ಮತಾಂತರ ಮತ್ತು ಹಿಂದುತ್ವ

Update: 2019-12-26 18:32 GMT

ಧರ್ಮಾಂತರವೆಂದೊಡನೆ ರಾಷ್ಟ್ರಾಂತರವಾಗುವುದೆಂದು ಭಾವಿಸಲೇಬೇಕಾಗಿಲ್ಲ. ಧರ್ಮಾಂತರ ಹೊಂದಿದ ಮಾತ್ರಕ್ಕೆ ನಮ್ಮ ದಲಿತರ ಶೋಷಣೆಯೂ ನಿಲ್ಲುವುದೆಂದಲ್ಲ. ಇದರಿಂದ ಒಂದು ಭದ್ರತೆ ಸಂಘಶಕ್ತಿಯ ಭರವಸೆ ಅವರಿಗೆ ಬರುತ್ತದೆ. ಅವರ ಅನಾಥ ಪ್ರಜ್ಞೆ ನೀಗಿದಂತೆ ಅನಿಸುತ್ತದೆ. ಆ ಭದ್ರತೆ, ಆ ಕ್ಷೇಮ ಭಾವನೆ ಹಿಂದೂ ಧರ್ಮದಲ್ಲಿ ಅವರಿಗೆ ಎಂದೂ ಅನುಭವಕ್ಕೆ ಬಂದಿರಲಿಲ್ಲ. ಕನಕದಾಸನ ಕಥೆಯೊಂದು ಬಿಟ್ಟರೆ ಯಾವ ಮಠಾಧಿಪತಿಗಳು ಯಾವ ಸನಾತನಿ ಸವರ್ಣ ಸಮಾಜದವರು ಹರಿಜನರನ್ನು ಹೊಲೆ ಮಾದಿಗರನ್ನು ತಮ್ಮವರಾಗಿ ತಿಳಿದು ಹತ್ತಿರ ಕರೆದದ್ದುಂಟು?

 ‘‘ಮತಂ ತು ದುರ್ಬಲಂ ಮನ್ಯೇ ಮತಿರೇವ ಗರೀಯಸೀ’’- ಶ್ರೀಕೃಷ್ಣ ಭಕ್ತ ಉದ್ಧವನಿಗೆ ಹೇಳಿದ್ದಾನೆ- ಭಾಗವತ ಪುರಾಣದಲ್ಲಿ. ಇದೀಗ ನಾನು ಆರಂಭಿಸಿದ್ದು ಪುರಾಣ ಪ್ರವಚನವಲ್ಲ. ಮತವೆಂಬುದು ದುರ್ಬಲ, ಮತಿಯೇ ಮುಖ್ಯ- ಎಂಬ ಮಾತು ಒಂದು ಸನಾತನ ಅಥವಾ ಸಾರ್ವಕಾಲಿಕ ಸತ್ಯ. ಈ ದೃಷ್ಟಿಯಿಂದ ನಾವು ಸದ್ಯದ ಸಾಮುದಾಯಿಕ ಮತಾಂತರಗಳ ಪ್ರಶ್ನೆಯನ್ನು ಗಮನಿಸಬೇಕು.

 ಒಬ್ಬ ಚೂಟಿ ಮಗ ಅಪ್ಪನಿಗೆ ಕೇಳಿದನಂತೆ: ‘‘ಅಪ್ಪಾ, ಒಬ್ಬ ನಮ್ಮ ಧರ್ಮ ಬಿಟ್ಟು ಬೇರೆ ಧರ್ಮ ಸೇರಿದರೆ ಅವನಿಗೆ ಏನೆನ್ನಬೇಕು?’’ ಅಪ್ಪ ಕೂಡಲೇ ಗರ್ಜಿಸಿದ: ‘‘ಥೂ. ಆತ ಪಾಪಿ, ಆತ ಧರ್ಮದ್ರೋಹಿ ! ಅವನಿಗೆ ಸ್ಪೆಶಲ್ ನರಕ !’’ ಮಗನ ಕುತೂಹಲ ಅಲ್ಲಿಗೇ ಮುಗಿಯಲಿಲ್ಲ. ‘‘ಆದರೆ ಅಪ್ಪಾ, ಒಬ್ಬ ಇನ್ನೊಂದು ಧರ್ಮ ಬಿಟ್ಟು ನಮ್ಮ ಧರ್ಮಕ್ಕೆ ಬಂದರೆ?’’ ಆತ ಕೇಳಿದ. ‘‘ಮಗೂ, ಅದು ಧರ್ಮಾಂತರ. ಅದನ್ನು ನಾವು ಪ್ರೋತ್ಸಾಹಿಸಬೇಕು.

