ಸಿಎಎ ವಿರುದ್ಧ ಹೈದರಾಬಾದ್ ನಲ್ಲಿ ಎರಡು ದಿಢೀರ್ ಪ್ರತಿಭಟನೆ

Update: 2019-12-30 18:15 GMT

ಹೈದರಾಬಾದ್, ಡಿ. 30: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜುಬ್ಲಿ ಹಿಲ್ಸ್‌ನಲ್ಲಿರುವ ಸ್ಟಾರ್‌ಬಕ್ಸ್ ಹಾಗೂ ಹುಸೈನ್‌ನಗರದಲ್ಲಿರುವ ಬುದ್ಧನ ಪ್ರತಿಮೆ ಎದುರು ರವಿವಾರ ದಿಢೀರ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಡಿಢೀರ್ ಪ್ರತಿಭಟನೆಗಳು ನಡೆದವು. ನಾಲ್ವರು ಗೆಳೆಯರು ಸ್ಟಾರ್‌ ಬಕ್ಸ್‌ನಲ್ಲಿ ಕಾಫಿ ಕುಡಿಯಲು ಆಗಮಿಸಿದ್ದರು. ಕಾಫಿ ಕುಡಿದ ಅನಂತರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಘೋಷಣಾ ಫಲಕ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. ಅವರೊಂದಿಗೆ 15 ಮಂದಿ ಕೈಜೋಡಿಸಿದರು. ‘‘ನಮ್ಮ ಅಭಿಪ್ರಾಯ ಅಭಿವ್ಯಕ್ತಿಸಲು ಪೊಲೀಸರು ಅವಕಾಶ ನೀಡಲಿಲ್ಲ. ಆದುದರಿಂದ ಈ ಕಾಯ್ದೆ ಬಗ್ಗೆ ಶಾಂತಿಯುತವಾಗಿ ಪ್ರತಿಭಟಿಸಲು ನಾವು ಬಯಸುತ್ತೇವೆ’’ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ನಾಲ್ವರಲ್ಲಿ ಒಬ್ಬರಾದ ಮುಬಶಿರ್ ಖುರ್ರಾಮ್ ಹೇಳಿದ್ದಾರೆ.

ಇನ್ನೊಂದೆಡೆ ಲುಂಬಿನಿ ಪಾರ್ಕ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ ಪ್ರತಿಭಟನಕಾರರನ್ನು ಪೊಲೀಸರು ಭೇಟಿಯಾದರು. ಅವರು ಹಿನ್ನೆಲೆ ಪ್ರಶ್ನಿಸಿದರು. ಗಡ್ಡ ಇರುವ ಪ್ರತಿಭಟನಕಾರರೊಬ್ಬರಲ್ಲಿ ಪೊಲೀಸರು ವಿವರ ಕೇಳಿದರು. ಅವರು ಮುಸ್ಲಿಮೇತರರ ಹೆಸರು ಹೇಳಿದಾಗ ಗುರುತು ಚೀಟಿ ಪರಿಶೀಲನೆ ನಡೆಸಿದರು. ಫೋಟೊ ತೆಗೆದರು ಹಾಗೂ ಕಾಯಲು ಹೇಳಿದರು. ಶಾಂತಿಯುತ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನಕಾರರು ದಿಢೀರ್ ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News