ಮಾಡದ ತಪ್ಪಿಗೆ ಜೈಲು ಪಾಲಾದರೆ ಸಹಿಸುವುದು ಹೇಗೆ?: ಇಬ್ಬರು ಅಮಾಯಕ ಯುವಕರ ಕುಟುಂಬಸ್ಥರ ಪ್ರಶ್ನೆ

Update: 2019-12-30 07:22 GMT

ಮಂಗಳೂರು, ಡಿ.29: ಆ ಮಕ್ಕಳು ಈವರೆಗೆ ಯಾರ ತಂಟೆ-ತಕರಾರಿಗೂ ಹೋದವರಲ್ಲ. ಅವರ ಮೇಲೆ ಒಂದೇ ಒಂದು ಕ್ರಿಮಿನಲ್ ಪ್ರಕರಣ ಕೂಡ ದಾಖಲಾಗಿಲ್ಲ. ಈವರೆಗೂ ಯಾವುದೇ ಪೊಲೀಸ್ ಠಾಣೆ, ಜೈಲು, ಕೋರ್ಟ್‌ಗಳ ಮೆಟ್ಟ್ಟಿಲು ಹತ್ತಿದವರೂ ಅಲ್ಲ. ಕಷ್ಟಪಟ್ಟು ದುಡಿದು ಕುಟುಂಬಕ್ಕೆ ಆಸರೆಯಾಗಿದ್ದರು. ಯಾವುದೇ ತಪ್ಪು ಮಾಡದ, ಯಾರಿಗೂ ತೊಂದರೆ ಕೊಡದ ನಮ್ಮ ಮಕ್ಕಳನ್ನು ಪೊಲೀಸರು ಹಿಡಿದು ಜೈಲಿಗೆ ಹಾಕಿದರೆ ಹೇಗೆ ಸಹಿಸಲಿ?.

ಇದು ಡಿ.19ರ ಮಂಗಳೂರು ಗೋಲಿಬಾರ್-ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಜೈಲು ಪಾಲಾದ ಇಬ್ಬರು ಅಮಾಯಕ ಯುವಕರ ಕುಟುಂಬಸ್ಥರ ಪ್ರಶ್ನೆಯಾಗಿದೆ. ಅಷ್ಟೇ ಅಲ್ಲ, ಈ ಬಗ್ಗೆ ಪೊಲೀಸ್ ಆಯುಕ್ತರು ಮರು ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಲಿ ಎಂದು ಅವರು ಮನವಿ ಮಾಡಿದ್ದಾರೆ.

