ಸ್ಲಿಮ್ಮಿಂಗ್ ಬೆಲ್ಟ್ ನಿಜಕ್ಕೂ ಶರೀರದ ತೂಕವನ್ನು ತಗ್ಗಿಸಲು ನೆರವಾಗುತ್ತದೆಯೇ?: ಇಲ್ಲಿದೆ ಸತ್ಯ

Update: 2019-12-29 14:32 GMT
ಸಾಂದರ್ಭಿಕ ಚಿತ್ರ

ಕಂಪ್ರೆಷನ್(ಒತ್ತಡ) ಬೆಲ್ಟ್ ಎಂದೂ ಕರೆಯಲಾಗುವ ಸ್ಲಿಮ್ಮಿಂಗ್ ಬೆಲ್ಟ್ ಇತ್ತೀಚಿನ ದಿನಗಳಲ್ಲಿ ಶರೀರದ ತೂಕವನ್ನು ತಗ್ಗಿಸಲು ಬಳಕೆಯಾಗುತ್ತಿರುವ ಜನಪ್ರಿಯ ಸಾಧನವಾಗಿದೆ. ಹೆಚ್ಚಿನ ಪ್ರಯತ್ನವಿಲ್ಲದೇ ತೂಕವನ್ನು ತಗ್ಗಿಸಿಕೊಳ್ಳಲು ಮತ್ತು ತೆಳುವಾದ ಶರೀರವನ್ನು ಹೊಂದಲು ನೆರವಾಗುತ್ತದೆ ಎನ್ನುವ ಗ್ರಹಿಕೆ ಇದು ಮಹಿಳೆಯರಲ್ಲಿ ಹೆಚ್ಚು ಜನಪ್ರಿಯವಾಗಲು ಕಾರಣವಾಗಿದೆ.

 ‘ನಿಮ್ಮ ಸೊಂಟದಲ್ಲಿ ಅಥವಾ ನೀವು ಕೊಬ್ಬನ್ನು ಕರಗಿಸಲು ಬಯಸುವ ಶರೀರದ ಇತರ ಯಾವುದೇ ಭಾಗಕ್ಕೆ ಸ್ಲಿಮ್ಮಿಂಗ್ ಬೆಲ್ಟ್ ಕಟ್ಟಿಕೊಳ್ಳಿ ಮತ್ತು ಅದರ ಜಾದೂವನ್ನು ನೋಡಿ. ಕೆಲವೇ ವಾರಗಳಲ್ಲಿ ನೀವು ಫಿಟ್ ಮತ್ತು ಟೋನ್ಡ್ ಶರೀರವನ್ನು ಹೊಂದುತ್ತೀರಿ’ ಸ್ಲಿಮ್ಮಿಂಗ್ ಬೆಲ್ಟ್‌ನ ಜಾಹೀರಾತುಗಳಲ್ಲಿ ನೀವು ನೋಡುವುದು ಮತ್ತು ಕೇಳುವುದು ಇದನ್ನೇ ಅಲ್ಲವೇ? ಆದರೆ ನೀವೆಂದಾದರೂ ಸ್ಲಿಮ್ಮಿಂಗ್ ಬೆಲ್ಟನ್ನು ಧರಿಸಿದ್ದೀರಾ,ಅದರ ಹಿಂದಿನ ಸತ್ಯವನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದೀರಾ? ಈ ಸ್ಲಿಮ್ಮಿಂಗ್ ಬೆಲ್ಟ್‌ಗಳ ಹಿಂದಿನ ನಿಜವಿಲ್ಲಿದೆ.......

ಏನಿದು ಸ್ಲಿಮ್ಮಿಂಗ್ ಬೆಲ್ಟ್?

