ಪ್ರಜಾಸತ್ತೆಯ ವಿರುದ್ಧ ಸೇನಾ ಮುಖ್ಯಸ್ಥರ ಸರ್ಜಿಕಲ್ ಸ್ಟ್ರೈಕ್

Update: 2019-12-27 06:26 GMT

ಪಾಕಿಸ್ತಾನದ ಇಂದಿನ ದುಃಸ್ಥಿತಿಗೆ ಅಲ್ಲಿನ ಸೇನೆಯ ಕೊಡುಗೆ ಬಹುದೊಡ್ಡದು. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರದ ನಿಯಂತ್ರಣ ಅಲ್ಲಿನ ಸೇನೆಯ ಕೈಯಲ್ಲಿದೆ. ಆದುದರಿಂದಲೇ ಅಲ್ಲಿನ ಸರಕಾರಕ್ಕೆ ಯಾವುದೇ ಧನಾತ್ಮಕವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟವಾಗುತ್ತದೆ. ಪ್ರಜೆಗಳಿಂದ ಆಯ್ಕೆಯಾದ ಸರಕಾರಗಳನ್ನು ಪದೇ ಪದೇ ಉರುಳಿಸುವಲ್ಲೂ ಅಲ್ಲಿನ ಸೇನೆಯ ಪಾತ್ರ ದೊಡ್ಡದಿದೆ. ಭಾರತದ ಪ್ರಜಾಸತ್ತೆಯಲ್ಲಿ ಈವರೆಗೆ ಸೇನೆ ಮೂಗು ತೂರಿಸುವ ಧೈರ್ಯ ಮಾಡಿಲ್ಲ. ಅದಕ್ಕೆ ಮುಖ್ಯ ಕಾರಣ ನೆಹರೂ ಸಹಿತ ಅಂದಿನ ಮುತ್ಸದ್ದಿಗಳು ತೆಗೆದುಕೊಂಡ ನಿರ್ಧಾರಗಳು. ತಮ್ಮ ರಾಜಕೀಯಕ್ಕಾಗಿ ಸೇನೆಯನ್ನು ಬಳಸಿಕೊಳ್ಳುವ ಹುಂಬತನವನ್ನು ಯಾವ ನಾಯಕರೂ ಈವರೆಗೆ ಮಾಡಿಲ್ಲ. ಆದರೆ ನರೇಂದ್ರ ಮೋದಿ ನೇತೃತ್ವದ ಸರಕಾರ ಮೊದಲ ಬಾರಿಗೆ ಸೇನೆಯನ್ನು, ತನ್ನ ಪಕ್ಷದ ಒಂದು ಅಂಗವೋ ಎಂಬಂತೆ ಬಳಸಿಕೊಂಡಿತು. ಗಡಿಯಲ್ಲಿ ನಡೆಸಿದ ಸರ್ಜಿಕಲ್‌ಸ್ಟ್ರೈಕ್‌ನ ಕುರಿತಂತೆ ಸೇನೆ ಪತ್ರಿಕಾಗೋಷ್ಠಿ ನಡೆಸಿತು. ರಕ್ಷಣಾ ಸಚಿವರ ಸ್ಥಾನವನ್ನು ಸೇನಾ ಮುಖ್ಯಸ್ಥರೇ ತುಂಬಿದರು. ಪದೇ ಪದೇ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾ, ಮೋದಿಯ ರಾಜಕೀಯ ನೀತಿಗಳನ್ನು ಸಮರ್ಥಿಸುತ್ತಾ ಬಂದರು. ಇದೀಗ ಸೇನಾ ಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ದೇಶಾದ್ಯಂತ ಎನ್‌ಆರ್‌ಸಿ, ಸಿಎಎ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ‘‘ನಾಯಕತ್ವ ಎಂದರೆ ಮುನ್ನಡೆಸುವುದು. ನೀವು ಮುಂದಿನಿಂದ ಹೋದರೆ ಎಲ್ಲರೂ ಹಿಂಬಾಲಿಸುತ್ತಾರೆ. ಆದರೆ ಜನರನ್ನು ಸರಿಯಾದ ದಿಕ್ಕಿನತ್ತ ಮುನ್ನಡೆಸುವವನೇ ನಿಜವಾದ ನಾಯಕ. ಇತ್ತೀಚೆಗೆ ಹಲವು ವಿವಿ ಮತ್ತು ಕಾಲೇಜಿನ ವಿದ್ಯಾರ್ಥಿಗಳು ನಡೆದುಕೊಂಡ ರೀತಿ ಎಲ್ಲರಿಗೂ ತಿಳಿದಿದೆ. ಹಿಂಬಾಲಕರನ್ನು ತಪ್ಪುದಾರಿಗೆ ಎಳೆಯುವವರು ನಾಯಕರಲ್ಲ, ಜನರನ್ನು ಬೆಂಕಿ ಹಚ್ಚುವಂತೆ, ಹಿಂಸಾಚಾರಕ್ಕೆ ಪ್ರಚೋದಿಸುವುದು ನಾಯಕತ್ವವಲ್ಲ’’ ಎಂದು ಅವರು ಗುರುವಾರ ಹೇಳಿದ್ದಾರೆ. ಇದನ್ನು ಸ್ಪಷ್ಟವಾಗಿ ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸೇನೆಯ ಹಸ್ತಕ್ಷೇಪವೆಂದೇ ಭಾವಿಸಬೇಕಾಗುತ್ತದೆ. ಇಂದು ದೇಶದಲ್ಲಿ ನಡೆಯುತ್ತಿರುವುದು ಕೋಮುಗಲಭೆಗಳಂತಹ ಹಿಂಸಾಚಾರವಲ್ಲ. ಬದಲಿಗೆ, ಸರಕಾರದ ‘ಪೌರತ್ವ ನೋಂದಣಿ’ ಕಾಯ್ದೆಯ ವಿರುದ್ಧ ಜನಸಾಮಾನ್ಯರು ನಡೆಸುತ್ತಿರುವ ಪ್ರಜಾಸತ್ತಾತ್ಮಕವಾದ ಪ್ರತಿಭಟನೆಗಳಾಗಿವೆ. ಇದರ ಕುರಿತಂತೆ ಮಾತನಾಡಲು ಅರ್ಹವಿರುವ ಏಕೈಕ ಸಂಸ್ಥೆ ಈ ದೇಶದ ನ್ಯಾಯವ್ಯವಸ್ಥೆ. ಕರ್ತವ್ಯದಲ್ಲಿರುವ ಸೇನಾ ಮುಖ್ಯಸ್ಥರೊಬ್ಬರು ಪ್ರತಿಭಟನೆಯನ್ನು ಹಿಂಸಾಚಾರ ಎಂಬಿತ್ಯಾದಿಯಾಗಿ ಕರೆಯುವುದು ಮತ್ತು ಪರೋಕ್ಷವಾಗಿ ಪ್ರತಿಭಟನೆಗೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಇದು ದೇಶದ ಪ್ರಭುತ್ವದೊಳಗೆ ಸೇನೆ ನಿಧಾನಕ್ಕೆ ಮೂಗು ತೂರಿಸುತ್ತಿರುವುದರ ಸೂಚನೆಯಾಗಿದೆ.

ಈಗಾಗಲೇ ಸೇನೆಯ ಕ್ರಮಗಳು ಸಾಕಷ್ಟು ಚರ್ಚೆಗೀಡಾಗಿವೆ. ‘ಸರ್ಜಿಕಲ್ ಸ್ಟ್ರೈಕ್’ ಸಂದರ್ಭದಲ್ಲಿ ಅದರ ವರ್ತನೆ, ತನ್ನದೇ ಸೇನಾ ಹೆಲಿಕಾಪ್ಟರ್‌ಗಳ ಮೇಲೆ ದಾಳಿ ನಡೆಸಿ ಸಿಬ್ಬಂದಿಯ ಸಾವಿಗೆ ಕಾರಣವಾದ ಅದರ ಕ್ರಮ, ಪುಲ್ವಾಮದಲ್ಲಿ ಯೋಧರ ಸಾವು...ಇತ್ಯಾದಿಗಳೆಲ್ಲ ಸೇನೆಗೆ ಕಪ್ಪು ಚುಕ್ಕೆಗಳನ್ನಿಟ್ಟಿವೆ. ಪದೇ ಪದೇ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುವ ಸೇನಾ ಮುಖ್ಯಸ್ಥರ ಚಾಳಿಯೂ ಹಲವರಿಂದ ಟೀಕೆಗೊಳಗಾಗಿದೆ. ಇದೀಗ, ಈ ದೇಶದ ಪ್ರಜೆಗಳು ಒಂದಾಗಿ ಸರಕಾರದ ನೀತಿಯನ್ನು ಪ್ರತಿಭಟಿಸುತ್ತಿರುವಾಗ, ಅದನ್ನು ‘ಹಿಂಸಾಚಾರ’ ಎಂದು ಕರೆದು