮತ್ತು ವಿಜ್ಞಾನದ ಮುಖಾಮುಖಿ ಎಂದು ಚರ್ಚೆ ನಡೆಸಲಾಗುತ್ತದೆ. ಆದರೆ ಸುದ್ದಿಯ ಆರಂಭದಲ್ಲೇ ಇನ್ನು ಮೂರು ತಿಂಗಳು ಕಾಡಲಿದೆಯೇ ಗ್ರಹಣ, ಗ್ರಹಣದಿಂದ ದೇಶದಲ್ಲಿ ರಕ್ತಪಾತವಾಗಲಿದೆಯೇ, ಮನುಕುಲ ನಾಶವಾಗಲಿದೆಯೇ ಎಂಬ ಪ್ರಶ್ನೆಗಳನ್ನು ಪರದೆಯ ಮೇಲೆ ದಹಿಸುವ ಡಿಜಿಟಲ್ ಬೆಂಕಿಯ ಮುಂದೆ ದಪ್ಪಅಕ್ಷರಗಳಲ್ಲಿ ಬಿತ್ತರಿಸುವುದನ್ನು ನೋಡಿದರೆ ಮಾಧ್ಯಮಗಳ ಮೂಲ ಉದ್ದೇಶ ಏನೆಂದು ಸ್ಪಷ್ಟವಾಗುತ್ತದೆ. ರಾಶಿ, ನಕ್ಷತ್ರ, ಶುಭ ಅಶುಭ, ಸಮಸ್ಯೆ ಪರಿಹಾರ, ದೋಷ ಮತ್ತು ದೋಷ ನಿವಾರಣೆ, ವ್ರತ, ಪೂಜೆ, ಹೋಮ, ಯಜ್ಞ ಯಾಗ ಹೀಗೆ ಈಗಾಗಲೇ ಜನಮಾನಸದಲ್ಲಿ ಆಳವಾಗಿ ಬೇರೂರಿರುವ ಮೌಢ್ಯ ಮತ್ತು ನಂಬಿಕೆಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನಗಳನ್ನು ಕನ್ನಡದ ವಿದ್ಯುನ್ಮಾನ ಮಾಧ್ಯಮಗಳು ಮಾಡುತ್ತಿವೆ. ದೇವರು ಮತ್ತು ದೈವತ್ವ, ದೇವರಲ್ಲಿನ ನಂಬಿಕೆ ಮತ್ತು ಮತಧಾರ್ಮಿಕ ಆಚರಣೆ ಇವೆಲ್ಲವೂ ವ್ಯಕ್ತಿಗತ ವಿಚಾರಗಳು. ವೈಜ್ಞಾನಿಕ, ವೈಚಾರಿಕತೆಯ ನೆಲೆಯಲ್ಲಿ ಇವುಗಳನ್ನು ಒಪ್ಪುವುದು ಬಿಡುವುದೂ ಸಹ ವ್ಯಕ್ತಿಗತ ವಿಚಾರ. ಆಚರಿಸುವ ಹಕ್ಕು ಇರುವಂತೆಯೇ ವಿರೋಧಿಸುವ ಹಕ್ಕೂ ಇದ್ದೇ ಇರುತ್ತದೆ. ಆದರೆ ದೇವರ ಕಲ್ಪನೆಗಳನ್ನೂ ಮೀರಿ ಬೇರೂರಿರುವ ಅವೈಜ್ಞಾನಿಕ ನಂಬಿಕೆಗಳು ಮತ್ತು ಮೌಢ್ಯ ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುತ್ತದೆ. ವೈಚಾರಿಕತೆಯನ್ನು ಮೈಗೂಡಿಸಿಕೊಳ್ಳದ ಸಮಾಜದಲ್ಲಿ ಹೊಸ ಚಿಂತನೆಗಳಿಗೆ ಅವಕಾಶ ಕ್ಷೀಣಿಸುತ್ತಾ ಹೋಗುತ್ತದೆ. ವೈಜ್ಞಾನಿಕ ಚಿಂತನೆಯನ್ನು ರೂಢಿಸಿಕೊಳ್ಳದ ಬದುಕಿನಲ್ಲಿ ಆತಂಕ ಹೆಚ್ಚಾಗುತ್ತಾ ಹೋಗುತ್ತದೆ. ಈ ಕ್ಷೀಣಿಸುವ ಚಿಂತನೆಗಳು, ಹೆಚ್ಚುವ ಆತಂಕಗಳು ಯಾವುದೋ ಒಂದು ಮಾರುಕಟ್ಟೆ ವ್ಯವಸ್ಥೆಗೋ, ಸಾಮುದಾಯಿಕ ಅಸ್ತಿತ್ವಕ್ಕೋ ಬಂಡವಾಳವಾಗುವುದನ್ನು ನಾವು ವಿರೋಧಿಸಲೇಬೇಕಿದೆ. ಹಾಗೆಯೇ ಸಾರ್ವಜನಿಕ ಹೊಣೆಗಾರಿಕೆ ಇರುವ, ಸಮಾಜವನ್ನು ಸರಿದಾರಿಯಲ್ಲಿ, ಚಿಂತನಶೀಲ ಮಾರ್ಗದಲ್ಲಿ ಮುನ್ನಡೆಸುವ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿ ಇರುವ ಮಾಧ್ಯಮ ಲೋಕಕ್ಕೆ ಈ ನಂಬಿಕೆಗಳು ಮತ್ತು ಆತಂಕಗಳು ಬಂಡವಾಳವಾಗುವುದನ್ನೂ ವಿರೋಧಿಸಬೇಕಿದೆ. ವಿಶ್ವದಲ್ಲಿ ಯಾವುದೇ ವಿನಾಶ ಎದುರಾದರೂ ಮತ್ತೊಂದು ಕ್ಷಣದಲ್ಲಿ ಸರಿಪಡಿಸಬಹುದು, ಪ್ರಜ್ಞೆಯ ವಿನಾಶವನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ. ಕಂಕಣ ಗ್ರಹಣ ಸೂರ್ಯನಿಗೆ ಮಾತ್ರವೇ ಹಿಡಿಯಲಿ ನಮ್ಮ ಮನಸ್ಸ್ಸು, ಪ್ರಜ್ಞೆಗೆ ಬೇಡ. ಅಲ್ಲವೇ ?

Writer - ನಾ ದಿವಾಕರ

contributor

Editor - ನಾ ದಿವಾಕರ

contributor

Similar News

ಜಗದಗಲ
ಜಗ ದಗಲ