ವಾಮನ ರೂಪಿ ತ್ರಿವಿಕ್ರಮ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ

Update: 2019-12-30 06:39 GMT

ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ವಾಮನ ರೂಪದ ತ್ರಿವಿಕ್ರಮರು. ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಹಿರಿಯ ಯತಿಗಳಾಗಿದ್ದು, ನಿಧಾನಕ್ಕೆ ವಿವಿಧ ರಾಜಕೀಯ ಕಾರಣಗಳಿಗಾಗಿ ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಂಡವರು.ವಿವಾದಗಳನ್ನು ಮೈಮೇಲೆ ಎಳೆದುಕೊಂಡವರು. ಅಧ್ಯಾತ್ಮ, ಧಾರ್ಮಿಕ ಹಾಗೂ ರಾಜಕೀಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪನ್ನು ಮೂಡಿಸಿದವರು. ಸನ್ಯಾಸಿಯಾಗಿ, ಸಂತರಾಗಿ, ವಿದ್ವಾಂಸರಾಗಿದ್ದುಕೊಂಡು ಸಾಮಾಜಿಕ ಕಳಕಳಿಯನ್ನು, ಸೇವಾ ಮನೋಭಾವ ವನ್ನು ಉಳಿಸಿಕೊಂಡವರು.

ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹುಟ್ಟಿದ್ದು ಉಡುಪಿಯಿಂದ 120 ಕಿ.ಮೀ ದೂರದ ಸುಬ್ರಹ್ಮಣ್ಯ ಸಮೀಪದ ಕುಗ್ರಾಮ ಎನ್ನಬಹುದಾದ ರಾಮಕುಂಜದಲ್ಲಿ. ಇದೇ ರಾಮಕುಂಜ ಹಳ್ಳಿಗೆ 700 ವರ್ಷಗಳ ಹಿಂದೆ ಶ್ರೀಮಧ್ವಾಚಾರ್ಯರು ಭೇಟಿ ನೀಡಿದ್ದರೆಂದು ಹೇಳಲಾಗಿದೆ. ಈ ರಾಮಕುಂಜದಲ್ಲಿ ಶ್ರೀವಿಶ್ವೇಶತೀರ್ಥ ಶ್ರೀಪಾದರು ಜನಿಸಿದ್ದು 1931ರ ಎಪ್ರಿಲ್ 27ರಂದು. ಇವರ ತಂದೆ ನಾರಾಯಣಾಚಾರ್ಯ, ತಾಯಿ ಕಮಲಮ್ಮ. ಈ ಸಾತ್ವಿಕ ದಂಪತಿಗೆ ಹುಟ್ಟಿದ ಎರಡನೇ ಗಂಡುಮಗುವಿಗೆ ವೆಂಕಟರಮಣ ಎಂದು ಹೆಸರಿಟ್ಟರು. ಪ್ರಜಾಪತಿ ಸಂವತ್ಸರದ ವೈಶಾಖ ಶುದ್ಧ ದಶಮಿ ಸೋಮವಾರದಂದು ವೆಂಕಟರಮಣನ ಶುಭ ಜನನ.

ರಾಮಕುಂಜದ ಹಳ್ಳಿಯ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ. ಏಳನೆಯ ವರ್ಷದಲ್ಲೇ ಗಾಯತ್ರಿಯ ಉಪದೇಶ. ಅವರಿಗೆ ಉಪನಯನಕ್ಕೂ ಮೊದಲು ಆರು ವರ್ಷ ಪ್ರಾಯದಲ್ಲಿ ತಂದೆ ತಾಯಿ ವೆಂಕಟರಮಣನನ್ನು ಉಡುಪಿಗೆ ಕರೆ ತಂದಿದ್ದರು. ಆಗ ಪೇಜಾವರ ಮಠದ ಪರ್ಯಾಯವೇ ನಡೆದಿತ್ತು. ಸ್ವಾಮೀಜಿ ಕೃಷ್ಣ ಪೂಜೆ ಮಾಡುವುದನ್ನು ತದೇಕಚಿತ್ತದಿಂದ ವೀಕ್ಷಿಸಿದ ವೆಂಕಟರಮಣ, ತಾನೂ ಹೀಗೆ ಕೃಷ್ಣನನ್ನು ಪೂಜಿಸಬಹುದೇ ಎಂದು ಹೆತ್ತವರನ್ನು ಪ್ರಶ್ನಿಸಿದ್ದ!

ತಂದೆ ತಾಯಿ ವೆಂಕಟರಮಣನನ್ನು ಸ್ವಾಮಿಗಳ ಭೇಟಿಗೆ ಕರೆದುಕೊಂಡು ಹೋದರು. ಬಾಲಕ ಭಕ್ತಿಯಿಂದ ಸ್ವಾಮಿಗಳಿಗೆ ನಮಸ್ಕರಿಸಿದ. ಪುಟ್ಟ ಹುಡುಗನ ಮುಗ್ಧ ಮುಖ, ನಡೆ-ನುಡಿಗಳನ್ನು ಗಮನಿಸಿದ ಸ್ವಾಮಿಗಳು ಆತನಿಗೆ ನೀನೂ ನನ್ನಂತೆ ಸ್ವಾಮಿಯಾಗುತ್ತೀಯಾ? ಎಂದು ಪ್ರಶ್ನಿಸಿದಾಗ, ಏನೂ ಅರಿಯದ ವೆಂಕಟರಮಣ ಹೂಂ ಗುಟ್ಟಿದ್ದ.