ಸರಕಾರದ ನೆರವಿಗೆ ಧಾವಿಸಿ ಬಂದಿರುವುದು ಪ್ರಜಾಸತ್ತೆಯ ಮೇಲೆ ರಾವತ್ ನಡೆಸಿದ ‘ಸರ್ಜಿಕಲ್ ಸ್ಟ್ರೈಕ್’ ಆಗಿದೆ. ಯಾವುದೇ ನೀತಿಯನ್ನು ಈ ದೇಶದ ಜನರ ಸಮ್ಮತಿಯಿಲ್ಲದೆ ಹೇರುವುದು ಸಾಧ್ಯವಿಲ್ಲ. ಸರಕಾರದ ನೀತಿಗಳು ತಮ್ಮ ಬದುಕುವ ಹಕ್ಕಿನ ಮೇಲೆ ದಾಳಿ ನಡೆಸಿದೆ ಎಂದೆನಿಸಿದರೆ ್ಲ ಅದರ ವಿರುದ್ಧ ಬೀದಿಗಿಳಿಯುವ ಹಕ್ಕು ಸರ್ವ ಪೌರರಿಗಿದೆ. ಸದ್ಯಕ್ಕೆ ಸರಕಾರ ತಂದಿರುವ ಕಾಯ್ದೆ ಈ ದೇಶದ ಸಂವಿಧಾನಕ್ಕೆ ವಿರುದ್ಧವಾದುದು ಮಾತ್ರವಲ್ಲ, ಜಾತ್ಯತೀತ ವೌಲ್ಯಗಳಿಗೆ ಧಕ್ಕೆ ತರುವಂತಹದು. ಈ ಕಾಯ್ದೆ ದೇಶದ ಮೇಲೆ ಬೀರುವ ದುಷ್ಪರಿಣಾಮ ಏನು ಎನ್ನುವ ಅರಿವುು ರಾವತ್ ಅವರಿಗೆ ಇಲ್ಲವೆ? ಇಂದು ಬೀದಿಯಲ್ಲಿ ಪೊಲೀಸರನ್ನು ಬಳಸಿಕೊಂಡು ಹಿಂಸಾಚಾರ ನಡೆಸುತ್ತಿರುವುದು ಯಾರು ಎನ್ನುವುದ ಸೇನಾ ಮುಖ್ಯಸ್ಥರ ಅರಿವಿಗೆ ಬಂದಿಲ್ಲವೆ? ದಿಲ್ಲಿಯಲ್ಲಿ ಪ್ರತಿಭಟನಾಕಾರರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವುದಕ್ಕಾಗಿ ಪೊಲೀಸರೇ ಬಸ್‌ಗಳಿಗೆ ಬೆಂಕಿ ಹಚ್ಚಿದ ವೀಡಿಯೊಗಳಿವೆ. ಉತ್ತರ ಪ್ರದೇಶದಲ್ಲಿ ಪೊಲೀಸರ ಸಾಲು ಸಾಲು ದೌರ್ಜನ್ಯಗಳಿಗೆ ದಾಖಲೆಗಳಿವೆ.

ಪ್ರತಿಭಟನಾಕಾರರನ್ನು ಪೊಲೀಸರ ಮೂಲಕ ಅತ್ಯಂತ ಅಮಾನವೀಯವಾಗಿ ದಮನಿಸಲಾಗುತ್ತಿದೆ. ಶಾಂತಿಯುತ ಪ್ರತಿಭಟನೆಗಳನ್ನು ಲಾಠಿ, ಕೋವಿಗಳ ಮೂಲಕ ಇಲ್ಲವಾಗಿಸಲು ಹೊರಟರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ. ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ಸರಕಾರ ಗೌರವಿಸದೇ ಇದ್ದರೆ ಅದು ತೀವ್ರವಾದಕ್ಕೆ ಬದಲಾಗುತ್ತದೆ. ಈಶಾನ್ಯ ಭಾರತದಲ್ಲಿ ನಕ್ಸಲ್ ಸಮಸ್ಯೆ ಉದ್ಭವಿಸಿದ್ದೇ ಈ ಕಾರಣದಿಂದ. ದೇಶಾದ್ಯಂತ ಹಬ್ಬಿರುವ ಪ್ರತಿಭಟನೆಗಳು ದೇಶವನ್ನು ಇಬ್ಭಾಗವಾಗಿಸುತ್ತಿರುವುದನ್ನು ಮನಗಂಡು ಸೇನಾ ಮುಖ್ಯಸ್ಥರು ಸರಕಾರಕ್ಕೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬಹುದೇ ಹೊರತು, ಪ್ರಭುತ್ವದ ಪರವಾಗಿ ನಿಂತು ಜನರ ವಿರುದ್ಧ ಹೇಳಿಕೆಗಳನ್ನು ನೀಡುವುದಲ್ಲ. ‘‘ಹಿಂಸಾಚಾರ ಪ್ರಚೋದಿಸುವುದು ನಾಯಕತ್ವವಲ್ಲ’’ ಎಂದು ಯಾರಿಗಾದರೂ ಸೇನಾ ಮುಖ್ಯಸ್ಥರು ಸಲಹೆ ನೀಡುವುದಿದ್ದರೆ ಅದಕ್ಕೆ ಅರ್ಹ ವ್ಯಕ್ತಿಗಳು ನಮ್ಮ ಪ್ರಧಾನಿ ಮತ್ತು ಗೃಹ ಸಚಿವರಾಗಿದ್ದಾರೆ. ಗುಜರಾತ್‌ನಲ್ಲಿ, ಮುಝಫ್ಫರ್ ನಗರದಲ್ಲಿ ನಡೆದುದು ಹಿಂಸಾಚಾರ. ಅದರ ನಾಯಕತ್ವವನ್ನು ವಹಿಸಿದವರು ಯಾರು ಎನ್ನುವುದು ನಮ್ಮ ಸೇನಾ ಮುಖ್ಯಸ್ಥರಿಗೆ ತಿಳಿಯದ ವಿಷಯವೇನೂ ಅಲ್ಲ. ಅಂತಹ ಹಿಂಸಾಚಾರಗಳು ದೇಶದ ಆಂತರಿಕ ಭದ್ರತೆಗೆ ಅಪಾಯವಾಗಿದೆ. ಆದರೆ ಈ ದೇಶದಲ್ಲಿ ಜನಸಾಮಾನ್ಯರ ವಿರುದ್ಧ ನಡೆಯುತ್ತಿರುವ ಹಿಂಸಾಚಾರಗಳ ಕುರಿತಂತೆ ಅಮಾಯಕರಂತೆ ವರ್ತಿಸುತ್ತಾ, ಇದೀಗ ಸರಕಾರದ ಅತಿರೇಕದ ವಿರುದ್ಧ ಬೀದಿಗಿಳಿದ ಪ್ರತಿಭಟನಾಕಾರರನ್ನು ‘ಹಿಂಸಾಚಾರಿಗಳು’ ಎಂಬಂತೆ ಬಿಂಬಿಸುವ ರಾವತ್ ಹೇಳಿಕೆಯ ಹಿಂದೆ ಪರೋಕ್ಷವಾಗಿ ಮೋದಿ ಮತ್ತು ಗೃಹ ಸಚಿವರಿದ್ದಾರೆ. ಸೇನಾ ಮುಖ್ಯಸ್ಥರ ಮೂಲಕ ಸರಕಾರವೇ ತನ್ನ ಮಾತುಗಳನ್ನು ಹೇಳಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಸೇನಾ ಮುಖ್ಯಸ್ಥರ ಈ ಹೇಳಿಕೆ ಪ್ರಜಾಸತ್ತೆಯ ಪಾಲಿಗೆ ಅಪಾಯದ ಕರೆಗಂಟೆಯಾಗಿದೆ. ತನ್ನ ನಿಯಂತ್ರಣ ಗಡಿಯನ್ನು ದಾಟಿ ಸಂವಿಧಾನವನ್ನು ಆಕ್ರಮಿಸುವ ಪ್ರಯತ್ನದ ಭಾಗ ಇದಾಗಿದೆ. ದೇಶದಲ್ಲಿ ಈಗಾಗಲೇ ಅಘೋಷಿತ ತುರ್ತುಪರಿಸ್ಥಿತಿಯಿದೆ. ಹೆಸರಿಗಷ್ಟೇ ಪ್ರಜಾಪ್ರಭುತ್ವವಿದೆ. ಇದೀಗ ಸೇನೆಯೂ ಪ್ರಜೆಗಳ ವಿರುದ್ಧ ಮಾತನಾಡಲು ಶುರು ಹಚ್ಚಿದೆ ಎಂದರೆ, ಅದರ ಅರ್ಥವೇನು ಎನ್ನುವುದು ಊಹಿಸಲು ಕಷ್ಟವಿಲ್ಲ. ಮೋದಿ ಮತ್ತು ಅಮಿತ್ ಶಾ ಈ ದೇಶವನ್ನು ಸರ್ವನಾಶ ಮಾಡಿಯೇ ಸಿದ್ಧ ಎಂದು ಹಟತೊಟ್ಟಂತೆ ಇದೆ. ಭಾರತ ಅತಿವೇಗದಲ್ಲಿ ಇನ್ನೊಂದು ಪಾಕಿಸ್ತಾನವಾಗುವುದರತ್ತ ಸಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News