ಅಬ್ದುಲ್ ಹಫೀಝ್: ಪಂಜಿಮೊಗರು ಸಮೀಪದ ವಿದ್ಯಾನಗರ ನಿವಾಸಿ. ವಯಸ್ಸು 20. ದ್ವಿತೀಯ ಪಿಯುಸಿ ಕಲಿತು ಎಸಿ ಮೆಕ್ಯಾನಿಕ್ ಕೋರ್ಸನ್ನು ಪೂರ್ತಿಗೊಳಿಸಲಾಗದೆ ನಗರದ ಬಂದರ್‌ನಲ್ಲಿ ಸ್ಟಿಕ್ಕರ್ ಕಟ್ಟಿಂಗ್ ಕೆಲಸ ಮಾಡುತ್ತಿದ್ದ. ಡಿ.19ರಂದು ಮಂಗಳೂರು ಗಲಭೆ ಶುರುವಾದ ತಕ್ಷಣ ಮಾಲಕರ ಸೂಚನೆಯ ಮೇರೆಗೆ ಸ್ಟಿಕ್ಕರ್ ಕಟ್ಟಿಂಗ್ ಶಾಪ್‌ನ ಬಾಗಿಲು ಎಳೆದಿದಾ್ದನೆ. ಅಲ್ಲಿದ್ದ ಇತರರು ಹೋಗು... ಹೋಗು... ಇಲ್ಲಿ ನಿಲ್ಲಬೇಡ... ಪರಿಸ್ಥಿತಿ ಚೆನ್ನಾಗಿಲ್ಲ, ಮನೆಗೆ ಬೇಗ ಹೋಗು... ಎಂದರೂ ಕೂಡ ಹಫೀಝ್ ಕುತೂಹಲದಿಂದ ಅಲ್ಲೇ ಕೆಲಕಾಲ ನಿಂತ. ಲಾಠಿಏಟು, ಅಶ್ರುವಾಯು ಸಹಿತ ಪೊಲೀಸರ ರೌದ್ರಾವತಾರವನ್ನು ನೋಡತೊಡಗಿದ. ಅಷ್ಟರಲ್ಲಿ ಪೊಲೀಸರು ಎಲ್ಲಿದ್ದರೋ ಏನೋ... ಓಡೋಡಿ ಬಂದು ಹಫೀಝ್‌ನನ್ನು ಹಿಡಿಯಲು ಮುಂದಾದರು. ಹೆದರಿದ ಹಫೀಝ್ ಓಡ ತೊಡಗಿದ... ಪೊಲೀಸರು ಬೆನ್ನಟ್ಟಿದರು. ಪೊಲೀಸರ ಕೈಯಿಂದ ಬಚಾವ್ ಆಗುವ ಸಲುವಾಗಿ ಫ್ಲಾಟ್‌ವೊಂದಕ್ಕೆ ನುಗ್ಗಿ ಅವಿತುಕೊಂಡ. ಅಲ್ಲಿಗೂ ನುಗ್ಗಿದ ನಾಲ್ಕು ಮಂದಿ ಪೊಲೀಸರು ಬಾಗಿಲು ಮುರಿದು ಹಫೀಝ್‌ನನ್ನು ಹಿಡಿದು ಥಳಿಸಿದರು. ಅವಾಚ್ಯ ಶಬ್ದದಿಂದ ಬೈದರು. ‘ನಾನು ಏನೂ ಮಾಡಿಲ್ಲ... ಬಿಟ್ಟು ಬಿಡಿ, ಗಲಾಟೆ ಶುರುವಾದ ಮಾಹಿತಿ ತಿಳಿದು ಕೆಲಸ ನಿಲ್ಲಿಸಿ ಮನೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದೆ’ ಎಂದು ಹಫೀಝ್ ಹೇಳಿದರೂ ಕೂಡ ನಿರ್ದಯಿ ಪೊಲೀಸರ ಮನಸ್ಸು ಕೇಳಲಿಲ್ಲ. ಪ್ರಕಣ ದಾಖಲಿಸಿ ಜೈಲಿಗೆ ತಳ್ಳಿಯೇ ಬಿಟ್ಟರು.

