2019 ರಲ್ಲಿ ಭಾರತದ ಹಾಕಿಗೆ ಭರವಸೆಯ ಹೊಂಗಿರಣ

Update: 2019-12-30 18:54 GMT

ಭಾರತದ ಹಾಕಿಗೆ ಭರವಸೆಯ ಹೊಂಗಿರಣ ಹೊಸದಿಲ್ಲಿ, ಡಿ.30: ಭಾರತೀಯ ಹಾಕಿ 2019ರಲ್ಲಿ ಹೊಸ ಭರವಸೆಯನ್ನು ಮೂಡಿಸಿತು. ಮುಂದಿನ ವರ್ಷ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಪುರುಷ ಮತ್ತು ಮಹಿಳಾ ತಂಡಗಳು ಅರ್ಹತೆ ಪಡೆದಿವೆ.

2019ರಲ್ಲಿ ಭಾರತೀಯ ಹಾಕಿ ತಂಡಗಳು ಪಾಲಿಗೆ ಬಂದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡವು. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆಗಳನ್ನು ಪಡೆದುಕೊಂಡಿರುವುದು ಭಾರತದ ಹಾಕಿ ತಂಡಗಳ ದೊಡ್ಡ ಸಾಧನೆ. ಹಾಗೆ ನೋಡಿದರೆ 2019 ರಲ್ಲಿ ಭಾರತೀಯ ತಂಡಗಳಿಗೆ ಯಾವುದೇ ಪ್ರಮುಖ ಪಂದ್ಯಾವಳಿಗಳು ಇರಲಿಲ್ಲ ಮತ್ತು ದ್ವಿಪಕ್ಷೀಯ ಸರಣಿ ಮತ್ತು ಅಂತರ್‌ರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಎಚ್)ಟೂರ್ನಿಯಲ್ಲಿ ಭಾರತ ಹಣಾಹಣಿ ನಡೆಸಿತ್ತು.

 ಎಪ್ರಿಲ್‌ನಲ್ಲಿ ಭಾರತದ ಹಾಕಿ ತಂಡದ ಪ್ರಧಾನ ಕೋಚ್ ಹುದ್ದೆಯನ್ನು ವಹಿಸಿಕೊಂಡ ಗ್ರಹಾಂ ರೀಡ್ ತಂಡವನ್ನು ಬಲಿಷ್ಠವಾಗಿ ಕಟ್ಟುವ ಕಡೆಗೆ ಗಮನ ಹರಿಸಿದ್ದಾರೆ. ಆಸ್ಟ್ರೇಲಿಯ, ವಿಶ್ವ ಚಾಂಪಿಯನ್ ಬೆಲ್ಜಿಯಂ, ನೆದರ್‌ಲ್ಯಾಂಡ್, ಜರ್ಮನಿ ಮತ್ತು ಅರ್ಜೆಂಟೀನಾ ಮುಂತಾದ ಅಗ್ರ ತಂಡಗಳು ಎಫ್‌ಐಎಚ್ ಪ್ರೊ ಲೀಗ್‌ನ ಮೊದಲ ಆವೃತ್ತಿಯಲ್ಲಿ ನಿರತರಾಗಿದ್ದರೆ, ಭಾರತದ ತಂಡ ಹೆಚ್ಚಾಗಿ ಈ ಋತುವಿನಲ್ಲಿ ಕೆಳ ಶ್ರೇಯಾಂಕದ ತಂಡಗಳ ವಿರುದ್ಧ ಆಡಿದೆ.

 ಪುರುಷರ ತಂಡ ಜೂನ್‌ನಲ್ಲಿ ಭುವನೇಶ್ವರದಲ್ಲಿ ನಡೆದ ಎಫ್‌ಐಎಚ್ ಸರಣಿಯ ಫೈನಲ್ಸ್‌ನಲ್ಲಿ ಆಡುವುದರೊಂದಿಗೆ ಅಭಿಯಾನ ಆರಂಭಿಸಿತ್ತು. ಈ ಟೂರ್ನಿಯಲ್ಲಿ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತದ ತಂಡವು ಅವಕಾಶವನ್ನು ಚೆನ್ನಾಗಿ ಬಳಿಸಿಕೊಂಡಿತು. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 5-1 ಗೋಲುಗಳಿಂದ ಸೋಲಿಸಿ ಎಫ್‌ಐಎಚ್ ಒಲಿಂಪಿಕ್ಸ್ ಅರ್ಹತಾ ಪಂದ್ಯಗಳಿಗೆ ಅರ್ಹತೆ ಗಳಿಸಿತು.