ಮುಂದೆ ಪರ್ಯಾಯ ಮುಗಿದ ಬಳಿಕ ದೇಶ ಸಂಚಾರಕ್ಕೆ ಹೋರಟ ಪೇಜಾವರ ಮಠದ ಶ್ರೀವಿಶ್ವಮಾನ್ಯ ತೀರ್ಥರು, ಹಂಪಿಗೆ ಹೋಗಿದ್ದಾಗ ಮಠಕ್ಕೆ ಶಿಷ್ಯನನ್ನು ಸ್ವೀಕರಿಸುವ ಗಟ್ಟಿ ನಿರ್ಧಾರ ಕೈಗೊಂಡರು. ಕೂಡಲೇ ಅವರು ಹೆತ್ತವರಿಗೆ ತಿಳಿಸಿ ಆಗಷ್ಟೇ ಉಪನಯನವಾಗಿದ್ದ ವೆಂಕಟರಮಣನನ್ನು ಹಂಪಿಗೆ ಕರೆಸಿಕೊಂಡರು. ಹೀಗೆ ವ್ಯಾಸತೀರ್ಥರ ತಪೋಭೂಮಿಯಾದ ಹಂಪಿಯಲ್ಲಿ 1938ರ ಡಿ.3ರಂದು ಆಗ ಎಂಟರ ಹರೆಯದ ವೆಂಕಟರಮಣನಿಗೆ ಸನ್ಯಾಸದೀಕ್ಷೆ ನೀಡಿದರು. ವೆಂಕಟರಮಣನಿಗೆ ಹಂಪಿಯ ಯಂತ್ರೋದ್ಧಾರ ಮುಖ್ಯಪ್ರಾಣನ ಸನ್ನಿಧಿಯಲ್ಲಿ ದೀಕ್ಷೆ ನಡೆಯಿತು. ರಾಮಕುಂಜ ಎಂಬ ಪುಟ್ಟ ಹಳ್ಳಿಯ ಬಾಲಕ, ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ ಪೇಜಾವರ ಮಠದ ಪರಂಪರೆಯ 32ನೆಯ ಯತಿಯಾಗಿ, ಆಚಾರ್ಯ ಮಧ್ವರ ವೇದಾಂತ ಪೀಠವನ್ನೇರಿದ. ವೆಂಕಟರಮಣ ಎಂಬ ಹೆಸರು ಅಳಿದು ಶ್ರೀವಿಶ್ವೇಶತೀರ್ಥರೆಂಬ ಹೆಸರಿನಲ್ಲಿ ಮುಂದೆ ಜಗದ್ವಿಖ್ಯಾತಿ ಪಡೆದರು.

ಎಂಟರ ಹರೆಯದಲ್ಲಿ ಶ್ರೀವಿಶ್ವೇಶತೀರ್ಥರಾಗಿ ಎರಡನೇ ಬಾರಿ ಉಡುಪಿಗೆ ಆಗಮಿಸಿದ ಅವರಿಗೆ ಇಲ್ಲಿಯೇ ವಿದ್ಯಾಭ್ಯಾಸವೂ ಪ್ರಾರಂಭಗೊಂಡಿತು.ಆಗ ಭಂಡಾರಕೇರಿ ಮಠಾಧೀಶರಾಗಿದ್ದು, ಮುಂದೆ ಫಲಿಮಾರು ಮಠಾಧೀಶರೂ ಆದ ಶ್ರೀ ವಿದ್ಯಾಮಾನ್ಯ ತೀರ್ಥರು, ಅವರಿಗೆ ವಿದ್ಯಾಗುರುವಾದರು. ಮಾಧ್ವ ಯತಿಗಳಲ್ಲೇ ಅಗ್ರಮಾನ್ಯ ಪಂಡಿತರೆಂದು ಖ್ಯಾತರಾದ ಶ್ರೀವಿದ್ಯಾಮಾನ್ಯತೀರ್ಥ ಸ್ವಾಮೀಜಿ, ಎಂಟು ವರ್ಷಗಳ ಕಾಲ ಬಾಲಯತಿಗೆ ಸಂಸ್ಕೃತ ಹಾಗೂ ಶಾಸ್ತ್ರದ ಧಾರೆ ಎರೆದರು. ಅವರ ಗರಡಿಯಲ್ಲಿ ಶ್ರೀವಿಶ್ವೇಶತೀರ್ಥರು ವೇದಾಂತ, ಶಾಸ್ತ್ರ, ನ್ಯಾಯ ಹಾಗೂ ತತ್ವಶಾಸ್ತ್ರದಲ್ಲಿ ಅಪ್ರತಿಮ ವಿದ್ವಾಂಸರಾಗಿ ರೂಪುಗೊಂಡರು.