ಮುಹಮ್ಮದ್ ಇಕ್ಬಾಲ್: ಅಡ್ಯಾರ್ ಕಣ್ಣೂರು ನಿವಾಸಿ. ವಯಸ್ಸು 23. ಹೊಯ್ಗೆ ಬಝಾರ್‌ನಲ್ಲಿ ಮರದ ಮಿಲ್ಲಿನಲ್ಲಿ ಕೆಲಸ ಮಾಡುತ್ತಿದ್ದ. ಡಿ.19ರಂದು ಗಲಭೆ ಶುರುವಾಗಿದೆ ಎಂಬ ಮಾಹಿತಿ ತಿಳಿದೊಡನೆ ಮರದ ಮಿಲ್ಲಿನ ಮಾಲಕರು ಇಕ್ಬಾಲ್‌ನನ್ನು ತನ್ನ ದ್ವಿಚಕ್ರ ವಾಹನದಲ್ಲಿ ಕುಳ್ಳಿರಿಸಿಕೊಂಡು ಫಿಝಾ ಮಾಲ್ ಬಳಿ ಬಿಟ್ಟು ಹೋಗಿದ್ದರು. ಸೈದಾನಿ ಬೀವಿ ದರ್ಗಾದ ಬಳಿ ಊರಿಗೆ ತೆರಳುವ ಬಸ್ಸಿಗಾಗಿ ಕಾದು ನಿಂತಾಗ ಪೊಲೀಸರ ಅಟ್ಟಹಾಸ ಮಿತಿ ಮೀರಿತ್ತು. ಇಲ್ಲಿ ನಿಂತರೆ ಅಪಾಯ ಎಂದು ಭಾವಿಸಿದ ಇಕ್ಬಾಲ್ ನೇರ ಬಂದರ್ ಕಡೆ ಸಾಗಿದ. ಅಲ್ಲಂತೂ ಪೊಲೀಸರು ಅಮಾನವೀಯವಾಗಿ ವರ್ತಿಸುತ್ತಿದ್ದರು. ರಕ್ಷಣೆ ನೀಡುವ ಬದಲು ಜನರನ್ನು ಭಕ್ಷಿಸುವಂತೆ ವರ್ತಿಸುತ್ತಿದ್ದರು. ಹೆದರಿದ ಇಕ್ಬಾಲ್ ದಿಕ್ಕೆಟ್ಟು ಓಡತೊಡಗಿದ. ಇಕ್ಬಾಲ್ ಓಡುವುದನ್ನು ಕಂಡ ಪೊಲೀಸರೂ ಬೆನ್ನಟ್ಟತೊಡಗಿದರು. ಹಫೀಝ್‌ನಂತೆ ಇಕ್ಬಾಲ್ ಕೂಡ ಫ್ಲಾಟ್ ಹತ್ತಿ ಅಡಗಿಕೊಂಡ. ಬೆನ್ನಟ್ಟಿಕೊಂಡು ಬಂದಿದ್ದ ಪೊಲೀಸರು ಆ ಫ್ಲಾಟ್‌ಗೆ ನುಗ್ಗಿ ಇಕ್ಬಾಲ್‌ನನ್ನು ಹಿಡಿದು ಲಾಠಿ ಬೀಸಿದರು. ಅವಾಚ್ಯ ಶಬ್ದದಿಂದ ಬೈದು ನಿಂದಿಸಿದರು. ಅಷ್ಟೇ ಅಲ್ಲ, ಗಲಭೆಯಲ್ಲಿ ಪಾಲ್ಗೊಂಡಿದ್ದ, ಹಿಂಸಾಚಾರದಲ್ಲಿ ತೊಡಗಿಸಿಕೊಂಡಿದ್ದ ಎಂದೆಲ್ಲಾ ಆರೋಪಿಸಿ ಪ್ರಕರಣವನ್ನೂ ದಾಖಲಿಸಿ ಜೈಲಿಗೆ ಅಟ್ಟಿದರು.

ಹೀಗೆ ಇಬ್ಬರು ಯುವಕರು ತಾವು ಎಂದೂ ಮಾಡದ ತಪ್ಪಿಗೆ ಇದೀಗ ಜೈಲು ಪಾಲಾಗಿದ್ದಾರೆ. ಏನೂ ಮಾಡದ ಈ ಯುವಕರನ್ನು ಯಾಕೆ ಹಿಂಸಿಸಿ, ಜೈಲಿಗೆ ತಳ್ಳಿದಿರಿ ಎಂದು ಕುಟಂಬಸ್ಥರು ನೋವಿನಿಂದ ಪ್ರಶ್ನಿಸುತ್ತಿದ್ದು, ಸಿಸಿ ಕ್ಯಾಮರಾ ನೋಡಿ... ಹಿಂಸಾಚಾರಕ್ಕೆ ಇಳಿದುದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಿ. ನಮ್ಮದೇನೂ ಅಭ್ಯಂತರವಿಲ್ಲ ಎಂದೂ ಹೇಳಿದ್ದಾರೆ.

