5 ಲಕ್ಷ ಮಕ್ಕಳನ್ನು ಉಯಿಘರ್ ಮುಸ್ಲಿಮರ ಕುಟುಂಬಗಳಿಂದ ಪ್ರತ್ಯೇಕಗೊಳಿಸಿದ ಚೀನಾ

Update: 2019-12-29 17:14 GMT

ಹೊಸದಿಲ್ಲಿ, ಡಿ.29: ಕಳೆದ ಮೂರು ವರ್ಷಗಳಲ್ಲಿ ಲಕ್ಷಕ್ಕೂ ಅಧಿಕ ಮಂದಿ ಉಯಿಘರ್, ಕಝಕ್ ಮುಸ್ಲಿಮರನ್ನು ಕ್ಸಿನ್‌ ಜಾಂಗ್‌ನಲ್ಲಿರುವ ನಿರ್ಬಂಧಿತ ಶಿಬಿರಗಳಲ್ಲಿ ಅಥವಾ ಕಾರಾಗೃಹಗಳಲ್ಲಿ ಇರಿಸಲಾಗಿದೆಯೆಂದು ನ್ಯೂಯಾರ್ಕ್ ಟೈಮ್ಸ್ ನ್ಯೂಸ್ ಸರ್ವಿಸ್ ಸುದ್ದಿಜಾಲವು ಶುಕ್ರವಾರ ಬಹಿರಂಗಪಡಿಸಿದೆ.

ಇಸ್ಲಾಮ್ ಧರ್ಮದ ಬಗೆಗಿನ ನಿಷ್ಠೆಯನ್ನು ವಿಚಲಿತಗೊಳಿಸುವ ಹತಾಶ ಪ್ರಯತ್ನವಾಗಿ ಚೀನಿ ಸರಕಾರವು ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ. ಉಯಿಘರ್‌ನಲ್ಲಿ ಸರಿಸುಮಾರು 5 ಲಕ್ಷ ಮಂದಿ ಮಕ್ಕಳನ್ನು ಅವರ ಕುಟುಂಬಗಳಿಂದ ಪ್ರತ್ಯೇಕಿಸಲಾಗಿದ್ದು, ಅವರನ್ನು ವಸತಿ ಶಾಲೆಗಳಲ್ಲಿ ಇರಿಸಲಾಗಿದೆ.

ಈ ವರ್ಷದ ಅಂತ್ಯದ ವೇಳೆಗೆ ಕ್ಸಿನ್‌ ಜಿಯಾಂಗ್ ಪಟ್ಟಣದ 800 ಅಧಿಕ ವಸತಿಪ್ರದೇಶಗಳಲ್ಲಿ ಇಂತಹ 1-2 ಶಾಲೆಗಳನ್ನು ಸ್ಥಾಪಿಸುವ ಗುರಿಯನ್ನು ಆಡಳಿತಾರೂಢ ಸರಕಾರವು ಹೊಂದಿದೆ.

ಬಡತನದ ವಿರುದ್ಧ ಹೋರಾಡುವ ಮಾರ್ಗವಾಗಿ, ಈ ವಿದ್ಯಾರ್ಥಿಗಳನ್ನು ವಸತಿ ಶಾಲೆಗಳಲ್ಲಿ ಇರಿಸಲಾಗಿದೆಯೆಂದು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಸರಕಾರವು ಸ್ಪಷ್ಟಪಡಿಸಿದೆ. ತಮ್ಮ ಪಾಲಕರು ದುಡಿಮೆಗಾಗಿ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ವಾಸವಾಗಿದ್ದಲ್ಲಿ ಮತ್ತು ಸಂಸಾರದ ಪಾಲನೆಗೆ ಅವರು ಅಸಮರ್ಥರಾಗಿದ್ದಲ್ಲಿ ಅಂತಹ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ವಸತಿ ಶಾಲೆಗಳಲ್ಲಿ ಇರಿಸಿದರೆ, ಅವರಿಗೆ ತರಗತಿಗೆ ಹಾಜರಾಗುವುದು ಸುಲಭವಾಗಲಿದೆಯೆಂದು ಚೀನಾ ಕಮ್ಯುನಿಸ್ಟ್ ಪಕ್ಷವು ಹೇಳಿಕೊಂಡಿದೆ. ಆದರೆ ಈ ಶಾಲೆಗಳಲ್ಲಿ ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ಚೀನಾ ಕಮ್ಯೂನಿಸ್ಟ್ ಪಕ್ಷದ ಸಿದ್ಧಾಂತಗಳನ್ನು ಬೋಧಿಸಲಾಗುತ್ತದೆ ಮತ್ತು ಅವರನ್ನು ತಮ್ಮ ಕುಟುಂಬದ ಪ್ರಭಾವದಿಂದ ದೂರವಾಗುವಂತೆ ಮಾಡಲಾಗುತ್ತಿದೆ. ಈ ಕಾರ್ಯಸೂಚಿಗಳನ್ನು ಹೊಂದಿರುವ ದಾಖಲೆಯೊಂದನ್ನು ಬೀಜಿಂಗ್ ಆಡಳಿತವು 2017ರಲ್ಲಿ ಬಿಡುಗಡೆಗೊಳಿಸಿದೆಯೆಂದು ನ್ಯೂಯಾರ್ಕ್ ಟೈಮ್ಸ್ ವರದಿ ಹೇಳಿದೆ.

ಈ ಶಾಲೆಗಳಲ್ಲಿ ಬಾಹ್ಯವ್ಯಕ್ತಿಗಳ ಪ್ರವೇಶಕ್ಕೆ ಮಿತಿ ವಿಧಿಸಲಾಗಿದೆ ಮತ್ತು ಅವುಗಳಿಗೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಕ್ಸಿನ್‌ಜಿಯಾಂಗ್ ಪ್ರಾಂತದಲ್ಲಿ ಸ್ಥಾಪಿಸಲಾಗಿರುವ ಇಂತಹ ಶಾಲೆಗಳಲ್ಲಿ ಬೋಧನೆಗಾಗಿ ಸಾವಿರಾರು ಶಿಕ್ಷಕರನ್ನು ಚೀನಾದೆಲ್ಲೆಡೆಯಿಂದ ನೇಮಿಸಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಪ್ರಮುಖ ಉಯಿಘರ್ ಪ್ರಾಂತದ ಶಿಕ್ಷಕರನ್ನು ಜೈಲಿಗೆ ಅಟ್ಟಲಾಗಿದೆ. ಈ ವಸತಿ ಶಾಲೆಗಳಲ್ಲಿರುವ ಮಕ್ಕಳಿಗೆ ತಮ್ಮ ಕುಟುಂಬದವರನ್ನು ವಾರಕ್ಕೆ ಒಂದು ಅಥವಾ ಎರಡು ಸಲ ಮಾತ್ರವೇ ಭೇಟಿ ಮಾಡಲು ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News