10 ಲಕ್ಷ ರೂ.ಗಿಂತ ಹೆಚ್ಚಿನ ಬಾಕಿಯಿರಿಸಿದ ಸರಕಾರಿ ಏಜೆನ್ಸಿಗಳಿಗೆ ಟಿಕೆಟ್ ನಿರಾಕರಿಸಿದ ಏರ್ ಇಂಡಿಯಾ

Update: 2019-12-26 17:45 GMT

ಮುಂಬೈ, ಡಿ.26: ಸಿಬಿಐ, ಐಬಿ, ಬಿಎಸ್ಸೆಫ್ ಮತ್ತಿತರ ಸರಕಾರಿ ಏಜೆನ್ಸಿಗಳಿಂದ ಏರ್‌ಇಂಡಿಯಾಕ್ಕೆ 268 ಕೋಟಿ ರೂ. ಪಾವತಿ ಬಾಕಿಯಿದ್ದು 10 ಲಕ್ಷ ರೂ.ಗಿಂತ ಹೆಚ್ಚಿನ ಪಾವತಿ ಬಾಕಿಯಿರಿಸಿದ ಸರಕಾರಿ ಏಜೆನ್ಸಿಗಳ ಸಿಬಂದಿಗಳು ಕರ್ತವ್ಯದ ಮೇಲೆ ಪ್ರಯಾಣಿಸಲು ಟಿಕೆಟ್ ನೀಡದಿರಲು ನಿರ್ಧರಿಸಲಾಗಿದೆ ಎಂದು ಏರ್‌ಇಂಡಿಯಾ ಮೂಲಗಳು ತಿಳಿಸಿವೆ.

ಸಿಬಿಐ, ಐಬಿ, ಜಾತಿ ನಿರ್ದೇಶನಾಲಯ, ಕಸ್ಟಮ್ಸ್ ಆಯುಕ್ತರು, ಸೆಂಟ್ರಲ್ ಲೇಬರ್ ಇನ್‌ಸ್ಟಿಟ್ಯೂಟ್, ಇಂಡಿಯನ್ ಆಡಿಟ್ ಬೋರ್ಡ್, ಕಂಟ್ರೋಲರ್ ಆಫ್ ಡಿಫೆನ್ಸ್ ಅಕೌಂಟ್ಸ್, ಬೋರ್ಡರ್ ಸೆಕ್ಯುರಿಟಿ ಫೋರ್ಸ್(ಬಿಎಸ್ಸೆಫ್) ಸಹಿತ ಸರಕಾರಿ ಏಜೆನ್ಸಿಗಳ ಅಧಿಕಾರಿಗಳು ಮತ್ತು ಸಿಬಂದಿಗಳು ಸರಕಾರಿ ಕರ್ತವ್ಯದ ಮೇಲೆ ಪ್ರಯಾಣಿಸುವಾಗ ಏರ್‌ಇಂಡಿಯಾ ವಿಮಾನದಲ್ಲೇ ಪ್ರಯಾಣಿಸಬೇಕು ಎಂಬ ನಿಯಮವಿದೆ. ಒಂದು ವೇಳೆ ಪ್ರಯಾಣಿಸುವ ಸ್ಥಳಕ್ಕೆ ಏರ್‌ಇಂಡಿಯಾ ವಿಮಾನ ಸೇವೆ ಲಭ್ಯವಿಲ್ಲದಿದ್ದರೆ ಮಾತ್ರ ಖಾಸಗಿ ಸಂಸ್ಥೆಗಳ ಸೇವೆಯನ್ನು ಪಡೆಯಬಹುದಾಗಿದೆ. ಸರಕಾರಿ ಏಜೆನ್ಸಿಗಳಿಂದ ಬರಬೇಕಾದ ಬಾಕಿಯ ವಿವರವನ್ನು ಸಂಗ್ರಹಿಸುವಂತೆ ಕಳೆದ ತಿಂಗಳು ಏರ್‌ಇಂಡಿಯಾದ ಹಣಕಾಸು ವಿಭಾಗ ಎಲ್ಲಾ ವಲಯ/ ಸ್ಟೇಷನ್‌ಗೆ ಸೂಚಿಸಿತ್ತು. ಇದೀಗ ಪಟ್ಟಿ ಸಿದ್ಧವಾಗಿದ್ದು 10 ಲಕ್ಷ ರೂ.ಗಿಂತ ಅಧಿಕ ಬಾಕಿ ಇರಿಸಿಕೊಂಡಿರುವ ಏಜೆನ್ಸಿಗಳ ಸಿಬಂದಿಗಳನ್ನು ‘ನಗದು ಪಾವತಿಸಿ ಪ್ರಯಾಣಿಸುವ’ ವಿಭಾಗದಲ್ಲಿ ಸೇರಿಸಲಾಗಿದೆ. ಹಣ ಪಾವತಿಸಿದರೆ ಮಾತ್ರ ಟಿಕೆಟ್ ನೀಡಲಾಗುತ್ತಿದೆ. ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಲೋಕಸಭೆಗೆ ಇದರಿಂದ ವಿನಾಯಿತಿ ನೀಡಲಾಗಿದೆ.