       ಆಗಸ್ಟ್‌ನಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್ ಟೆಸ್ಟ್ ಇವೆಂಟ್‌ನಲ್ಲಿ ಆತಿಥೇಯ ಜಪಾನ್, ಮಲೇಷ್ಯಾ ಮತ್ತು ನ್ಯೂಝಿಲ್ಯಾಂಡ್ ತಂಡಗಳೊಂದಿಗೆ ಭಾರತೀಯ ಪುರುಷರ ತಂಡ ಸೆಣಸಾಡಿತ್ತು. ನ್ಯೂಝಿಲ್ಯಾಂಡ್‌ನ್ನು 5-0 ಗೋಲುಗಳಿಂದ ಭಾರತ ಸೋಲಿಸಿತ್ತು.ಬಳಿಕ ಐದು ಪಂದ್ಯಗಳನ್ನು ಆಡಲು ಬೆಲ್ಜಿಯಂಗೆ ಪ್ರವಾಸ ಕೈಗೊಂಡಿತ್ತು. ವಿಶ್ವ ಚಾಂಪಿಯನ್ ಬೆಲ್ಜಿಯಂ ವಿರುದ್ಧ ಮೂರು ಪಂದ್ಯಗಳಲ್ಲಿ ಮತ್ತು ಎರಡು ಬಾರಿ ಸ್ಪೇನ್ ವಿರುದ್ಧ ಮನ್‌ಪ್ರೀತ್ ನೇತೃತ್ವದ ತಂಡ ಜಯ ಗಳಿಸಿತ್ತು. ಬೆಲ್ಜಿಯಂ ತಂಡವನ್ನು 2-0, 2-1 ಮತ್ತು 5-1 ಗೋಲುಗಳಿಂದ ಸೋಲಿಸಿತು. ಸ್ಪೇನ್‌ನ್ನು 6-1 ಮತ್ತು 5-1 ಅಂತರದಿಂದ ಸೋಲಿಸಿತು.

    ಆದರೆ ವರ್ಷಾಂತ್ಯದ ಅಂತಿಮ ಸುತ್ತಿನ ಒಲಿಂಪಿಕ್ ಕ್ವಾಲಿಫೈಯರ್‌ಗಳಲ್ಲಿ ಅತಿದೊಡ್ಡ ಪರೀಕ್ಷೆಯು ಭಾರತಕ್ಕೆ ಎದುರಾಗಿತ್ತು. ರಶ್ಯವನ್ನು 11-3 ಅಂತರದಿಂದ ಮಣಿಸಿದ ಭಾರತ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವಕಾಶ ದೃಢಪಡಿಸಿತು.

  

  ಈ ವರ್ಷ ಭಾರತೀಯ ಪುರುಷರ ಹಾಕಿ ತಂಡದ ಅತಿದೊಡ್ಡ ಲಾಭವೆಂದರೆ ಕೆಲವು ಪ್ರತಿಭಾವಂತ ಆಟಗಾರರು ಮಿಂಚಿದರು. ಭಾರತದ ಹಾಕಿಯ ಭವಿಷ್ಯಕ್ಕೆ ಹೊಸ ಭರವಸೆಯನ್ನು ಮೂಡಿಸಿದರು. ವಿವೇಕ್ ಸಾಗರ್ ಪ್ರಸಾದ್, ಹಾರ್ದಿಕ್ ಸಿಂಗ್ ಮತ್ತಿತರ ಆಟಗಾರರು ಮಿಂಚಿದರು. ಭಾರತವು ವಿಶ್ವ ಹಾಕಿ ರ್ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿ ವರ್ಷವನ್ನು ಪ್ರಾರಂಭಿಸಿತು ಮತ್ತು ವರ್ಷದಲ್ಲಿ ಅದೇ ಸ್ಥಾನವನ್ನು ಕಾಯ್ದುಕೊಂಡಿತು.ಭಾರತದ ಹಾಕಿ ತಂಡವು ಒಲಿಂಪಿಕ್ಸ್ ಪದಕ ಗೆಲ್ಲಲು ಇನ್ನೂ 8 ತಿಂಗಳ ಅವಧಿಯಲ್ಲಿ ಇನ್ನಷ್ಟು ಬಲಿಷ್ಠವಾಗಬೇಕಿದೆ. ಭಾರತದ ಪುರುಷರ ಹಾಕಿ ತಂಡ 1980ರಲ್ಲಿ ಕೊನೆಯ ಬಾರಿ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿತ್ತು. ಆ ಬಳಿಕ ಒಮ್ಮೆಯೂ ಸೆಮಿಫೈನಲ್ ತಲುಪಿಲ್ಲ. 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ ಆಡಿದ್ದ 5 ಪಂದ್ಯಗಳಲ್ಲಿ 2 ಜಯ, 3 ಸೋಲು ಮತ್ತು 1 ಪಂದ್ಯದಲ್ಲಿ ಡ್ರಾ ಸಾಧಿಸಿತ್ತು. 8ನೇ ಸ್ಥಾನದೊಂದಿಗೆ ಅಭಿಯಾನ ಕೊನೆಗೊಳಿಸಿತ್ತು. 39 ವರ್ಷಗಳಿಂದ ಭಾರತದ ಹಾಕಿ ತಂಡ ಪದಕದ ಬರ ಎದುರಿಸುತ್ತಿದೆ.

