ಚಾರಿತ್ರಿಕ ನಾಟಕ ಪರಂಪರೆಗೆ ಮತ್ತೊಂದು ಕೊಡುಗೆ ರಸಗಂಗಾಧರ

Update: 2019-12-30 18:31 GMT

ಭಾರತದ ಇತಿಹಾಸ ಚರಿತ್ರೆಯಲ್ಲಿ ಹಾದು ಹೋಗಿರುವ ಚಾರಿತ್ರಿಕ ವ್ಯಕ್ತಿಗಳು ಅರಸುಗಳು, ಕವಿಗಳು, ಕಲಾವಿದರು, ಹೀಗೆ ಅವರು ಬಾಳಿಬದುಕಿದ ಮಾನವ ಸ್ವಭಾವದ ವ್ಯಕ್ತಿತ್ವವನ್ನು ಮತ್ತು ವೈಯಕ್ತಿವಾಗಿ ಅನುಭವಿಸಿದ ನೋವುಗಳನ್ನು, ಪ್ರೇಮ ವಿರಹವನ್ನು, ಅಧಿಕಾರದ ದಾಹವನ್ನು ಮತ್ತು ಆಯಾ ಕಾಲಘಟ್ಟದಲ್ಲಿ ನಡೆದಿರತಕ್ಕಂತಹ ರಾಜವೈಭವವನ್ನು ಅಥವಾ ಆಯಾ ಕಾಲಘಟ್ಟದಲ್ಲಿ ನಡೆದ ವೈಪಲ್ಯಗಳನ್ನು ಇಂತಹ ಅನೇಕ ಘಟನೆಗಳನ್ನು ಬರಹ ರೂಪಕ್ಕೆ ಅಥವಾ ನಾಟಕ ರೂಪಕ್ಕೆ ತರುವುದು ಒಂದು ಸಹಾಸವಾದರೆ ರಂಗದ ಮೇಲೆ ಪಾತ್ರಗಳಿಗೆ ಜೀವ ತುಂಬುವುದು ನಿರ್ದೇಶಕನ ಇನ್ನೊಂದು ಸಾಹಸ ಎನ್ನಬೇಕು. ಶ್ರವಣ ಮಾಧ್ಯಮಕ್ಕಿಂತ ದೃಶ್ಯ ಮಾಧ್ಯಮ ಸ್ಮತಿ ಪಟಲದ ಮೇಲೆ ಹೆಚ್ಚು ಪರಿಣಾಮ ಬೀರಬಹುದಾದ ಮಾಧ್ಯಮ. ಹಾಗಾಗಿ ನಿರ್ದೇಕನ ಪಾತ್ರವು ರಂಗಭೂಮಿಯಲ್ಲಿ ಬಹಳ ಮಹತ್ವವನ್ನು ಪಡೆದುಕೊಂಡಿದೆ. ಅನೇಕ ರಂಗಭೀಷ್ಮರನ್ನು ಕಂಡಂತಹ ಕನ್ನಡ ರಂಗಭೂಮಿ ಈಗ ಯುವ ರಂಗ ನಿರ್ದೇಶಕರು ಹುಟ್ಟಿಕೊಳ್ಳುವುದಕ್ಕೆ ಆಗಿನ ರಂಗಭೂಮಿ ಭೀಷ್ಮರ ಬಳುವಳಿ ಕಾರಣ ಎನ್ನಬೇಕು.

ಈ ಹಿನ್ನ್ನೆಲೆಯಲ್ಲಿ ಇತ್ತೀಚೆಗೆ ರಾಯಚೂರಿನ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಿಕ್ಕಿರಿದು ತುಂಬಿದ ಜನಗಳ ಮಧ್ಯೆ ಪ್ರದರ್ಶಿಸಲ್ಪಟ್ಟ ರಸಗಂಗಾಧರ ನಾಟಕ ಪ್ರೇಕ್ಷಕರನ್ನು ಮೋಡಿ ಮಾಡಿತು.

 ಈ ನಾಟಕದಲ್ಲಿ ಮೊಗಲ್ ದೊರೆ ಷಹಜಹಾನ್ ಆಸ್ಥಾನದ ದೊರೆಯಾದರೂ ಕೂಡ ಈ ಆಸ್ಥಾನದಲ್ಲಿ ವಿದ್ವಾಂಸಕನಾಗಿದ್ದ ಜಗನ್ನಾಥ ಪಂಡಿತನ ಪಾರಮ್ಯವೇ ಪ್ರೇಕ್ಷಕರನ್ನು ನಾಟಕದತ್ತ ಸೆಳೆಯುವಂತಹದ್ದನ್ನು ನಾವಿಲ್ಲಿ ಗಮನಿಸಬಹುದು.