 ಕಳೆದ ವಾರ ಕಾರ್ಮಿಕ ಆಯುಕ್ತರನ್ನೂ ವಿನಾಯಿತಿ ಪಟ್ಟಿಗೆ ಸೇರಿಸಲಾಗಿದೆ. ಕಾರ್ಮಿಕ ಆಯುಕ್ತರಿಂದ ಏರ್‌ಇಂಡಿಯಾಕ್ಕೆ 55 ಲಕ್ಷ ರೂ. ಬರಬೇಕಿದೆ. ಏರ್‌ಇಂಡಿಯಾದ ಹಲವು ಉದ್ಯೋಗಿಗಳು ಸಂಸ್ಥೆಯ ವಿರುದ್ಧ ಕಾರ್ಮಿಕ ಆಯುಕ್ತರಲ್ಲಿ ದೂರು ದಾಖಲಿಸಿದ್ದಾರೆ. ಈಗ ಕಾರ್ಮಿಕ ಆಯುಕ್ತರನ್ನು ವಿನಾಯಿತಿ ಪಟ್ಟಿಗೆ ಸೇರಿಸಿರುವುದು ಹಿತಾಸಕ್ತಿಯ ಸಂಘರ್ಷಕ್ಕೆ ಆಸ್ಪದ ನೀಡಿದಂತಾಗಿದೆ ಎಂಬ ವಾದವೂ ಕೇಳಿ ಬಂದಿದೆ. ಈ ಏಜೆನ್ಸಿಗಳು ಬಾಕಿ ಪಾವತಿಸಲು ಬಹಳ ಸಮಯ ಬೇಕಾಗುತ್ತದೆ. ಕಳೆದ ಕೆಲ ವಾರದಲ್ಲಿ ಸುಮಾರು 50 ಕೋಟಿ ರೂ. ಸಂಗ್ರಹಿಸಿದ್ದೇವೆ. ಇದೇ ಪ್ರಪ್ರಥಮ ಬಾರಿಗೆ ಬಾಕಿ ಇರಿಸಿಕೊಂಡಿರುವ ಸರಕಾರಿ ಏಜೆನ್ಸಿಗಳ ಪಟ್ಟಿಯನ್ನು ಸಿದ್ಧಮಾಡಲಾಗಿದ್ದು ಈ ಯೋಜನೆ ಯಶಸ್ವಿಯಾಗಿದೆ ಎಂದು ಏರ್‌ಇಂಡಿಯಾ ಅಧಿಕಾರಿ ಹೇಳಿದ್ದಾರೆ.

 ಕಂಟ್ರೋಲರ್ ಆಫ್ ಡಿಫೆನ್ಸ್ ಅಕೌಂಟ್ಸ್ 5.4 ಕೋಟಿ ರೂ, ಬೋರ್ಡ್ ಆಫ್ ರೇಡಿಯೇಷನ್ ಆ್ಯಂಡ್ ಐಸೊಟೋಪ್ ಟೆಕ್ ಸೈಂಟಿಫಿಕ್ ಆಫೀಸರ್-ಡಿ 2.4 ಕೋಟಿ ರೂ, ಲೋಕಸಭೆ ಕಾರ್ಯನಿರ್ವಾಹಕ ಅಧಿಕಾರಿ 2.2 ಕೋಟಿ ರೂ, ಸಿಬಿಐ 95 ಲಕ್ಷ ರೂ, ಜಾರಿ ನಿರ್ದೇಶನಾಲಯ 12.8 ಲಕ್ಷ ರೂ, ಸೆಂಟ್ರಲ್ ರೈಲ್ವೇ 36 ಲಕ್ಷ ರೂ, ವೆಸ್ಟರ್ನ್ ರೈಲ್ವೇ 4.8 ಲಕ್ಷ ರೂ. ಬಾಕಿ ಇರಿಸಿಕೊಂಡಿವೆ. ಸಣ್ಣ ಮೊತ್ತದ ಬಾಕಿ ಇರಿಸಿಕೊಂಡವರಲ್ಲಿ ಮುಂಬೈ ಪೊಲೀಸ್ 7,781 ರೂ. ಪೊಲೀಸ್ ಅಧೀಕ್ಷಕರು 3,811 ರೂ, ಮುಂಬೈ ಕ್ರೈಂಬ್ರಾಂಚ್ ಪೊಲೀಸ್ ಆಯುಕ್ತರು 3,970 ರೂ. ಸೇರಿದ್ದಾರೆ ಎಂದು ಏರ್‌ಇಂಡಿಯಾದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News