ಟೆಲಿ ಮಾರ್ಕೆಟರ್‌ಗಳು ಸ್ಲಿಮ್ಮಿಂಗ್ ಬೆಲ್ಟ್‌ಗಳ ಜಾಹೀರಾತುಗಳ ಕುರಿತು ನಿಮಗೆ ಹೇಳಿರಬಹುದು. ನಿಮ್ಮನ್ನು ಆಕರ್ಷಿಸಲು ಈ ಬೆಲ್ಟ್‌ಗಳನ್ನು ಬಳಸಿ ಶರೀರದ ತೂಕವನ್ನು ಕಡಿಮೆ ಮಾಡಿಕೊಂಡಿರುವ ಚಿತ್ರಗಳನ್ನೂ ಈ ಜಾಹೀರಾತುಗಳಲ್ಲಿ ತೋರಿಸಲಾಗುತ್ತದೆ. ಇಂತಹ ವಾಣಿಜ್ಯ ಜಾಹೀರಾತುಗಳು ಕಾಣಿಸಿಕೊಂಡಾಗ ಅವು ನಿಮ್ಮನ್ನು ಸೆಳೆಯಲೆಂದೇ ರೂಪಿಸಲಾಗಿರುವ ಜಾಹೀರಾತುಗಳು ಎನ್ನುವ ಅರಿವು ನಿಮಗಿರಬೇಕು. ವಾಸ್ತವ ಮಾತ್ರ ಜಾಹೀರಾತುಗಳಲ್ಲಿ ತೋರಿಸಿದಂತಿರುವುದಿಲ್ಲ. ವ್ಯಾಯಾಮ ಮಾಡುವಾಗ

ಸ್ಲಿಮ್ಮಿಂಗ್ ಬೆಲ್ಟ್ ಧರಿಸಿಕೊಳ್ಳುವುದರಿಂದ ಸೊಂಟದ ಸುತ್ತಳತೆ ಕೆಲವು ಇಂಚುಗಳಷ್ಟು ಕಡಿಮೆಯಾಗಬಹುದು,ಆದರೆ ಬೆಲ್ಟ್‌ನ್ನು ಕಳಚಿದಾಗ ಅಂದರೆ ಒತ್ತಡಮುಕ್ತಗೊಳಿಸಿದಾಗ ಕೊಬ್ಬಿನ ಜೀವಕೋಶಗಳು ಮತ್ತೆ ವಾಪಸಾಗುತ್ತವೆ.

ಸ್ಲಿಮ್ಮಿಂಗ್ ಬೆಲ್ಟ್ ಹೇಗೆ ಕೆಲಸ ಮಾಡುತ್ತದೆ? ಈ ಬೆಲ್ಟ್‌ಗಳು ತೋರಿಕೆಗೆ ಮಾತ್ರ ಕೆಲಸ ಮಾಡುತ್ತವೆ ಮತ್ತು ಅವುಗಳ ಪರಿಣಾಮ ದೀರ್ಘಕಾಲ ಉಳಿಯುವುದಿಲ್ಲ. ನೀವು ದಪ್ಪ ಬಟ್ಟೆಯೊಂದನ್ನು ನಿಮ್ಮ ಸೊಂಟದ ಸುತ್ತ ಕಟ್ಟಿಕೊಂಡಾಗ ಬೆವರುವುದು ಸಹಜ. ಇದು ನಿಮ್ಮ ಶರೀರದಿಂದ ನೀರಿನ ತೂಕವನ್ನು ಕಡಿಮೆಗೊಳಿಸುತ್ತದೆ ಮತ್ತು ಇದು ನಿಮಗೆ ಸ್ವಲ್ಪ ಸಮಯ ತೆಳುವಾಗಿರುವ ಅನುಭವ ನೀಡುತ್ತದೆ.

 ನೀವು ಸ್ಲಿಮ್ಮಿಂಗ್ ಬೆಲ್ಟ್‌ನ್ನು ಕಟ್ಟಿಕೊಂಡಾಗಲೂ ಇದೇ ಅನುಭವ ಉಂಟಾಗುತ್ತದೆ. ಆದರೆ ಅದನ್ನು ಕಳಚಿದಾಗ ನಿಮ್ಮ ಹೊಟ್ಟೆ ಮೊದಲಿನಂತೆಯೇ ಕಾಣಿಸುತ್ತದೆ ಮತ್ತು ನಿಮ್ಮ ಶರೀದಲ್ಲಿಯ ಕೊಬ್ಬು ಒಂದು ಇಂಚು ಕೂಡ ಕರಗಿರುವುದಿಲ್ಲ.

ಸ್ಲಿಮ್ಮಿಂಗ್ ಬೆಲ್ಟ್ ಧರಿಸಿದ ನಂತರ ಸೊಂಟದಿಂದ ಬೆವರು ಹರಿಯುವುದರಿಂದ ಶರೀರದ ತೂಕ ಕಡಿಮೆಯಾಗಿದೆ ಎಂದು ಹಲವರು ಭಾವಿಸುತ್ತಾರೆ. ಆದರೆ ದಿಢೀರ್ ತೂಕ ಇಳಿಕೆಯನ್ನು ದೃಢಪಡಿಸುವ ಯಾವುದೇ ವೈಜ್ಞಾನಿಕ ಸಾಕ್ಷಾಧಾರಗಳಿಲ್ಲ,ಹೀಗಾಗಿ ಇದು ಸಾಧ್ಯವಿಲ್ಲ.