ಹೀಗಿದೆ ಮತಾಂತರ (ಧರ್ಮಾಂತರ)ಗಳ ಬಗೆಗೆ ನಮ್ಮ ಸರ್ವಸಾಧಾರಣ ನಿಲುಮೆ. ಈ ಪಾತಳಿಯಲ್ಲಿಯೂ ಮತವೇ ದುರ್ಬಲ; ಮತಿಯೇ ಮಿಗಿಲು. (ನಮ್ಮಲ್ಲಿಯ ದಿನನಿತ್ಯದ ಸಾಮೂಹಿಕ ಪಕ್ಷಾಂತರಕ್ಕೂ ಇದೇ ಸೂತ್ರ ಅನ್ವಯಿಸುತ್ತದೆ. ಅದು ರಾಜಕೀಯ ಮತಾಂತರ).

ಮೀನಾಕ್ಷಿಪುರಂ ಮುಂತಾದ ಎಡೆಗಳಲ್ಲಿ ಸದ್ಯ ಟೈಂ ಬಾಂಬಿನಂತೆ ಸ್ಫೋಟವಾದ ಸಾವಿರಾರು ದಲಿತರ ಸಾಮೂಹಿಕ ಮತಾಂತರದ ಸಂದರ್ಭದಲ್ಲಿ ಈ ಮತ-ಮತಿಗಳ ಸಮಸ್ಯೆಗೆ ಎಂದಿಲ್ಲದ ಮಹತ್ವ ಬಂದಿದೆ. ಇಲ್ಲಿಯೂ ಮತಕ್ಕಿಂತ ಮತಿಗೇ ಪ್ರಾಧಾನ್ಯ. ಬಂಧಕ್ಕೂ ಮೋಕ್ಷಕ್ಕೂ ಮನಸ್ಸೇ ಪ್ರಧಾನ. ಈ ಮತಾಂತರಗಳ ಹಿಂದೆ ಕೆಲಸ ಮಾಡಿದ, ಮಾಡುವ ಮನೋಧರ್ಮ, ಮತಿವಿಕಾರ ಯಾವುದು?