ಕರ್ನಾಟಕ ನಾಟಕ ಪರಂಪರೆಯಲ್ಲಿ ಬಸಪ್ಪಶಾಸ್ತ್ರಿ, ಸಂಸ, ಟಿಪಿ ಕೈಲಾಸಂ, ಪಿ. ಲಂಕೇಶರ ಚಾರಿತ್ರಿಕ ನಾಟಕಗಳು ರಂಗದ ಮೇಲೆ ಯಶಸ್ಸಿನ ಪ್ರಯೋಗಗಳನ್ನು ಕಾಣುತ್ತಿರುವುದನ್ನು ಈಗಲೂ ನಾವು ನೋಡುತ್ತೇವೆ. ಇಂತಹ ಚಾರಿತ್ರಿಕ ನಾಟಕಗಳ ಸಾಲಿಗೆ ಇತ್ತೀಚೆಗೆ ಸೇರ್ಪಡೆಗೊಂಡಿದ್ದು ‘ರಸಗಂಗಾಧರ’ವು ಕೂಡ ಒಂದು. ರಸಗಂಗಾಧರ ನಾಟಕವನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ನೋಡುವುದಾದರೆ ಧರ್ಮದ ಹೆಸರಿನಲ್ಲಿ ಜಗನಾಥ ಪಂಡಿತನ ಆತ್ಮಹತ್ಯೆ, ಅಧಿಕಾರದ ದಾಹ ಒಟ್ಟಿನಲ್ಲಿ ಸಮಕಾಲಿನ ಭಾರತದ ವಿಷಯವನ್ನು ನೆನಪಿಸುವ ನಾಟಕವು ಈಗಾಗಲೇ ಬೇರೆ ಬೇರೆಯವರ ನಿರ್ದೇಶನದಲ್ಲಿ ಅನೇಕ ಪ್ರಯೋಗಗಳನ್ನು ಕಂಡಿದೆ. ಅಂದ ಹಾಗೆ ಈ ನಾಟಕದ ಕರ್ತೃ ಡಾ. ವಿಕ್ರಮ ವಿಸಾಜಿ, ಈ ನಾಟಕಕ್ಕೆ ನಿರ್ದೇಶನ ಮಾಡಿದವರು ರಾಯಚೂರಿನ ಯುವ ನಿರ್ದೇಶಕ ಲಕ್ಷ್ಮಣ್ ಮಂಡಲಗೇರವರು. ಇವರ ನೇತೃತ್ವದಲ್ಲಿ ರಾಯಚೂರಿನ ಸಮುದಾಯ ತಂಡದಿಂದ ನಾಟಕವು ಯಶಸ್ವಿಯಾಗಿ ಪ್ರದರ್ಶನಗೊಂಡಿತ್ತು. ಈ ನಾಟಕ ಪ್ರಾರಂಭವಾಗುವುದೇ ಜಗನ್ನಾಥ ಪಂಡಿತನ ಕಾವ್ಯಮೀಮಾಂಸೆಯ ಮಾತಿನ ಮೂಲಕ. ‘‘ನಾನು ನನ್ನ ಆತ್ಮದಿಂದ ಹಚ್ಚಿಟ್ಟ ದೀಪವು, ನನ್ನ ಇಂದ್ರಿಯಗಳಲ್ಲಿ ಸುಡು ಸುಡು ಬೆಂಕಿಯಿಂದ ರೂಪಗೊಂಡದ್ದೇ ಕಾವ್ಯ. ಈ ಕಾವ್ಯದ ನಿಗೂಢ ಚಲನೆಯನ್ನು ಅರ್ಥಮಾಡಿಕೊಳ್ಳಲು ನನಗಿರುವ ದಾರಿ ಯಾವುದು?’’ ಎನ್ನುವ ಪ್ರಶ್ನೆಯ ಮೂಲಕ ಜಗನ್ನಾಥ ಪಂಡಿತನ ಮಾತನ್ನು ಇಲ್ಲಿ ಗಮನಿಸಬಹುದು. ‘‘ಒಂದು ಕಾವ್ಯವನ್ನು ಅರ್ಥಮಾಡಿಕೊಳ್ಳಬೇಕೆಂದರೆ ಮೊದಲು ಕಾವ್ಯಮೀಮಾಂಸೆಯ ಬಗ್ಗೆ ಅರಿವಿರಬೇಕು, ಆಗ ಕಾವ್ಯದ ಸೊಗಸನ್ನು ಅಂದರೆ ಕಾವ್ಯದ ರೀತಿ, ಆತ್ಮ, ಔಚಿತ್ಯ, ಧ್ವನಿ, ವ್ಯಂಗ್ಯ, ವಕ್ರೋಕ್ತಿ, ಇವುಗಳನ್ನು ಸವಿಯುವುದಕ್ಕೆ ಸಾಧ್ಯವಾಗುತ್ತದೆ.’’ ಜಗನ್ನಾಥ ಪಂಡಿತನ ಪಾಂಡಿತ್ಯವನ್ನು ಇಲ್ಲಿ ಎತ್ತಿ ತೋರಿಸುವಂತದ್ದು ಒಂದು ಕಡೆಯಾದರೆ ಇನ್ನು ಷಹಜಹಾನನ ಕೋಪ, ದಾರಾಶಿಕೊನ ಗೆಳತನ, ಪಂಡಿತನ ವಿದ್ವತ್ತು, ಔರಂಗಜೇಬನ ಅಧಿಕಾರ ಪಿಪಾಸೆ, ಲಾವಂಗಿಯ ಪ್ರೇಮದ ದುರಂತ ಹೀಗೆ ಅನೇಕ ಬದುಕಿನ ಕವಲುಗಳನ್ನು ಈ ನಾಟಕದುದ್ದಕ್ಕು ನೋಡಬಹುದು.