ಬಾರಕೂರಿನ ಭಂಡಾರಕೇರಿಮಠದಲ್ಲಿ ಗುರುಕುಲ ವಾಸ ಶ್ರೀವಿಶ್ವೇಶತೀರ್ಥರ ಏಕಾಂತ ಚಿಂತನೆೆ, ಬ್ರಹ್ಮಚರ್ಯದ ಪಾಲನೆ ಮತ್ತು ಆಳವಾದ ಅಧ್ಯಯನಕ್ಕೆ ಉತ್ತಮ ವಾತಾವರಣ ಒದಗಿಸಿತು. ಮಾಧ್ವ ವಿದ್ವಾಂಸರಲ್ಲಿಯೇ ಅಗ್ರಮಾನ್ಯ ರಾಗಿದ್ದ ವಿದ್ಯಾಮಾನ್ಯ ತೀರ್ಥರು ತನ್ನೆಲ್ಲ ಅರಿವನ್ನು ಶಿಷ್ಯನಿಗೆ ಧಾರೆಯೆರೆದರು. ಇಂದೂ ಸಹ ಶಾಸ್ತ್ರಪಾಂಡಿತ್ಯದಲ್ಲಿ ವಿಶ್ವೇಶತೀರ್ಥರ ಸಮಕ್ಕೆ ನಿಲ್ಲಬಲ್ಲ ಯತಿ ದೇಶದಲ್ಲಿ ಇನ್ನೊಬ್ಬನಿಲ್ಲ ಎಂದು ಹೇಳಲಾಗುತ್ತಿದೆ.

ಶ್ರೀವಿದ್ಯಾಮಾನ್ಯ ತೀರ್ಥರಿಂದ ವಿದ್ಯಾರ್ಜನೆ ಮಾಡಿದ ಶ್ರೀಗಳು 1952-54, 1968-70, 1984-86, 2000-02 ಹಾಗೂ 2016-18 ಹೀಗೆ ದಾಖಲೆಯ ಐದು ಬಾರಿ ಪರ್ಯಾಯ ಪೂಜೆಯನ್ನು ನಡೆಸಿ ಶ್ರೀಕೃಷ್ಣ ಮಠದ 800 ವರ್ಷಗಳ ಇತಿಹಾಸದಲ್ಲಿ ಹೊಸ ದಾಖಲೆಯನ್ನೇ ಬರೆದಿದ್ದಾರೆ. ಅಲ್ಲದೇ 80 ಚಾತುರ್ಮಾಸ್ಯಗಳನ್ನು ನೆರವೇರಿಸಿದ್ದಾರೆ.

ದಾಖಲೆಯ ಸುಧಾಮಂಗಲ: ಪೇಜಾವರಶ್ರೀಗಳು 35 ಬಾರಿ ಉನ್ನತ ಮಟ್ಟದ ಶ್ರೀಮನ್ನಾಯಸುಧಾ ಗ್ರಂಥವನ್ನು ಶಿಷ್ಯರಿಗೆ ಪಾಠ ಹೇಳಿದ್ದಾರೆ. ಇಷ್ಟೊಂದು ಬಾರಿ ಸುಧಾಮಂಗಲೋತ್ಸವ ನಡೆಸಿದ ಮತ್ತೊಬ್ಬ ಮಠಾಧಿಪತಿ ಇಲ್ಲ. ಇದೊಂದು ಕಠಿಣ ಕೋರ್ಸ್. ಇದು 12 ವರ್ಷ ಗುರುಕುಲ ಪದ್ಧತಿಯ ಕೋರ್ಸ್. ಇದರಲ್ಲಿ 10 ವರ್ಷ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅಧ್ಯಯನ, ಕೊನೆಯ ಎರಡು ವರ್ಷ ಶ್ರೀಪಾದರಲ್ಲಿ ಅಧ್ಯಯನವಿರುತ್ತದೆ.

ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು 1951ರಲ್ಲಿ ತಮ್ಮ 20ರ ಹರೆಯದಲ್ಲಿ ನಂಜನಗೂಡಿನಲ್ಲಿ ನಡೆದ ಆಗಮತ್ರಯ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದರು. ಆ ಸಭೆಯಲ್ಲಿ ಮೈಸೂರು ಅರಸರಾಗಿದ್ದ ದಿ. ಜಯಚಾಮರಾಜೇಂದ್ರ ಒಡೆಯರು ಭಾಗವಹಿಸಿದ್ದರು. ತರುಣ ಯತಿಯ ಪಾಂಡಿತ್ಯಕ್ಕೆ, ವಾದ ಮಂಡಿಸುವ ಕುಶಲತೆಗೆ ಮೆಚ್ಚಿದ ಒಡೆಯರು ಶ್ರೀವಿಶ್ವೇಶತೀರ್ಥರನ್ನು ಅರಮನೆಗೆ ಕರೆಸಿ ಪೂಜೆ ಮಾಡಿಸಿದರು.

ಮೊದಲ ಪರ್ಯಾಯ: ತಮ್ಮ 21ರ ಹರೆಯದಲ್ಲಿ ಶ್ರೀವಿಶ್ವೇಶತೀರ್ಥ ಶ್ರೀಪಾದರು ಮೊದಲ ಬಾರಿ ಪರ್ಯಾಯ ಪೀಠವೇರಿದರು. 1952ರ ಜನವರಿ 18ರಂದು ಸರ್ವಜ್ಞ ಪೀಠವೇರಿದ ಸ್ವಾಮೀಜಿ, ಅನ್ನದಾನ, ಜ್ಞಾನದಾನ ಗಳೊಂದಿಗೆ ಮಾಧ್ವರೆಲ್ಲರ ಸಂಘಟನೆಗೆ ನಾಂದಿ ಹಾಡಿದ ಅಖಿಲಭಾರತ ಮಾಧ್ವ ತತ್ವಜ್ಞಾನ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದರು.