 ಭಾರತೀಯ ಮಹಿಳಾ ತಂಡವು ಈ ವರ್ಷ ಉತ್ತಮ ಪ್ರದರ್ಶನ ನೀಡಿದೆ. ರಾಣಿ ರಾಂಪಾಲ್ ನೇತೃತ್ವದ ತಂಡವು ವರ್ಷಪೂರ್ತಿ ವಿಶ್ವ ಹಾಕಿ ರ್ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನವನ್ನು ಕಾಯ್ದುಕೊಂಡಿದೆ.

         ಶರ್ಮಿಳಾ ದೇವಿ ಮತ್ತು ಲಾಲ್ರೆಮ್ಸಿಯಾಮಿ ಎಂಬ ಇಬ್ಬರು ಯುವ ಆಟಗಾರ್ತಿಯರು ಗಮನ ಸೆಳೆದಿದ್ದಾರೆ. ಇವರು ಎಫ್‌ಐಎಚ್ ರೈಸಿಂಗ್ ಸ್ಟಾರ್ ಆಫ್ ದಿ ಇಯರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು ವಿಶೇಷ. ಸ್ಜೊರ್ಡ್ ಮಾರಿಜ್ನೆ ಮಹಿಳಾ ತಂಡದ ಕೋಚ್ ಆಗಿ ತಂಡಕ್ಕೆ ಉತ್ತಮ ಮಾರ್ಗದರ್ಶನ ನೀಡಿದರು. ಮಹಿಳಾ ತಂಡ ಹೊಸ ವರ್ಷವನ್ನು ಮಲೇಷ್ಯಾ ಮತ್ತು ಕೊರಿಯಾದ ಪ್ರವಾಸಗಳೊಂದಿಗೆ ಪ್ರಾರಂಭಿಸಿತ್ತು. ಅಲ್ಲಿ ಅದು ಎಫ್‌ಐಎಚ್ ಸರಣಿ ಫೈನಲ್‌ಗೆ ಅಗತ್ಯದ ತಯಾರಿ ನಡೆಸಿದೆ. ಉರುಗ್ವೆ, ಪೋಲೆಂಡ್, ಫಿಜಿ, ಚಿಲಿ ಮತ್ತು ಆತಿಥೇಯ ಜಪಾನ್ ತಂಡಗಳನ್ನು ಹಿಂದಿಕ್ಕಿ ವಿಜಯಶಾಲಿಯಾಗಿ ಎಫ್‌ಐಎಚ್ ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿತು. ಆಗಸ್ಟ್‌ನಲ್ಲಿ ಒಲಿಂಪಿಕ್ಸ್ ಟೆಸ್ಟ್ ಇವೆಂಟ್‌ನಲ್ಲಿ ವಿಶ್ವದ ನಂ .2 ಆಸ್ಟ್ರೇಲಿಯ ವಿರುದ್ಧ ಡ್ರಾ ಸಾಧಿಸಿತು. ಚೀನಾ ಮತ್ತು ಜಪಾನ್ ತಂಡವನ್ನು ಭಾರತ ಮಣಿಸಿತು. ನಾಯಕಿ ರಾಂಪಾಲ್ ನೇತೃತ್ವದ ತಂಡ ಅಮೆರಿಕವನ್ನು ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ 6-5 ಅಂತರದಿಂದ ಮಣಿಸಿ ಒಲಿಂಪಿಕ್ಸ್‌ನ ಆಡುವ ಅವಕಾಶವನ್ನು ದೃಢಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News