 ಈ ನಾಟಕವು ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವುದಕ್ಕೆ ಅನೇಕ ದೃಶ್ಯಗಳು ಇಲ್ಲಿ ಸಾಕ್ಷಿಯಾಗಿತ್ತವೆ. ಒಬ್ಬ ಮೊಗಲ್ ದೊರೆಯ ಆಸ್ಥಾನದಲ್ಲಿ ಕಾವ್ಯವನ್ನು ಬರೆಯುವ ಒಬ್ಬ ಸಾಮಾನ್ಯ ಬರಹಗಾರನ ಬರಹಕ್ಕೆ ದೊರೆಯ ಮಗಳು ಲೇಖಕನಿಗೆ ಮನಸೋಲುವುದೆಂದರೆ ಸಾಮಾನ್ಯವಾದುದಲ್ಲ. ಈ ನಾಟಕದಲ್ಲಿ ಚಾರಿತ್ರಿಕ ಪುರುಷನಾದಂತಹ ಜಗನ್ನಾಥ ಪಂಡಿತನ ವ್ಯಕ್ತಿತ್ವವು ಕಾವ್ಯಮಯವೂ ಆಗಿದೆ. ಇನ್ನೊಂದು ಕಡೆ ಪ್ರೇಮವೂ ಆಗಿದೆ ಎನ್ನುವುದಕ್ಕೆ ಷಹಜಹಾನನ ಮಗಳಾದಂತಹ ಲಾವಂಗಿಯು ಜಗನ್ನಾಥನು ಬರೆದಿರುವ ಕಾವ್ಯಕ್ಕೆ ಮನಸೋತು ಅವನ ಮೇಲೆ ಪ್ರೇಮದ ಅನುರಾಗ ಮೂಡುವಂತಹದ್ದು ಪ್ರೇಕ್ಷಕರನ್ನು ಮೋಡಿಗೊಳಿಸುತ್ತದೆ. ಈ ಪ್ರೀತಿ ಪ್ರೇಮ ಅನುರಾಗದಿಂದಲೇ ಜಗನ್ನಾಥ ಪಂಡಿತನು ಕೊನೆಗೆ ದುರಂತ ನಾಯಕನಾಗುವುದು ಒಂದು ರೀತಿಯ ವಿಪರ್ಯಾಸವೇ ಸರಿ. ಜಗನ್ನಾಥನ ಕಾವ್ಯಕ್ಕೆ ಅದೆಷ್ಟೋ ಮನಸ್ಸುಗಳು ವಿಚಲಿತಗೊಂಡಿವೆ, ಅದೆಷ್ಟೋ ಮನಸ್ಸು ತಮ್ಮ ಬದುಕಿನಲ್ಲಿ ಬದಲಾವಣೆಯನ್ನು ಕಂಡಿವೆ ಎನ್ನುವುದಕ್ಕೆ ದಾರಾಶಿಕೊ ಮತ್ತು ಲಾವಂಗಿ ಸಾಕ್ಷಿಯಾಗುತ್ತಾರೆ. ಅಧಿಕಾರದ ಆಸೆಗೆ ಸಂಪತ್ತಿನ ವ್ಯಾಮೋಹಕ್ಕೆ ಜೋತು ಬಿದ್ದಿರುವ ದಾರಾಶಿಕೊ ಜಗನ್ನಾಥನ ಕಾವ್ಯಗಳನ್ನು ಓದಿದ ನಂತರ ಸಂಪೂರ್ಣವಾಗಿ ಬದಲಾಗುತ್ತಾನೆ. ಅಧಿಕಾರದ ಆಸೆ, ಸಂಪತ್ತಿನ ವ್ಯಾಮೋಹವನ್ನು ತೊಡೆದು ಹಾಕಿ ತನ್ನ ಬದುಕನ್ನೇ ಕಾವ್ಯಮಯವಾಗಿ ಮಾಡಿಕೊಳ್ಳುತ್ತಾನೆ. ಇಂತಹ ಬದಲಾವಣೆ ಪ್ರಸ್ತುತ ಭಾರತಕ್ಕೆ ಅತಿ ಅವಶ್ಯಕವಾದದ್ದು ಎಂದು ಅನಿಸುತ್ತದೆ.