ನಮ್ಮ ಹರಿಜನರು, ದೀನ ದಲಿತರು ಅರಬ್ ರಾಷ್ಟ್ರಗಳಿಂದ ಹೇರಳವಾಗಿ ಹರಿದು ಬಂದ ಹಣಕ್ಕೆ, ಬಟ್ಟೆ ಬರೆಗಳಿಗೆ, ಅನ್ಯ ಆಮಿಷಗಳಿಗೆ ಮನಸೋತು ಹೀಗೆ ಮುಸ್ಲಿಮರ ಧರ್ಮವನ್ನು ಆಲಿಂಗಿಸಿದರೆಂಬ ಒಂದು ವಾದವಿದೆ. ಆದರೆ ಇದರ ಹುರುಳೇನು? ತಗ್ಗಿದ್ದಲ್ಲಿ ಹಳ್ಳ ಹರಿಯುತ್ತದೆ. ಈ ದುರ್ದೈವಿ ಜನಗಳಿಗೆ ತಲೆಮಾರುಗಳಿಂದಲೂ ಬದುಕು ತಲೆಭಾರ, ತಲೆಬೇನೆ. ದಾರಿದ್ರ ಹೀನಾಯ. ಮೇಲ್ವರ್ಗ (‘‘ಪುಣ್ಯವಂತ’’ರ)ದವರ ದಬ್ಬಾಳಿಕೆ ಶೋಷಣೆಗಳ ತೊತ್ತು ಬಾಳಿಗೆ ಪಳಗಿ ಬಂದವರಿಗೆ, ಮನ್ನಣೆಯ ತುತ್ತು ಕೂಳಿಗೂ ಗತಿ ಇಲ್ಲದವರಿಗೆ ಹಣದ ‘ಆಮಿಷ’ವೆಂದು ಹೇಳುವುದೇ ಒಂದು ಪಾಪ-ಗಾಯಕ್ಕೆ ಬರೆ ಕೊಟ್ಟಂತೆ. (Adding insult to injury) ಹಣದ ಮೋಹ ಯಾರಿಗೆ ತಪ್ಪಿದೆ? ನಮ್ಮ ಧರ್ಮ ಮಾರ್ತಾಂಡರಿಗೆ, ಮಠಾಧಿಪತಿಗಳಿಗೆ, ದೇವಸ್ಥಾನಗಳಿಗೆ, ಧರ್ಮದರ್ಶಿಗಳಿಗೆ ಅದು ಬಿಟ್ಟಿದೆಯೇ? (ಇಲ್ಲಿ ಲಂಚಬಡಕ ಲಾಭಬಡಕ ಕಳ್ಳಪೇಟೆ ರಾಜಕೀಯಗಳ ಶ್ರೇಷ್ಠಗಳ ‘‘ಮಹಾಜನ’’ ಸಮೂಹವನ್ನು ಬಿಟ್ಟಿದ್ದೇನೆ.)

''Give O dog a bad name and hang it''  ಎಂಬಂತೆ ಈ ದಲಿತರನ್ನು ಧರ್ಮಾಂತರಕ್ಕಾಗಿ ಹಳಿಯುವುದು ನಮ್ಮ ಹಿಂದೂಗಳೆಂಬ ಸವರ್ಣಕರಿಗೆ ಶೋಭಿಸುವುದಿಲ್ಲ. ಕ್ರೈಸ್ತ, ಇಸ್ಲಾಂ, ಬೌದ್ಧ ಇಂಥವು ಪ್ರಸರಣಶೀಲ ಧರ್ಮಗಳು. ಆದರೆ ಆ ದೃಷ್ಟಿಯಲ್ಲಿ ಹಿಂದೂ ಒಂದು ಧರ್ಮವಲ್ಲ. ಅದೊಂದು ಸಂಸ್ಕೃತಿಯ ಮಾದರಿ. ಇದು ಸನಾತನ. ಹಿಂದೂವಾಗಲು ದೀಕ್ಷೆ ಧಮಾಂತರಗಳಿಲ್ಲ. ಹಿಂದೂ ಹುಟ್ಟಿಯೇ ಬರಬೇಕು-ಅದೂ ಯಾವುದೊಂದು ಜಾತಿಯಲ್ಲ. ಸ್ವರಾಜ್ಯದ ಹಕ್ಕಿನಂತೆಯೇ ಹಿಂದುತ್ವ ಜನ್ಮಸಿದ್ಧ.