1956 ಜುಲೈ 28ರ ಟೀಕಾಚಾರ್ಯರ ಪುಣ್ಯದಿನದಂದು ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠದ ಸ್ಥಾಪನೆಯಾಯಿತು. 12 ವರ್ಷಗಳ ಕಾಲ ನಿರಂತರ ಶಾಸ್ತ್ರಾಧ್ಯಯನ ನಡೆಸುವ ಗುರುಕುಲ ಮಾದರಿಯ ನಾಡಿನ ಹೆಮ್ಮೆಯ ಅಧ್ಯಾತ್ಮ ವಿದ್ಯಾಕೇಂದ್ರ, ಈಗಲೂ ಉನ್ನತ ಶೈಕ್ಷಣಿಕ ಹೆಗ್ಗಳಿಕೆಯನ್ನು ಉಳಿಸಿ ಕೊಂಡು ಬಂದಿದೆ.

1968 ಜನವರಿ 18ರಿಂದ, 1970ರ ಜನವರಿ 17ರವರೆಗೆ ಪೇಜಾವರಶ್ರೀಗಳ ಎರಡನೆಯ ಶ್ರೀಕೃಷ್ಣ ಪೂಜಾ ಪರ್ಯಾಯ. ಮೊದಲ ಪರ್ಯಾಯವನ್ನೂ ಮೀರಿ ನಿಂತ ಅದ್ದೂರಿಯ ಪರ್ಯಾಯ ಇದಾಗಿತ್ತು. ಕಲಾವಿದರ, ವಿದ್ವಾಂಸರ ಮನಸೂರೆಗೊಂಡ ಪರ್ಯಾಯ. ಎರಡು ವರ್ಷಗಳ ಈ ಅವಧಿಯಲ್ಲಿ ಶ್ರೀಪಾದರು ಗೀತೆಯ ಕುರಿತು ನೀಡಿದ ಉಪನ್ಯಾಸ ಮಾಲಿಕೆ ಪುಸ್ತಕ ರೂಪದಲ್ಲಿ ಮೂಡಿ ಬಂದಿದೆ. ಈ ಪರ್ಯಾಯದ ಅವಧಿಯಲ್ಲೇ 1968 ಆ.18ರಂದು ಉಡುಪಿ ರಥಬೀದಿಯಲ್ಲಿ ಶ್ರೀಕೃಷ್ಣ ಉಚಿತ ಚಿಕಿತ್ಸಾಲಯದ ಉದ್ಘಾಟನೆ. ಇದು ಬಡ ರೋಗಿಗಳಿಗೊಂದು ವರದಾನ. ಶ್ರೀಪಾದರ ಸಾಮಾಜಿಕ ಕಳಕಳಿಗೊಂದು ಅನನ್ಯ ನಿದರ್ಶನ. ಇದೇ ಪರ್ಯಾಯ ಅವಧಿಯಲ್ಲೇ ಉಡುಪಿಯಲ್ಲಿ ಶ್ರೀಪಾದರ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮಹಾಸಮ್ಮೇಳನ ನಡೆಯಿತು. ಹಿಂದೂಗಳೆಲ್ಲ ಒಂದಾಗಿ ಬಂಧುಭಾವದಿಂದ ಬದುಕಬೇಕು ಎಂಬ ಸಂದೇಶವನ್ನು ಶ್ರೀಪಾದರು ಈ ವೇದಿಕೆಯಲ್ಲಿ ನೀಡಿದ್ದರು.

ಅಸ್ಪಶ್ಯತಾ ನಿವಾರಣೆಗೆ ಸಂಕಲ್ಪ: ಶ್ರೀಪಾದರನ್ನು ಬಾಲ್ಯದಿಂದ ಕಾಡುತ್ತಿದ್ದ ಸಮಸ್ಯೆ ಅಸ್ಪೃಶ್ಯತೆ. ಸಮಾಜದಲ್ಲಿ ಒಂದು ವರ್ಗವನ್ನು ಅಸ್ಪೃಶ್ಯರೆಂದು ಪರಿಗಣಿಸಿ ದೂರವಿಡುವುದರ ವಿರುದ್ಧ ಅವರ ಒಳಮನಸ್ಸು ಸಿಡಿದೇಳುತ್ತಿತ್ತು. ಕೊನೆಗೆ ಇದಕ್ಕೆ ತಾವೇ ಮುಂದಡಿ ಇಡಲು ನಿರ್ಧರಿಸಿ ಕೈಗೊಂಡ ಕ್ರಮವೇ ದಲಿತ ಕೇರಿಗೆ ಭೇಟಿ. ಮುಂದೆ ಇದಕ್ಕಾಗಿ ಅವರು ಖ್ಯಾತಿಯೊಂದಿಗೆ, ಪ್ರಗತಿಪರ ರಿಂದ ಟೀಕೆಯನ್ನೂ ಕೇಳುವಂತಾಯಿತು. ಈ ಸಂದರ್ಭದಲ್ಲೇ ಗಾಂಧೀಜಿ ವಿಚಾರಧಾರೆ ಅವರ ಮೇಲೆ ಗಾಢವಾದ ಪ್ರಭಾವ ಬೀರಿತು. ಇದರಿಂದ ಮಠದ ಯತಿಗಳು ಉತ್ಸವಗಳಲ್ಲಿ ಧರಿಸುತ್ತಿದ್ದ ಪಟ್ಟೆ ಪೀತಾಂಬರಗಳ ವೈಭವದ ಪೋಷಾಕನ್ನು ತೊರೆದು ಶುದ್ಧ ಖಾವಿಧಾರಿಯಾಗುವ ದೀಕ್ಷೆ ತೊಟ್ಟರು.