ಇಂದು ತಮ್ಮ ಸ್ವಾರ್ಥಕ್ಕಾಗಿ, ಅಧಿಕಾರಕ್ಕಾಗಿ ಹರಸಾಹಸ ಪಡುತ್ತಿರುವ ನಾಯಕರು, ಜನಸಾಮಾನ್ಯರು ಬರಗಾಲದಿಂದ ಬಳಲುತ್ತಿರುವಾಗ ಮತ್ತು ನೆರೆಯಿಂದ ತತ್ತರಿಸಿಹೋಗುವ ಸಂದರ್ಭದಲ್ಲಿ ಜನರ ಮಧ್ಯೆ ಇರಬೇಕಾದ ನಮ್ಮನ್ನಾಳುವ ನಾಯಕರು ಅಧಿಕಾರದ ಆಸೆಗಾಗಿ ರೆಸಾರ್ಟ್‌ಗಳಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಕಾಲ ಕಳೆಯುತ್ತಿರುವವರಿಗೆಲ್ಲ ಇಂತಹ ಕಾವ್ಯಗಳು ಪ್ರೇರಣೆಯಾಗಬೇಕಾಗಿದೆ. ಒಂದು ಕಾಲದಲ್ಲಿ ಸಾಹಿತ್ಯಕ್ಕೆ ಎಷ್ಟು ಶಕ್ತಿ ಇತ್ತು ಎನ್ನುವುದನ್ನು ನಾವಿಲ್ಲಿ ಗಮನಿಸಬಹುದು. ಒಬ್ಬ ಕ್ರೂರ ಮನುಷ್ಯನ ವ್ಯಕ್ತಿತ್ವ ಬದಲಾಯಿಸುವ ಶಕ್ತಿ ಕಾವ್ಯಕ್ಕೆ ಇರುತ್ತದೆ ಎನ್ನುವುದನ್ನು ಈ ನಾಟಕದಲ್ಲಿ ಎದ್ದು ತೋರಿಸುವಂತಹದ್ದು. ಆದರೆ ಇಲ್ಲಿ ಔರಂಗಜೇಬನಂತಹ ಮನಃಸ್ಥಿತಿ ಮಾತ್ರ ಯಾವ ಕಾವ್ಯದಿಂದಲೂ ಬದಲಾಗಲಿಲ್ಲ. ಅವನ ಮನಃಸ್ಥಿತಿ ಅಧಿಕಾರದದಾಹದಿಂದ ತನ್ನವರನ್ನೇ ಕೊಂದು ಅಧಿಕಾರಗಿಟ್ಟಿಸಿಕೊಳ್ಳಬೇಕೆನ್ನುವುದು. ಇತ್ತಿಚೀನ ದಿನಗಳಲ್ಲಿ ಇಂತಹ ಮನಃಸ್ಥಿತಿಯುಳ್ಳ ಜನರನ್ನೇ ನಾವು ಕಾಣುತ್ತಿದ್ದೇವೆ. ಈ ನಾಟಕದಲ್ಲಿ ಲಾವಂಗಿ ‘‘ಬದುಕಲ್ಲಿ ಕಾವ್ಯಮೀಮಾಂಸೆಗೂ ಪ್ರೇಮಮೀಮಾಂಸೆಗೂ ಅಂಥ ವ್ಯತ್ಯಾಸವೇನಿಲ್ಲ’’ ಎನ್ನುವ ಮಾತನ್ನು ಆಡುತ್ತಾಳೆ.