ಅಂದರೇನು? ಹಿಂದುತ್ವ ಬಿಡುವುದು ಅದನ್ನು ಪಡೆಯುವುದಕ್ಕಿಂತ ಬಲು ಸುಲಭ. ಇದೊಂದು ಹಿಂದೂ ಧರ್ಮವೆಂಬ ಬದುಕಿನ ಮಾದರಿಯ ಒಂದು ಲಕ್ಷಣ. ಇದನ್ನು ದೋಷವೆಂದು ಹೇಳುತ್ತಿಲ್ಲ. ನಮ್ಮ ವಿಶಿಷ್ಟ ಐತಿಹಾಸಿಕ ಪರಂಪರೆಯ ಪರಿಪಾಕವಿದು. ಪ್ರಾಚೀನ ಕಾಲದಲ್ಲಿ ಕ್ರೈಸ್ತ ಇಸ್ಲಾಂ ಧರ್ಮಗಳು ದೇಶಕ್ಕೆ ಆಮದು ಆಗದಿದ್ದಾಗ ಈ ಧರ್ಮ ಪ್ರಾಚೀನ ಮಿಸ್ರ (ಈಜಿಪ್ಟ್), ಗ್ರೀಕ್ ಹಾಗೂ ರೋಮನ್ ಧರ್ಮಗಳಂತೆಯೇ ಜನ್ಮಸಿದ್ಧ, ರೂಢಿಬದ್ಧವಾಗಿ ಊರ್ಜಿತವಾಗಿ ಅವುಗಳ ಪ್ರಸರಣಶೀಲ ಆಕ್ರಮಣ ಆಕರ್ಷಣೆಯ ಇದಿರು ಈ ಧರ್ಮಗಳು ತಾಳಲಿಲ್ಲ. ಬರೀ ಸಾಂಸ್ಕೃತಿಕವಾಗಿ ( ಕಲೆ ಕಾವ್ಯ ಶಿಲ್ಪಗಳ ಅಂಶವಾಗಿ ಭಾಷಾ ರೂಪವಾಗಿ) ಬಾಳಿ ಉಳಿದವು.

ಆದರೆ ಭಾರತದಲ್ಲಿ ಹಿಂದೂ ಧರ್ಮ ಬಹುಸಂಖ್ಯ ಸ್ವರೂಪದಲ್ಲಿ ಇಂದಿಗೂ ತಾಳಿ ಬಾಳಿ ಉಳಿಯಿತು. ಸರ್ ಮುಹಮ್ಮದ್ ಇಕ್ಬಾಲ್ ಹೆಮ್ಮೆಯಿಂದ ಹಾಡಿದಂತೆ.

‘‘ಯೂನಾನೊ ಮಿಸ್ರ ರೂಮಾ

ಸಬ ಮಿಟಗಯೇ ಜಹಾಂಸೆ

ಅಬತಕ್ ಮಗರ ಹೈ ಬಾಕಿ

ನಾಮೋ ನಿಶಾಂ ಹಮಾರಾ

ಸಾರೇ ಜಹಾಂಸೆ ಅಚ್ಛಾ

ಹಿಂದೂಸ್ಥಾನ್ ಹಮಾರಾ!’’

ಆದರೂ ಐತಿಹಾಸಿಕ ಕಾರಣಗಳ ಪ್ರಬಲ ಪ್ರಭಾವದಿಂದ ನಮ್ಮಲ್ಲಿ ಇಸ್ಲಾಂ ತಳವೂರಿ ಭರದಿಂದ ಬೆಳೆದು ಹಬ್ಬಿತು-ವಿಶೇಷತಃ ಉತ್ತರ ಭಾರತದಲ್ಲಿ. ಹಿಂದೂ ಸಂಸ್ಕೃತಿ ದಕ್ಷಿಣದಲ್ಲಿ ಭದ್ರವಾಗಿ ಉಳಿಯಿತು. (ಉತ್ತರದಲ್ಲಿ ಹಿಂದೂಗಳೂ ಮುಸ್ಲಿಮರಂತೆ ಕಂಡರೆ, ದಕ್ಷಿಣದಲ್ಲಿ ಮುಸ್ಲಿಮರೂ ಹಿಂದೂಗಳಂತೆ ಕಾಣುತ್ತಾರೆ!) ಕೊನೆಗೂ ದೇಶದ ವಿಭಜನೆ ಆಗುವಂತೆ ಪ್ರಾದೇಶಿಕ ಬಹುಸಂಖ್ಯೆಯಲ್ಲಿ ಮುಸ್ಲಿಮರ ಜನಾಂಗ ಉತ್ತರದಲ್ಲಿ ಬೆಳೆಯಿತು. ಅವರಲ್ಲಿ ಬಹುಸಂಖ್ಯೆ ಎಂದೋ ಹೇಗೋ ಮತಾಂತರ ಹೊಂದಿದ ಹಿಂದೂಗಳೇ. ಈ ರೀತಿ ದೊಡ್ಡ ಮೊತ್ತದಲ್ಲಿ ಮತಾಂತರ ಹೊಂದಿದವರು ಯಾರು? ಸವರ್ಣ ಉಚ್ಚವರ್ಣ ಹಿಂದೂಗಳು ಶತಮಾನಗಳಿಂದ ದೂರವಿಟ್ಟು, ಕೀಳಾಗಿ ಕಂಡ ತಥಾಕಥಿತ ಕೆಳಜಾತಿಯವರು-ಶೂದ್ರರೂ ಅತಿಶೂದ್ರರೂ ಆದಿವಾಸಿಗಳೂ ಅಂತ್ಯಜರೂ ಈ ಪತಿತ ದಲಿತ ಕೋಟಿಯವರು. ಇಂದಿಗೂ ಹಿಂದೂಗಳಲ್ಲಿ ಇವರು ಹೆಚ್ಚು ಕಡಿಮೆ 10ಕೋಟಿ ಇದ್ದಾರೆ.