ಮಂಗಳೂರಿನಲ್ಲಿ ಮೊನ್ನೆ ನಡೆದ ಹಿಂಸಾಚಾರದಲ್ಲಿ ನನ್ನ ಮಗ ಭಾಗಿಯಾಗಿದ್ದರೆ ಅವನ ವಿರುದ್ಧ ಪೊಲೀಸರು ಕ್ರಮ ಜರುಗಿಸಲಿ. ನನಗೆ ಬೇಸರವಿಲ್ಲ. ಆದರೆ ನನ್ನ ಮಗ ನಿರಪರಾಧಿ. ಅವ ಯಾವ ಅಪರಾಧವನ್ನೂ ಮಾಡಿದವನಲ್ಲ. ಅವನ ಮೇಲೆ ಈವರೆಗೆ ಯಾವ ಪ್ರಕರಣವೂ ದಾಖಲಾಗಿಲ್ಲ. ಆದರೂ ಪೊಲೀಸರು ವಿನಾಕಾರಣ ಅವನನ್ನು ಹಿಡಿದು ಜೈಲಿಗೆ ಹಾಕಿದರು. ಪೊಲೀಸರು ಕೇಸು ದಾಖಲಿಸುವ ಮುನ್ನ ಸರಿಯಾಗಿ ವಿಚಾರಣೆ ನಡೆಸಿದ್ದರೆ ನನ್ನ ಮಗ ಈ ಜೈಲು, ಸ್ಟೇಷನ್, ಜೈಲಿಗೆ ಅಳೆಯುವುದು ನಿಲ್ಲುತ್ತಿತ್ತು. ನನಗೆ ಮೂರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು. ಕಷ್ಟದ ಬದುಕು ನನ್ನದು. ಗುಜಿರಿ ವ್ಯಾಪಾರ ಮಾಡುತ್ತಿದ್ದೇನೆ. ಮೂವರು ಹೆಣ್ಮಕ್ಕಳ ಮದುವೆಗೆ ಮಾಡಿದ ಸಾಲ ಇನ್ನೂ ಇದೆ. ಕಿರಿಯ ಮಗ ಶಾಲೆಗೆ ಹೋಗುತ್ತಿದ್ದಾನೆ. ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಆದರೂ ದ್ವಿತೀಯ ಪಿಯುಸಿ ಮುಗಿಸಿ ಎಸಿ ಮೆಕ್ಯಾನಿಕ್ ಕೋರ್ಸ್‌ಗೆ ಕಳುಹಿಸುತ್ತಿದ್ದೆ. 2 ವರ್ಷದಿಂದ ಬಂದರ್‌ಗೆ ಕೆಲಸಕ್ಕೆ ಹೋಗುತ್ತಿದ್ದ. ಕುಟುಂಬಕ್ಕೆ ಅವನೇ ಆಧಾರವಾಗಿದ್ದ. ದುಡಿದ ಹಣದಲ್ಲಿ ಪ್ರತೀ ವಾರ 3 ಸಾವಿರ ರೂ.ವನ್ನು ಫಂಡ್‌ಗೆ ಕಟ್ಟುತ್ತಿದ್ದ. ನನ್ನ ಒಂದೇ ಒಂದು ಮಾತು ಮೀರಿದವನಲ್ಲ. ಯಾವ ಪಕ್ಷ, ಸಂಘಟನೆಯಲ್ಲಿ ತೊಡಗಿಸಿಕೊಂಡವನಲ್ಲ. ಎಷ್ಟೇ ಕಷ್ಟವಾದರೂ ಸರಿ, ಅವನನ್ನು ಗಲ್ಫ್‌ಗೆ ಕಳುಹಿಸಬೇಕೆಂದಿದ್ದೆ, ಅವ ನನ್ನ ಕುಟುಂಬಕ್ಕೊಂದು ದಾರಿದೀಪವಾಗಬೇಕು ಎಂಬ ಕನಸು ಕಂಡಿದ್ದೆ. ಆದರೆ ಪೊಲೀಸರು ಅದನ್ನೆಲ್ಲಾ ನುಚ್ಚು ನೂರು ಮಾಡಿದರು. ಪೊಲೀಸರಿಗೆ ಸ್ವಲ್ಪವಾದರೂ ಮನುಷ್ಯತ್ವ ಇದ್ದಿದ್ದರೆ ಹಸುವಿನಂತಹ ನನ್ನ ಮಗನನ್ನು ಹಿಡಿದು ಜೈಲಿಗೆ ಹಾಕುತ್ತಿರಲಿಲ್ಲ.