ಭಾರತ ಇತಿಹಾಸ ಪುಟಗಳಲ್ಲಿ ಪ್ರೇಮಕ್ಕೆ ಸಂಕೇತವಾಗಿ ನಿಲ್ಲುವವನು ಷಹಜಹಾನ್. ಆದರೆ ಈ ನಾಟಕದ ವಸ್ತುವಿಗೆ ಬಂದಾಗ ಲಾವಂಗಿಯ ಪ್ರೇಮಕ್ಕೆ ವಿರೋಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಇಲ್ಲಿ ಅವನ ಆಂತರಿಕ ಮತ್ತು ಧರ್ಮ ಸಂಕಟಗಳು ಎದ್ದು ಕಾಣುತ್ತದೆ. ಒಂದು ಕಡೆ ಧರ್ಮ ನಿಷ್ಠೆ ಇನ್ನೊಂದು ಕಡೆ ತನ್ನ ಪ್ರತಿಷ್ಠೆ ಕಳೆದುಹೋಗುತ್ತದೆ ಎನ್ನುವ ಭಯದಲ್ಲಿಯೇ ತನ್ನ ಮಗಳಾದ ಲಾವಂಗಿ ಮತ್ತು ಜಗನ್ನಾಥನ ಪ್ರೇಮಕ್ಕೆ ಖಳನಾಗಿ ನಿಲ್ಲುತ್ತಾನೆ. ಕೊನೆಗೆ ಜಗನ್ನಾಥನನ್ನು ತನ್ನ ರಾಜ್ಯದಿಂದ ಬಹಿಷ್ಕಾರ ಹಾಕುತ್ತಾನೆ. ಇಲ್ಲಿ ವಿಪರ್ಯಾಸವೇನೆಂದರೆ ನಮ್ಮ ನಮ್ಮ ವೈಯಕ್ತಿಕ ಪ್ರಶ್ನೆ ಬಂದಾಗ ವಾಸ್ತವದ ಕಲ್ಪನೆಗಳು ಬೇರೆಯದೇ ಆಗಿರುತ್ತವೆ. ಆಗ ನಮ್ಮ ಕಣ್ಣ ಮುಂದೆ ಗೋಚರಿಸುವುದು ಆಸ್ತಿ, ಅಂತಸ್ತು, ಧರ್ಮವೇ ಮುಖ್ಯವಾಗಿರುತ್ತದೆ ವಿನಃ ಪ್ರೀತಿ ವಿಶ್ವಾಸ ಮುಖ್ಯವೆನಿಸುವುದಿಲ್ಲ. ಅಧಿಕಾರಕ್ಕಾಗಿ ದಾರಾಶಿಕೊನ ಕೊಲೆ, ಜಗನ್ನಾಥ ಪಂಡಿತನ ಆತ್ಮಹತ್ಯೆ ಇಂತಹ ದುರಂತಗಳು ನಡೆದುಹೋಗುತ್ತವೆ. ಈ ದುರಂತ ನಾಟಕದಲ್ಲಿ ಜಾತಿಯ ಬೀಜಗಳು ನಮಗೆ ಗೊತ್ತಾಗದಂತೆ ಆವರಿಸಿಕೊಂಡುಬಿಡುತ್ತವೆ. ಕೊನೆಗೆ ಜಗನ್ನಾಥ ಪಂಡಿತನ ಆತ್ಮಹತ್ಯೆಯ ದುರಂತದಿಂದ ಈ ನಾಟಕ ಮುಕ್ತಾಯವಾಗುತ್ತದೆ.