 ನಿಜವಾಗಿಯೂ ಚಾತುರ್ವಣ್ಯ, ವೈದಿಕ ಸಂಸ್ಕಾರ, ಗೋತ್ರ -ಪ್ರವರ-ಮಂತ್ರ ತಂತ್ರಗಳೇ ಹಿಂದೂ ಧರ್ಮವಾಗಿದ್ದರೆ ಈ ಜನರು ಹಿಂದೂಗಳೇ ಅಲ್ಲ! ಮನು ಸ್ಮತಿಯೂ ಇವರನ್ನು ಊರ ಹೊರಗೆ ಇಟ್ಟಿದೆ. ಕ್ರೈಸ್ತ, ಇಸ್ಲಾಂ ಧರ್ಮಗಳು ಇಲ್ಲದಿರುವಾಗಲೂ ಈ ದುರ್ದಶೆಗೊಳಗಾಗಿ ತೊಳಲಾಡುತ್ತಿದ್ದ ಅತಿ ಶೂದ್ರರಿಗೂ ಅಂತ್ಯಜರಿಗೂ ಅಸ್ಪಶ್ಯರಿಗೂ ಇದೇ ನಾಯಿಬಾಳು, (‘‘ಶುನಿ ಚೈವ ಶ್ವಪಾಕೇ ಚ’’!)

ಇಂಥ ಬಹುಜನ ಸಮುದಾಯ ಪರಧರ್ಮ ಸೇರುವುದು ಪುಣ್ಯ ಲಾಭಕ್ಕಲ್ಲ. ಮೋಕ್ಷ ಪ್ರಾಪ್ತಿಗಲ್ಲ. ದೇವರಿಗಾಗಿಯೂ ಅಲ್ಲ. ಧರ್ಮದಲ್ಲಿ ಮೊದಲು ಅಭ್ಯುದಯ ಆಮೇಲೆ ನಿಃಶ್ರೇಯಸ. ಅವರಿಗೆ ತಾವು ಇದ್ದ ಧರ್ಮದಲ್ಲಿ ಭದ್ರತೆ, ಸುಖ ಸೌಕರ್ಯ ತಲೆತಲಾಂತರಗಳಿಂದಲೂ ಸಿಗಲಿಲ್ಲ. ಇವರನ್ನು ತಿರುಗಿ ಹಿಂದೂ ಧರ್ಮಕ್ಕೆ ತರುವುದೂ ಒಂದು ಅಭಾಸ. ಹಾಗೆ ಬಂದರೆ ಅವರು ಅತೋಭ್ರಷ್ಟ, ತತೋಭ್ರಷ್ಟ! ಅವರದೇ ಒಂದು ಹೊಸ ಜಾತಿ ಆದೀತು. ಹೀಗೆ ಶುದ್ಧೀಕರಣಗೊಂಡವರು ತಮ್ಮ ಮೂಲ ಜಾತಿಗೆ ಸೇರಬೇಕು-ಅಂದರು ಪೂಜ್ಯ ಪೇಜಾವರ ಶ್ರೀಗಳು. ಆದರೆ ಬ್ರಾಹ್ಮಣ ಜಾತಿಗೆಟ್ಟು ಶುದ್ಧೀಕರಣಗೊಂಡರೂ ಪುನಃ ಬ್ರಾಹ್ಮಣನಾಗಲಾರ- ಅಂದರು ಶ್ರೀ ಕಾಂಚೀ ಸ್ವಾಮಿಗಳು, ನಾವು ಕೇಳಿದಾಗ!

