×
Ad

ಸಿಎಎ ವಿರೋಧಿ ಪ್ರತಿಭಟನಕಾರರು 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆ ಕೂಗಿದ್ದರೇ?: ಇಲ್ಲಿದೆ ಸತ್ಯಾಂಶ

Update: 2019-12-30 19:26 IST

ಹೊಸದಿಲ್ಲಿ: ಶನಿವಾರದಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಟ್ವೀಟ್ ಮಾಡಿ ಒಂದು ವೀಡಿಯೋವನ್ನೂ ಶೇರ್ ಮಾಡಿದ್ದರು. ಲಕ್ನೋದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು `ಪಾಕಿಸ್ತಾನ್ ಜಿಂದಾಬಾದ್' ಘೋಷಣೆಗಳನ್ನು ಕೂಗಿದ್ದರೆಂದು ಆರೋಪಿಸಿದ್ದರು.

"ಇಲ್ಲಿ ಸಿಎಎ ವಿರೋಧಿ ಪ್ರತಿಭಟನಕಾರರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಕೂಗುತ್ತಿದ್ದಾರೆ. ಯಾರಾದರೂ ಅವರ ಜತೆ ಸಂವಾದ ನಡೆಸಿ ಮುಂದಿನ ಬಾರಿ ತ್ರಿವರ್ಣ ಧ್ವಜ ಹಾಗೂ ಬಾಪೂ ಅವರ ಚಿತ್ರ ಹೊಂದಬೇಕೆಂದು ಹೇಳಬೇಕು'' ಎಂದು ಮಾಳವಿಯ ಟ್ವೀಟ್ ಮಾಡಿದ್ದರು.

ಜತೆಗೆ ಒಂದು ವಿಡಿಯೋವನ್ನೂ ಅವರು ಪೋಸ್ಟ್ ಮಾಡಿದ್ದರು. ಆ ವೀಡಿಯೊಗೆ ಸಾವಿರಾರು ಮಂದಿ ಲೈಕ್ ಮಾಡಿದ್ದಾರಲ್ಲದೆ ಹಲವಾರು ಮಂದಿ ರಿಟ್ವೀಟ್ ಕೂಡ ಮಾಡಿದ್ದಾರೆ. ಇದೇ ವೀಡಿಯೋವನ್ನು ರಿಪಬ್ಲಿಕ್ ಟಿವಿ, ಝೀ ನ್ಯೂಸ್ ಸಹಿತ ಹಲವು ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದವು;.

thequint.com ಸುದ್ದಿ ತಾಣ ಈ ವೀಡಿಯೋದ ಸತ್ಯಾಸತ್ಯತೆ ಪರಿಶೀಲಿಸಲು ನಿರ್ಧರಿಸಿ ಅದನ್ನು ಎಡಿಟಿಂಗ್ ಸಾಫ್ಟ್‍ವೇರ್ ಗೆ ಹಾಕಿ ಸ್ಪೀಡ್ ಕಡಿಮೆಗೊಳಿಸಿದಾಗ ಪ್ರತಿಭಟನಾಕಾರರು ವಾಸ್ತವವಾಗಿ 'ಕಾಶಿಫ್ ಸಾಬ್ ಜಿಂದಾಬಾದ್' ಹಾಗೂ 'ಹಿಂದುಸ್ತಾನ್ ಜಿಂದಾಬಾದ್' ಎಂದು ಹೇಳುತ್ತಿರುವುದು ಕೇಳಿಸಿದೆ.

altnews.in ಕೂಡ ತನ್ನ ಸತ್ಯಶೋಧನಾ ವರದಿಯಲ್ಲಿ ಇದನ್ನೇ ಹೇಳಿದೆಯಲ್ಲದೆ, ಡಿಸೆಂಬರ್ 13ರಂದು ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾಶಿಫ್ ಅಹ್ಮದ್ ಅವರನ್ನೂ ಸಂಪರ್ಕಿಸಿತ್ತು. ಕಾಶಿಫ್ ಆವರು ಲಕ್ನೋದಲ್ಲಿ ಎಐಎಂಐಎಂ ಜಿಲ್ಲಾಧ್ಯಕ್ಷರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News