40 ವರ್ಷಗಳ ಹಿಂದೆ ಶ್ರೀಪಾದರು ಮೊದಲು ದಲಿತರ ಕೇರಿಗೆ ಹೋದಾಗ ಬಂದ ಟೀಕೆಗಳಿಗೆ ನೊಂದ ಶ್ರೀಪಾದರು ಅದನ್ನು ತನ್ನ ಆಪ್ತರ ಬಳಿ ಹೇಳಿಕೊಂಡಿದ್ದರು. ತಪ್ಪುಅರ್ಥ ಹಚ್ಚಿ ನನ್ನ ಪ್ರಾಮಾಣಿಕತೆಯನ್ನೇ ಪ್ರಶ್ನಿಸಲಾ ಗುತ್ತದೆ. ಇದರಿಂದ ನನಗೆ ತುಂಬಾ ನೋವಾಗಿದೆ. ಇದು ಹೀಗೆಯೇ ಮುಂದು ವರಿದರೆ ನಾನು ಪೀಠ ತ್ಯಾಗ ಮಾಡಿ, ಕೇವಲ ಸನ್ಯಾಸಿಯಾಗಿ ಬದುಕುತ್ತೇನೆ. ಹರಿದ್ವಾರದಲ್ಲೋ ಹೃಷಿಕೇಶದಲ್ಲೋ ಒಂದು ಪುಟ್ಟ ಗುಡಿಸಲು ಕಟ್ಟಿಕೊಂಡು ಇದ್ದು ಬಿಡುತ್ತೇನೆ ಎಂದು ಹಿರಿಯ ವಿದ್ವಾಂಸರೊಬ್ಬರ ಬಳಿ ಹೇಳಿ ಕೊಂಡಿದ್ದರಂತೆ.

ಶ್ರೀಪಾದರು ತಮ್ಮನ್ನು ಸಾರ್ವಜನಿಕವಾಗಿ ತೊಡಗಿಸಿಕೊಂಡರೂ ಯತಿ ಧರ್ಮದ ಯಾವ ನಿಯಮವನ್ನೂ ಕೈ ಬಿಟ್ಟವರಲ್ಲ. ಅಖಂಡವಾದ ಬ್ರಹ್ಮಚರ್ಯೆ, ನಿತ್ಯವೂ ಪ್ರಣವ ಜಪ, ಸಂಸ್ಥಾನದ ಮೂರ್ತಿಗಳ ಪೂಜೆ, ವಿದಾರ್ಥಿಗಳಿಗೆ ವೇದಾಂತ ಗ್ರಂಥಗಳ ಪಾಠ ಪ್ರವಚನ ಇವು ಅವರ ಜೀವನದ ಅವಿಭಾಜ್ಯ ಅಂಗಗಳಾಗಿ ನಿರಂತರ ನಡೆಯುತ್ತಿದ್ದವು.

70ರ ದಶಕದಲ್ಲಿ ಆಂಧ್ರದಲ್ಲಿ ಚಂಡಮಾರುತದಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿ ಜನರು ಬಲಿಯಾದಾಗ ಅಲ್ಲಿನ ಸಂತ್ರಸ್ತರ ನೆರವಿಗೆ ಧಾವಿಸಿದ ಪೇಜಾವರಶ್ರೀಗಳು ಹಂಸಲದೀವಿ ಎಂಬ ಗ್ರಾಮದ ಜನರ ನೆರವಿಗೆ ಟೊಂಕಕಟ್ಟಿ ನಿಂತರು. ಮನೆ ಮಾರು ಕಳೆದುಕೊಂಡು ಬೀದಿಪಾಲಾದ ಜನರತ್ತ ನೆರವಿನ ಹಸ್ತ ಚಾಚಿದರು. ಅಲ್ಲಿ ತನ್ನ ಮಠದ ವತಿಯಿಂದ 150 ಮನೆಗಳನ್ನು ಕಟ್ಟಿಸಿ ಕೊಟ್ಟರು. ಅದೇ ರೀತಿ ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಭೂಕಂಪ ಹಾಗೂ ಪ್ರಾಕೃತಿಕ ವಿಕೋಪದಿಂದ ಹಾನಿಯಾದಾಗಲೂ, ಅಲ್ಲಿಗೆ ನೆರವಿನ ಹಸ್ತ ಚಾಚಿದವರು ಪೇಜಾವರಶ್ರೀಗಳು.

ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಹಾನಿಯಾದಾಗ, ನಕ್ಸಲ್ ಬಾಧಿತ ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನ ಹಳ್ಳಿಗಳ ಜನರಿಗೆ ಸಹಾಯ ಮಾಡಲು ಧಾವಿಸಿ ಮಾನವೀಯತೆಯ ಮಹತ್ವವನ್ನು ಸಾರಿದವರು ಪೇಜಾವರಶ್ರೀಗಳು.