ಅಂದಾಗ ಮುಂದೇನು? ಹಿಂದೂಗಳೆಲ್ಲ ಬಂಧುಗಳು ಅಂದಮಾತ್ರಕ್ಕೆ ಏನೂ ಪ್ರಯೋಜನವಿಲ್ಲ. ನಾವು ಬಂಧು ಬಳಗದಲ್ಲಿ ಆದರೂ ಎಲ್ಲಿ ಎಷ್ಟು ಆತ್ಮೀಯ ಐಕ್ಯದಲ್ಲಿ ನಲಿಯುತ್ತಿದ್ದೇವೆ? ದಾಯಾದಿ ಕಲಹ ಹುಟ್ಟುವುದೇ ಬಂಧುಗಳಲ್ಲಿ!

ಮುಖ್ಯ ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಹಿಂದುತ್ವದ ಕಲ್ಪನೆಯೇ, ವ್ಯಾಖ್ಯೆಯೇ ಬದಲಾಗಬೇಕು. ಸಾವರ್ಕರರು ಅದನ್ನೇ ಸಾರಿ ಸಾರಿ ಸಾಧಿಸುತ್ತಾ ದೇಹಬಿಟ್ಟರು. ‘‘ಹಿಂದೂ ಕಬೀಂ ಬಾಚತ ನಾಹಿ ಮುಸಲ್ಮಾನಾಂಚ ಅನ್ನ ನವ್ಹೆ, ಸಬಂಧ ಮುಸಲ್ಮಾನಲಾ ಖಾತ್ಲಾತರೀ ಹಿಂದೂ ಬಾಚತ ನಾಹೀಂ(ಹಿಂದುವು ಎಂದೂ ಜಾತಿಗೆಡುವುದಿಲ್ಲ. ಮುಸಲ್ಮಾನರ ಅನ್ನವಲ್ಲ ಇಡಿಯ ಮುಸಲ್ಮಾನನನ್ನೇ ತಿಂದರೂ ಹಿಂದುವು ಜಾತಿ ಗೆಡುವುದಿಲ್ಲ!)

Indianಅಂದರೆ ಹಿಂದುತ್ವ ನಮ್ಮ ರಾಷ್ಟ್ರೀಯತ್ವ. ಕ್ರೈಸ್ತರೂ, ಮುಸ್ಲಿಮರೂ, ಶೈವರಂತೆ,ವೈಷ್ಣವರಂತೆ, ಶಿಖ್ಖರಂತೆ, ಬೌದ್ಧರಂತೆ ಒಂದು ಮತಪಂಥಕ್ಕೆ ಒಪ್ಪಿದ ಹಿಂದೂಗಳೇ. ನಮ್ಮ ಮುಸ್ಲಿಮರು ಹಿಂದೂ ಮುಸ್ಲಿಮರು. ಕ್ರೈಸ್ತರು ಹಿಂದೂ ಕ್ರೈಸ್ತರು.ಅಂದಾಗ ಇಲ್ಲಿ ‘ಹಿಂದೂ’ ಪದವು . ಭಾರತೀಯ ಎಂಬ ಅರ್ಥದಲ್ಲಿಯೇ ಗ್ರಹಿಸಬೇಕು. ಈ ದೃಷ್ಟಿಯಿಂದಲೇ ಮೊದಲು ಪಾಕಿಸ್ತಾನ ಉಂಟಾದಾಗ ವಿಶ್ವ ಸಂಸ್ಥೆಯಲ್ಲಿ ಅದಕ್ಕೆ ಮನ್ನಣೆ ಕೂಡಲು ಅಫ್ಘಾನಿಸ್ತಾನ ವಿರೋಧಿಸಿತು-ವಿರುದ್ಧ ಮತ ನೀಡಿತು.