ಆರೋಗ್ಯಕರ ಮತ್ತು ಸ್ಲಿಮ್ ಆದ ಶರೀರಕ್ಕಾಗಿ ಯಾವುದೇ ಶಾರ್ಟ್‌ಕಟ್‌ಗಳು ಇಲ್ಲ ಎನ್ನುವುದು ನಿಮಗೆ ಗೊತ್ತಿರಲಿ. ಆರೋಗ್ಯಕರ ಶರೀರ ಮತ್ತು ಯಶಸ್ವಿ ತೂಕ ಇಳಿಕೆಗೆ ಪೋಷಕಾಂಶಗಳಿಂದ ಸಮೃದ್ಧ ಆಹಾರ ಮತ್ತು ನಿಯಮಿತ ವ್ಯಾಯಾಮ ಅಥವಾ ಯೋಗಾಭ್ಯಾಸ ಅಗತ್ಯ.

ತೂಕವನ್ನು ಇಳಿಸಿಕೊಳ್ಳಲು ಉತ್ತಮ ಮಾರ್ಗಗಳು

ನಡಿಗೆ,ಓಟ,ಸೈಕಲ್ ಸವಾರಿ ಮತ್ತು ಈಜು ಇವೆಲ್ಲ ಶರೀರದ ತೂಕವನ್ನು ಇಳಿಸಿಕೊಳ್ಳಲು ಉತ್ತಮ ಮಾರ್ಗಗಳಾಗಿವೆ. ಸಾಯುಗಳ ಭಂಗಿಯನ್ನು ಉತ್ತಮಗೊಳಿಸಲು ವಾರಕ್ಕೊಮ್ಮೆ 20 ನಿಮಿಷಗಳ ಕಾಲ ತೂಕವನ್ನು ಕಡಿಮೆ ಮಾಡುವ ವ್ಯಾಯಾಮದ ಒಂದು ವಿಧವಾಗಿರುವ ರಸಿಸ್ಟನ್ಸ್ ಟ್ರೇನಿಂಗ್‌ನಲ್ಲಿ ತೊಡಗಿಕೊಳ್ಳಬಹುದು. ಯೋಗದಂತಹ ಇಡೀ ಶರೀರದ ಕೊಬ್ಬನ್ನು ಕರಗಿಸುವ ವ್ಯಾಯಾಮಗಳನ್ನು ವಾರಕ್ಕೆ ಕನಿಷ್ಠ ಒಂದೆರಡು ಸಲ ಮಾಡಿ.

ಸ್ಲಿಮ್ಮಿಂಗ್ ಬೆಲ್ಟ್‌ಗಳ ಬಳಕೆಯ ಬದಲು ನಿಮ್ಮ ಮಾಂಸಖಂಡಗಳನ್ನು ಸದೃಢಗೊಳಿಸುವ ಕೋರ್ ಸ್ಟ್ರೆಂಗ್ತ್ ವ್ಯಾಯಾಮವನ್ನು ಮಾಡಿ.

ತೂಕ ಇಳಿಕೆಗೆ ಪ್ರೋಟಿನ್ ಅಗತ್ಯ ಪೋಷಕಾಂಶವಾಗಿದೆ. ಹೆಚ್ಚಿನ ಪ್ರೋಟಿನ್ ಸೇವನೆಯು ಪಿವೈವೈ ಹಾರ್ಮೋನ್‌ನ ಬಿಡುಗಡೆಯನ್ನು ಹೆಚ್ಚಿಸುತ್ತದೆ ಮತ್ತು ಇದು ಹಸಿವನ್ನು ಕುಂಠಿತಗೊಳಿಸುತ್ತದೆ. ಪ್ರೋಟಿನ್ ಶರೀರದ ಚಯಾಪಚಯ ದರವನ್ನೂ ಹೆಚ್ಚಿಸುತ್ತದೆ ಮತ್ತು ತೂಕ ಇಳಿಕೆ ಅವಧಿಯಲ್ಲಿ ಸ್ನಾಯು ದ್ರವ್ಯರಾಶಿಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News