ಹಿಂದುಳಿದ ವರ್ಗದ ಯುವಕನಿಗೆ ಸನ್ಯಾಸ ದೀಕ್ಷೆ ನೀಡಿದ ಶ್ರೀ

ಪೇಜಾವರಶ್ರೀಗಳು ತಮ್ಮ ಐದನೇ ಪರ್ಯಾಯ ಸಂದರ್ಭದಲ್ಲಿ ಕಾರ್ಕಳದ 26ರ ಹರೆಯದ ಹಿಂದುಳಿದ ವರ್ಗಕ್ಕೆ ಸೇರಿದ ಯುವಕರೊಬ್ಬರಿಗೆ ಸನ್ಯಾಸ ದೀಕ್ಷೆ ನೀಡಿದ್ದರು. ದೇವಾಡಿಗ ಜಾತಿಗೆ ಸೇರಿದ ಈ ಯುವಕ, ಅಧ್ಯಾತ್ಮದಲ್ಲಿ ತೀವ್ರ ಆಸಕ್ತನಾಗಿದ್ದು, ನಾಲ್ಕೈದು ವರ್ಷಗಳಿಂದ ಸನ್ಯಾಸ ದೀಕ್ಷೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಅವರಿಗೆ ತಾವು ಸಾಂಪ್ರದಾಯಿಕ ರೀತಿಯಲ್ಲಿ ಸನ್ಯಾಸ ದೀಕ್ಷೆ ನೀಡುವುದಾಗಿ ಅವರು ತಿಳಿಸಿದ್ದರು. ಮುಂದೆ ಸನ್ಯಾಸಿಯಾಗಿ ಅವರು ತಮ್ಮ ಮಾರ್ಗವನ್ನು ತಾವೇ ನಿರ್ಧರಿಸುವರು ಎಂದಿದ್ದರು. ಅದೇ ರೀತಿ ಯಾವುದೇ ಜಾತಿ-ಮತದ ಆಸಕ್ತರಿಗೆ ತಾವು ಮಂತ್ರ ದೀಕ್ಷೆ ನೀಡುವುದಾಗಿ ಪೇಜಾವರ ಶ್ರೀಗಳು ತಿಳಿಸಿದ್ದರು. ಅದಕ್ಕಾಗಿ ಅವರು ಮದ್ಯ- ಮಾಂಸ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಭಕ್ತಿ ದೀಕ್ಷೆ- ನಾಮ ದೀಕ್ಷೆ ಪಡೆಯಲು ಆಸಕ್ತಿ ತೋರಿಸುವವರಿಗೆ ಇಂಥ ಯಾವುದೇ ನಿರ್ಬಂಧ ಗಳಿಲ್ಲ. ದಲಿತ, ಹಿಂದುಳಿದ ಜಾತಿ ಅಥವಾ ಇನ್ಯಾವುದೇ ಜಾತಿಯವರು ಈ ದೀಕ್ಷೆಗಳನ್ನು ಪಡೆಯಬಹುದು ಎಂದವರು ಹೇಳಿದ್ದರು. ಹಿಂದೂ ಧರ್ಮದಲ್ಲಿ ವಿಶ್ವಾಸವನ್ನು ಮೂಡಿಸುವುದು ಹಾಗೂ ಹಿಂದೂ ಧರ್ಮದ ಆಚರಣೆಯನ್ನು ಬೆಳೆಸುವುದು ತಮ್ಮ ಈ ಪ್ರಯತ್ನದ ಉದ್ದೇಶವಾಗಿದೆ. ಆದರೆ ಹಿಂದೂ ಧರ್ಮದ ವಿರೋಧಿಗಳು ಇದಕ್ಕೂ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ ಎಂದು ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದರು.

ಮುಸ್ಲಿಮರಿಂದ ಹೊರೆಕಾಣಿಕೆ ಸಮರ್ಪಣೆ

ಪೇಜಾವರ ಪರ್ಯಾಯದ ಸಂದರ್ಭದಲ್ಲಿ ಉಡುಪಿಯ ಮುಸ್ಲಿಮರು ಹಾಗೂ ಕ್ರೈಸ್ತರು ಹಸಿರು ಹೊರೆಕಾಣಿಯನ್ನು ಅರ್ಪಿಸುವ ಮೂಲಕ ಹಾಜಿ ಅಬ್ದುಲ್ಲಾರ ನಾಡಿನಲ್ಲಿ ಸರ್ವಧರ್ಮ ಸೌಹಾರ್ದವನ್ನು ಮೆರೆಯುವಂತಾಗಿತ್ತು.

ಉಡುಪಿ ಜಿಲ್ಲಾ ಸಮಸ್ತ ಮುಸ್ಲಿಮ್ ಪರ್ಯಾಯ ಸೌಹಾರ್ದ ಸಮಿತಿಯಿಂದ ಪೇಜಾವರ ಸ್ವಾಮೀಜಿಯ ಪರ್ಯಾಯ ಮಹೋತ್ಸವಕ್ಕೆ ಹೊರೆಕಾಣಿಕೆಯನ್ನು ಸಮರ್ಪಿಸಲಾಗಿತ್ತು. ‘ಧರ್ಮಗಳ ಮಧ್ಯೆ ಸೌಹಾರ್ದ ಮೂಡಿಸುವ ಉದ್ದೇಶ ದಿಂದ ಪೇಜಾವರಶ್ರೀಗಳ ಪರ್ಯಾಯಕ್ಕೆ ನಾವು ಬಹಳಷ್ಟು ದೊಡ್ಡ ಸಂಖ್ಯೆಯಲ್ಲಿ ಹೊರಕಾಣಿಕೆ ಸಮರ್ಪಿಸುತ್ತಿದ್ದೇವೆ. ಇದು ಇಡೀ ದೇಶಕ್ಕೆ ಮಾದರಿ.’ ಎಂದು ಸಮಿತಿಯ ಅಧ್ಯಕ್ಷ ಹಾಜಿ ಅಬೂಬಕರ್ ಪರ್ಕಳ ತಿಳಿಸಿದ್ದರು.