 ಅರಬ, ಅಫ್ಘಾನ, ಇರಾಕ್, ಇರಾನ್ ಆದಿ ರಾಷ್ಟ್ರಗಳಲ್ಲಿ ಅಲ್ಲಿಯ ಜನತೆಯ ಇಸ್ಲಾಂ ಧರ್ಮ ಅವರ ರಾಷ್ಟ್ರೀಯತೆಯೊಂದಿಗೆ ಸಮವ್ಯಾಪ್ತ (ಪಾಕಿಸ್ತಾನದ ಮುಸ್ಲಿಮರೂ ಹಾಗೆಯೇ ಮಾಡಿಕೊಂಡರು) ಆದರೆ ಭಾರತ ಅಥವಾ ಹಿಂದೂಸ್ಥಾನದಲ್ಲಿ ನಾವೆಲ್ಲ ಹಿಂದೂಗಳೇ. ಇಲ್ಲಿಯ ಕ್ರೈಸ್ತರೇನು, ಮುಸ್ಲಿಮರೇನು, ಸಿಖ್ಖರೇನು, ಬೌದ್ಧರೇನು-ಎಲ್ಲರೂ ಹಿಂದುತ್ವಕ್ಕೆ ಒಳಪಟ್ಟವರೇ ಅವರವರ ಮತೀಯ ಪಂಥಗಳು ಅವರವರಿಗೇ ಖಾಸಗಿ ಶ್ರದ್ಧೆ. ಆದರೆ ಅದೆಲ್ಲಾ ಹಿಂದುತ್ವದಲ್ಲಿಯೇ ಸಮಾವೇಶಗೊಳ್ಳಬೇಕು. ಸನಾತನ ಧರ್ಮದ ಸ್ವರೂಪವೇ ಹಾಗಿದೆ. ನಾವು ಬುದ್ಧನನ್ನು ದಶಾವತಾರಗಳಲ್ಲಿ ಸೇರಿಸಿಕೊಂಡಿದ್ದೇವೆ. ಹಿಂದೂ ಧರ್ಮದ ದೃಷ್ಟಿಯಲ್ಲಿ ಯೇಸು ಕ್ರಿಸ್ತ, ಮುಹಮ್ಮದ್ ಪೈಗಂಬರರೂ ಅವತಾರಿಗಳು ಆಗಬಲ್ಲರು.

ಭಾರತದ ಮುಸ್ಲಿಮ್ ಅರಬ ಇಲ್ಲವೆ ಇರಾನಿ ಮುಸ್ಲಿಮರೊಂದಿಗೆ ಸಮರಸನಾಗಲಾರ. ಅವರಿಗೆ ಆತ ಕೊನೆಗೂ ಹಿಂದೂ ಮುಸ್ಲಿಮ್!