ಚರಿತ್ರೆಗಳನ್ನು ಕೆದಕುತ್ತಾ ಹೋದರೆ ಸತ್ಯವನ್ನು ಹೇಳುವುದಕ್ಕೆ ನಾಲಿಗೆಗಳು ಇಂದು ತಡವರಿಸುತ್ತವೆ. ಇಂತಹ ಸತ್ಯಾಸತ್ಯತೆಗಳನ್ನು ಹೊರ ಹಾಕುವುದೇ ಬರಹಗಳು, ರಂಗವೇದಿಕೆಗಳು ಎಂದರೆ ತಪ್ಪಾಗಲಾರದು. ಇಂತಹ ಕಾರ್ಯವನ್ನು ನಮ್ಮ ರಾಯಚೂರಿನ ಸಮುದಾಯ ಮಾಡುತ್ತಿರುವುದು ಶ್ಲಾಘನೀಯ. ನಾಟಕದಲ್ಲಿ ಜಗನ್ನಾಥ ಪಂಡಿತನಾಗಿ ಪ್ರವೀಣರೆಡ್ಡಿ ಗುಂಜಹಳ್ಳಿ, ಅವರ ನಟನೆ ಮೆಚ್ಚುವಂತಹದ್ದು. ರಂಗದ ಹಿಂದೆ ಅನೇಕ ಕೈಗಳಿವೆ, ಈ ನಾಟಕಕ್ಕೆ ಸಂಗೀತವನ್ನು ಅಳವಡಿಸಿದವರು ಸುರೇಶ್ ಕೇಸಾಪೂರ, ಪ್ರಸಾಧನ ವೆಂಕಟ್ ನರಸಿಂಹಲು, ನಿರ್ದೇಶನ ಮತ್ತು ಬೆಳಕಿನ ವಿನ್ಯಾಸ ಲಕ್ಷ್ಮಣ ಮಂಡಲಗೇರಾ, ನಟನೆಗೆ ಸೈ ಎನಿಸಿಕೊಂಡಿರುವ ಕ್ಷ್ಮಣ ನಾಟಕ ನಿರ್ದೇಶನಕ್ಕೆ ಈಗಿರುವ ಅನುಭವ ಸಾಲದು, ಮುಂಬರುವ ದಿನಗಳಲ್ಲಿ ನಿರ್ದೇಶನಕ್ಕೆ ಅವರದ್ದು ಪಳಗಿದ ಕೈಗಳಿವು ಎಂದು ಅನ್ನಿಸಿಕೊಳ್ಳಬಹುದು.

ಈ ಭಾಗದಲ್ಲಿ ಅತ್ಯಂತ ಕ್ರಿಯಶೀಲವಾಗಿ ರಂಗಭೂಮಿಯಲ್ಲಿ ತೊಡಗಿಕೊಂಡಿರುವ ರಂಗಸಂಸ್ಥೆ ರಾಯಚೂರು ಸಮುದಾಯ, ಸುಮಾರು ಮೂವತ್ತು ವರ್ಷಗಳಿಂದ ರಂಗಭೂಮಿಗೆ ದುಡಿಯುತ್ತಿರುವ ಮತ್ತು ಸಮುದಾಯದ ಅಧ್ಯಕ್ಷರಾಗಿ, ಹಿರಿಯ ಕಲಾವಿದರಾಗಿ ಕ್ರಿಯಾಶೀಲವಾಗಿ ರಂಗಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಿರುವ ಎಪ್ಪತ್ತರ ಹರೆಯದ ವಿ.ಎನ್.ಅಕ್ಕಿಯವರನ್ನು ಈ ಸಂದರ್ಭದಲ್ಲಿ ನೆನಪು ಮಾಡಲೇಬೇಕು. ರಾಯಚೂರಿನಲ್ಲಿ ರಂಗಚಟುವಟಿಕೆಗಳು ನಡೆಯುತ್ತಿರುವುದೇ ಸಮುದಾಯದಿಂದಲೇ ಎನ್ನುವುದನ್ನು ನಾವು ಯಾರೂ ಅಲ್ಲಗಳೆಯಲಾಗದು.

Writer - ಮಲ್ಲಮ್ಮ ಯಾಟಗಲ್

contributor

Editor - ಮಲ್ಲಮ್ಮ ಯಾಟಗಲ್

contributor

Similar News

ಜಗದಗಲ
ಜಗ ದಗಲ