ಅಂದು ಮುಸ್ಲಿಮರು ಸುಮಾರು 30 ವಾಹನಗಳಲ್ಲಿ ಅಕ್ಕಿ, ಕುಂಬಳಕಾಯಿ, ಸೀಯಾಳ, ಬೆಲ್ಲ, ಸಕ್ಕರೆ, ಬಾಳೆಹಣ್ಣುಗಳನ್ನು ಪಯಾಯರ್ಕ್ಕೆ ಹೊರೆಕಾಣಿಕೆಯಾಗಿ ನೀಡಿದ್ದರು.

ಕ್ರೈಸ್ತರಿಂದಲೂ ಹೊರೆ: ಪೇಜಾವರ ಸ್ವಾಮೀಜಿಯ ಐದನೇ ಪರ್ಯಾಯ ಮಹೋತ್ಸವಕ್ಕೆ ಉಡುಪಿ ಧರ್ಮಪ್ರಾಂತದ ಕ್ರೈಸ್ತ ಬಾಂಧವರು ಸಹ ಹೊರೆಕಾಣಿಕೆ ಸಮರ್ಪಿಸಿದ್ದರು. ಸುಮಾರು 30ಕ್ಕೂ ಅಧಿಕ ವಾಹನಗಳಲ್ಲಿ ಇವುಗಳನ್ನು ಮೆರವಣಿಗೆಯಲ್ಲಿ ತಂದು ಅರ್ಪಿಸಲಾಗಿತ್ತು. ಉಡುಪಿ ಧರ್ಮಪ್ರಾಂತದ ಕೆಥೊಲಿಕ್ ಸಭಾ, ಮಹಿಳಾ ಸಂಘಟನೆ, ಭಾರತೀಯ ಕೆಥೊಲಿಕ್ ಯುವ ಸಂಚಾಲನ, ಯುವ ವಿದ್ಯಾರ್ಥಿ ಸಂಚಾಲನ, ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆ ಸಂತೆಕಟ್ಟೆ, ಅಂತರ್‌ರಾಷ್ಟ್ರೀಯ ಕ್ರೈಸ್ತ ಸಂಘಟನೆಗಳ ಒಕ್ಕೂಟ ಇದರಲ್ಲಿ ಪಾಲ್ಗೊಂಡಿದ್ದವು.

ಬುದ್ಧಿಜೀವಿಗಳ ಜೊತೆಗೆ ತಿಕ್ಕಾಟ

ಬುದ್ದಿಜೀವಿಗಳ ಜೊತೆಗೆ ಸದಾ ತಿಕ್ಕಾಟವನ್ನು ನಡೆಸುತ್ತಿದ್ದವರು ಪೇಜಾವರ ಶ್ರೀ. ಸ್ವಾಮೀಜಿಯ ದ್ವಂದ್ವ ನಿಲುವುಗಳನ್ನು ಬುದ್ದಿಜೀವಿಗಳು ಖಂಡಿಸಿದರೆ, ಅದಕ್ಕೆ ಪ್ರತಿಯಾಗಿ ‘ನೀವು ಬೇರೆ ಧರ್ಮದವರನ್ನು ಯಾಕೆ ಖಂಡಿಸುತ್ತಿಲ್ಲ’ ಎನ್ನುವುದು ಪೇಜಾವ ಶ್ರೀಗಳ ಮರು ಉತ್ತರವಾಗಿತ್ತು.

 ಮಧ್ವಾಚಾರ್ಯ ಟೀಕೆಯನ್ನು ಸಹಿಸದ ಪೇಜಾವರ ಶ್ರೀಗಳು, ಟಿಪ್ಪು ಸುಲ್ತಾನ್‌ರನ್ನು ಒಂದು ಕಡೆ ಧರ್ಮಸಹಿಷ್ಣು ಹೇಳಿದರೆ ಇನ್ನೊಂದು ಕಡೆ ಆತ ಕೋಮುವಾದಿ ಎಂದು ಹೇಳಲಾಗುತ್ತಿದೆ. ಶಂಕರಾಚಾರ್ಯ ಹಾಗೂ ಮಧ್ವಾಚಾರ್ಯರ ಮತಗಳ ಬಗ್ಗೆ ಭಿನ್ನಾಭಿಪ್ರಾಯ ಗಳಿದ್ದರೂ ಅವರು ಸತ್ಯ ಶೋಧನೆ ಮಾಡುವ ಕೆಲಸ ಮಾಡಿದ್ದಾರೆ. ಅವರ ಹಾಗೆ ಸಾಕಷ್ಟು ವ್ಯಕ್ತಿಗಳು ಆ ಕೆಲಸ ಮಾಡಿದ್ದಾರೆ. ಆದುದರಿಂದ ಸಮಷ್ಠಿ ಸಂಸ್ಕೃತಿ ರೂಪಿಸಲು ಸಾಧ್ಯವಾಗಿದೆ ಎಂದು ಸಮರ್ಥಿಸುತ್ತಿದ್ದರು.

ಪ್ರಗತಿಪರರ ಜೊತೆಗೆ ಸಂಘರ್ಷ ಮತ್ತು ಸಂವಾದ ಎರಡನ್ನೂ ಪೇಜಾವರ ಶ್ರೀ ಅವರು ಇಟ್ಟುಕೊಂಡಿದ್ದರು.