ಧರ್ಮಾಂತರವೆಂದೊಡನೆ ರಾಷ್ಟ್ರಾಂತರವಾಗುವುದೆಂದು ಭಾವಿಸಲೇಬೇಕಾಗಿಲ್ಲ. ಧರ್ಮಾಂತರ ಹೊಂದಿದ ಮಾತ್ರಕ್ಕೆ ನಮ್ಮ ದಲಿತರ ಶೋಷಣೆಯೂ ನಿಲ್ಲುವುದೆಂದಲ್ಲ. ಇದರಿಂದ ಒಂದು ಭದ್ರತೆ ಸಂಘಶಕ್ತಿಯ ಭರವಸೆ ಅವರಿಗೆ ಬರುತ್ತದೆ. ಅವರ ಅನಾಥ ಪ್ರಜ್ಞೆ ನೀಗಿದಂತೆ ಅನಿಸುತ್ತದೆ. ಆ ಭದ್ರತೆ, ಆ ಕ್ಷೇಮ ಭಾವನೆ ಹಿಂದೂ ಧರ್ಮದಲ್ಲಿ ಅವರಿಗೆ ಎಂದೂ ಅನುಭವಕ್ಕೆ ಬಂದಿರಲಿಲ್ಲ. ಕನಕದಾಸನ ಕಥೆಯೊಂದು ಬಿಟ್ಟರೆ ಯಾವ ಮಠಾಧಿಪತಿಗಳು ಯಾವ ಸನಾತನಿ ಸವರ್ಣ ಸಮಾಜದವರು ಹರಿಜನರನ್ನು ಹೊಲೆ ಮಾದಿಗರನ್ನು ತಮ್ಮವರಾಗಿ ತಿಳಿದು ಹತ್ತಿರ ಕರೆದದ್ದುಂಟು? ಈಚೆಗೆ ಮೀಸಲಾತಿಯ ವಿರುದ್ಧ ಗುಜರಾತ್‌ನಲ್ಲಿ ಹುಚ್ಚೆದ್ದ ಸವರ್ಣ ಯುವಜನರ ಪುಂಡಾಟದ ಗಲಭೆಗಳು ಏನನ್ನು ತೋರ್ಪಡಿಸಿವೆ?

ಹಿಂದೊಮ್ಮೆ ದ್ವಾರಕಾ ಪೀಠದ ಶಂಕರಾಚಾರ್ಯರು ಪುಣೆಯಲ್ಲಿ ಭಾಷಣ ಮಾಡುತ್ತಿದ್ದರು-ಅಸ್ಪಶ್ಯತೆಯನ್ನು ಸಮರ್ಥಿಸಿ. ದೂರವಿಟ್ಟ ಮಾತ್ರಕ್ಕೆ ಅವರು ಕೀಳೆಂದು ಅರ್ಥವಲ್ಲ. ಬ್ರಾಹ್ಮಣರ ಮನೆಯಲ್ಲಿಯೂ ಮುಟ್ಟಾದ ಹೆಂಗಸಿಗೆ ಮುಟ್ಟದೆ 4ದಿನ ದೂರವಿಡುವುದಿಲ್ಲವೇ?- ಅಂದರು. ಆಗ ಆ ಸಭೆಯಲ್ಲಿ ಅಂದು ತರುಣರಾದ ಎಸ್.ಎಂ. ಜೋಶಿ ಕೂತಿದ್ದರು. ಅವರು ಎದ್ದುನಿಂತು ಕೂಗಿದರು-‘‘ಆದರೆ ಸ್ವಾಮೀಜೀ, ಆ ಹೆಂಗಸಿನ ಪಾಲಿಗೆ 5ನೆಯ ದಿನ ಒಂದು ಬರುತ್ತದೆ! ಈ ಅಂತ್ಯಜರ ಭಾಗ್ಯದಲ್ಲಿ ಆ ದಿನ ಬರುವುದು ಎಂದು?’’ ಶಂಕರಾಚಾರ್ಯರು ಮಂಕಾದರು. ಆ ದಿನ ಇಂದಿಗೂ ದೂರವೇ ಇದೆ.

(1980ರಲ್ಲಿ ಪ್ರಕಟವಾದ ಲೇಖನ)

Writer - ಗೌರೀಶ ಕಾಯ್ಕಿಣಿ

contributor

Editor - ಗೌರೀಶ ಕಾಯ್ಕಿಣಿ

contributor

Similar News

ಜಗದಗಲ
ಜಗ ದಗಲ