ಮಸೂದ್, ಹಫೀಝ್‌ನ ತಂದೆ

ನನಗೆ ನಾಲ್ಕು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು. ಹೆಣ್ಮಕ್ಕಳ ಪೈಕಿ ಇಬ್ಬರಿಗೆ ಮದುವೆಯಾಗಿದೆ. ಇನ್ನಿಬ್ಬರು ಮದುವೆಯ ಪ್ರಾಯ ತಲುಪಿದ್ದಾರೆ. ನನ್ನ ಆರೋಗ್ಯವೂ ಸರಿ ಇಲ್ಲ. ಹಾಗಾಗಿ ಗಂಡು ಮಕ್ಕಳು ಕಡಿಮೆ ಸಂಬಳಕ್ಕೆ ಮಂಗಳೂರಿಗೆ ದುಡಿಯಲು ಹೋಗುತ್ತಿದ್ದಾರೆ. ಇಕ್ಬಾಲ್ ನನ್ನ ಕಿರಿಯ ಮಗ. ಎಸೆಸೆಲ್ಸಿ ಕಲಿತಿದ್ದ. ಕೆಲವು ತಿಂಗಳಿಂದ ಹೊಯ್ಗೆ ಬಝಾರ್‌ನಲ್ಲಿರುವ ಮರದ ಮಿಲ್ಲಿಗೆ ಕೆಲಸಕ್ಕೆ ಹೋಗುತ್ತಿದ್ದ. ಮನೆಗೆ ಈ ಇಬ್ಬರು ಮಕ್ಕಳೇ ಆಧಾರ. ಮೊನ್ನೆ ಮಂಗಳೂರಿನಲ್ಲಿ ಗಲಾಟೆ ಶುರುವಾಗಿದೆ ಎಂದು ತಿಳಿದ ತಕ್ಷಣ ಮರದ ಮಿಲ್ಲಿನ ಧಣಿ ಮಗನನ್ನು ಫಿಝಾ ಮಾಲ್ ಬಳಿ ಕರೆದುಕೊಂಡು ಬಿಟ್ಟು ಹೋಗಿದ್ದರು. ಅಲ್ಲಿಂದ ಮನೆಗೆ ಬರಲು ಬಿಡದ ಆ ಪೊಲೀಸರು ಹಿಡಿದು ಜೈಲಿಗೆ ಹಾಕಿದ್ದಾರೆ. ಅವ ಯಾವ ಗಲಾಟೆಗೆ ಹೋದವನಲ್ಲ. ಅವನ ಮೇಲೆ ಯಾವ ಕೇಸೂ ಇಲ್ಲ. ಯಾವ ಸಂಘಟನೆ, ಪಕ್ಷದಲ್ಲೂ ಅವನಿಲ್ಲ. ಮಕ್ಕಳು ದುಡಿದು ತಂದು ಹಾಕಿದರಷ್ಟೇ ನಮ್ಮ ಕುಟುಂಬ ಸಾಗುವುದು. ಆ ಪೈಕಿ ಒಬ್ಬನನ್ನು ಪೊಲೀಸರು ಜೈಲಿಗೆ ಹಾಕಿದರೆ, ಇನ್ನೊಬ್ಬ ಅವನ ಜಾಮೀನಿಗಾಗಿ ಓಡಾಡುತ್ತಿದ್ದಾನೆ. ಒಟ್ಟಿನಲ್ಲಿ ಪೊಲೀಸರು ನಮಗೆ ಗಾಯದ ಮೇಲೆ ಬರೆ ಹಾಕಿ ಬಿಟ್ಟರು.

ಅಬ್ದುಲ್ ಖಾದರ್, ಮುಹಮ್ಮದ್ ಇಕ್ಬಾಲ್‌ನ ತಂದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News