ವೆಷ್ಣವ ದೀಕ್ಷೆ ವಿವಾದ

ಕೇವಲ ಒಂದು ಜಾತಿಗೆ ಸೀಮಿತವಾಗಿರದ ವೈಷ್ಣವ ದೀಕ್ಷೆಯನ್ನು ಯಾರು ಕೂಡ ಪಡೆಯಬಹುದು. ಇದನ್ನು ಯಾರ ಮೇಲೂ ಕಡ್ಡಾಯವಾಗಿ ಹೇರುವುದಿಲ್ಲ ಎಂದು ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದರು. ಮಧ್ವ ಸಿದ್ಧಾಂತ ಕ್ಷತ್ರಿಯರು ಸೇರಿದಂತೆ ಎಲ್ಲರೂ ಸ್ವೀಕಾರ ಮಾಡುವಂತಹ ಸಿದ್ಧಾಂತವಾಗಿದೆ. ಇದರಲ್ಲಿ ಯಾವುದೇ ವಿವಾದ ಇಲ್ಲ. ವೈಷ್ಣವ ದೀಕ್ಷೆ ಎಂಬುದು ಒಂದು ಜಾತಿಗೆ ಸೀಮಿತವಾಗಿಲ್ಲ. ಬ್ರಾಹ್ಮಣರಿಂದ ಹಿಡಿದು ದಲಿತರವರೆಗೆ ಎಲ್ಲರು ಕೂಡ ಸ್ವೀಕರಿಸಬಹುದಾಗಿದೆ. ಜಾತಿ ಬೇರೆ ತತ್ವಜ್ಞಾನ ಬೇರೆ. ತಮ್ಮ ಜಾತಿಯಲ್ಲಿ ಇದ್ದುಕೊಂಡೇ ವೈಷ್ಣವ ದೀಕ್ಷೆಯನ್ನು ಪಡೆಯಬಹುದು ಎಂದು ಶ್ರೀಗಳು ಸ್ಪಷ್ಟಪಡಿಸಿದ್ದರು.

ಆದರೆ ಕ್ಷತ್ರಿಯ ಸಮಾಜದ ಯುವಕರೊಬ್ಬರನ್ನು ಹೊರತು ಪಡಿಸಿ ಅವರ ಪರ್ಯಾಯ ಕಾಲದಲ್ಲಿ ಯಾರೂ ವೈಷ್ಣವ ದೀಕ್ಷೆಗೆ ಮುಂದೆ ಬಂದಿರಲಿಲ್ಲ. ಆದರೆ ಅವರ ಈ ಘೋಷಣೆಗೆ ನಾಡಿನಾದ್ಯಂತ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು.

ಉಡುಪಿಯಲ್ಲಿ ಧರ್ಮಸಂಸದ್

ಪರ್ಯಾಯ ಪೇಜಾವರ ಮಠದ ಆತಿಥೇಯತ್ವದಲ್ಲಿ ವಿಶ್ವಹಿಂದೂ ಪರಿಷತ್ ಮೂರು ದಿನಗಳ ಕಾಲ ರಾಷ್ಟ್ರ ಮಟ್ಟದ ಹಿಂದೂ ಸಂತರ ಸಮ್ಮೇಳನ ‘ಧರ್ಮ ಸಂಸದ್’ನ್ನು ಉಡುಪಿ ಶ್ರೀಕೃಷ್ಣ ಮಠದಲ್ಲಿ ಆಯೋಜಿಸಿತ್ತು. ಶ್ರೀವಿಶ್ವೇಶತೀರ್ಥ ಶ್ರೀಪಾದರು ಹಾಗೂ ಇತರ ಹಿರಿಯ ಸಂತರ ನೇತೃತ್ವದಲ್ಲಿ ದೇಶದಾದ್ಯಂತದಿಂದ ಬಂದ 2,000ಕ್ಕೂ ಅಧಿಕ ಸಂತರು ಹಿಂದೂ ಧರ್ಮದಲ್ಲಿರುವ ಅಸ್ಪಶ್ಯತೆಯ ಸಮಸ್ಯೆ, ಗೋಹತ್ಯೆ-ಗೋಸಂರಕ್ಷಣೆ, ಮತಾಂತರ ಸಮಸ್ಯೆ, ರಾಮಜನ್ಮಭೂಮಿ ವಿಷಯಗಳ ಕುರಿತು ಚರ್ಚೆ ನಡೆಸಿದ್ದರು.

ಮುಂದಿನ ಪರ್ಯಾಯ ನೋಡಬೇಕು

ದಾಖಲೆಯ ಐದನೇ ಪರ್ಯಾಯದ ಬಳಿಕ ನಿಮ್ಮೆಲ್ಲರ ಹಾರೈಕೆಯಂತೆ ನಾವು ಬದುಕಿದ್ದರೆ, 6ನೇ ಪರ್ಯಾಯವನ್ನು ನಾನು ಮಾಡುವುದಿಲ್ಲ, ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥರು ಮಾಡುವುದನ್ನು ನೋಡಲು ಬಯಸುತ್ತೇನೆ ಎಂದು ಪೇಜಾವರ ಶ್ರೀಗಳು ಹೇಳಿದ್ದರು.

Writer - ಬಿ.ಬಿ. ಶೆಟ್ಟಿಗಾರ್

contributor

Editor - ಬಿ.ಬಿ. ಶೆಟ್ಟಿಗಾರ್

contributor

Similar News

ಜಗದಗಲ
ಜಗ ದಗಲ